ಮಹದೇವಪುರ: ಸಮಸ್ಯೆಯೇ ಹಣ ಗಳಿಕೆಯ ಹೊಸ ದಾರಿ

ಸೋಮವಾರ, ಏಪ್ರಿಲ್ 22, 2019
29 °C
ಕಾನೂನು ಬಾಹಿರವಾಗಿ ನಿರ್ಮಾಣವಾಗಿವೆ ಟ್ಯಾಂಕ್‌ಗಳು

ಮಹದೇವಪುರ: ಸಮಸ್ಯೆಯೇ ಹಣ ಗಳಿಕೆಯ ಹೊಸ ದಾರಿ

Published:
Updated:

ಬೆಂಗಳೂರು: ನಗರದ ಪೂರ್ವ ಭಾಗದ ಮಹದೇವಪುರದ ವಸತಿ ಬಡಾವಣೆಯಲ್ಲಿ ನೀರು ಪೂರೈಸಿ ಹಣ ಮಾಡಿಕೊಳ್ಳಲು ಕಾನೂನು ಬಾಹಿರವಾದ ಹೊಸದೊಂದು ಮಾರ್ಗವನ್ನು ಟ್ಯಾಂಕರ್‌ಗಳಲ್ಲಿ ನೀರು ಸರಬರಾಜು ಮಾಡುವವರು ಕಂಡುಕೊಂಡಿದ್ದಾರೆ.‌‌

ಅಂತರ್ಜಲ ಕುಸಿತದಿಂದ ಎಲ್ಲೆಡೆ ಕೊಳವೆಬಾವಿಗಳು ಬತ್ತಿ ಹೋಗಿವೆ. ಹೀಗಾಗಿ ನೀರು ಸಂಗ್ರಹಿಸುವ ತಾತ್ಕಾಲಿಕ ತೊಟ್ಟಿಗಳು (ಟ್ಯಾಂಕ್‌) ಅಲ್ಲಲ್ಲಿ ತಲೆ ಎತ್ತಿವೆ. ರಾಮಗೊಂಡನಹಳ್ಳಿಯ ಬಳಿ ಮೂರು ತೊಟ್ಟಿಗಳು ನಿರ್ಮಾಣಗೊಂಡಿವೆ.

ಪ್ರತಿ ತೊಟ್ಟಿಗಳಲ್ಲಿ 30,000 ಲೀಟರ್ ನೀರು ಸಂಗ್ರಹಿಸಬಹುದಾಗಿದ್ದು, ಏಕಕಾಲಕ್ಕೆ 6ರಿಂದ 8 ಟ್ಯಾಂಕರ್‌ಗಳು ನೀರು ತುಂಬಿಸಿಕೊಳ್ಳಬಹುದಾಗಿದೆ. ಬೋರ್‌ವೆಲ್‌ ಸಂಪರ್ಕ ಹೊಂದಿರುವ ಈ ರೀತಿಯ ತೊಟ್ಟಿಯೊಂದು ರಾಮಗೊಂಡನಹಳ್ಳಿ ರಸ್ತೆಗೆ ಹೊಂದಿಕೊಂಡಂತೆ ಇದೆ.‌

ಕಾನೂನು ಬಾಹಿರ ತೊಟ್ಟಿಗಳ ನಿರ್ಮಾಣದ ವಿರುದ್ಧ ಪ್ರತಿಭಟನೆ ನಡೆಸಲು ಕೆಲವರು ಸಿದ್ಧತೆ ನಡೆಸಿದ್ದಾರೆ. ಹೇಗಾದರೂ ಮಾಡಿ ಮನೆಗಳಿಗೆ ಟ್ಯಾಂಕರ್‌ ಮಾಲೀಕರು ನೀರು ಪೂರೈಸುತ್ತಿದ್ದಾರೆ. ಇದರಲ್ಲಿ ತಪ್ಪೇನು ಇಲ್ಲ ಎಂದು ಇನ್ನೂ ಕೆಲವರು ಹೇಳುತ್ತಿದ್ದಾರೆ.

ಟ್ಯಾಂಕರ್‌ಗಳೇ ರಕ್ಷಕರು: ‘ಅನಧಿಕೃವಾಗಿ ತೊಟ್ಟಿಗಳನ್ನು ನಿರ್ಮಿಸುವುದು ಒಳ್ಳೆಯದಲ್ಲ ಎಂಬುದೇನೋ ಸರಿ, ಆದರೆ, ನಿತ್ಯ ಬಳಕೆಗೆ ನೀರನ್ನು ಎಲ್ಲಿಂದ ಪಡೆಯಬೇಕು’ ಎಂದು ವೈಟ್‌ಫೀಲ್ಡ್‌ ನಿವಾಸಿ ಸೆಂತಿಲ್ ಕುಮಾರ್
ಪ್ರಶ್ನಿಸಿದರು.

‘ಪ್ರತಿಮನೆಗೆ ಬೇಕಿರುವಷ್ಟು ನೀರನ್ನು ಸರ್ಕಾರ ಪೂರೈಕೆ ಮಾಡಿದರೆ, ಖಾಸಗಿ ಟ್ಯಾಂಕರ್‌ಗಳನ್ನು ಅವಲಂಬಿಸುವ ಸ್ಥಿತಿಯೇ ಉದ್ಭವಿಸುವುದಿಲ್ಲ. ಹೀಗಾಗಿ, ಖಾಸಗಿ ಟ್ಯಾಂಕರ್‌ಗಳೇ ರಕ್ಷಕರು’ ಎಂದರು.

‘ದೆಹಲಿ, ತಮಿಳುನಾಡು ಮತ್ತು ಮಹಾರಾಷ್ಟ್ರದ ರೀತಿಯಲ್ಲೇ ನಮ್ಮ ನಗರಗಳೂ ಅಂತರ್ಜಲ ಬರಿದಾಗಲಿದೆ. ಇದನ್ನು ತಪ್ಪಿಸಲು ಬೆಂಗಳೂರು ಜಲ ಮಂಡಳಿ ಎಲ್ಲಾ ಮನೆಗಳಿಗೂ ನೀರು ಪೂರೈಸಬೇಕು’ ಎಂದು ಕವನ್ ಕುಮಾರ್ ಮನವಿ ಮಾಡಿದರು.

50 ಜನರಿಗೆ ನೋಟಿಸ್

ನೀರು ಸರಬರಾಜು ಮಾಡಲು ಮಹಾನಗರ ಪಾಲಿಕೆಯಿಂದ ಪರವಾನಗಿ ಪಡೆಯುವುದು ಕಡ್ಡಾಯ. 50ಕ್ಕೂ ಹೆಚ್ಚು ಅನಧಿಕೃತ ನೀರು ಸರಬರಾಜುದಾರರಿಗೆ ಬಿಬಿಎಂಪಿಯಿಂದ ನೋಟಿಸ್ ಕೂಡ ನೀಡಲಾಗಿದೆ’ ಎಂದು ಪಾಲಿಕೆ ಸದಸ್ಯ ಎಸ್. ಉದಯಕುಮಾರ್ ಹೇಳಿದರು.

ಇಂದು ನೀರಿನ ಅದಾಲತ್‌

ಜಲಮಂಡಳಿಯು ಸಹಾಯಕ ಕಾರ್ಯಪಾಲಕ ಎಂಜಿನಿಯರ್‌(ಎಇಇ) ಉತ್ತರ–3, ಈಶಾನ್ಯ-2 ವಿಭಾಗಗಳಲ್ಲಿ ಮಾರ್ಚ್‌ 21 ರ ಬೆಳಿಗ್ಗೆ 9.30ರಿಂದ 11ರ ವರೆಗೆ ನೀರಿನ ಅದಾಲತ್‌ ನಡೆಯಲಿದೆ.

ನೀರು ಪೂರೈಕೆಯಲ್ಲಿನ ವ್ಯತ್ಯಯ, ಒಳಚರಂಡಿ ವ್ಯವಸ್ಥೆ, ಬಿಲ್ಲಿಂಗ್‌, ಮೀಟರ್‌ ರೀಡಿಂಗ್‌ ಮತ್ತು ನೀರಿನ ಹೊಸ ಸಂಪರ್ಕ ಪಡೆಯುವ ಕುರಿತ ಕುಂದು ಕೊರತೆಗಳನ್ನು ಸಾರ್ವಜನಿಕರು ಅದಾಲತ್‌ನಲ್ಲಿ ಅಧಿಕಾರಿಗಳ ಗಮನಕ್ಕೆ ತರಬಹುದು.

ಸಹಕಾರ ನಗರ, ಜಕ್ಕೂರು, ವಿದ್ಯಾರಣ್ಯಪುರ, ಕೆ.ಜಿ. ಟವರ್‌, ಕುಮಾರಪಾರ್ಕ್‌, ಜಯಮಹಲ್ ಸುತ್ತಮುತ್ತಲ ನಿವಾಸಿಗಳು ಆಯಾ ವ್ಯಾಪ್ತಿಯ ಎಇಇ ಕಚೇರಿಯಲ್ಲಿ ನಡೆಯಲಿರುವ ನೀರಿನ ಅದಾಲತ್‌ನಲ್ಲಿ
ಭಾಗವಹಿಸಬಹುದು ಎಂದು ಜಲಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

***

ಹೆಸರುಘಟ್ಟ ರಸ್ತೆಯ ಎಂ.ಎಂ. ಲೇಔಟ್‌ ಮತ್ತು ದಾಸರಹಳ್ಳಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಕೆಟ್ಟಿರುವ ಬೋರ್‌ವೆಲ್‌ಗಳು ಮೂರು ತಿಂಗಳಿಂದ ರಿಪೇರಿಯಾಗಿಲ್ಲ.

- ಬಿ.ಎಸ್‌. ರಾಜೇಶ್ವರಿ, ಎಂ.ಎಂ. ಲೇಔಟ್‌

ಮಾಗಡಿ ರಸ್ತೆಯಲ್ಲಿನ ಹೇರೋಹಳ್ಳಿಯಲ್ಲಿ ನೀರಿಗಾಗಿ ಹಾಹಾಕಾರ ಇದೆ. ₹600–700 ನೀಡಿ ಟ್ಯಾಂಕರ್‌ಗಳಲ್ಲಿ ನೀರು ಪಡೆಯಬೇಕಾಗಿದೆ. ಸಮಸ್ಯೆ ಯಾರಿಗೆ ಹೇಳುವುದು ಗೊತ್ತಾಗುತ್ತಿಲ್ಲ.

- ಸದಾಶಿವ, ಹೇರೋಹಳ್ಳಿ

ಬನಶಂಕರಿ 3ನೇ ಹಂತದ ಗಿರಿನಗರದಲ್ಲಿ ಹಲವು ದಿನಗಳಿಂದ ನೀರಿಗಾಗಿ ಪರದಾಡುತ್ತಿದ್ದೇವೆ. ಸಮಸ್ಯೆಗೆ ಪರಿಹಾರ ಯಾವಾಗ ಎಂದು ಕಾಯುತ್ತಿದ್ದೇವೆ.

- ಸರೋಜ ಕೆ.ಎನ್. ಗಿರಿನಗರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !