ಮಡಿವಾಳ ಕೆರೆಗೆ ಚರಂಡಿ ನೀರು: ಮೀನು, ಬಸವನಹುಳುಗಳ ಮಾರಣಹೋಮ

7

ಮಡಿವಾಳ ಕೆರೆಗೆ ಚರಂಡಿ ನೀರು: ಮೀನು, ಬಸವನಹುಳುಗಳ ಮಾರಣಹೋಮ

Published:
Updated:
Deccan Herald

ಬೆಂಗಳೂರು: ನಗರದ ವಿವಿಧ ಬಡಾವಣೆಗಳ ಚರಂಡಿಯ ನೀರನ್ನು ಶುದ್ಧೀಕರಿಸದೇ ನೇರವಾಗಿ ಮಡಿವಾಳ ಕೆರೆಗೆ ಬಿಡುತ್ತಿರುವ ಪರಿಣಾಮ ಹತ್ತು ಸಾವಿರಕ್ಕೂ ಹೆಚ್ಚು ಮೀನುಗಳು, ಲಕ್ಷಾಂತರ ಬಸವನಹುಳುಗಳು ಸತ್ತು ದಡಕ್ಕೆ ಬಂದು ಬಿದ್ದಿವೆ.

‘ಬಿಳೇಕಹಳ್ಳಿ, ಜೆ.ಪಿ.ನಗರ, ಬನಶಂಕರಿಯಿಂದ ಚರಂಡಿಯ ನೀರನ್ನು ಕೆರೆಗೆ ನೇರವಾಗಿ ಬಿಡಲಾಗುತ್ತಿದೆ. ಕೆರೆಯ ಸುತ್ತಮುತ್ತ ಕೆಟ್ಟ ವಾಸನೆ ಬರುತ್ತಿದೆ. ಓಡಾಡುವುದೂ ಕಷ್ಟವಾಗಿದೆ’ ಎಂದು ಸ್ಥಳೀಯ ನಿವಾಸಿ ನವೀನ್‌ ಹೇಳಿದರು.

‘ಗುರುವಾರ ಸಂಜೆ ಕೆರೆಯ ಬಳಿ ಹೋದಾಗ ಸ್ವಚ್ಛ ಮಾಡುತ್ತಿದ್ದರು. ಚರಂಡಿಯ ನೀರನ್ನು ತಡೆಯುವ ಯಾವುದೇ ಪ್ರಯತ್ನ ಇಲ್ಲಿಯವರೆಗೂ ಆಗಿಲ್ಲ. ಆದರೆ ಸಾಕ್ಷ್ಯ ಸಿಗದಂತೆ ಸತ್ತ ಮೀನುಗಳನ್ನು ಸಾಗಿಸುವ ಕೆಲಸವನ್ನು ಮಾತ್ರ ಮಾಡುತ್ತಿದ್ದಾರೆ. ಬಿಬಿಎಂಪಿ ಅಧಿಕಾರಿಗಳಿಗೆ ಕೆರೆಯ ಸುರಕ್ಷತೆಗೆ ಆದ್ಯತೆ ನೀಡುವಂತೆ ಮನವಿ ಮಾಡಿದ್ದೇವೆ. ಅವರು ಸ್ಪಂದಿಸದಿದ್ದರೆ ಹೈಕೋರ್ಟ್ ಮೆಟ್ಟಿಲೇರುವ ತೀರ್ಮಾನ ಮಾಡಲಿದ್ದೇವೆ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ವಲಸೆ ಪಕ್ಷಿಗಳ ಪಾಡು: ಅಕ್ಟೋಬರ್‌ ಅಂತ್ಯ ಅಥವಾ ನವೆಂಬರ್ ಆರಂಭದಲ್ಲಿ ಈ ಕೆರೆಗೆ ಪಕ್ಷಿಗಳು ವಲಸೆ ಬರುತ್ತವೆ. ಕಳೆದ ಎರಡು ವರ್ಷಗಳಿಂದ ಇಲ್ಲಿ ಪಕ್ಷಿಗಳ ಕಲರವ ಕಡಿಮೆಯಾಗಿದೆ. ಈಗ ಕೆರೆಯ ಸ್ಥಿತಿ ಹದಗೆಟ್ಟಿದೆ. ಇಂತಹ ಸಂದರ್ಭದಲ್ಲಿ ವಲಸೆ ಬಂದ ಪಕ್ಷಿಗಳ ಗತಿಯೇನು ಎಂದು ಪರಿಸರ ಪ್ರೇಮಿಗಳು ಪ್ರಶ್ನಿಸಿದ್ದಾರೆ.

ಜೀವ ವೈವಿಧ್ಯ ನಾಶ: ‘ಮಡಿವಾಳ ಕೆರೆ ಪರಿಸರದಲ್ಲಿ ಯಥೇಚ್ಛವಾದ ಜೀವವೈವಿಧ್ಯ ಇದೆ. ಆಯುರ್ವೇದ ಸಸ್ಯಗಳು ಇವೆ. ಪೆಲಿಕಾನ್ ಹಾಗೂ ಪಾಲ್ಕನ್‌ ಜಾತಿಯ ಪಕ್ಷಿಗಳು ಇಲ್ಲಿಗೆ ಪ್ರತಿವರ್ಷ ಸಂತಾನ ಅಭಿವೃದ್ಧಿಗಾಗಿ ಬರುತ್ತವೆ. 150ಕ್ಕೂ ಹೆಚ್ಚು ಪ್ರಭೇದಗಳ ಪಕ್ಷಿಗಳು ಬರುತ್ತವೆ’ ಎಂದು ಬಿಬಿಎಂಪಿಯ ವನ್ಯಜೀವಿ ಪರಿಪಾಲಕ ಪ್ರಸನ್ನ ಕುಮಾರ್‌ ಮಾಹಿತಿ ನೀಡಿದರು.

‘ಮಡಿವಾಳ ಕೆರೆಯನ್ನು ಸಮುದಾಯ ಮೀಸಲು ಪ್ರದೇಶವಾಗಿ ಪರಿವರ್ತನೆ ಮಾಡಬೇಕು ಎಂದು ಒಂದು ವರ್ಷದ ಹಿಂದೆ ಪ್ರಸ್ತಾವ ಸಲ್ಲಿಸಿದ್ದೇವೆ. ಕೆರೆ ಮಲಿನಗೊಂಡರೆ ಪಕ್ಷಿಗಳು ಇಲ್ಲಿಗೆ ವಲಸೆ ಬರುವುದಿಲ್ಲ. ಅವುಗಳಿಗೆ ಹರಿಯುವ ನೀರು ಇರಬೇಕು, ಆಹಾರ ಸಿಗಬೇಕು. ಆದರೆ ಈಗ ಕೆರೆಯ ನೀರು ವಿಷವಾಗಿ ಪರಿವರ್ತನೆಗೊಳ್ಳುತ್ತಿದೆ. ಅಲ್ಲದೆ ಇತರ ಪ್ರಾಣಿಗಳು ಸಾಯುತ್ತಿವೆ. ಇಂತಹ ಸಂದರ್ಭದಲ್ಲಿ ಪಕ್ಷಿಗಳ ಜೀವಕ್ಕೂ ಅಪಾಯವಿದೆ’ ಎಂದು ಅವರು ವಿವರಿಸಿದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !