ಗುರುವಾರ , ನವೆಂಬರ್ 21, 2019
26 °C
ಮುಜರಾಯಿ ದೇವಾಲಯಗಳಲ್ಲಿ ಏ.26, ಮೇ 24ಕ್ಕೆ ನಿಗದಿ

ಸರ್ಕಾರದಿಂದಲೇ ಸಾಮೂಹಿಕ ವಿವಾಹ

Published:
Updated:
Prajavani

ಬೆಂಗಳೂರು: ಮುಜರಾಯಿ ಇಲಾಖೆ ವತಿಯಿಂದ ಈಗಾಗಲೇ ಪ್ರಸ್ತಾಪಿ ಸಲಾಗಿರುವ ಸಾಮೂಹಿಕ ವಿವಾಹದ ಮುಹೂರ್ತ ನಿಗದಿಯಾಗಿದ್ದು, ಮುಂದಿನ ಏಪ್ರಿಲ್ 26 ಮತ್ತು ಮೇ 24ರಂದು ಮುಜರಾಯಿ ಇಲಾಖೆಯ ‘ಎ’ ದರ್ಜೆಯ 90ರಿಂದ 100 ದೇವಸ್ಞಾನಗಳಲ್ಲಿ ಸಾಮೂಹಿಕ ವಿವಾಹ ನಡೆಯಲಿದೆ.

ಒಂದು ತಿಂಗಳ ಮೊದಲೇ ಜಿಲ್ಲಾಧಿಕಾರಿಗಳ ಮೂಲಕ ಹೆಸರು ನೋಂದಣಿ ನಡೆಯುತ್ತದೆ. ಆಕ್ಷೇಪಣೆ ಸಲ್ಲಿಸುವುದಕ್ಕೆ ಅವಕಾಶ ಇದೆ. ಪೋಷಕರ ಒಪ್ಪಿಗೆ ಪಡೆದ 21 ವರ್ಷ ತುಂಬಿದ ಯುವಕರು, 18 ವರ್ಷ ತುಂಬಿದ ಯುವತಿಯರು ಮದುವೆಗೆ ಹೆಸರು ನೋಂದಾಯಿಸಬಹುದು. ಎರಡನೇ ಮದುವೆಗೆ ಅವಕಾಶ ಇಲ್ಲ, ಒಟ್ಟು 24 ಷರತ್ತುಗಳನ್ನು ವಿಧಿಸಲಾಗಿದೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಪ್ರತಿ ಜೋಡಿಗೆ ಇಲಾಖೆಯ ವತಿಯಿಂದ ₹ 55 ಸಾವಿರ ಖರ್ಚಾಗಲಿದ್ದು, ಒಂದು ತಿಂಗಳ ಮೊದಲೇ ವಧು–ವರರ ಖಾತೆಗಳಿಗೆ ಹಣ ಜಮಾ ಮಾಡಲಾಗುತ್ತದೆ. ಶಿಶು ಕಲ್ಯಾಣ ಇಲಾಖೆಯಿಂದ ₹10 ಸಾವಿರದ ಬಾಂಡ್‌ ನೀಡಲಾಗುತ್ತದೆ. ಈ ವರ್ಷ ಒಂದು ಸಾವಿರ ಮದುವೆಗಳು ನಡೆಯುವ ನಿರೀಕ್ಷೆ ಇದೆ ಎಂದರು.

‘ಹಿಂದೂ ಸಂಪ್ರದಾಯದಂತೆ ಯಾರೇ ಆದರೂ ಇಲ್ಲಿ ವಿವಾಹ ವಾಗಬಹುದು. ಆದರೆ ಎರಡೂ ಕುಟುಂಬ ಒಪ್ಪಿಗೆ ಕಡ್ಡಾಯ’ ಎಂದರು.

ರಾಸಾಯನಿಕ ಕುಂಕುಮ ನಿಷೇಧ: ಮುಜರಾಯಿ ದೇವಾಲ ಯಗಳಲ್ಲಿ ರಾಸಾಯನಿಕ ಮಿಶ್ರಿತ ಕುಂಕುಮ ಬಳಕೆ ನಿಷೇಧಿಸಲಾಗಿದೆ ಎಂದ ಅವರು, ಇಲಾಖೆಯ ವತಿಯಿಂದಲೇ ಶುದ್ಧ ಕುಂಕುಮ ತಯಾರಿ ಬಗ್ಗೆ ಚಿಂತನೆ ನಡೆಸಲಾಗುವುದು ಎಂದರು.

₹ 40 ಸಾವಿರ

ಮೌಲ್ಯದ ತಾಳಿ ಖರೀದಿ

₹10 ಸಾವಿರ

ಧಾರೆ ಸೀರೆಗೆ ಮೊತ್ತ

₹5 ಸಾವಿರ

ವರನ ಅಂಗಿ, ಧೋತಿಗೆ ವೆಚ್ಚ

₹ 55 ಸಾವಿರ

ಒಂದು ಜೋಡಿಗೆ ಸರ್ಕಾರ ಮಾಡುವ ಖರ್ಚು

₹ 5.50 ಕೋಟಿ

ಈ ವರ್ಷ ಇಲಾಖೆ ಮಾಡುವ ಅಂದಾಜು ವೆಚ್ಚ 

 

ಪ್ರತಿಕ್ರಿಯಿಸಿ (+)