ಶುಕ್ರವಾರ, ಸೆಪ್ಟೆಂಬರ್ 20, 2019
27 °C

ಬಿಸಿಲಿಗೆ ಖಾಲಿಯಾದ ವರ್ತೂರು ಕೆರೆ

Published:
Updated:
Prajavani

ಮಹದೇವಪುರ: ಬಿಸಿಲಿನ ತಾಪದಿಂದಾಗಿ ವರ್ತೂರು ಕೆರೆ ಇದೀಗ ನೀರಿಲ್ಲದೆ ಖಾಲಿಯಾಗಿದೆ. 

ಕೆರೆಯಲ್ಲಿ ಕಳೆ ಹೇರಳವಾಗಿ ಬೆಳೆದಿದ್ದು, ಹೂಳು ತುಂಬಿಕೊಂಡಿದೆ. ಕೆರೆಯಂಗಳದಲ್ಲಿ ಬೆಳೆದಿರುವ ಕಳೆಯಿಂದ ನೀರು ಸಂಗ್ರಹ ಪ್ರಮಾಣ ತೀರಾ ಕಡಿಮೆಯಾಗಿದೆ. ಇದರಿಂದ ಜಲಚರಗಳ ಉಳಿವಿಗೂ ಸಂಚಕಾರ ಬಂದಿದೆ. ‘ಕಳೆಯನ್ನು ತೆಗೆಸಿದರೆ ಮಾತ್ರ ಕೆರೆ ಉಳಿಯಲಿದೆ’ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. 

‘ಈ ಹಿಂದೆ ಕೆರೆಯಲ್ಲಿ ಹೊನಗೊನೆ ಸೊಪ್ಪು ಹೇರಳವಾಗಿ ಬೆಳೆಯುತ್ತಿತ್ತು. ಅದನ್ನು ದನಕರುಗಳಿಗೆ ಮೇವು ಆಗಿ ಬಳಸುತ್ತಿದ್ದರು. ಈಗ ಕೆಟ್ಟ ಕಳೆ ಬೆಳೆಯುತ್ತಿದೆ. ಇದರಿಂದ ಮೇವಿನ ಕೊರತೆ ಉಂಟಾಗಿದೆ’ ಎಂದು ಸ್ಥಳೀಯರಾದ ಎನ್‌.ಪಿ.ಮುನಿರಾಜು ಹೇಳಿದರು. 

‘ಕೆರೆಗೆ ಕೊಳಚೆ ನೀರು ಬಂದು ಸೇರುತ್ತಿದೆ. ಹಾಗೆಯೇ ತಾಪಕ್ಕೆ ಅದು ಆವಿಯಾಗುತ್ತಿದೆ. ಕೆಲವರು ಬೆಳಿಗ್ಗೆ ಮತ್ತು ಸಂಜೆ ಕಸವನ್ನು ತಂದು ಕೆರೆಯ ಪ್ರದೇಶದಲ್ಲಿ ಎಸೆದು ಹೋಗುತ್ತಿದ್ದಾರೆ. ಇದರಿಂದ ಕಸದ ರಾಶಿ ಅಲ್ಲಲ್ಲಿ ಕಾಣಸಿಗುತ್ತದೆ. ರಾಶಿಯಿಂದ ದುರ್ನಾತವೂ ಹರಡುತ್ತಿದೆ. ಇಲ್ಲಿ ಹಾದು ಹೋಗುವವರು ಕಡ್ಡಾಯವಾಗಿ ಮೂಗು ಮುಚ್ಚಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ’ ಎಂದೂ ಅಭಿಪ್ರಾಯಪಟ್ಟರು.   

ಕೆರೆಯ ನೀರು ಹೊರಹೋಗುವ ರ‍್ಯಾಂಪ್ ನಿರ್ಮಿಸಿದ್ದಾರೆ. ಇಲ್ಲಿ ನೊರೆ ಸಮಸ್ಯೆ ಇದೆ. ಗಾಳಿಗೆ ನೊರೆ ಹಾರಿ ಜನರು, ವಾಹನಗಳ ಮೇಲೆ ಬೀಳುತ್ತಿದೆ. ‘ಮಳೆಗಾಲದಲ್ಲಿ ಈ ಸಮಸ್ಯೆ ಮತ್ತಷ್ಟು ಹೆಚ್ಚುವ ಮುನ್ನವೇ ಪರಿಹಾರ ಒದಗಿಸಬೇಕು’ ಎಂದು ಸ್ಥಳೀಯರಾದ ಕೆ.ಮಂಜುನಾಥ ಕುಪ್ಪಿ ಆಗ್ರಹಿಸಿದರು.

Post Comments (+)