ಬುಧವಾರ, ಸೆಪ್ಟೆಂಬರ್ 22, 2021
21 °C
ನಗರದಲ್ಲಿ ವಿವಿಧ ಸಂಘಟನೆಗಳಿಂದ ಮೇ ದಿನ ಆಚರಣೆ, ಪ್ರತಿಭಟನೆ, ಮೆರವಣಿಗೆ, ಕ್ರೀಡಾಕೂಟ, ಅಲ್ಲಲ್ಲಿ ಬಹಿರಂಗ ಸಭೆ

ಕೆಂಬಾವುಟದ ಅಲೆಯಲ್ಲಿ ಸಾಗಿದ ಕಾರ್ಮಿಕರ ರ‍್ಯಾಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪ್ರತಿಭಟನಾ ಮೆರವಣಿಗೆ, ಬಹಿರಂಗ ಸಭೆ, ಪುಸ್ತಕ ಬಿಡುಗಡೆ, ಕ್ರೀಡಾಕೂಟ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸುವ ಮೂಲಕ ನಗರದಲ್ಲಿ ಕಾರ್ಮಿಕ ಸಂಘಟನೆಗಳು ಬುಧವಾರ ‘ಮೇ ದಿನ’ ಆಚರಿಸಿದವು.

‘ಆಲ್‌ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್‌ (ಎಐಟಿಯುಸಿ)’ ವತಿಯಿಂದ ಹಮ್ಮಿಕೊಂಡಿದ್ದ ರ‍್ಯಾಲಿಯಲ್ಲಿ ನೂರಾರು ಕಾರ್ಮಿಕರು ಕೆಂಪು ಬಟ್ಟೆ ತೊಟ್ಟು ಪಾಲ್ಗೊಂಡಿದ್ದರು. ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಹೊರಟ ರ‍್ಯಾಲಿ, ಆನಂದರಾವ್ ವೃತ್ತದ ರೇಣುಕಾಚಾರ್ಯ ಕಾನೂನು ಕಾಲೇಜಿಗೆ ತಲುಪಿ ಸಮಾಪ್ತಿಗೊಂಡಿತು.

ರ‍್ಯಾಲಿ ಬಳಿಕ ಕಾಲೇಜಿನ ಸಭಾಂಗಣದಲ್ಲಿ ಬಹಿರಂಗ ಸಭೆ ನಡೆಸಲಾಯಿತು.‌ ಕಾಲೇಜಿನ ಪ್ರಾಧ್ಯಾಪಕ ಬಾಬು ಮಾಥ್ಯೂ, ‘ಬಿಜೆಪಿ ನೇತೃತ್ವದ ಸರ್ಕಾರ ಕಾರ್ಮಿಕ ವಿರೋಧಿ ಕಾಯ್ದೆಗಳನ್ನೇ ಜಾರಿಗೆ ತಂದು ಪ್ರತಿಗಾಮಿ ನೀತಿ
ಪ್ರದರ್ಶಿಸುತ್ತಿದೆ’ ಎಂದು ಆರೋಪಿಸಿದರು.

‘ಪ್ರಧಾನಿ ಮೋದಿ ಅವರ ತೀರ್ಮಾನಗಳು ಕಾರ್ಪೋರೇಟ್‌ ಕಂಪನಿಗಳ ಪರವಾಗಿವೆ. ಸಾಮಾಜಿಕ ಭದ್ರತೆಗಾಗಿ ಹೋರಾಟಗಳನ್ನು ಹಮ್ಮಿಕೊಳ್ಳುವ ಅಗತ್ಯವಿದೆ’ ಎಂದು ಪ್ರತಿಪಾದಿಸಿದರು.

ಸಿಪಿಐ ಹಿರಿಯ ಮುಖಂಡ ಸಿದ್ದನಗೌಡ ಪಾಟೀಲ, ‘ಕೇಂದ್ರ ಸರ್ಕಾರವು ಕಾರ್ಮಿಕ ಸಂಘಟನೆಯ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ. ಇದರಿಂದ ಹೋರಾಟ ಅನಿವಾರ್ಯ. ತಿಂಗಳಿಗೆ ₹ 18 ಸಾವಿರ ಕನಿಷ್ಠ ವೇತನ ನಿಗದಿ ಮಾಡಬೇಕು’ ಎಂದು ಆಗ್ರಹಿಸಿದರು.

ಮೇ ದಿನ ಸಮಿತಿ ಹಾಗೂ ಸೆಂಟರ್‌ ಆಫ್‌ ಟ್ರೇಡ್‌ ಯೂನಿಯನ್ಸ್‌ನ (ಸಿಐಟಿಯು) ಸದಸ್ಯರ ‘ಮೇ ದಿನ’ ರ‍್ಯಾಲಿ ಪುರಭವನದಿಂದ, ಜೆ.ಸಿ. ರಸ್ತೆ, ಕಾರ್ಪೊರೇಷನ್ ವೃತ್ತ, ಮೈಸೂರು ಬ್ಯಾಂಕ್ ಮೂಲಕ ಸಾಗಿ ಸ್ವಾತಂತ್ರ್ಯ ಉದ್ಯಾನಕ್ಕೆ ಸೇರಿತು. ನಂತರ ಬಹಿರಂಗ ಸಭೆ ನಡೆಯಿತು.

‘ಕಾರ್ಮಿಕರ ವಿರೋಧಿ ನೀತಿ ಅನುಸರಿಸುತ್ತಿರುವ ಸರ್ಕಾರಗಳ ವಿರುದ್ಧ ಸಿಐಟಿಯು ಕಾರ್ಯದರ್ಶಿ ಕೆ.ಸುಬ್ರಹ್ಮಣ್ಯ ಮತ್ತು ಮುಖಂಡ ಗೋಪಾಲ ಕಿಡಿಕಾರಿದರು. ಕಾರ್ಮಿಕ ಕಾನೂನುಗಳ ತಿದ್ದು‍ಪಡಿ ವಿರೋಧಿಸಿ ಆಕ್ರೋಶ ವ್ಯಕ್ತಪಡಿಸಿದರು. ಕಂಪನಿಗಳ ಮಾಲೀಕರು ಸ್ವಾರ್ಥ ಸಾಧನೆಗೆ ಸಂಘಟನೆಗಳ ಮಧ್ಯೆ ತಂದಿಡುವ ಕೆಲಸ ಮಾಡುತ್ತಿದ್ದಾರೆ’ ಎಂದು ಹೇಳಿದರು.

ಎಐಐಇಎ, ಬಿಇಎಫ್‌ಐ, ಬಿಎಸ್‌ಎನ್‌ಎಲ್‌ಇಯು ನೌಕರರ ಸಂಘಗಳು ಭಾಗವಹಿಸಿದ್ದವು. ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ಕಾರ್ಯದರ್ಶಿ ಉಮೇಶ್ ಇದ್ದರು.

ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ವತಿಯಿಂದ ‘ಕಾರ್ಮಿಕರ ದಿನಾಚರಣೆ ಮತ್ತು ಪೌರಕಾರ್ಮಿಕರಿಗೆ ಸನ್ಮಾನ’ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಲಂಡನ್‌ ಎಸ್‌.ಮಹದೇವಯ್ಯ ಅವರ ಬದುಕು ಮತ್ತು ಹೋರಾಟದ ಕುರಿತ ‘ಇನ್‌ ದಿ ಫುಟ್‌ಸ್ಟೆಪ್ಸ್‌ ಆಫ್‌ ಬಸವಣ್ಣ’ ಕೃತಿ ಬಿಡುಗಡೆಗೊಳಿಸಲಾಯಿತು.‌ ಪರಿಷತ್ತಿನ ವತಿಯಿಂದ ಜಯನಗರದ ಶಿವರಾತ್ರಿ ರಾಜೇಂದ್ರ ಚಿಂತನ ಮಂಟಪದಲ್ಲಿ ‘ದತ್ತಿ ಉಪನ್ಯಾಸ ಮತ್ತು ಕಾಯಕ ದಿನಾಚರಣೆ’ ಆಚರಿಸಲಾಯಿತು.

ಬ್ಯಾಂಕ್‌ ಮತ್ತು ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡುವಂತೆ ಒತ್ತಾಯಿಸಿ ಕರ್ನಾಟಕ ಕನ್ನಡಿಗರ ವಿಜಯ ಪಡೆ ಸಂಘಟನೆಯಿಂದ ಆನಂದರಾವ್‌ ವೃತ್ತದಲ್ಲಿ ‍ಪ್ರತಿಭಟನೆ ನಡೆಯಿತು.‌ ಕಾರ್ಮಿಕ ದಿನದ ಅಂಗವಾಗಿ ಕೋರ ಮಂಗಲದ ಅಪೋಲೊ ಸ್ಪೆಕ್ಟ್ರಾ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿತ್ತು.

ಕರ್ನಾಟಕ ಇಂಡಸ್ಟ್ರಿಯಲ್‌ ಆ್ಯಂಡ್‌ ಅದರ್‌‌ ಎಸ್ಟಾಬ್ಲಿಷ್‌ಮೆಂಟ್‌ ಎಂಪ್ಲಾಯೀಸ್‌ ಫೆಡರೇಷನ್‌ ವತಿಯಿಂದ ಸ್ವಾತಂತ್ರ್ಯ ಉದ್ಯಾನದಿಂದ ವಸಂತನಗರದ ಅಂಬೇಡ್ಕರ್‌ ಭವನದವರೆಗೂ ಮೆರವಣಿಗೆ ಮಾಡಲಾಯಿತು. ಬಳಿಕ ಸಭೆ ಜರುಗಿತು.

ಪೌರಕಾರ್ಮಿಕರು, ಬಸ್‌ ಚಾಲಕರು, ನಿರ್ವಾಹಕರು, ಆಟೊ ಚಾಲಕರು, ಭದ್ರತಾ ಸಿಬ್ಬಂದಿ, ಇತರೇ ಕಾರ್ಮಿಕರಿಗೆ ಹಣ್ಣಿನ ರಸ, ಮಜ್ಜಿಗೆ, ಹಣ್ಣು–ಹಂಪಲನ್ನು ವಿತರಿಸುವ ಮೂಲಕ ರಾಬಿನ್‌ಹುಡ್‌ ಆರ್ಮಿಯ ಸ್ವಯಂಸೇವಕರು
‘ಕಾರ್ಮಿಕ ದಿನ’ಆಚರಿಸಿದರು.

‘ಯಶವಂತಪುರ, ಸ್ಯಾಂಕಿ ಕೆರೆ, ಹೆಬ್ಬಾಳ, ವೈಟ್‌ಫೀಲ್ಡ್‌, ದೊಮ್ಮಲೂರು, ಎಚ್‌ಎಸ್‌ಆರ್‌ ಲೇಔಟ್‌, ಜಯನಗರ ಸೇರಿದಂತೆ ನಗರಾದ್ಯಂತ ಕಾರ್ಮಿಕರಿಗೆ ಹಣ್ಣು ವಿತರಿಸಿದೆವು’ ಎಂದು ಕೀರ್ತಿ ಜೋಶಿ ಅವರು ತಿಳಿಸಿದರು.

ಪೌರಕಾರ್ಮಿಕರಿಗೆ ಸಿಹಿ ಸುದ್ದಿ

ಪ್ರತಿದಿನ ಬೆಳಿಗ್ಗೆ ಎದ್ದೊಡನೆ ಸ್ವಚ್ಛತಾ ಕಾರ್ಯದಲ್ಲಿ ತೊಡಗುತ್ತಿದ್ದ ಬಿಬಿಎಂಪಿ ಪೌರಕಾರ್ಮಿಕರಿಗೆ ಬುಧವಾರ ಕೆಲಸದಿಂದ ಬಿಡುವು ನೀಡಲಾಗಿತ್ತು.

ಇದೇ ಮೊದಲ ಬಾರಿಗೆ ಪೌರಕಾರ್ಮಿಕರಿಗೆ ಕಾರ್ಮಿಕ ದಿನದಂದು ರಜೆ ಘೋಷಿಸಿ ಪಾಲಿಕೆ ಸಿಹಿ ಸುದ್ದಿಯನ್ನು ಕೊಟ್ಟಿತು.‌‌‌‌ ಈ ಖುಷಿಯಲ್ಲಿ ಪೌರಕಾರ್ಮಿಕರು ಎಐಸಿಸಿಟಿಯು ನೇತೃತ್ವದಲ್ಲಿ ಬನಪ್ಪ ಉದ್ಯಾನದಿಂದ ಪುರಭವನದವರೆಗೂ ಮೆರವಣಿಗೆ ಮಾಡಿದರು.

‘ಹಲವು ವರ್ಷಗಳಿಂದ ಮೇ 1ರಂದು ಪೌರಕಾರ್ಮಿಕರಿಗೆ ರಜೆ ನೀಡಬೇಕೆಂದು ಹೋರಾಟ ಮಾಡಿದ್ದೆವು. ಕಾನೂನಿನ ಪ್ರಕಾರ ಅವರಿಗೆ ದೊರೆಯಬೇಕಾದ ಸೌಲಭ್ಯಗಳನ್ನು ನೀಡುವಂತೆ ಮತ್ತು ಅಂದಿನ ವೇತನವನ್ನು ಕಡಿತಗೊಳಿಸಬಾರದು ಎಂದು ಮೇಯರ್‌ಗೆ ಮನವಿ ಸಲ್ಲಿಸಿದ್ದೆವು. ತಿಂಗಳಿಗೆ ಕನಿಷ್ಠ ₹ 26,000 ವೇತನ ನೀಡಬೇಕು ಎಂಬ ಬೇಡಿಕೆ ಇನ್ನೂ ಈಡೇರಬೇಕಿದೆ’ ಎಂದು ಪ್ರಧಾನ ಕಾರ್ಯದರ್ಶಿ ಮೈತ್ರೇಯಿ ತಿಳಿಸಿದರು.

160ನೇ ದಿನಕ್ಕೆ ಕಾಲಿಟ್ಟ ಧರಣಿ

ರಾಜ್ಯದ ಸಾರಿಗೆ ನಿಗಮಗಳ ನೌಕರರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಅಕ್ಟೋಬರ್‌ನಲ್ಲಿ ಸ್ವಾತಂತ್ರ್ಯ ಉದ್ಯಾನದಲ್ಲಿ ಆರಂಭಿಸಿದ್ದ ಧರಣಿ ಬುಧವಾರಕ್ಕೆ 160ನೇ ದಿನಕ್ಕೆ ಕಾಲಿಟ್ಟಿತು. ಕೆಎಸ್‌ಆರ್‌ಟಿಸಿ, ವಾಯುವ್ಯ ಸಾರಿಗೆ, ಈಶಾನ್ಯ ಸಾರಿಗೆ ಹಾಗೂ ಬಿಎಂಟಿಸಿ ನೌಕರರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

‘ಬೇಡಿಕೆ ಪಟ್ಟಿಯನ್ನು ವಾರದೊಳಗೆ ಮತ್ತೊಮ್ಮೆ ಮುಖ್ಯಮಂತ್ರಿ ಅವರಿಗೆ ಸಲ್ಲಿಸುವ ನಿರ್ಧಾರ ಕೈಗೊಳ್ಳಲಾಯಿತು’ ಎಂದು ಸಾರಿಗೆ ಕಾರ್ಮಿಕ ಮಹಾಮಂಡಳದ ಪ್ರಧಾನ ಕಾರ್ಯದರ್ಶಿ ಎ.ಬಿ.ಬೋರಶೆಟ್ಟಿ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು