ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನ ಸೆಳೆದ ನೃತ್ಯದ ಸೊಬಗು

ಗಾಂಧಿ ಮೈದಾನದತ್ತ ಇನ್ನಾದರೂ ಬಂದಾರೇ ಪ್ರೇಕ್ಷಕರು?, ಇಂದು ಮಕ್ಕಳ ದಸರಾ ಸಂಭ್ರಮ
Last Updated 1 ಅಕ್ಟೋಬರ್ 2019, 13:38 IST
ಅಕ್ಷರ ಗಾತ್ರ

ಮಡಿಕೇರಿ: ಪ್ರಸಿದ್ಧ ಮಡಿಕೇರಿ ದಸರಾದಲ್ಲಿ ಸಾಂಸ್ಕೃತಿಕ ಕಲರವ ಸಹ ರಂಗೇರುತ್ತಿದ್ದು, ಇಲ್ಲಿನ ಗಾಂಧಿ ಮೈದಾನದಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮ ಸವಿಯಲು ಮಾತ್ರ ಪ್ರೇಕ್ಷಕರ ಕೊರತೆ ಎದುರಾಗಿದೆ. ನೃತ್ಯಗಳೂ ಮನ ಸೆಳೆಯುತ್ತಿದ್ದರೂ ಬೃಹತ್‌ ಗ್ಯಾಲರಿ ಮಾತ್ರ ಖಾಲಿ ಹೊಡೆಯುತ್ತಿದೆ.

ಪ್ರತಿ ವರ್ಷದಂತೆಯೇ ಈ ಬಾರಿ ಉದ್ಘಾಟನೆ ಸಮಾರಂಭ, 2ನೇ ದಿನವಾದ ಮಂಗಳವಾರವೂ ನೃತ್ಯದ ಸೊಬಗು ಸವಿಯಲು ಪ್ರೇಕ್ಷಕರ ಕೊರತೆ ಎದುರಾಯಿತು. ಸೋಮವಾರದ ಉದ್ಘಾಟನೆ ಸಮಾರಂಭಕ್ಕೆ ಮಳೆ ಸ್ವಲ್ಪ ಅಡ್ಡಿ ಪಡಿಸಿತು. ಬಳಿಕ ಸಂಜೆ 7ಕ್ಕೆ ಉದ್ಘಾಟನೆಯಾದರೂ, ಬೃಹತ್‌ ಗ್ಯಾಲರಿಯ ಹಿಂಬದಿಯ ಕುರ್ಚಿಗಳು ಖಾಲಿ ಇದ್ದವು. 2ನೇ ದಿನವಾದ ಮಂಗಳವಾರದ್ದು ಅದೇ ಕಥೆ. ವಿವಿಧ ತಂಡಗಳು ನೃತ್ಯ ಪ್ರದರ್ಶನ ನೀಡಿದರೂ, ಕೊನೆಯಲ್ಲಿ ಚಪ್ಪಾಳೆ ತಟ್ಟಲೂ ಪ್ರೇಕ್ಷಕರು ಇರಲಿಲ್ಲ!

ಸೆಲೆಬ್ರಿಟಿಗಳ ಕೊರತೆ?: ಜನವರಿಯಲ್ಲಿ ನಡೆದಿದ್ದ ‘ಕೊಡಗು ಉತ್ಸವ’ ಕಣ್ತುಂಬಿಕೊಳ್ಳಲು ಪ್ರೇಕ್ಷಕರು ಹರಿದು ಬಂದಿದ್ದರು. ಆದರೆ, ದಸರಾ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಈ ವರ್ಷ ಸೆಲೆಬ್ರಿಟಿಗಳಿಲ್ಲ. ಅದೇ ಕಾರಣಕ್ಕೆ ಪ್ರೇಕ್ಷಕರ ಕೊರತೆಯೂ ಕಾಡುತ್ತಿದೆ. ಇದು ಆಯೋಜಕರಿಗೂ ತಲೆನೋವಾಗಿದೆ.

ಮಂಜಿನ ನಗರಿಯಲ್ಲಿ ಸಹಜವಾಗಿ ಕಾರ್ಯಕ್ರಮಗಳಿಗೆ ಪ್ರೇಕ್ಷಕರ ಕೊರತೆ ಇರುತ್ತದೆ. ಗುಡ್ಡಗಾಡು ಪ್ರದೇಶವಾದ ಕಾರಣ, ರಾತ್ರಿ ವೇಳೆಯ ಕಾರ್ಯಕ್ರಮಕ್ಕೆ ಬರುವವರ ಸಂಖ್ಯೆ ಕಡಿಮೆ. ಬುಧವಾರದ ಬಳಿಕ ಪ್ರೇಕ್ಷಕರ ಹೆಚ್ಚಲಿದೆ ಎಂಬುದು ಆಯೋಜಕರ ನಿರೀಕ್ಷೆ.

ಪರೀಕ್ಷಾ ಸಮಯ:ಈ ವರ್ಷ ದಸರಾ ವೇಳೆಯೇ ವಿದ್ಯಾರ್ಥಿಗಳಿಗೆ ಪರೀಕ್ಷೆ ಸಮಯ. ಹೀಗಾಗಿ, ಯುವ ಮನಸ್ಸುಗಳ ಸಂಖ್ಯೆ ಕಡಿಮೆಯಿದೆ. ಬುಧವಾರದ ಬಳಿಕ ಪರೀಕ್ಷಾ ಸಮಯ ಬದಲಾವಣೆ ಮಾಡಿಕೊಳ್ಳುವಂತೆ ಶಿಕ್ಷಣ ಇಲಾಖೆ ಸೂಚಿಸಿದೆ. ಅ.6ರಿಂದ ದಸರೆ ರಜೆ ಆರಂಭಗೊಳ್ಳುತ್ತಿದ್ದು ಗಾಂಧಿ ಮೈದಾನದತ್ತ ಹೆಜ್ಜೆ ಹಾಕುವವರ ಸಂಖ್ಯೆ ಹೆಚ್ಚಾಗಲಿದೆ ಎನ್ನುತ್ತಾರೆ ಆಯೋಜಕರು.

ಮಕ್ಕಳ ದಸರಾ ಉದ್ಘಾಟನೆ:ಬುಧವಾರ ಗಾಂಧಿ ಮೈದಾನದಲ್ಲಿ ಮಕ್ಕಳ ಕಲರವ ಕಂಡುಬರಲಿದೆ. ಬೆಳಿಗ್ಗೆ 9.30ರ ವೇಳೆಗೆ ಸ್ಪರ್ಧೆಗಳೂ ಆರಂಭಗೊಳ್ಳಲಿದ್ದು, ಮಕ್ಕಳ ಸಂತೆ, ಮಕ್ಕಳ ಅಂಗಡಿ, ಮಕ್ಕಳ ಮಂಟಪ, ಮಕ್ಕಳ ಛದ್ಮವೇಷ ಸ್ಪರ್ಧೆ, ವಿಜ್ಞಾನ ಮಾದರಿ, ಕ್ಲೇಮಾಡೆಲಿಂಗ್‌ ಸ್ಪರ್ಧೆಗಳು ನಡೆಯಲಿವೆ. ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಉದ್ಘಾಟಿಸಲಿದ್ದು, ರೋಟರಿ ಮಿಸ್ಟಿ ಹಿಲ್ಸ್‌ ಅಧ್ಯಕ್ಷ ಜಗದೀಶ್‌, ಸಮಿತಿ ಕಾರ್ಯಾಧ್ಯಕ್ಷ ರಾಬಿನ್‌ ದೇವಯ್ಯ, ಪ್ರಧಾನ ಕಾರ್ಯದರ್ಶಿ ಬಿ.ಕೆ.ಜಗದೀಶ್‌, ಆರ್‌.ಬಿ.ರವಿ, ನಾಗೇಶ್‌ ಪಾಲ್ಗೊಳ್ಳಲಿದ್ದಾರೆ.

ಬೆಳಿಗ್ಗೆ 9.30ಕ್ಕೆ ಮಂಗಳೂರು ರಸ್ತೆಯಿಂದ ಗಾಂಧಿ ಮೈದಾನದ ತನಕ ಕಲಾ ಜಾಥಾ ನಡೆಯಲಿದೆ.

ಜಾಥಾದಲ್ಲಿ ರಾಮನಗರದ ಚಿಕ್ಕನರಸಯ್ಯ ತಂಡದಿಂದ ಪಟಕುಣಿತ, ಪಾಂಡವಪುರದ ಶಿವಮಾದು ತಂಡದಿಂದ ಪೂಜಾ ಕುಣಿತ, ಕೃಷ್ಣೇಗೌಡ ಮತ್ತು ತಂಡದಿಂದ ಚಿಲಿಪಿಲಿ ಗೊಂಬೆ, ರಾಮನಗರದ ಪಾರ್ಥ ಸಾರಥಿ ತಂಡದಿಂದ ಡೊಳ್ಳು ಕುಣಿತ, ಮದ್ದೂರಿನ ಸಂತೋಷ್ ಮತ್ತು ತಂಡದಿಂದ ವೀರಗಾಸೆ, ಉತ್ತರ ಕರ್ನಾಟಕದ ಗೊಂದಳಿ ಅಂಬಾಜಿ ಸುಗತೇಕರ ತಂಡದಿಂದ ಗೊಂದಳಿ ಹಾಡು, ಮಡಿಕೇರಿಯ ನಾಟ್ಯ ಗಣಪತಿ ತಂಡದಿಂದ ಸುಗ್ಗಿಕುಣಿತ, ಸ್ಫೂರ್ತಿ ಮಹಿಳಾ ತಂಡದಿಂದ ಜಾನಪದ ಹಾಡು, ಸೋಮವಾರಪೇಟೆಯ ಕಾವೇರಿ ಕಲಾತಂಡದಿಂದ ಜನಪದ ನೃತ್ಯ, ಮೆಹಕ್ ಫಾತಿಮಾ ಜಾನಪದ ಗೀತೆ, ಹಿರಿಯ ಕಲಾವಿದೆ ರಾಣಿಮಾಚಯ್ಯ ತಂಡದಿಂದ ಉಮ್ಮತ್ತಾಟ್, ವೀರಾಜಪೇಟೆಯ ವಿಲಿನಾ ಮತ್ತು ತಂಡದಿಂದ ಕ್ರೈಸ್ತಧರ್ಮದ ಜಾನಪದ ನೃತ್ಯ, ರಾಜ್ಯ ಪ್ರಶಸ್ತಿ ವಿಜೇತ ಬಾಳೆಲೆಯ ಜೇನುಕುರುಬರ ಮರಿ ಮತ್ತು ದಾಸಿ ತಂಡದಿಂದ ಸೋರೆಬುರುಡೆ ನೃತ್ಯ, ತೋರ ಗ್ರಾಮದ ಶಾರದಾ ಮತ್ತು ತಂಡದಿಂದ ಉರ್‌ಟಿ ಕೊಟ್ಟ್ ನೃತ್ಯ, ಬಿ.ಆರ್.ಸತೀಶ್, ಟಿ.ಡಿ.ಮೋಹನ್ ತಂಡದಿಂದ ಜಾನಪದ ಕಲಾಕುಂಚ ಗಾನ, ಸಂಪಾಜೆಯ ಚಡಾವುನ ನೇತಾಜಿ ಗೆಳೆಯರ ಬಳಗದಿಂದ ಕಂಗೀಲು ನೃತ್ಯ, ಪುತ್ತೂರಿನ ಕೊಂಬೆಟ್‌ನ ಮರಾಠೆ ಯುವ ವೇದಿಕೆಯಿಂದ ಕಂಸಾಳೆ ನೃತ್ಯ, ಶಾಂತಳ್ಳಿಯ ಬಿ.ಎ.ಗಣೇಶ್ ಅವರಿಂದ ಜಾನಪದ ಹಾಡು, ವಾಲಗ ನೃತ್ಯ, ಕೊಡವ ಜಾನಪದ ನೃತ್ಯ, ದಫ್ ನೃತ್ಯ, ಜಾನಪದ ಗೀತಾ ಗಾಯನ, ಸುಗ್ಗಿ ನೃತ್ಯದ ಆಕರ್ಷಣೆ ಇರಲಿದೆ.

4ರಂದು ಬಹುಭಾಷಾ ಕವಿಗೋಷ್ಠಿ
ಮಡಿಕೇರಿ:
ದಸರಾ ಸಮಿತಿ ಮತ್ತು ಮಡಿಕೇರಿ ದಸರಾ ಬಹುಭಾಷಾ ಕವಿಗೋಷ್ಠಿ ಸಮಿತಿ ಆಶ್ರಯದಲ್ಲಿ ಅ.4ರಂದು ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಬಹುಭಾಷಾ ಕವಿಗೋಷ್ಠಿ ನಡೆಯಲಿದೆ ಎಂದು ಕವಿಗೋಷ್ಠಿ ಸಮಿತಿ ಅಧ್ಯಕ್ಷ ಚಿ.ನಾ.ಸೋಮೇಶ್ ತಿಳಿಸಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕವಿಮನ’ ಶೀರ್ಷಿಕೆ ಅಡಿಯಲ್ಲಿ ಈ ಬಾರಿ ಕವಿಗೋಷ್ಠಿ ನಡೆಯಲಿದ್ದು ಅಂದು ಬೆಳಿಗ್ಗೆ 10.30ಕ್ಕೆ ಕಾರ್ಯಕ್ರಮ ಆರಂಭಗೊಳ್ಳಲಿದೆ. ಜಿಲ್ಲಾಧಿಕಾರಿಯೂ ಆದ ದಸರಾ ಸಮಿತಿ ಅಧ್ಯಕ್ಷೆ ಅನೀಸ್ ಕಣ್ಮಣಿ ಜಾಯ್ ಉದ್ಘಾಟಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ತ್ರಿಭಾಷಾ ಸಾಹಿತಿ ಮೊಣ್ಣಂಡ ಶೋಭಾ ಸುಬ್ಬಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ದಸರಾ ಸಮಿತಿ ಕಾರ್ಯಾಧ್ಯಕ್ಷ ರಾಬಿನ್ ದೇವಯ್ಯ, ಹಿರಿಯ ಸಿವಿನ್ ನ್ಯಾಯಾಧೀಶೆ ನೂರುನ್ನೀಸಾ, ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪನ್ನೇಕರ್, ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ ಪಾಲ್ಗೊಳ್ಳಲಿದ್ದಾರೆ ಎಂದರು.

ಭಾಗವಹಿಸುವ ಕವಿಗಳು: ಎಸ್.ಸಿ.ಆಶಾರಾಣಿ, ಕೆ.ಗಿರಿಜಾ, ಯಾಲದಾಳು ಕುಮುದಾ ಜಯಪ್ರಕಾಶ್, ಟಿ.ಎಂ.ನಾಗಭೂಷಣ್, ವತ್ಸಲ ಶ್ರೀಶ, ನ.ಲ.ವಿಜಯ, ರಾಣಿ ರವೀಂದ್ರ, ವಸಂತಿ ರವೀಂದ್ರ, ಕುಕ್ಕುನೂರು ರೇಷ್ಮಾ ಮನೋಜ್, ಮಾಲಾಮೂರ್ತಿ, ರಜಿತಾ ಕಾರ್ಯಪ್ಪ, ಮಂಜು ಗೋಪಿನಾಥನ್, ಕಿಗ್ಗಾಲು ಹರೀಶ್, ಕೃಪಾ ದೇವರಾಜ್, ಬಿ.ಬಿ.ಕಿಶೋರ್‌ಕುಮಾರ್, ವಿ.ಟಿ.ಶ್ರೀನಿವಾಸ್, ಕಾಳಮನೆ ರಶ್ಮಿ ಚಂದ್ರಪ್ರಕಾಶ್, ಬೊಳ್ಳೇರ ಸುಮನ್ ತಮ್ಮಯ್ಯ, ಎಂ.ಜಿ.ಹರಿಣಿ, ಸುಕುಮಾರ್ ತೊರೆನೂರು, ಡಿ.ಸುಜಲಾದೇವಿ, ಸುಚಿತಾ ಲೋಕೇಶ್, ಎಂ.ಎ.ರುಬಿನಾ, ವಿನಯ್ ಕುಮಾರ್, ಗುರುಪ್ರಸಾದ್ ರೈ, ವೀಣಾರಾವ್, ಹೆಲೆನಾ ರಜತ್, ಭರಮಪ್ಪ ಪಾಶಗಾರ, ಬೊಟ್ಟೋಳಂಡ ನಿವ್ಯ, ಅಪ್ಪಚಂಡ ಜಶಿಕಾ, ಅಲ್ಲಾರಂಡ ವಿಠಲ, ಕೂಪದಿರ ಸುಂದರಿ ಮಾಚಯ್ಯ, ಎಂ.ಎಂ.ಪ್ರೀತು, ಕೊಟ್ಟಕೇರಿಯನ ಲೀಲಾ ದಯಾನಂದ, ವಿನೋದ್ ಮೂಡಗದ್ದೆ, ಕಟ್ರತನ ಬೆಳ್ಯಪ್ಪ, ದೀಪಿಕಾ ಸುದರ್ಶನ್, ಕಣಜಾಲ್ ಪೂವಯ್ಯ, ತೇಜೇಶ್ವರ ಕುಂದಲ್ಪಾಡಿ, ಸೌಮ್ಯಾ ಶೆಟ್ಟಿ, ಪುಟ್ಟಣ್ಣ ಆಚಾರ್ಯ, ಸತೀಶ್ ಸೋಮಪ್ಪ, ಚೈತ್ರಾ ಬೆಳ್ಳರಿಮಾಡು, ಎಚ್.ಜಿ.ಸಾವಿತ್ರಿ, ಪಿ.ಯು.ಸುಂದರ, ಸುನಿತಾ ವಿಶ್ವನಾಥ್, ಸಬಲಂ ಬೋಜಣ್ಣ ರೆಡ್ಡಿ, ಭಾಗೀರಥಿ ಹುಲಿತಾಳ, ಎಚ್.ಭೀಮರಾಮ್ ವಾಷ್ಠರ್, ಕೇಡನ ಪ್ರಗತಿ, ಎಂ.ಆರ್.ಬನ್ಸಿ, ಚೆರಿಯಮನೆ ಪ್ರೀತಂ ಚಿಣ್ಣಪ್ಪ, ಎಸ್.ಸಿ.ತನ್ಮಯ್, ಎನ್.ವಿ. ಹಂಪನ, ಕಡ್ಲೇರ ಎಂ. ರುಷಿಕಾ, ಎನ್.ಜೆ.ಸಂಜನಾ, ಬಿ.ಎನ್. ಸ್ಪಂದನಾ ಎಂ.ಎ. ಅಬ್ದುಲ್ಲ, ಎಂ.ಇ.ಮನೋಜ್‌ಕುಮಾರ್.

ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಗೌರವ ಕಾರ್ಯದರ್ಶಿ ಕುಡೆಕಲ್ ಸಂತೋಷ್, ಗೌರವ ಸಲಹೆಗಾರರಾದ ಸವಿತಾ ರೈ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT