ಮಿಮ್ಸ್‌: ಹೊರ ಜಿಲ್ಲೆ, ರಾಜ್ಯಕ್ಕೆ ಮೃತದೇಹ ದಾನ

ಸೋಮವಾರ, ಮೇ 27, 2019
34 °C
ದೇಹ ದಾನಕ್ಕೆ ಹೆಸರು ನೋಂದಣಿ ಮಾಡುವವರ ಸಂಖ್ಯೆ ಹೆಚ್ಚಳ

ಮಿಮ್ಸ್‌: ಹೊರ ಜಿಲ್ಲೆ, ರಾಜ್ಯಕ್ಕೆ ಮೃತದೇಹ ದಾನ

Published:
Updated:
Prajavani

ಮಂಡ್ಯ: ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ(ಮಿಮ್ಸ್‌) ಸ್ವಯಂಪ್ರೇರಿತವಾಗಿ ಮೃತದೇಹ ದಾನ ಮಾಡುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಸಂಶೋಧನೆಗೆ ಬಳಸಿ ಹೆಚ್ಚುವರಿಯಾದ ಶರೀರಗಳನ್ನು ಮಿಮ್ಸ್‌, ಹೊರ ಜಿಲ್ಲೆ, ರಾಜ್ಯಗಳ ವೈದ್ಯಕೀಯ ಕಾಲೇಜುಗಳಿಗೆ ದಾನ ನೀಡುತ್ತಿದೆ.

ರಾಜ್ಯದ ಹಲವು ಸರ್ಕಾರಿ ವೈದ್ಯಕೀಯ ಕಾಲೇಜುಗಳು ಬೋಧನೆ, ಸಂಶೋಧನೆಗೆ ಮೃತದೇಹಗಳ ಕೊರತೆ ಎದುರಿಸುತ್ತಿವೆ. ಆದರೆ ಮಿಮ್ಸ್‌ನಲ್ಲಿ ಮೃತದೇಹ ಹೆಚ್ಚುವರಿಯಾಗಿವೆ. 2006ರಿಂದ 2010ರವರೆಗೆ ಕೇವಲ 13 ಜನರು ಮೃತದೇಹ ದಾನ ಮಾಡುವುದಾಗಿ ಹೆಸರು ನೋಂದಣಿ ಮಾಡಿಸಿದ್ದರು. ಆದರೆ 2010ರಿಂದ ಇಲ್ಲಿಯವರೆಗೆ 170 ಜನರು ದೇಹದಾನಕ್ಕೆ ಹೆಸರು ನೋಂದಣಿ ಮಾಡಿಸಿದ್ದಾರೆ. ಅವರಲ್ಲಿ ಈಗಾಗಲೇ 100ಕ್ಕೂ ಹೆಚ್ಚು ಜನರು ಮಿಮ್ಸ್‌ಗೆ ದೇಹ ದಾನ ಮಾಡಿದ್ದು ವಿದ್ಯಾರ್ಥಿಗಳ ಅಧ್ಯಯನಕ್ಕೆ ಕೊರತೆ ಇಲ್ಲದಂತಾಗಿದೆ.

ಮೃತದೇಹ ಕೊರತೆ ಅನುಭವಿಸುತ್ತಿದ್ದ ಚಾಮರಾಜನಗರ, ಕೊಡಗು, ಕಾರವಾರ, ಕೊಪ್ಪಳ ವೈದ್ಯಕೀಯ ವಿಜ್ಞಾನ ಸಂಸ್ಥೆಗಳಿಗೆ ಮಿಮ್ಸ್‌ ತಲಾ ನಾಲ್ಕು ಮೃತದೇಹ ದಾನ ನೀಡಿದೆ. ಅಷ್ಟೇ ಅಲ್ಲದೇ ಕರ್ನಾಟಕ– ಕೇರಳ ಸರ್ಕಾರಗಳ ನಡುವಿನ ಒಡಂಬಡಿಕೆ
ಯಂತೆ ಕೇರಳದ ಒಂದು ವೈದ್ಯಕೀಯ ಕಾಲೇಜಿಗೂ ದೇಹ  ನೀಡಿದೆ. ಸದ್ಯ ಮಿಮ್ಸ್‌ನ ಶರೀರ ರಚನಾ ವಿಜ್ಞಾನ (ಅನಾಟಮಿ) ವಿಭಾಗದಲ್ಲಿ 36 ಮೃತದೇಹಗಳನ್ನು ಸಂರಕ್ಷಣೆ ಮಾಡಿಟ್ಟಿದ್ದು ಅವುಗಳ ಸಂಖ್ಯೆ ಹೆಚ್ಚಳವಾಗುತ್ತಲೇ ಇದೆ.

‘ಮಂಡ್ಯದ ಸಾಹಿತಿಗಳು, ಪ್ರಾಧ್ಯಾಪಕರು, ವೈದ್ಯರು, ರೈತರು, ಕಾರ್ಮಿಕರು ಸ್ವಯಂಪ್ರೇರಿತವಾಗಿ ದೇಹದಾನಕ್ಕೆ ಮುಂದಾಗುತ್ತಿದ್ದಾರೆ. ಯಾವ ಜಿಲ್ಲೆಯಲ್ಲೂ ಇಲ್ಲದ ಪ್ರೇರಣೆ ಇಲ್ಲಿದೆ. ಸತ್ತ ಮೇಲೆ ತನ್ನ ದೇಹ ಬಳಕೆಯಾಗಲಿ ಎಂಬ ಇಚ್ಛೆ ಅವರಿಗಿದೆ. ದೇಹ ದಾನ ದೈವೀಕ ಕಾರ್ಯ ಎಂದೇ ಭಾವಿಸಿದ್ದಾರೆ. ಬಾಯಿಯಿಂದ ಬಾಯಿಗೆ ಜಾಗೃತಿ ಹರಡುತ್ತಿದೆ. ನಾವು ವೈಜ್ಞಾನಿಕವಾಗಿ ಮೃತದೇಹಗಳನ್ನು ಸಂರಕ್ಷಣೆ ಮಾಡಿ ಇಟ್ಟಿದ್ದೇವೆ’ ಎಂದು ಮಿಮ್ಸ್‌ ಪ್ರಭಾರ ನಿರ್ದೇಶಕ ಡಾ.ಎಂ.ಎಸ್‌.ತ್ರಿನೇಶ್‌ಗೌಡ ಹೇಳಿದರು.

ದಾನಿಗಳೇ ವಿಐಪಿಗಳು: ದೇಹದಾನಿಗಳ ಹೆಸರು ನೋಂದಣಿ ಮಾಡುವುದಕ್ಕೂ ಮೊದಲು ಅವರ ಆರೋಗ್ಯ ಪರಿಶೀಲಿಸಲಾಗುತ್ತದೆ. ಸಾಂಕ್ರಾಮಿಕ ರೋಗವಿದ್ದರೆ ದೇಹ ಪಡೆಯುವುದಿಲ್ಲ. ಅಸಹಜ ಸಾವು, ಮರಣೋತ್ತರ ಪರೀಕ್ಷೆಯಾದ ದೇಹ ಸ್ವೀಕಾರ ಮಾಡುವುದಿಲ್ಲ. ನೋಟರಿ ಮೂಲಕ ದಾನಿ ಹಾಗೂ ಮನೆಯವರ ಒಪ್ಪಿಗೆಯ ಪ್ರಮಾಣಪತ್ರ ಪಡೆದು ಹೆಸರು ನೋಂದಣಿ ಮಾಡಿಕೊಳ್ಳಲಾಗುತ್ತದೆ. ದಾನಿಗೆ ಗುರುತಿನ ಚೀಟಿ ನೀಡಿ, ಅವರಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತದೆ.

‘ದಾನಿಗಳನ್ನು ವಿಐಪಿ ಎಂದೇ ಪರಿಗಣಿಸಲಾಗುತ್ತದೆ. ನಮ್ಮ ವೈದ್ಯರು ಅವರ ಮೇಲೆ ವಿಶೇಷ ಕಾಳಜಿ ವಹಿಸುತ್ತಾರೆ. ಹೊರ, ಒಳ ರೋಗಿಗಳಾಗಿ ಉಚಿತ ಚಿಕಿತ್ಸೆ ಪಡೆಯುತ್ತಾರೆ. ದಾನಿಗಳು ಮೃತಪಟ್ಟ 6–8 ಗಂಟೆಯಲ್ಲಿ ನಮಗೆ ಮಾಹಿತಿ ನೀಡುವುದು ಅವಶ್ಯಕ. ದೇಹ ಪಡೆಯುವುದಕ್ಕಾಗಿ ವಿಶೇಷ ತಂಡ ಹಾಗೂ ವಾಹನ ನಿಯೋಜನೆ ಮಾಡಲಾಗಿದೆ’ ಎಂದು ವೈದ್ಯಕೀಯ ಅಧೀಕ್ಷಕ ಡಾ.ಎಂ.ಆರ್‌.ಹರೀಶ್‌ ಹೇಳಿದರು.

ಮೃತ ಭ್ರೂಣಗಳ ಸಂರಕ್ಷಣೆ

ಬೆಳಗಾವಿ ಜಿಲ್ಲೆ ನಂತರ ಮಂಡ್ಯ ಅಕ್ರಮ ಭ್ರೂಣ ಹತ್ಯೆಯಲ್ಲಿ 2ನೇ ಸ್ಥಾನ ಪಡೆದಿದೆ ಎಂದು ಆರೋಗ್ಯ ಇಲಾಖೆ ವರದಿಯಲ್ಲಿ ತಿಳಿಸಿದೆ. ಅನಾಥವಾಗಿ ಚರಂಡಿಯಲ್ಲಿ, ಬೀದಿಯಲ್ಲಿ ಬಿದ್ದಿರುವ ಮೃತ ಭ್ರೂಣಗಳನ್ನು ತಂದು ಮಿಮ್ಸ್‌ ಆಸ್ಪತ್ರೆಯ ಅನಾಟಮಿ ಮ್ಯೂಸಿಯಂನಲ್ಲಿ ಸಂರಕ್ಷಣೆ ಮಾಡಲಾಗಿದೆ.

‘ಎಷ್ಟೋ ಜನರು ರಹಸ್ಯವಾಗಿ ಮೃತ ಭ್ರೂಣಗಳನ್ನು ಇಲ್ಲಿಗೆ ತಂದು ಕೊಟ್ಟು ಹೋಗುತ್ತಾರೆ. ಅವು ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನಕ್ಕೆ ಸಹಕಾರಿಯಾಗಿವೆ. ಉತ್ತಮ ವಸ್ತುಸಂಗ್ರಹಾಲಯ ಮಿಮ್ಸ್‌ನಲ್ಲಿದೆ’ ಎಂದು ಅನಾಟಮಿ ವಿಭಾಗದ ಮುಖ್ಯಸ್ಥೆ ಡಾ.ಗೀತಾಂಜಲಿ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !