ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲು ನಿಲ್ದಾಣದಲ್ಲೇ ಅಹೋರಾತ್ರಿ ಧರಣಿ

ಮನವಿ ಸ್ವೀಕರಿಸದ ರಾಜ್ಯಪಾಲರು; ರೈತ ಹೋರಾಟಗಾರರ ಅಸಮಾಧಾನ
Last Updated 19 ಅಕ್ಟೋಬರ್ 2019, 5:36 IST
ಅಕ್ಷರ ಗಾತ್ರ

ಬೆಂಗಳೂರು: ‘ಮಹದಾಯಿ, ಕಳಸಾ– ಬಂಡೂರಿ ಯೋಜನೆಗೆ ಅಧಿಸೂಚನೆ ಹೊರಡಿಸಬೇಕು’ ಎಂದು ಒತ್ತಾಯಿಸುತ್ತಿರುವ ರೈತ ಹೋರಾಟಗಾರರು, ನಗರದ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಆವರಣದಲ್ಲೇ ಅಹೋರಾತ್ರಿ ಧರಣಿ ಮುಂದುವರಿಸಿದ್ದಾರೆ.

‘ಬೆಂಗಳೂರು ಚಲೊ’ ಮೂಲಕ ಹುಬ್ಬಳ್ಳಿಯಿಂದ ನಗರಕ್ಕೆ ಬಂದಿರುವ ರೈತರಿಂದ ರಾಜ್ಯಪಾಲರು ಮನವಿ ಸ್ವೀಕರಿಸುತ್ತಿಲ್ಲ. ಹೀಗಾಗಿ, ಧರಣಿಯನ್ನು ಮುಂದುವರಿಸುವುದಾಗಿ ಹೋರಾಟಗಾರರು ಘೋಷಿಸಿದ್ದಾರೆ.

‘ಮಹದಾಯಿ, ಕಳಸಾ– ಬಂಡೂರಿ ಯೋಜನೆ ಜಾರಿಗಾಗಿ ಹಲವು ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಯಾವುದೇ ಸರ್ಕಾರವೂ ನಮ್ಮ ಬೇಡಿಕೆ ಈಡೇರಿಸುತ್ತಿಲ್ಲ. ಮಹದಾಯಿ ನ್ಯಾಯಾಧಿಕರಣದ ತೀರ್ಪು ಬಂದರೂ ಸರ್ಕಾರ ಮೌನವಾಗಿದೆ. ಈ ಬಗ್ಗೆ ಹಲವು ಬಾರಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗಿದೆ. ಯಾವುದಕ್ಕೂ ಸ್ಪಂದನೆ ಸಿಕ್ಕಿಲ್ಲ. ರಾಜ್ಯಪಾಲರಿಗೆ ಖುದ್ದಾಗಿ ಮನವಿ ಸಲ್ಲಿಸಲು ನಗರಕ್ಕೆ ಬಂದಿದ್ದೇವೆ’ ಎಂದುರೈತ ಸೇನಾ ಸಂಘಟನೆ ರಾಜ್ಯ ಘಟಕದ ಅಧ್ಯಕ್ಷ ವೀರೇಶ ಸೊಬರದಮಠ ಹೇಳಿದರು.

ರಾಜಭವನದಿಂದ ಮನವಿ ವಾಪಸು: ರೈಲು ನಿಲ್ದಾಣದ ಆವರಣದಲ್ಲಿ ಕುಳಿತು ರೈತ ಹೋರಾಟಗಾರರು ಗುರುವಾರ ಅಹೋರಾತ್ರಿಧರಣಿ ನಡೆಸಿದ್ದರು. ಶುಕ್ರವಾರ ಮಧ್ಯಾಹ್ನ ಸ್ಥಳಕ್ಕೆ ಭೇಟಿ ನೀಡಿದ್ದ ಪೊಲೀಸ್ ಅಧಿಕಾರಿಗಳು, ಐವರು ಮುಖಂಡರನ್ನು ರಾಜಭವನಕ್ಕೆ ಕರೆದೊಯ್ದಿದ್ದರು.

ಧರಣಿಯಲ್ಲಿ ಪಾಲ್ಗೊಂಡಿರುವ ರೈತ ಮಹಿಳೆಯರು – ಪ್ರಜಾವಾಣಿ ಚಿತ್ರ
ಧರಣಿಯಲ್ಲಿ ಪಾಲ್ಗೊಂಡಿರುವ ರೈತ ಮಹಿಳೆಯರು – ಪ್ರಜಾವಾಣಿ ಚಿತ್ರ

ರಾಜಭವನದಲ್ಲಿದ್ದ ಅಧಿಕಾರಿಗಳು ರೈತರಿಂದ ಮನವಿ ಪಡೆಯಲು ಮುಂದಾಗಿದ್ದರು. ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಮುಖಂಡರು, ‘ಅಧಿಕಾರಿಗಳಿಗೆ ಮನವಿ ಸಲ್ಲಿಸಲು ನಗರಕ್ಕೆ ಬಂದಿಲ್ಲ. ರಾಜ್ಯಪಾಲರೇ ಖುದ್ದು ಮನವಿ ಸ್ವೀಕರಿಸಬೇಕು. ಅಲ್ಲಿಯವರೆಗೂ ಧರಣಿ ಮುಂದುವರಿಸುತ್ತೇವೆ’ ಎಂದು ಹೇಳಿ ಮನವಿ ಪತ್ರದ ಸಮೇತ ಅಲ್ಲಿಂದ ವಾಪಸು ಬಂದರು.

ರೈತ ಮುಖಂಡರ ಜೊತೆ ಮಾತುಕತೆ ನಡೆಸಿದನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್, ‘ರಾಜ್ಯಪಾಲರು ಬೇರೆ ಕೆಲಸದಲ್ಲಿದ್ದಾರೆ. ಹೀಗಾಗಿ, ಮನವಿ ಸ್ವೀಕರಿಸುವಂತೆ ಅಧಿಕಾರಿಗಳಿಗೆ ಹೇಳಿದ್ದಾರೆ. ಅವರಿಗೇ ಮನವಿ ಕೊಡಿ’ ಎಂದು ಕೋರಿದರು. ಅದಕ್ಕೂ ಒಪ್ಪದ ಮುಖಂಡರು, ‘ಮನವಿ ಸ್ವೀಕರಿಸದಿದ್ದಕ್ಕೆ ನಿಖರ ಕಾರಣವೇನು ಎಂಬುದನ್ನು ತಿಳಿದುಕೊಂಡು ಹೇಳಿ. ಅವರಿಗೆ ಸಮಯ ಯಾವಾಗ ಇದೆಯೋ ಅವಾಗಲೇ ಮನವಿ ಕೊಡುತ್ತೇವೆ’ ಎಂದು ಉತ್ತರಿಸಿದರು.

ಮಳೆಯಲ್ಲೇ ಕುಳಿತ ಹೋರಾಟಗಾರರು

ರೈಲು ನಿಲ್ದಾಣದ ಆವರಣದಲ್ಲಿ ಧರಣಿ ನಡೆಸುತ್ತಿರುವ ಉತ್ತರ ಕರ್ನಾಟಕದ ರೈತ ಹೋರಾಟಗಾರರು, ಶುಕ್ರವಾರ ರಾತ್ರಿ ಸುರಿವ ಮಳೆಯಲ್ಲೇ ಕುಳಿತು ಧರಣಿ ಮುಂದುವರಿಸಿದರು. ಕೆಲ ಮಹಿಳೆಯರು ನಿಲ್ದಾಣದೊಳಗೆ ಹೋಗಿ ರಕ್ಷಣೆ ಪಡೆದರು. ರೈತ ಮುಖಂಡರು, ಮಳೆಯಲ್ಲೇ ತಾಡಪಾಲ ಹೊತ್ತುಕೊಂಡು ಕುಳಿತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT