ಶನಿವಾರ, ನವೆಂಬರ್ 23, 2019
18 °C
ವಿವಿಧ ಸಂಘಟನೆಗಳಿಂದ ಬೆಂಬಲ

ಮೊದಲು ರಸ್ತೆ ಸರಿಪಡಿಸಿ,ಆಮೇಲೆ ಮತ ಕೇಳಿ: ಮಹದೇವಪುರದ ನಾಗರಿಕರ ಪ್ರತಿಭಟನೆ

Published:
Updated:
Prajavani

ಬೆಂಗಳೂರು: ‘ಐಟಿ–ಬಿಟಿ ಕಂಪನಿಗಳು, ಗಗನಚುಂಬಿ ಕಟ್ಟಡಗಳು ಹಾಗೂ ವಸತಿ ಸಮುಚ್ಚಯಗಳು ಕ್ಷೇತ್ರವನ್ನು ಆವರಿಸಿಕೊಂಡಿವೆ. ರಸ್ತೆ, ಒಳಚರಂಡಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಪ್ರತಿವರ್ಷ ಸಾವಿರಾರು ಕೋಟಿ ರೂಪಾಯಿ ಅನುದಾನ ಬರುತ್ತಿದೆ. ಆದರೆ, ಅಭಿವೃದ್ಧಿ ಮಾತ್ರ ಶೂನ್ಯ. ಇದರಿಂದಾಗಿ ನಮ್ಮ ಬದುಕು ನರಕದ ಕೂಪಕ್ಕೆ ತಳ್ಳಲ್ಪಟ್ಟಿದೆ’.

–ಇದು ಮಹದೇವಪುರ ವಿಧಾನಸಭಾ ಕ್ಷೇತ್ರದ ನಿವಾಸಿಗಳ ನೋವಿನ ಮಾತುಗಳು. ಹದಗೆಟ್ಟ ರಸ್ತೆ, ದುರಸ್ತಿಯಾಗದ ಒಳಚರಂಡಿ ವ್ಯವಸ್ಥೆ, ಎಲ್ಲೆಂದರಲ್ಲಿ ಕಸದ ರಾಶಿ, ಸಂಚಾರ ದಟ್ಟಣೆಯಿಂದ ವಾಹನ ಸವಾರರ ಹರಸಾಹಸ, ರಾತ್ರಿ ವೇಳೆ ಉರಿಯದ ಬೀದಿ ದೀಪಗಳು... ಹೀಗೆ ವಿವಿಧ ಸಮಸ್ಯೆಗಳ ವಿರುದ್ಧ 1.5 ಸಾವಿರಕ್ಕೂ ಅಧಿಕ ಮಂದಿ ರಸ್ತೆಗಿಳಿದು ಶುಕ್ರವಾರ ಪ್ರತಿಭಟಿಸಿದರು. 

‘#ಮಹದೇವಪುರ ಬೇಡಿಕೆಗಳು’ ಎಂಬ ಹೆಸರಿನಡಿ ಮಾರತಹಳ್ಳಿ ಸೇತುವೆ ಬಸ್‌ನಿಲ್ದಾಣದ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳು, ನಾಗರಿಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ, ಶಾಸಕ ಅರವಿಂದ ಲಿಂಬಾವಳಿ, ಸಂಸದ ಪಿ.ಸಿ.ಮೋಹನ್‌ ಹಾಗೂ ಪಾಲಿಕೆ ಸದಸ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 

ಬೆಳ್ಳಂದೂರು, ವರ್ತೂರು, ವೈಟ್‌ಫೀಲ್ಡ್‌, ಹೂಡಿ, ದೊಡ್ಡನೆಕ್ಕುಂದಿ, ಕಾಡುಗೋಡಿ, ಚನ್ನಸಂದ್ರ, ಹಗದೂರು ಸೇರಿದಂತೆ ವಿವಿಧೆಡೆಯಿಂದ ಜನತೆ ಬಂದಿದ್ದರು. ಮಾರತಹಳ್ಳಿಯ ಸೇತುವೆಯುದ್ದಕ್ಕೂ ಸಾಲಾಗಿ ನಿಂತ ಪ್ರತಿಭಟನಕಾರರು ವಾಹನ ಸವಾರರ ಗಮನ ಸೆಳೆಯುವಲ್ಲಿ ಯಶಸ್ವಿಯಾದರು. ಅದೇ ರೀತಿ, ಪಾದಚಾರಿ ಮೇಲ್ಸೇತುವೆಯಲ್ಲಿ ನಿಂತ ವಿದ್ಯಾರ್ಥಿಗಳು, ‘ಮಹದೇವಪುರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿ’ ಎಂಬ ಭಿತ್ತಿಪತ್ರಗಳನ್ನು ಪ್ರದರ್ಶಿಸಿದ‌ರು.

ರಸ್ತೆಯುದ್ದಕ್ಕೂ ಘೋಷಣೆ, ಜಾಗೃತಿ: ‘ಕೆಟ್ಟ ರಸ್ತೆ ಜೀವಕ್ಕೆ ಕುತ್ತು, ಉತ್ತಮ ರಸ್ತೆ ಸುಗಮ ಸಂಚಾರಕ್ಕೆ ಒತ್ತು’, ‘ರಸ್ತೆ ಬೇಕು ಟ್ರಾಫಿಕ್‌ ಜಾಮ್‌ ಬೇಡ’, ‘ಮೊದಲು ರಸ್ತೆ, ಆಮೇಲೆ ಮತ’, ‘ರಸ್ತೆಯಿಲ್ಲ, ತೆರಿಗೆ ನೀಡಲ್ಲ’ ಸೇರಿದಂತೆ ವಿವಿಧ ಘೋಷಣೆಗಳನ್ನು ಒಳಗೊಂಡ ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು. ಈ ಬಗ್ಗೆ ಸಿಗ್ನಲ್‌ಗಳಲ್ಲಿ ನಿಂತಿದ್ದ ವಾಹನ ಸವಾರರಿಗೂ ಪ್ರತಿಭಟನಕಾರರು ಅರಿವು ಮೂಡಿಸಿದರು. 

ವಿವಿಧ ಸಂಘಟನೆಗಳ ಮುಖಂಡರ ನೇತೃತ್ವದಲ್ಲಿ ಹೆಜ್ಜೆಹಾಕಿದ ಸ್ಥಳೀಯ ನಿವಾಸಿಗಳು ಅರವಿಂದ ಲಿಂಬಾವಳಿ ಅವರಿಗೆ ಮನವಿ ನೀಡಲು ಕೆಲಹೊತ್ತು ಕಾದರು. ಆದರೆ, ಶಾಸಕರು ಪ್ರತಿಭಟನಾ ಸ್ಥಳಕ್ಕೆ ಬಾರದ ಹಿನ್ನೆಲೆಯಲ್ಲಿ ಅವರ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. 

‘ಮುಖ್ಯರಸ್ತೆಗಳು ಹಾಳಾಗಿದ್ದು, ಪ್ರತಿನಿತ್ಯ ಅಪಘಾತ ಸಂಭವಿಸುತ್ತಿದೆ. 200ಕ್ಕೂ ಅಧಿಕ ಮಂದಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಸಾವಿರಾರು ಮಂದಿ ಗಾಯಗೊಂಡಿದ್ದಾರೆ. ಕಳಪೆ ರಸ್ತೆಗಳೇ ಇದಕ್ಕೆ ಪ್ರಮುಖ ಕಾರಣ. ಸಂಚಾರ ದಟ್ಟಣೆಯ ಸಮಸ್ಯೆಯಿಂದ ದಿನದ ಬಹುತೇಕ ಸಮಯವನ್ನು ರಸ್ತೆಯಲ್ಲಿಯೇ ಕಳೆಯಬೇಕಿದೆ. ವಾಯುಮಾಲಿನ್ಯ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜನರಲ್ಲಿ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತದೆ’ ಎಂದು ಸ್ಥಳೀಯ ನಿವಾಸಿ ಜಗದೀಶ್ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು. 

‘ವೈಟ್ ಫೀಲ್ಡ್ ರಸ್ತೆಯಲ್ಲಿನ ಬೀದಿ ದೀಪಗಳು ಹಾಳಾಗಿವೆ. ಸರ್ಜಾಪುರ ರಸ್ತೆಯಲ್ಲಿ ಪಾದಚಾರಿ ಮಾರ್ಗವಿಲ್ಲದ ಪರಿಣಾಮ ಸಾರ್ವಜನಿಕರು ಭಯದಲ್ಲಿ ರಸ್ತೆಗಿಳಿಯಬೇಕಾಗಿದೆ. ಅದೇ ರೀತಿ, ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ಜಂಕ್ಷನ್‌ ಮಳೆ ಬಂದರೆ ಹೊಳೆಯ ಸ್ವರೂಪ ಪಡೆದುಕೊಳ್ಳುತ್ತದೆ. ಇದರಿಂದ ವಾಹನ ಸವಾರರು ಸಾಗುವುದು ಕಷ್ಟವಾಗಿದೆ. ಅಡ್ಡ ರಸ್ತೆಗಳನ್ನು ಕುಡಿಯುವ ನೀರಿನ ಸಂಪರ್ಕ, ಒಳಚರಂಡಿ ಸೇರಿದಂತೆ ವಿವಿಧ ಕಾಮಗಾರಿಯ ನೆಪದಲ್ಲಿ ಅಗೆದು ಹಾಕಲಾಗಿದೆ. ವಾರ್ಡ್‌ಗಳನ್ನು ಪುನರ್‌ ವಿಂಗಡಣೆ ಮಾಡಬೇಕಾಗಿದೆ’ ಎಂದು ಸರ್ಜಾಪುರ ರಸ್ತೆಯ ನಿವಾಸಿ ಕೃಷ್ಣ ಒತ್ತಾಯಿಸಿದರು. 

ಸ್ಥಳೀಯ ನಿವಾಸಿ ಪ್ರಾಣೇಶ್ ಕಾರ್ತಿಕೇಯನ್ ಅವರು ಬಟ್ಟೆಗಳ ತುಂಬಾ ಮಣ್ಣನ್ನು ಮೆತ್ತಿಕೊಂಡು ಬಂದಿದ್ದರು. ‘ವಿಬ್‌ಗಯಾರ್ ಶಾಲೆಯ ರಸ್ತೆಯಲ್ಲಿ ಸಾಗಬೇಕಾದರೆ ಹರಸಾಹಸ ಪಡಬೇಕು. ವಾಹನವನ್ನು ರಸ್ತೆಗೆ ಇಳಿಸುವುದೇ ಕಷ್ಟವಾಗಿದೆ. ಮಳೆಬಂದರೆ ರಾಡಿ, ಬಿಸಿಲಿಗೆ ದೂಳಿನ ಸಮಸ್ಯೆ ಎದುರಿಸಬೇಕಿದೆ. ಹಲವರು ನಿಯಂತ್ರಣ ತಪ್ಪಿ ಬೀಳುತ್ತಿದ್ದಾರೆ. ರಸ್ತೆ ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಂಡಿದೆ’ ಎಂದು ಪ್ರಾಣೇಶ್ ಬೇಸರ ವ್ಯಕ್ತಪಡಿಸಿದರು. 

ಪ್ರತಿಭಟನೆಯಲ್ಲಿ ಬೂದಿಗೆರೆ ರೈಸಿಂಗ್, ಬೆಲ್ತೂರು ರೈಸಿಂಗ್,ಬೆಳ್ಳಂದೂರು ಡೆವಲಪ್‌ಮೆಂಟ್‌ ಫೋರಂ, ನಲ್ಲೂರಹಳ್ಳಿ ರೈಸಿಂಗ್, ವರ್ತೂರು ರೈಸಿಂಗ್, ಪಣತ್ತೂರು ಅಪ್‌ಡೇಟ್ಸ್‌, ನಮ್ಮ ಬೆಳಗೆರೆ, ರಾಮಗೊಂಡನಹಳ್ಳಿ ರೈಸಿಂಗ್, ಫೋರ್ಸ್‌ ಜಿಎಂ, ತೂಬರಹಳ್ಳಿ ರೈಸಿಂಗ್, ದೊಡ್ಡಕನ್ನಲ್ಲಿ ರೈಸಿಂಗ್, ಸಿಟಿಜನ್ಸ್ ಫಾರ್ ಬೆಂಗಳೂರು, ಬೆಂಗಳೂರು ಅಪಾರ್ಟ್‌ಮೆಂಟ್ ಫೆಡರೇಷನ್ ಹಾಗೂ ವೈಟ್‌ ಫೀಲ್ಡ್ ರೈಸಿಂಗ್ ಸಂಘಟನೆಯ ಸದಸ್ಯರು ಪಾಲ್ಗೊಂಡಿದ್ದರು. 

‘₹245 ಕೋಟಿ ಅನುದಾನ ಬಿಡುಗಡೆ’

‘ಅತಿ ಹೆಚ್ಚು ತೆರಿಗೆ ಕಟ್ಟುವ ಮಹದೇವಪುರ ಕ್ಷೇತ್ರಕ್ಕೆ ಕಾಂಗ್ರೆಸ್ ಹಾಗೂ ಮೈತ್ರಿ ಸರ್ಕಾರವು ಅನುದಾನದ ಹಂಚಿಕೆಯಲ್ಲಿ ತಾರತಮ್ಯ ಮಾಡಿತ್ತು. ಇದರಿಂದ ಅಭಿವೃದ್ಧಿ ಕಾಮಗಾರಿಗಳು ಕುಂಠಿತವಾಗಿದ್ದವು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಎರಡು ತಿಂಗಳಲ್ಲಿಯೇ ವಿವಿಧ ಕಾಮಗಾರಿಗಳಿಗೆ ಕ್ಷೇತ್ರಕ್ಕೆ ₹ 245.15 ಕೋಟಿ ಅನುದಾನ ತರುವಲ್ಲಿ ಯಶಸ್ವಿಯಾಗಿರುವೆ’ ಎಂದು ಶಾಸಕ ಅರವಿಂದ ಲಿಂಬಾವಳಿ ತಿಳಿಸಿದರು.

‘ಕ್ಷೇತ್ರದಲ್ಲಿ 479 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಮುನ್ನೇಕೊಳಾಲು ಮತ್ತು ಕಾರ್ಮೆಲ್‌ರಾಮ್ ರೈಲ್ವೆ ಬ್ರಿಡ್ಜ್‌ಗಳ ಅಭಿವೃದ್ಧಿ ಕಾಮಗಾರಿಗೆ ₹ 40 ಕೋಟಿ ಅನುದಾನ ಬಿಡುಗಡೆಯಾಗಿದೆ. ಬೆಳ್ಳಂದೂರು, ವರ್ತೂರು ಸೇರಿದಂತೆ ವಿವಿಧ ಕೆರೆಗಳ ಅಭಿವೃದ್ಧಿಗೆ ಸರ್ಕಾರದಿಂದ ₹ 470 ಕೋಟಿ ಅನುದಾನ ತರಲಾಗಿದೆ. ಅದೇ ರೀತಿ, 31 ಹಳ್ಳಿಗಳಿಗೆ ಕಾವೇರಿ ಕುಡಿಯುವ ನೀರು ಸಂಪರ್ಕ ಕಾಮಗಾರಿ ಬಹುತೇಕ ಮುಗಿದಿದ್ದು, ಶೀಘ್ರವೇ ಇದರ ಲಾಭ ಪಡೆದುಕೊಳ್ಳಬಹುದಾಗಿದೆ’ ಎಂದರು.
‘ಸಿಲಿಕಾನ್‌ ವ್ಯಾಲಿ ಕೊಳೆಗೇರಿ ಆಗಿದೆ’

‘ದೇಶದಲ್ಲಿಯೇ ಅತಿ ಹೆಚ್ಚು ಐಟಿ ಕಂಪನಿಗಳನ್ನು ಹೊಂದಿರುವ ಬೆಂಗಳೂರನ್ನು ಸಿಲಿಕಾನ್‌ ವ್ಯಾಲಿ ಎಂದು ಕರೆಯಲಾಗುತ್ತಿದೆ. ಬಹುತೇಕ ಕಂಪನಿಗಳು ಮಹದೇವಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿಯೇ ನೆಲೆ ಕಂಡುಕೊಂಡಿವೆ. ಸಮರ್ಪಕವಾಗಿ ಕಸ ವಿಲೇವಾರಿ ನಡೆಯದ ಪರಿಣಾಮ ಸಿಲಿಕಾನ್‌ ವ್ಯಾಲಿ ಕೊಳೆಗೇರಿ ಆಗಿ ಪರಿವರ್ತನೆಯಾಗುತ್ತಿದೆ’ ಎಂದು ಮಹದೇವಪುರದ ನಿವಾಸಿ ಎಂ. ರವೀಂದ್ರ ಆಕ್ರೋಶ ವ್ಯಕ್ತಪಡಿಸಿದರು.

‘ಬಡಾವಣೆಗಳಿಗೆ ಕಸ ಸಂಗ್ರಹಕ್ಕೆ ಬಿಬಿಎಂಪಿ ಸಿಬ್ಬಂದಿ ಬರುತ್ತಿಲ್ಲ. ಇದರಿಂದ ನಾವೇ ಹಣ ನೀಡಿ ವಿಲೇವಾರಿ ಮಾಡಿಸಿಕೊಳ್ಳುತ್ತಿದ್ದೇವೆ. ನಮ್ಮ ಕ್ಷೇತ್ರಕ್ಕೆ ಹೊಸಬರು ಶಾಸಕರಾಗಿ ಬಂದಲ್ಲಿ ಸಮಸ್ಯೆಯ ಗಾಂಭೀರ್ಯದ ದರ್ಶನವಾಗುವುದಿಲ್ಲ ಎಂಬ ಕಾರಣಕ್ಕೆ ಮೂರನೇ ಬಾರಿ ಅರವಿಂದ ಲಿಂಬಾವಳಿ ಅವರನ್ನು ಗೆಲ್ಲಿಸಲಾಯಿತು. ಆದರೆ, ಅವರು ಮಾತ್ರ ಸಮಸ್ಯೆಗಳ ನಿವಾರಣೆಗೆ ಇಚ್ಛಾಶಕ್ತಿ ತೋರುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಮುಖ್ಯ ಬೇಡಿಕೆಗಳು

* ರಸ್ತೆ, ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯ ಒದಗಿಸಿ

* ಮಹದೇವಪುರವನ್ನು ಮಹಾನಗರ ಪಾಲಿಕೆ ಮಾಡಿ

* ಬೆಳ್ಳಂದೂರು ಗ್ರಾಮ ಹಾಗೂ ಕೆರೆಯನ್ನು ತಕ್ಷಣ ಪುನಶ್ಚೇತನಗೊಳಿಸಿ

* ಉಪನಗರ ರೈಲ್ವೆ, ಮೆಟ್ರೊಗೆ ಆದ್ಯತೆ ನೀಡಿ

ಪ್ರಮುಖ ಸಮಸ್ಯೆಗಳು

* ಕುಡಿಯವ ನೀರಿನ ಸಮಸ್ಯೆ

* ರಸ್ತೆಗಳ ಡಾಂಬರೀಕರಣ ಆಗದಿರುವುದು

* ವಾಹನ ದಟ್ಟಣೆಯ ಕಿರಿಕಿರಿ

* ಮಳೆ ಬಂದರೆ ಹೊಳೆಯ ಸ್ವರೂಪ ತಾಳುವ ಕೆಳ ಸೇತುವೆ

* ವಿವಿಧೆಡೆ ಬೀದಿನಾಯಿಗಳ ಕಾಟ

* ಕಸ ವಿಲೇವಾರಿ ಸಮಸ್ಯೆ

* ಒಳಚರಂಡಿ ಸಮಸ್ಯೆ

* ಪಾದಚಾರಿ ಮಾರ್ಗ ಒತ್ತುವರಿ

* ಉದ್ಯಾನಗಳ ನಿರ್ವಹಣೆ ಇಲ್ಲದಿರುವುದು

* ಬೀದಿದೀಪ ಸಮಸ್ಯೆ

**

ಮಳೆ ಬಂದರೆ ರಸ್ತೆಗಳಲ್ಲಿ ಸಾಗುವುದು ದುಸ್ತರವಾಗಿದೆ. ಕೆಳಸೇತುವೆಗಳಲ್ಲಿ ನೀರು ನಿಲ್ಲುತ್ತಿದ್ದು, ವಾಹನ ಸವಾರರು ಭಯದಲ್ಲಿ ಸಾಗಬೇಕಾಗಿದೆ. ಅಡ್ಡ ರಸ್ತೆಗಳು ಗುಂಡಿಗಳಿಂದ ಆವೃತವಾಗಿವೆ
– ಕುಲಭೂಷಣ, ಮಹದೇವಪುರ

**

ಸಮಗ್ರ ಅಭಿವೃದ್ಧಿ ಯೋಜನೆ ಶೇ 5 ರಷ್ಟೂ ಅನುಷ್ಠಾನವಾಗಿಲ್ಲ. ಗುದ್ದಲಿ ಪೂಜೆ ಮಾಡಿ ಒಂದು ವರ್ಷವೇ ಕಳೆದಿದ್ದರೂ ಮೇಲ್ಸೇತುವೆ ಮಾತ್ರ ನಿರ್ಮಾಣವಾಗಿಲ್ಲ
– ಸಂಗಪ್ಪ ದೇಸಾಯಿ, ಬಳಗೇರಿ ನಿವಾಸಿ

**

ಮುಖ್ಯರಸ್ತೆಗಳಲ್ಲಿ ಬೀದಿ ದೀಪ ಕೆಟ್ಟರೂ ಸರಿಮಾಡಿಸಿಲ್ಲ. ರಾತ್ರಿ ವೇಳೆ ರಸ್ತೆ ಅಪಘಾತ ಹೆಚ್ಚುತ್ತಿದೆ. ವಾಹನ ದಟ್ಟಣೆ ಸಮಸ್ಯೆಗೆ ಪರಿಹಾರ ತುರ್ತಾಗಿ ಕಲ್ಪಿಸಬೇಕು
– ಜಗದೀಶ್ ರೆಡ್ಡಿ, ಐಟಿ ಉದ್ಯೋಗಿ

ಪ್ರತಿಕ್ರಿಯಿಸಿ (+)