ಮಾಯಣ್ಣ ವಿರುದ್ಧ ಸುಪಾರಿ ಆರೋಪ

7
ಅಕ್ರಮದ ಮಾಹಿತಿ ಕೊಟ್ಟಿದ್ದಕ್ಕೆ ಸಂಚು: ಅಮೃತ್‌ರಾಜ್

ಮಾಯಣ್ಣ ವಿರುದ್ಧ ಸುಪಾರಿ ಆರೋಪ

Published:
Updated:

ಬೆಂಗಳೂರು: ‘ಬಹುಕೋಟಿ ವಂಚನೆ ಸಂಬಂಧ ತಮ್ಮ ವಿರುದ್ಧ ಸರ್ಕಾರಕ್ಕೆ ಮಾಹಿತಿ ನೀಡಿದ್ದಕ್ಕೆ ಬಿಬಿಎಂಪಿ ರಸ್ತೆ ಮತ್ತು ಮೂಲಸೌಕರ್ಯ ವಿಭಾಗದ ಪ್ರಥಮ ದರ್ಜೆ ಗುಮಾಸ್ತ ಮಾಯಣ್ಣ ಅವರು ನಮ್ಮನ್ನು ಕೊಲ್ಲಲು ರೌಡಿಗಳಿಗೆ ಸುಪಾರಿ ಕೊಟ್ಟಿದ್ದಾರೆ’ ಎಂದು ಆರೋಪಿಸಿ ಬಿಬಿಎಂಪಿ ನೌಕರರ ಸಂಘದ ಅಧ್ಯಕ್ಷ ಅಮೃತ್‌ರಾಜ್‌ ಕಮಿಷನರ್ ಕಚೇರಿಗೆ ದೂರು ಕೊಟ್ಟಿದ್ದಾರೆ.

‘ತಮ್ಮ ಕಚೇರಿ ಸಹಾಯಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಮಾಯಣ್ಣ ವಿರುದ್ಧ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯಲ್ಲಿ ಇದೇ ಫೆಬ್ರುವರಿಯಲ್ಲಿ ಪ್ರಕರಣ ದಾಖಲಾಯಿತು. ಹಾಗೆಯೇ, 2012ರಿಂದ 2016ರ ಅವಧಿಯಲ್ಲಿ ಅವರು ಗುತ್ತಿಗೆದಾರರಿಗೆ ಅಕ್ರಮವಾಗಿ ₹135 ಕೋಟಿ ಕೊಟ್ಟಿರುವುದೂ ಬೆಳಕಿಗೆ ಬಂದಿತು. ಈ ಎರಡೂ ಪ್ರಕರಣಗಳಲ್ಲಿ ನಾನು ಹಾಗೂ ಬಿಬಿಎಂಪಿ ನೌಕರರ ಕನ್ನಡ ಸಂಘದ ಅಧ್ಯಕ್ಷ ಸಂಗೊಳ್ಳಿ ಕೃಷ್ಣಮೂರ್ತಿ ಠಾಣೆಗೆ ಹಾಗೂ ಸರ್ಕಾರಕ್ಕೆ ಮಾಹಿತಿ ನೀಡಿದ್ದೆವು’ ಎಂದು ಅಮೃತ್‌ರಾಜ್ ದೂರಿನಲ್ಲಿ ವಿವರಿಸಿದ್ದಾರೆ.

‘₹135 ಕೋಟಿ ಅಕ್ರಮದ ಬಗ್ಗೆ ಇಲಾಖಾ ವಿಚಾರಣೆ ನಡೆಸಲು ಇತ್ತೀಚೆಗೆ ಆದೇಶ ಹೊರಬಿದ್ದಿದ್ದು, ಆ ಮೊತ್ತವನ್ನು ಮಾಯಣ್ಣ ಅವರಿಂದ ವಸೂಲಿ ಮಾಡಬೇಕೆಂದು ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯ
ದರ್ಶಿ ಮಹೇಂದ್ರ ಜೈನ್ ಸೂಚಿಸಿದರು. ಇದರಿಂದ ಕುಪಿತಗೊಂಡ ಮಾಯಣ್ಣ, ಇದಕ್ಕೆ ನಾವೇ ಕಾರಣವೆಂದು ಭಾವಿಸಿ ಹತ್ಯೆಗೆ ಸಂಚು ರೂಪಿಸಿದ್ದಾರೆ.’

‘ಶುಕ್ರವಾರ ಬೆಳಿಗ್ಗೆ 10.30ರ ಸುಮಾರಿಗೆ 20ಕ್ಕೂ ಹೆಚ್ಚು ರೌಡಿಗಳನ್ನು ಪಾಲಿಕೆ ಕಟ್ಟಡದಲ್ಲಿ ಸುತ್ತಾಡಿಸಿರುವ ಮಾಯಣ್ಣ, ನಮ್ಮಿಬ್ಬರನ್ನೂ ಕೊಲೆ ಮಾಡಿಸುವುದಾಗಿ ಕೆಲ ನೌಕರರ ಬಳಿ ಹೇಳಿ ಹೋಗಿದ್ದಾರೆ. ರೌಡಿಗಳು ಬಂದು ಹೋಗಿರುವ ದೃಶ್ಯ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.’

‘ಮಾಯಣ್ಣ ಹಾಗೂ ಅವರ ಕುಟುಂಬ ಸದಸ್ಯರು ಒಟ್ಟಾಗಿ ನಮ್ಮ ಹುಡುಕಾಟದಲ್ಲಿ ತೊಡಗಿದ್ದಾರೆ. ನಮ್ಮ ಪ್ರಾಣಕ್ಕೆ ಏನೇ ತೊಂದರೆ ಆದರೂ ಅವರೇ ನೇರ ಹೊಣೆ. ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ರಕ್ಷಣೆ ನೀಡಬೇಕು’ ಎಂದು ಅಮೃತ್‌ರಾಜ್ ದೂರಿನಲ್ಲಿ ಮನವಿ ಮಾಡಿದ್ದಾರೆ.

‘ಶನಿವಾರ ಸಂಜೆ ಕಮಿಷನರ್ ಇರಲಿಲ್ಲ. ಹೀಗಾಗಿ ಟಪಾಲು ಸಂಗ್ರಹ ವಿಭಾಗಕ್ಕೆ ದೂರು ಕೊಟ್ಟಿದ್ದೇನೆ. ಫೋನ್ ಮೂಲಕ ಕಮಿಷನರ್‌ಗೆ ವಿಷಯ ತಿಳಿಸಲಾಗಿದ್ದು, ಸೂಕ್ತ ಭದ್ರತೆ ಒದಗಿಸುವುದಾಗಿ ಭರವಸೆ ಕೊಟ್ಟಿದ್ದಾರೆ’ ಎಂದು ಅವರು ಹೇಳಿದರು. ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಮಾಯಣ್ಣ ಅವರಿಗೆ ಕರೆ ಮಾಡಿದಾಗ ಸಂಪರ್ಕಕ್ಕೆ ಸಿಗಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !