ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಲ್ದಾಣದಲ್ಲಿ ಸಿಕ್ಕ ‘ಗ್ರೆನೇಡ್’ ಸೇನೆಗೆ ಸೇರಿದ್ದು!

ಪಾರ್ಸೆಲ್‌ ಹೋಗುತ್ತಿದ್ದ 12 ಬಾಕ್ಸ್‌ಗಳು l ಸೇನೆಯಿಂದ ಪ್ರತ್ಯೇಕ ತನಿಖೆ
Last Updated 3 ಜೂನ್ 2019, 20:09 IST
ಅಕ್ಷರ ಗಾತ್ರ

ಬೆಂಗಳೂರು: ಮೆಜೆಸ್ಟಿಕ್‌ನಲ್ಲಿರುವ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಇತ್ತೀಚೆಗೆ ಪತ್ತೆಯಾಗಿ ಆತಂಕಕ್ಕೆ ಕಾರಣವಾಗಿದ್ದ ‘ಗ್ರೆನೇಡ್’ ಮಾದರಿಯ ವಸ್ತು, ಭಾರತೀಯ ಸೇನೆಗೆ ಸೇರಿದ್ದು...!

ನಿಲ್ದಾಣದ 1ನೇ ಪ್ಲಾಟ್‌ಫಾರ್ಮ್‌ನಲ್ಲಿ ಮೇ 31ರಂದು ಬೆಳಿಗ್ಗೆ ಸಿಕ್ಕಿದ್ದ ವಸ್ತುವಿನ ಮೂಲವನ್ನು ರೈಲ್ವೆ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈಲ್ವೆ ಎಸ್ಪಿ ಭೀಮಾಶಂಕರ್ ಗುಳೇದ್, ‘ನಿಲ್ದಾಣ
ದಲ್ಲಿ ಸಿಕ್ಕ ಗ್ರೆನೇಡ್, ಭಾರತೀಯ ಸೇನೆಗೆ ಸೇರಿದ್ದು ಎಂಬುದು ಖಚಿತವಾಗಿದೆ. ಸೈನಿಕರ ತರಬೇತಿಗೆ ಬಳಸುವ ‘ಸಿಮ್ಯುಲೇಟೆಡ್‌ ಹ್ಯಾಂಡ್ ಗ್ರೆನೇಡ್’ ಎಂದು ಹೇಳಿದರು.

‘ಸ್ಫೋಟಕವಿಲ್ಲದ ಖಾಲಿ ಗ್ರೆನೇಡ್‌ಗಳ ಬಾಕ್ಸ್‌ಗಳನ್ನು ರೈಲು ಮೂಲಕ ಸಾಗಣೆ ಮಾಡಲಾಗುತ್ತಿತ್ತು. ಅದೇ ವೇಳೆ ಗ್ರೆನೇಡ್‌ ಪ್ಲಾಟ್‌ಫಾರ್ಮ್‌ನ ಮೇಲೆ ಬಿದ್ದಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದು ತಿಳಿಸಿದರು.

‘ಘಟನೆ ಬಗ್ಗೆ ಸೇನೆಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ತಮ್ಮದೇ ಗ್ರೆನೇಡ್ ಎಂದು ಅವರು ಒಪ್ಪಿಕೊಂಡಿದ್ದಾರೆ. ಸೂಕ್ಷ್ಮ ವಸ್ತುಗಳನ್ನು ನಿರ್ಲಕ್ಷ್ಯದಿಂದ ಸಾಗಣೆ ಮಾಡಿದವರು ಯಾರು ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ. ಆ ಬಗ್ಗೆ ಸೇನೆಯ ಅಧಿಕಾರಿಗಳೇ ತನಿಖೆ ನಡೆಸಿ ವರದಿ ನೀಡಲಿದ್ದಾರೆ. ಬಳಿಕವೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಭೀಮಾಶಂಕರ್ ಮಾಹಿತಿ ನೀಡಿದರು.

‘ಗ್ರೆನೇಡ್‌ನ ಮೂಲ ಗೊತ್ತಾಗಿದ್ದು, ಪ್ರಯಾಣಿಕರು ಯಾವುದೇ ಆತಂಕಪಡುವ ಅಗತ್ಯವಿಲ್ಲ. ನಿಲ್ದಾಣದ ಭದ್ರತೆಗೆ ಮತ್ತಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ’ ಎಂದು ಹೇಳಿದರು.

12 ಬಾಕ್ಸ್‌ ಪಾರ್ಸೆಲ್: ‘ಬೆಂಗಳೂರಿನಿಂದ ದೆಹಲಿಗೆ 12 ಕಟ್ಟಿಗೆಯ ಬಾಕ್ಸ್‌ಗಳಲ್ಲಿ ಗ್ರೆನೇಡ್‌ಗಳನ್ನು ತುಂಬಿ ಕಳುಹಿಸಲಾಗುತ್ತಿತ್ತು’ ಎಂದು ರೈಲ್ವೆ ಪೊಲೀಸ್ ಮೂಲಗಳು ತಿಳಿಸಿವೆ.

‘ಸೇನೆಗೆ ಸಂಬಂಧಪಟ್ಟ ವಸ್ತುಗಳು ಸಾಗಣೆ ಬಗ್ಗೆ ಯಾರಿಗೂ ಮಾಹಿತಿ ಇರುವುದಿಲ್ಲ. ಅವುಗಳನ್ನು ಕೆಲವು ಅಧಿಕಾರಿಗಳೇ ಗೌಪ್ಯವಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕಳುಹಿಸುತ್ತಾರೆ. ಆದರೆ, ಇದೇ ಮೊದಲ ಬಾರಿಗೆ ಸೇನೆಯ ಬಾಕ್ಸ್‌ನಲ್ಲಿದ್ದ ಗ್ರೆನೇಡ್ ಕೆಳಗೆ ಬಿದ್ದಿದೆ’ ಎಂದು ಹೇಳಿವೆ.

‘ಸೇನೆಯವರೇ ಬಾಕ್ಸ್‌ಗಳನ್ನು ಸರಿಯಾಗಿ ಪ್ಯಾಕ್‌ ಮಾಡಿರಲಿಲ್ಲವೋ ಅಥವಾ ರೈಲಿಗೆ ಪಾರ್ಸೆಲ್ ತುಂಬುವ ಕಾರ್ಮಿಕರೇನಾದರೂ ಬಾಕ್ಸ್‌ಗಳಿಗೆ ರಂಧ್ರ ಮಾಡಿದ್ದಾರೆಯೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ. ಇದೊಂದು ನಿರ್ಲಕ್ಷ್ಯವೇ ಆಗಿದ್ದು ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಅವರನ್ನೇ ಆರೋಪಿಯನ್ನಾಗಿ ಮಾಡಲಾಗುವುದು’ ಎಂದು ಮೂಲಗಳು ತಿಳಿಸಿವೆ.

ಪಾರ್ಸೆಲ್‌ ವಸ್ತು ಕದಿಯಲು ಕೃತ್ಯ?

‘ರೈಲಿನಲ್ಲಿ ಪಾರ್ಸೆಲ್ ಕಳುಹಿಸುವ ವಸ್ತುಗಳನ್ನು ಕದಿಯುವ ಕೆಲವರು ನಿಲ್ದಾಣದಲ್ಲಿದ್ದಾರೆ. ಚಪ್ಪಲಿ, ಆಟಿಕೆ ವಸ್ತುಗಳು... ಹೀಗೆ ಯಾವುದಾದರೂ ವಸ್ತುಗಳನ್ನು ಪಾರ್ಸೆಲ್‌ ಕಳುಹಿಸುವಾಗ ಬಾಕ್ಸ್‌ ಬಿಚ್ಚಿ ನೋಡುತ್ತಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ‘ತಮ್ಮಿಷ್ಟದ ವಸ್ತು ಸಿಕ್ಕರೆ ಕದಿಯುತ್ತಾರೆ. ಅದೇ ರೀತಿಯಲ್ಲೇ ಸೇನೆಯ ಪಾರ್ಸೆಲ್‌ನ ಬಾಕ್ಸ್‌ಗಳನ್ನು ಬಿಚ್ಚಿ ಏನಿದೆ ಎಂದು ನೋಡಿರುವ ಸಾಧ್ಯತೆಯೂ ಇದೆ’ ಎಂದಿವೆ.

**

ಗ್ರೆನೇಡ್‌ ಬೀಳಲು ಸೇನೆಯ ಸಿಬ್ಬಂದಿ ನಿರ್ಲಕ್ಷ್ಯ ಕಾರಣವೊ, ರೈಲ್ವೆ ಪಾರ್ಸೆಲ್ ವಿಭಾಗ ಕಾರಣವೊ ಎನ್ನುವುದು ತನಿಖೆಯಿಂದಷ್ಟೆ ಗೊತ್ತಾಗಲಿದೆ
- ಭೀಮಾಶಂಕರ್ ಗುಳೇದ್, ರೈಲ್ವೆ ಎಸ್ಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT