ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿವಾಳ‌ ಕೆರೆ ಒಡಲು ಸೇರುತ್ತಿದೆ ಕೊಳಚೆ ನೀರು; ಬೇಕಿದೆ ಕಾಯಕಲ್ಪ

Last Updated 26 ಡಿಸೆಂಬರ್ 2018, 19:42 IST
ಅಕ್ಷರ ಗಾತ್ರ

ಬೆಂಗಳೂರು: ‘ನನ್ನ ಮಡಿಲಿನಲ್ಲಿ ಬಣ್ಣ ಬಣ್ಣದ ಹಕ್ಕಿಗಳಿವೆ, ಜಲಚರಗಳಿವೆ. ನನ್ನೊಡಲಲ್ಲಿನ ಬಾನಾಡಿಗಳ ಜಳಕ ನೋಡಿ ಪುಳಕಗೊಳ್ಳಲು ನಿತ್ಯ ನೂರಾರು ಜನ ಬರುತ್ತಾರೆ. ಆದರೆ, ನನ್ನೊಡಲನ್ನು ಸೇರುವ ಮಲಿನ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹದಗೆಡುತ್ತಿರುವ ನನ್ನ ಸ್ವಾಸ್ಥ್ಯವನ್ನು ಹೇಗೆ ರಕ್ಷಣೆ ಮಾಡಿಕೊಳ್ಳಲಿ...’

ಮಡಿವಾಳ‌ ಕೆರೆಯ ದಂಡೆಯಲ್ಲಿ ನಿಂತರೆ, ಈ ಕೆರೆ ಹೀಗೆ ಗೋಳು ಹೇಳಿಕೊಳ್ಳುತ್ತಿರುವಂತೆ ಭಾಸವಾಗುತ್ತದೆ.

ಬಿಟಿಎಂ ಬಡಾವಣೆ ವಾರ್ಡ್ ವ್ಯಾಪ್ತಿಯಲ್ಲಿರುವ ಈ ಕೆರೆಯನ್ನು ಜೀವವೈವಿಧ್ಯದ ಉದ್ಯಾನ ಎಂದು ಘೋಷಿಸಲಾಗಿತ್ತು. ಆದರೆ, ಈ ಜಲಮೂಲವನ್ನು ಸೇರುತ್ತಿರುವ ಕೊಳಚೆ ನೀರು ಜೀವರಾಶಿಗಳ ಪಾಲಿಕೆ ಕಂಟಕಪ್ರಾಯವಾಗುತ್ತಿದೆ. ಕೆಲ ತಿಂಗಳ ಹಿಂದೆಕೆರೆಯಲ್ಲಿ ಮೀನು, ಶಂಖದ ಹುಳುಗಳ ಮಾರಣ ಹೋಮವೇ ನಡೆದಿತ್ತು. ಆದರೂ, ಕೆರೆಗೆ ಕೊಳಚೆ ನೀರು ಸೇರುವುದನ್ನು ತಡೆಯುವ ಪ್ರಯತ್ನ ಈ ತನಕ ನಡೆದಿಲ್ಲ.

‘ಅಕ್ಕಪಕ್ಕದ ಬಡಾವಣೆಗಳ ತ್ಯಾಜ್ಯದ ನೀರು ಕೆರೆಯನ್ನು ಸೇರುತ್ತಿದೆ. ಅಲ್ಲದೆ, ಕೊಳಚೆಯಿಂದ ಕೂಡಿದ ಮಳೆ ನೀರು ತಲುಪುವುದು ಕೂಡಾ ಇಲ್ಲಿಗೆ’ ಎಂದು ಇಲ್ಲಿ ವಿಹಾರಕ್ಕೆ ಬಂದಿದ್ದ ಕೆಲವರು ದೂರಿದರು.

ಬೇಲಿಯೇ ಇಲ್ಲ: ಕೆರೆಗೆ ಬೇಲಿಯೇ ಇಲ್ಲ. ಇಲ್ಲಿಗೆ ವಿಹಾರಕ್ಕೆ ಬರುವ ಸಾರ್ವಜನಿಕರುಮಕ್ಕಳನ್ನೂ ಜೊತೆಗೆ ಕರೆತರುತ್ತಾರೆ. ಮಕ್ಕಳು ಆಡುತ್ತ ಕೆರೆ ದಂಡೆಗೆ ಹೋದರೆ ನೀರಿಗೆ ಬೀಳುವ ಅಪಾಯವೂ ಇದೆ. ಬೇಲಿ ಇಲ್ಲದಿರುವುದರಿಂದ ಅಕ್ಕಪಕ್ಕದ ಕೊಳೆಗೇರಿ ನಿವಾಸಿಗಳು ಕೆರೆಯಲ್ಲಿ ಮೀನು ಹಿಡಿಯಲು ಬರುತ್ತಾರೆ.

‘ಹೊಸೂರು ರಸ್ತೆ ಹಾಗೂ ಬಿಟಿಎಂ ಬಡಾವಣೆಗೆ ಸಂಪರ್ಕ ಕಲ್ಪಿಸುವ 60 ಅಡಿ ಅಗಲದ ರಸ್ತೆ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ಪೂರ್ಣಗೊಂಡ ನಂತರವೇ ಕೆರೆ ಸುತ್ತ ಬೇಲಿ ಅಥವಾ ಕಾಂಕ್ರಿಟ್‌ ಗೋಡೆ ನಿರ್ಮಿಸಲಾಗುತ್ತದೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಒಣಗಿದಎಲೆಗಳ ರಾಶಿ, ಒಣ ಹುಲ್ಲು, ಕಸ, ಕಳೆ ಗಿಡಗಳು, ಮೊಣಕಾಲುದ್ದದವರೆಗೆ ಬೆಳೆದು ನಿಂತ ಹುಲ್ಲುಗಳಿಂದ ಕೆರೆಯ ದಂಡೆ ಆವೃತವಾಗಿದೆ. ಮುರಿದು ಬಿದ್ದ, ಕತ್ತರಿಸಿದ ಗಿಡಗಳ ಕೊಂಬೆಗಳನ್ನೂ ತೆರವು ಮಾಡುವವರಿಲ್ಲ. ತಿಂದು, ಕುಡಿದು ಬಿಸಾಡಿದ ಆಹಾರ ಪೊಟ್ಟಣ, ನೀರಿನ ಬಾಟಲಿಗಳು ಸೇರಿದಂತೆ ಹಲ ಬಗೆಯ ಕಸವನ್ನುಕಂಡಕಂಡಲ್ಲೆಲ್ಲ ಬಿಸಾಡಲಾಗಿದೆ. ಇಂತಹ ಕಸ ಕೆರೆಯ ನೀರನ್ನು ಸೇರುತ್ತಿದೆ. ಇಲ್ಲಿ ಸೊಳ್ಳೆಗಳ ಕಾಟವೂ ವಿಪರೀತವಾಗಿದೆ.

‘ಬೀದಿ‌ನಾಯಿಗಳ ಕಾಟ ಕೇಳುವವರೇ ಇಲ್ಲದಂತಾಗಿದೆ. ಜನರಿಗಾಗಿ ನಿರ್ಮಿಸಿರುವ ಆಸನಗಳಲ್ಲಿ‌ ನಾಯಿಗಳೇ ಮಲಗಿರುತ್ತವೆ. ಒಬ್ಬೊಬ್ಬರೇ ಓಡಾಡುವಾಗ ಭಯವೆನಿಸುತ್ತದೆ’ ಎಂದು ಸ್ಥಳೀಯರೊಬ್ಬರು ದೂರಿದರು.

ಇಲ್ಲಿ ಉತ್ತಮ ಪಾದಚಾರಿ ಮಾರ್ಗಗಳಿಲ್ಲ. ದೂಳಿನಿಂದ ಕೂಡಿದ ಮಣ್ಣಿನ ರಸ್ತೆಗಳಿವೆ. ಬೀದಿದೀಪಗಳೂ ಇಲ್ಲ. ವಲಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಸುತ್ತಮುತ್ತ ಮಾತ್ರ ವಿದ್ಯುತ್‌ ದೀಪಗಳಿವೆ. ಇಡೀ ಉದ್ಯಾನದಲ್ಲಿ ಮೂರೇ ಕಡೆ ಸಿಸಿಟಿವಿ ಕ್ಯಾಮೆರಾಗಳಿವೆ.

‘ಯುಪಿಎಸ್‌ಸಿ ಪರೀಕ್ಷೆಯ ಸಿದ್ಧತೆಗಾಗಿ ಕಳೆದು ಒಂದು ತಿಂಗಳಿನಿಂದ ಇಲ್ಲಿಗೆ ಓದಲು ಬರುತ್ತಿದ್ದೇವೆ. ಇಲ್ಲಿ ಕನಿಷ್ಠ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ. ಬರುವಾಗಲೇ ಆಹಾರ, ನೀರು ತೆಗೆದುಕೊಂಡು ಬಂದು, ಇಲ್ಲೇ ತಿಂದು, ಬಿಸಾಡಿ ಹೋಗುವವರೇ ಹೆಚ್ಚಾಗಿದ್ದಾರೆ’ ಎಂದು ವಿದ್ಯಾರ್ಥಿಗಳು ದೂರಿದರು.

ಮಲಮೂತ್ರ ವಿಸರ್ಜನೆ: ‘ಸಿಲ್ಕ್‌ಬೋರ್ಡ್‌, ಸುತ್ತಮುತ್ತಲಿನ ಪ್ರದೇಶಗಳ ಚರಂಡಿ ನೀರು ಹರಿಯುತ್ತದೆ. ಸಮೀಪದ ಕೊಳೆಗೇರಿ ನಿವಾಸಿಗಳು ಕೆರೆ ದಂಡೆಗೆ ಮಲಮೂತ್ರ ವಿಸರ್ಜನೆಗೆ ಬರುತ್ತಾರೆ’ ಎಂದು ವಿಹಾರಕ್ಕೆ ಬಂದ ನಾಗಣ್ಣ ಬೇಸರ ವ್ಯಕ್ತಪಡಿಸಿದರು.

ದೋಣಿ ವಿಹಾರ: ಇಲ್ಲಿ ದೋಣಿ ವಿಹಾರದ ಸೌಲಭ್ಯವೂ ಇದೆ. ಪ್ರವಾಸಿಗರು ಕೊಳಚೆ ನೀರಿನ ಗಬ್ಬು ವಾಸನೆ ಸಹಿಸಿಕೊಂಡೇ ದೋಣಿ ವಿಹಾರ ಮಾಡಬೇಕಾದ ಪರಿಸ್ಥಿತಿ ಇದೆ.

‘ಕೊಳೆನೀರು ಸಂಸ್ಕರಣೆಗೆ ಎಸ್‌ಟಿ‍ಪಿ ಇಲ್ಲ’

‘ಬಿಲೇಕಹಳ್ಳಿ, ಮಡಿವಾಳ, ರೂಪೇನ ಅಗ್ರಹಾರ ಸೇರಿದಂತೆ ಹಲವೆಡೆಯ ಒಳಚರಂಡಿಯ ಪೈಪ್‌ಲೈನ್‌ ಹಾದು ಹೋಗಿದೆ. ಅಲ್ಲದೆ, ಬಿಟಿಎಂ ಬಡಾವಣೆಗಳಲ್ಲಿ ಎಸ್‌ಟಿಪಿ ಅಳವಡಿಕೆ ಕಾರ್ಯ ಆಮೆಗತಿಯಲ್ಲಿ ಸಾಗುತ್ತಿರುವುದರಿಂದ ಸುತ್ತಮುತ್ತಲಿನ ಒಳಚರಂಡಿ ನೀರು ನೇರವಾಗಿ ಕೆರೆಯನ್ನು ಸೇರುವಂತಾಗಿದೆ’ ಎಂದು ವಲಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯ ಸಿಬ್ಬಂದಿ ತಿಳಿಸಿದರು.

‘ಉದ್ಯಾನದಲ್ಲಿರುವ 3 ಎಂಎಲ್‌ಡಿ ಸಾಮರ್ಥ್ಯದ ಎಸ್‌ಟಿ‍ಪಿ ಒಂದು ವರ್ಷದಿಂದ ಕೆಟ್ಟು ಹೋಗಿದೆ. ಇದರ ಸಾಮರ್ಥ್ಯವನ್ನು 6 ಎಂಎಲ್‌ಡಿಗೆ ಹೆಚ್ಚಿಸುವುದಾಗಿ ಜಲಮಂಡಳಿ ಹೇಳಿದೆ. ಶೀಘ್ರವೇ ಈ ಕಾಮಗಾರಿ ಪೂರ್ಣಗೊಳಿಸುವಂತೆ ಕೋರಿ ನಾಲ್ಕು ಬಾರಿ ಪತ್ರವನ್ನೂ ಬರೆದಿದ್ದೇವೆ. ಆದರೂ ಪ್ರಯೋಜನವಾಗಿಲ್ಲ’ ಎಂದರು.
ಅಪಾಯದಲ್ಲಿ ಜೀವವೈವಿಧ್ಯ

‘ಮಡಿವಾಳ ಕೆರೆ ಪರಿಸರದಲ್ಲಿ ಜೀವವೈವಿಧ್ಯ ಹೇರಳವಾಗಿದೆ. ಸಾಕಷ್ಟು ಔಷಧ ಮೂಲಿಕೆಗಳು ಇಲ್ಲಿವೆ. ಪೆಲಿಕನ್ ಹಾಗೂ ಪಾಲ್ಕನ್‌ ಜಾತಿಯ ಪಕ್ಷಿಗಳು ಇಲ್ಲಿಗೆ ಪ್ರತಿವರ್ಷ ಸಂತಾನ ಅಭಿವೃದ್ಧಿಗಾಗಿ ಬರುತ್ತವೆ’ ಎಂದು ಪಕ್ಷಿ ತಜ್ಞರೊಬ್ಬರು ಮಾಹಿತಿ ನೀಡಿದರು.
‘ಕೆರೆ ಮಲಿನಗೊಂಡರೆ ಪಕ್ಷಿಗಳು ಇಲ್ಲಿಗೆ ವಲಸೆ ಬರುವುದಿಲ್ಲ. ಅವುಗಳಿಗೆ ಹರಿಯುವ ನೀರು ಇರಬೇಕು. ಹೇರಳ ಆಹಾರ ಸಿಗಬೇಕು. ಆದರೆ, ಈಗ ಕೆರೆಯ ನೀರು ವಿಷವಾಗಿ ಪರಿವರ್ತನೆಗೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ ಪಕ್ಷಿಗಳ ಜೀವಕ್ಕೂ ಅಪಾಯವಿದೆ’ ಎಂದು ಅವರು ವಿವರಿಸಿದರು.

**

ಬೊಮ್ಮನಹಳ್ಳಿ ಭಾಗದ ಕಾರ್ಖಾನೆಗಳ ತ್ಯಾಜ್ಯದ ನೀರು ಕೆರೆಯನ್ನು ಸೇರುತ್ತಿದ್ದರೂ ಕ್ರಮ ಕೈಗೊಳ್ಳುವವರು ಇಲ್ಲ. ಇಂದಿನ ರಾಜಕೀಯ,ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿ ಇದು
ಲೋಕೇಶ್‌, ಬೊಮ್ಮಸಂದ್ರದ ನಿವಾಸಿ

**

ಅಂಕಿ ಅಂಶ
200 ಎಕರೆ - ಮಡಿವಾಳ ಕೆರೆಯ ಒಟ್ಟು ವಿಸ್ತೀರ್ಣ
150 - ಪ್ರಭೇದಗಳ ಪಕ್ಷಿಗಳನ್ನು ಈ ಕೆರೆಯಲ್ಲಿ ಕಾಣಬಹುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT