ಮಹಾವೀರರ ಸ್ಮರಣೆ, ವಿಶ್ವಶಾಂತಿ ಕಾಲ್ನಡಿಗೆ

ಶುಕ್ರವಾರ, ಮೇ 24, 2019
22 °C

ಮಹಾವೀರರ ಸ್ಮರಣೆ, ವಿಶ್ವಶಾಂತಿ ಕಾಲ್ನಡಿಗೆ

Published:
Updated:
Prajavani

ಬೆಂಗಳೂರು: ನಗರದ ವಿವಿಧೆಡೆ ಬುಧವಾರ ಮಹಾವೀರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಸಮಸ್ತ ಜೈನ ಸಮಾಜದ ವತಿಯಿಂದ ಬೆಳಿಗ್ಗೆ 8 ಗಂಟೆಗೆ ಟೌನ್‌ಹಾಲ್‌ನಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ’ವಿಶ್ವ ಶಾಂತಿಗಾಗಿ ಕಾಲ್ನಡಿಗೆ’ಯನ್ನು ಹಮ್ಮಿಕೊಳ್ಳಲಾಗಿತ್ತು.

ಕಾಲ್ನಡಿಗೆ ವೇಳೆ ಭಗವಾನ್‌ ಮಹಾವೀರರ ಸಂದೇಶಗಳನ್ನು ಸಾರಲಾಯಿತು. ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಪ್ರಾಣಿಗಳ ವೇಷಧಾರಿಗಳು ಅಹಿಂಸೆಯ ಬಗ್ಗೆ ಜಾಗೃತಿ ಮೂಡಿಸಿದರು.  

ಬಳಿಕ ಜೈನ ಯುವ ಸಂಘಟನೆ ವತಿಯಿಂದ ಸ್ವಾತಂತ್ರ್ಯ ಉದ್ಯಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಮಧ್ಯಾಹ್ನ 2 ಗಂಟೆಗೆ ಜೈನ ಸನ್ಯಾಸಿಗಳು ಮಹಾಮಂಗಳೀಕವನ್ನು ನೆರವೇರಿಸಿದರು. ಸಮಾರಂಭ ನಡೆದ ಸ್ಥಳದಲ್ಲಿ ಉಚಿತ ಆರೋಗ್ಯ ಶಿಬಿರ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಬಂದ ಜನರಿಗೆ ಮಜ್ಜಿಗೆ, ಹಾಲು ವಿತರಿಸಲಾಯಿತು. ಪ್ರಸಾದದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ‌

ಗೋವುಗಳ ಸೇವೆಗಾಗಿ ನಿಧಿ ಸಂಗ್ರಹಿಸಲಾಯಿತು. ವಿಶ್ವಶಾಂತಿಗಾಗಿ ಸಾವಿರಾರು ಮಂದಿ ನವಕಾರ್‌ ಮಂತ್ರ ಜಪ ಮಾಡಿದರು.

ಮೆರವಣಿಗೆ ಮತ್ತು ಕಳಶಾಭಿಷೇಕ: ಜೆ.ಪಿ. ನಗರದ ಶೀತಲನಾಥ ಎಜುಕೇಷನ್ ಆ್ಯಂಡ್‌ ಚಾರಿಟಬಲ್‌ ಟ್ರಸ್ಟ್‌ ವತಿಯಿಂದ ಬೆಳ್ಳಿ ಅಲಂಕೃತ ಸಾರೋಟಿನಲ್ಲಿ ಮಹಾವೀರರ ಮೂರ್ತಿಯನ್ನು ಮೆರವಣಿಗೆ ಮಾಡಲಾಯಿತು. ಬಳಿಕ ಮಹಾವೀರ ಸ್ವಾಮಿಗೆ 108 ಕಳಶಾಭಿಷೇಕ ಹಾಗೂ ಜನ್ಮ ಕಲ್ಯಾಣೋತ್ಸವ ನಡೆಯಿತು. ಶಾಂತಿನಾಥ ದಿಬ್ಬದ ’ಜೈನ ಧರ್ಮ ಹಾಗೂ ಮಹಾವೀರ ಬೋಧನೆಗಳ ಪ್ರಸ್ತುತತೆ’ ವಿಷಯವಾಗಿ ಮಾತನಾಡಿದರು.

ಜಿನಭಕ್ತಿ ಗಾಯನ: ಕನ್ನಡ ಮತ್ತು ಸಂಸ್ಕತಿ ಇಲಾಖೆ ವತಿಯಿಂದ ನಯನ ಸಭಾಂಗಣದಲ್ಲಿ ಮಹಾವೀರ ಜಯಂತಿ ಆಚರಿಸಲಾಯಿತು. ಶ್ರವಣಬೆಳಗೊಳದ ಸರ್ವೇಶ್‌ ಜೈನ್‌ ಮತ್ತು ತಂಡದವರು ಜಿನ ಭಕ್ತಿಗೀತೆಗಳನ್ನು ಹಾಡಿದರು.

ರಕ್ತದಾನ ಶಿಬಿರ: ಕರ್ನಾಟಕ ಜೈನ ಅಸೋಸಿಯೇಷನ್‌ ವತಿಯಿಂದ ಮತ್ತು ಬನಶಂಕರಿ ಯುವ ಜೈನ ಗೆಳೆಯರ ಬಳಗ ಅವರ ಸಹಯೋಗದೊಂದಿಗೆ ಕರ್ನಾಟಕ ಜೈನಭವನದಲ್ಲಿ ಉಚಿತ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !