ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬನ್ನೇರುಘಟ್ಟ ರಸ್ತೆ: ವಿಸ್ತರಣೆ ಮಾಡದೆಯೇ ಚರಂಡಿ ಕಾಮಗಾರಿ

150 ಅಡಿ ಅಗಲಗೊಳಿಸಲು ಟೆಂಡರ್‌ * ಮೂಲ ವಿನ್ಯಾಸದಂತೆ ನಡೆಯದ ಕಾಮಗಾರಿ
Last Updated 17 ಜೂನ್ 2019, 20:16 IST
ಅಕ್ಷರ ಗಾತ್ರ

ಬೆಂಗಳೂರು: ಜೆ.ಡಿ.ಮರದ ಜಂಕ್ಷನ್‌ ಬಳಿಯಿಂದ ಕೋಳಿ ಫಾರಂ ಗೇಟ್‌ವರೆಗೆ ಬನ್ನೇರುಘಟ್ಟ ರಸ್ತೆ ವಿಸ್ತರಣೆ ಕಾಮಗಾರಿ ಯೋಜನೆ ಪ್ರಕಾರ ನಡೆಯುತ್ತಿಲ್ಲ. ಆಮೆಗತಿಯಲ್ಲಿ ಕೆಲಸ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಮೇಯರ್‌ ಗಂಗಾಂಬಿಕೆ ಸೋಮವಾರ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿದರು.

ಬನ್ನೇರುಘಟ್ಟ ರಸ್ತೆ ಕೆಲವೆಡೆ 60 ಅಡಿ ಇನ್ನು ಕೆಲವಡೆ 75 ಅಡಿ ಅಗಲವಿದೆ. ಪರಿಷ್ಕೃತ ನಗರ ಮಹಾ ಯೋಜನೆ 2015ರ ಪ್ರಕಾರ ಈ ರಸ್ತೆಯನ್ನು 150 ಅಡಿ ರಸ್ತೆಯನ್ನಾಗಿ ವಿಸ್ತರಿಸುವ ಪ್ರಸ್ತಾವ ಇದೆ. ಈ ಪ್ರಕಾರ ಒಟ್ಟು 7.44 ಕಿ.ಮೀ ಉದ್ದದ ರಸ್ತೆಯನ್ನು 150 ಅಡಿಗಳಷ್ಟು ವಿಸ್ತರಿಸಿ ಅಭಿವೃದ್ಧಿಪಡಿಸಲುಪಾಲಿಕೆ ಟೆಂಡರ್‌ ಆಹ್ವಾನಿಸಿತ್ತು.

6 ಪಥಗಳ ರಸ್ತೆಯನ್ನು (ಇಕ್ಕೆಲಗಳಲ್ಲೂ ತಲಾ ಮೂರು ಪಥಗಳು) ಅಭಿವೃದ್ಧಿ ಪಡಿಸಿ, ಅದರ ಪಕ್ಕದಲ್ಲಿ (ಹೊರಬದಿ) 18 ಅಡಿ ಅಗಲದ ಸರ್ವಿಸ್‌ ರಸ್ತೆ ನಿರ್ಮಿಸಲು ಯೋಜಿಸಲಾಗಿತ್ತು. ಮುಖ್ಯ ರಸ್ತೆಗಳ ನಡುವೆ ಸುಮಾರು 10 ಅಡಿ ಅಗಲದ ಜಾಗವನ್ನು ವಿಭಜಕಕ್ಕೆ ಮೀಸಲಿಡುವಂತೆ ವಿನ್ಯಾಸ ರೂಪಿಸಲಾಗಿದೆ. ಈ ಮಾರ್ಗದ ಪಕ್ಕದಲ್ಲಿ 12 ಅಡಿ ಅಗಲದ ಪಾದಚಾರಿ ಮಾರ್ಗ ನಿರ್ಮಿಸಲಾಗುತ್ತದೆ. ಇದುವರೆಗೆ 4.5 ಕಿ.ಮೀ ಉದ್ದದಷ್ಟು ರಸ್ತೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡಿದೆ. ವಿಭಜಕದ ಜಾಗದಲ್ಲಿ ‘ನಮ್ಮ ಮೆಟ್ರೊ’ ಎರಡನೇ ಹಂತದ ಗೊಟ್ಟಿಗೆರೆ– ನಾಗವಾರ ಮಾರ್ಗದ ಕಾಂಕ್ರೀಟ್‌ ಕಂಬಗಳನ್ನು ಅಳವಡಿಸಲಾಗುತ್ತಿದೆ.

ಜೆ.ಡಿ.ಮರ ಜಂಕ್ಷನ್‌ ಬಳಿಯಿಂದ ಸುಮಾರು 1.8 ಕಿ.ಮೀ ಉದ್ದದವರೆಗೆ ನಿಗದಿಯಂತೆ 150 ಮೀ ಅಗಲದ ರಸ್ತೆಗಳನ್ನು ನಿರ್ಮಿಸದಿರುವುದು ಕಾಮಗಾರಿ ಪರಿಶೀಲನೆ ವೇಳೆ ಕಂಡುಬಂತು. ಟೆಂಡರ್‌ ಪ್ರಕಾರ ರಸ್ತೆ ಮಧ್ಯಬಿಂದುವಿನಿಂದ ಇಕ್ಕೆಲಗಳಲ್ಲೂ ತಲಾ 75 ಅಡಿಗಳಷ್ಟು ಅಗಲದವರೆಗೆ ಭೂಸ್ವಾಧೀನ ನಡೆಸಿ ಕಾಮಗಾರಿ ನಡೆಸಬೇಕಿತ್ತು. ಕೆಲವೆಡೆ ಇಷ್ಟು ಪ್ರಮಾಣದಲ್ಲಿ ಭೂಸ್ವಾಧೀನ ನಡೆಸದೆಯೇ ಈಗಿದ್ದಷ್ಟೇ ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿದೆ. ಅವುಗಳ ಪಕ್ಕ ಹೊಸತಾಗಿ ಚರಂಡಿಗಳನ್ನು ನಿರ್ಮಿಸಲಾಗಿದೆ.

ಕಾಮಗಾರಿ ಮೂಲ ಆಶಯದ ಪ್ರಕಾರ ನಡೆಯದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಬೊಮ್ಮನಹಳ್ಳಿ ಶಾಸಕ ಸತೀಶ್‌ ರೆಡ್ಡಿ, ‘‌ಕೆಲಸ ಆರಂಭಿಸಿ ಎರಡು ವರ್ಷಗಳೇ ಕಳೆದಿವೆ. ಆದರೂ ಕಾಮಗಾರಿ ಪೂರ್ಣಗೊಂಡಿಲ್ಲ. 150 ಅಡಿಗಳಷ್ಟು ಅಗಲದ ರಸ್ತೆ ನಿರ್ಮಿಸಲು ಟೆಂಡರ್‌ ಕರೆದಿದ್ದರೂ ಮೊದಲಿದ್ದಷ್ಟೇ ಅಗಲದ ರಸ್ತೆಯನ್ನು ಅಭಿವೃದ್ಧಿಪಡಿಸುವುದಾದರೆ ಏನು ಸಾಧಿಸಿದಂತಾಗುತ್ತದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಗದು ಪರಿಹಾರದ ಬದಲು ಅಭಿವೃದ್ಧಿ ಹಕ್ಕು ವರ್ಗಾವಣೆ (ಟಿಡಿಆರ್‌) ಪ್ರಮಾಣಪತ್ರ ನೀಡಿ ಈ ಯೋಜನೆಗೆ ಜಮೀನು ಸ್ವಾಧೀನಪಡಿಸಿಕೊಂಡಿದ್ದೇವೆ. ಕೆಲವು ಭೂಮಾಲೀಕರು ಟಿಡಿಆರ್‌ ‍ಪಡೆಯಲು ಆಸಕ್ತಿ ತೋರಿಸಿಲ್ಲ. ಅಂತಹ ಕಡೆ ಕಾಮಗಾರಿ ವಿಳಂಬವಾಗಿದೆ ಎಂದು ಅಧಿಕಾರಿಗಳು ಸಮಜಾಯಿಷಿ ನೀಡಿದರು.

ಕೆಲವೆಡೆ ಟಿಡಿಆರ್‌ ಪಡೆದವರೂ ಕೂಡಾ ಈ ಹಿಂದೆ ಕಾಮಗಾರಿಗಾಗಿ ತೆರವುಗೊಳಿಸಿದ್ದ ಆವರಣಗೋಡೆಯನ್ನು ಮತ್ತೆ ಕಟ್ಟಿರುವುದು ಗಮನಕ್ಕೆ ಬಂತು. ಅದನ್ನು ತೆರವುಗೊಳಿಸುವಂತೆ ಮೇಯರ್‌ ಸೂಚಿಸಿದರು. 150 ಅಡಿಗಳವರೆಗೆ ಭೂಸ್ವಾಧೀನ ನಡೆಸಿಮೂಲ ವಿನ್ಯಾಸದ ಪ್ರಕಾರವೇ ರಸ್ತೆ ಅಭಿವೃದ್ಧಿಪಡಿಸಬೇಕು ಎಂದು ಮೇಯರ್‌ ಸೂಚಿಸಿದರು.

ಸರ್ವಿಸ್‌ ರಸ್ತೆ ನಿರ್ಮಿಸಲು ಅಡ್ಡಿಯಾಗಿರುವ ವಿದ್ಯುತ್‌ ಪರಿವರ್ತಕಗಳನ್ನು ಸ್ಥಳಾಂತರಿಸುವಂತೆ ಮೇಯರ್‌ ನಿರ್ದೇಶಿಸಿದರು. ಸರ್ವಿಸ್‌ ರಸ್ತೆಯ ಪಕ್ಕದಲ್ಲಿ ಒಳಚರಂಡಿಯ ಕೊಳವೆ, ಕುಡಿಯುವ ನೀರಿನ ಕೊಳವ, ಅಪ್ಟಿಕಲ್‌ ಫೈಬರ್‌ ಕೇಬಲ್‌ ಹಾಗೂ ವಿದ್ಯುತ್‌ ಕೇಬಲ್‌ಗಳನ್ನು ಅಳವಡಿಸಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸುವಂತೆ ಸಲಹೆ ನೀಡಿದರು.

ಕೋಳಿ ಫಾರಂ ಪ್ರದೇಶದಿಂದ ಮೀನಾಕ್ಷಿ ದೇವಸ್ಥಾನದವರೆಗೆ ಕಾಮಗಾರಿ ತ್ವರಿತ ಗತಿಯಲ್ಲಿ ನಡೆಯುತ್ತಿದೆ. ಆದರೆ, ಸಾಗರ್ ಆಸ್ಪತ್ರೆ ಬಳಿಯಿಂದ ಜೆ.ಡಿ ಮರದ ಜಂಕ್ಷನ್ ವರೆಗೆ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ. ಕಾಮಗಾರಿಯನ್ನು ಚುರುಕುಗೊಳಿಸಲು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌), ಜಲಮಂಡಳಿ ಅಧಿಕಾರಿಗಳು ಬಿಬಿಎಂಪಿ ಅಧಿಕಾರಿಗಳ ಜೊತೆ ಸಹಕರಿಸುವಂತೆ ಮೇಯರ್‌ ಆದೇಶ ಮಾಡಿದರು.

‘ಭೂಸ್ವಾಧೀನ– ಪರಿಹಾರದಲ್ಲಿ ತಾರತಮ್ಯ’

ಬನ್ನೇರುಘಟ್ಟ ರಸ್ತೆ ವಿಸ್ತರಣೆಗಾಗಿ ಎರಡೂ ಕಡೆಯೂ ಕೆಲವು ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಬೇಕಾಗುತ್ತದೆ. ರಸ್ತೆಯ ಒಂದು ಪಾರ್ಶ್ವದ ಜಮೀನು ಸ್ವಾಧೀನಪಡಿಸುವ ಹೊಣೆ ಬಿಬಿಎಂಪಿಯದಾದರೆ, ಇನ್ನೊಂದು ಪಾರ್ಶ್ವದ ಆಸ್ತಿಗಳನ್ನು ಬಿಎಂಆರ್‌ಸಿಎಲ್‌ ಸ್ವಾಧೀನಪಡಿಸುತ್ತಿದೆ.

‘ಬಿಬಿಎಂಪಿಯವರು ಸ್ವಾಧೀನಪಡಿಸಿಕೊಳ್ಳುವ ಜಮೀನಿಗೆ ಟಿಡಿಆರ್‌ ನೀಡುತ್ತಿದ್ದಾರೆ. ಬಿಎಂಆರ್‌ಸಿಎಲ್‌ನವರು ಇಲ್ಲಿನ ಚದರ ಅಡಿ ಭೂಮಿಗೆ ₹ 22 ಸಾವಿರ ನಗದು ಪರಿಹಾರ ನೀಡುತ್ತಿದ್ದಾರೆ. ಒಂದು ಚದರ ಅಡಿ ಜಾಗಕ್ಕೆ ಪಾಲಿಕೆ ನೀಡುವ ಟಿಡಿಆರ್‌ನಿಂದ ಗರಿಷ್ಠ ₹ 7ಸಾವಿರದಿಂದ ₹ 8 ಸಾವಿರಗಳಷ್ಟು ಮೌಲ್ಯದ ಪರಿಹಾರ ಮಾತ್ರ ಭೂಮಾಲೀಕರಿಗೆ ಸಿಗುತ್ತಿದೆ’ ಎಂದು ಸತೀಶ ರೆಡ್ಡಿ ತಿಳಿಸಿದರು.

‘ಈ ತಾರತಮ್ಯ ನೀಗಿಸಬೇಕು. ಭೂಮಿ ಕಳೆದುಕೊಳ್ಳುವ ಎಲ್ಲ ಮಾಲೀಕರಿಗೂ ಅವರು ಕಳೆದುಕೊಳ್ಳುವ ಜಾಗದ ಪ್ರಮಾಣಕ್ಕೆ ಅನುಗುಣವಾಗಿ ಸಮಾನ ಪರಿಹಾರ ಸಿಗುವಂತಾಗಬೇಕು. ಆಗ ಮಾತ್ರ ಭೂಮಾಲೀಕರು ಸ್ವಯಂಪ್ರೇರಣೆಯಿಂದ ಜಾಗ ಬಿಟ್ಟುಕೊಡುತ್ತಾರೆ’ ಎಂದರು.

* ಮೂಲ ವಿನ್ಯಾಸದ ಪ್ರಕಾರ ಬನ್ನೇರುಘಟ್ಟ ರಸ್ತೆ ವಿಸ್ತರಣೆ ಕಾಮಗಾರಿ ನಡೆಸದೇ ಇರುವುದಕ್ಕೆ ಬೇರೆಯೇ ಕಾರಣ ಇದೆ. ಇದರಲ್ಲಿ ಅವ್ಯವಹಾರ ನಡೆದಿದೆ. ಈ ಕಾಮಗಾರಿಗೆ ಮತ್ತೆ ಅನುದಾನ ಬಿಡುಗಡೆ ಮಾಡಲಾಗಿದೆ. ಈ ಬಗ್ಗೆ ತನಿಖೆ ಆಗಬೇಕು.

-ಪದ್ಮನಾಭ ರೆಡ್ಡಿ, ಪಾಲಿಕೆ ವಿರೋಧ ಪಕ್ಷದ ನಾಯಕ

* ಮೆಟ್ರೊ ಕಾಮಗಾರಿಯಿಂದಾಗಿ ವಿಳಂಬವಾಗಿದೆ. ಮೂಲ ವಿನ್ಯಾ<br/>ಸದ ಪ್ರಕಾರವೇ ಕೆಲಸ ಹಾಗೂ ಭೂಸ್ವಾ<br/>ಧೀನದ ಗೊಂದಲನಿವಾರಿಸಲು ಸೂಚಿಸಿದ್ದೇನೆ

-ಗಂಗಾಂಬಿಕೆ, ಮೇಯರ್‌

ಅಂಕಿ ಅಂಶ

₹ 152 ಕೋಟಿ ಬನ್ನೇರುಘಟ್ಟ ರಸ್ತೆ ವಿಸ್ತರಣೆ ಕಾಮಗಾರಿಗೆ ಮಂಜೂರಾಗಿರುವ ಮೊತ್ತ

7.44 ಕಿ.ಮೀ ವಿಸ್ತರಣೆಗೊಳ್ಳಲಿರುವ ರಸ್ತೆಯ ಒಟ್ಟು ಉದ್ದ

4.5 ಕಿ.ಮೀ ಕಾಮಗಾರಿ ಪೂರ್ಣಗೊಂಡಿರುವುದು

476 ರಸ್ತೆ ವಿಸ್ತರಣೆಗಾಗಿ ಸ್ವಾಧೀನಪಡಿಸಿಕೊಳ್ಳಬೇಕಾದ ಆಸ್ತಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT