‘ವಿದೇಶಿ ಪ್ರಭೇದಗಳ ಬದಲು ದೇಸಿ ಗಿಡ ಬೆಳೆಸಿ’

ಗುರುವಾರ , ಜೂನ್ 27, 2019
26 °C
ಗಿಡ ನೆಟ್ಟ ಜಾಗದ ಜಿಪಿಎಸ್‌ ಬಿಂದು ಗುರುತಿಸಿ ಪಾಲಿಕೆ ಜಾಲತಾಣದಲ್ಲಿ ಹಾಕಿ: ಮೇಯರ್‌ಗೆ ತಜ್ಞರ ಸಲಹೆ

‘ವಿದೇಶಿ ಪ್ರಭೇದಗಳ ಬದಲು ದೇಸಿ ಗಿಡ ಬೆಳೆಸಿ’

Published:
Updated:

ಬೆಂಗಳೂರು: ನಗರದ ಹಸಿರು ಸಂರಕ್ಷಣೆ ಹಾಗೂ ಗಿಡ ನೆಟ್ಟು ಬೆಳೆಸುವ ಬಗ್ಗೆ ಮೇಯರ್‌ ಗಂಗಾಂಬಿಕೆ ಅವರು ವಿಶ್ವ ಪರಿಸರ ದಿನಾಚರಣೆಗೆ (ಜೂ.5) ಮುನ್ನ ಪರಿಸರ ತಜ್ಞರಿಂದ ಸಲಹೆ ಪಡೆದರು. 

ನಗರದಲ್ಲಿ ಗಿಡಗಳನ್ನು ನೆಡುವುದರ ಜೊತೆ ಅವುಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಪರಿಸರ ತಜ್ಞರಾದ ಅ.ನ.ಯಲ್ಲಪ್ಪರೆಡ್ಡಿ, ದತ್ತಾತ್ರೇಯ ಟಿ.ದೇವರೆ ಹಾಗೂ ವಿಜಯ್ ನಿಶಾಂತ್‌ ಮತ್ತಿತರರು ಸಲಹೆ ನೀಡಿದರು. ಗಾಳಿ ಮಳೆಗೆ ಬೇಗನೆ ಬಿದ್ದು ಹೋಗುವ ವಿದೇಶಿ ಸಸ್ಯಗಳ ಬದಲು ಹೊಂಗೆ, ಬೇವು ಮುಂತಾದ ದೇಸಿ ಸಸ್ಯ ಬೆಳೆಸುವುದು ಉತ್ತಮ ಎಂದರು.

‘ಗಿಡ ನೆಟ್ಟ ಜಾಗದ ಜಿಪಿಎಸ್‌ ಬಿಂದುವನ್ನು ಗುರುತಿಸಿ ಅದನ್ನು ಪಾಲಿಕೆ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು. ಅದರ ಬೆಳವಣಿಗೆ ಬಗ್ಗೆ ಪರಿಸರ ಕಾರ್ಯಕರ್ತರು ನಿಗಾ ಇಡುವುದಕ್ಕೆ ಇದು ನೆರವಾಗುತ್ತದೆ. ಹಸಿರೀಕರಣ ಕಾರ್ಯಕ್ರಮದಲ್ಲಿ ಜನರ ಭಾಗವಹಿಸುವಿಕೆ ಬಹಳ ಮುಖ್ಯ’ ಎಂದು ತಜ್ಞರು ಸಲಹೆ ನೀಡಿದರು.

‘ಗಿಡಗಳ ರಕ್ಷಣೆಗಾಗಿ ಬಳಸುವ ಕಬ್ಬಿಣದ ಟ್ರಿ–ಗಾರ್ಡ್‌ ವಿನ್ಯಾಸದಲ್ಲಿ ಮಾರ್ಪಾಡು ಮಾಡಬೇಕು. ಮರಗಳು ಬೆಳೆದ ಬಳಿಕ ಬಿಚ್ಚಿ ಬೇರೆ ಗಿಡಗಳಿಗೆ ಬಳಸುವಂತೆ ಟ್ರೀಗಾರ್ಡ್‌ಗಳನ್ನು ವಿನ್ಯಾಸಗೊಳಿಸಬೇಕು’ ಎಂದರು.

ಮರಗಳಿಗೆ ಮೊಳೆ ಹೊಡೆದು ಕೆಲವು ಜಾಹೀರಾತು ಫಲಕಗಳನ್ನು ಅಂಟಿಸುವ ಪರಿಪಾಠ ಇದೆ. ಇದರಿಂದ ಸಸ್ಯಗಳಿಗೆ ಸೋಂಕು ತಗಲುತ್ತದೆ. ಹೊರಾಂಗಣ ಜಾಹೀರಾತಿಗೆ ಅಡ್ಡಿಯಾಗುತ್ತದೆ ಎಂಬ ಕಾರಣಕ್ಕೆ ಕೆಲವೆಡೆ ಮರಗಳ ಕೊಂಬೆಗಳನ್ನು ಕಡಿಯುತ್ತಾರೆ.  ಬುಡಕ್ಕೆ ಆ್ಯಸಿಡ್‌ ಹಾಕಿ ಮರಗಳನ್ನು ಸಾಯಿಸಿದ ಉದಾಹರಣೆ ಇವೆ. ಕೇಬಲ್‌ಗಳನ್ನು ಮರಕ್ಕೆ ಸುತ್ತುವುದರಿಂದ ಅವುಗಳ ಸಹಜ ಬೆಳವಣಿಗೆಗೆ ಧಕ್ಕೆಯಾಗುತ್ತದೆ. ಮರಗಳಿಗೂ ಜೀವ ಇದೆ. ಅವುಗಳಿಗೆ ನೋವು ತರುವ ಕೆಲಸ ಮಾಡಬಾರದು ಎಂದೂ ಒತ್ತಾಯಿಸಿದರು.

ನಾಲ್ಕು ವಲಯಗಳಲ್ಲಿ ಮಾತ್ರ ಟೆಂಡರ್‌

ನಗರದಲ್ಲಿ ಒಟ್ಟು 75 ಸಾವಿರ ಗಿಡ ಮರಗಳನ್ನು ನೆಟ್ಟು ಬೆಳೆಸುವ ಸಲುವಾಗಿ ಪಾಲಿಕೆ ವಲಯವಾರು ಟೆಂಡರ್‌ ಕರೆದಿತ್ತು. ಈ ಪೈಕಿ ನಾಲ್ಕು ವಲಯಗಳ ಟೆಂಡರ್‌ ಪ್ರಕ್ರಿಯೆಗಳು ಮಾತ್ರ ಪೂರ್ಣಗೊಂಡಿವೆ. ಇನ್ನುಳಿದ ನಾಲ್ಕು ವಲಯಗಳಿಗೆ ಪಾಲಿಕೆ ಮರು ಟೆಂಡರ್‌ ಕರೆಯಲಿದೆ.

‘ಪಶ್ಚಿಮ, ದಕ್ಷಿಣ, ಯಲಹಂಕ, ರಾಜರಾಜೇಶ್ವರಿನಗರ ವಲಯಗಳ ಟೆಂಡರ್‌ಗಳಿಗೆ ಅನುಮೋದನೆಗೊಂಡಿವೆ. ದಾಸರಹಳ್ಳಿ, ಮಹದೇವಪುರ, ಬೊಮ್ಮನಹಳ್ಳಿ ಹಾಗೂ ಪೂರ್ವ ವಲಯಗಳ ಟೆಂಡರ್‌ಗಳನ್ನು ತಾಂತ್ರಿಕ ಕಾರಣದಿಂದ ತಿರಸ್ಕರಿಸಲಾಗಿದೆ’ ಎಂದು ಪಾಲಿಕೆಯ ಅರಣ್ಯ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ಚೋಳರಾಜಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಗರದಲ್ಲಿ ನೆಟ್ಟು ಬೆಳೆಸುವುದಕ್ಕೆ ಯಾವ ಪ್ರಭೇದದ ಗಿಡಗಳು ಸೂಕ್ತ ಎಂಬ ಬಗ್ಗೆ ತಜ್ಞರಿಂದ ಸಲಹೆ ಪಡೆದಿದ್ದೇವೆ. ಟೆಂಡರ್‌ ಅನುಮೋದನೆಗೊಂಡ ವಲಯಗಳಲ್ಲಿ ಶೀಘ್ರವೇ ಗಿಡ ನೆಡುವ ಕಾರ್ಯಕ್ರಮ ಆರಂಭವಾಗಲಿದೆ’ ಎಂದರು. ನಗರದಲ್ಲಿ 2018–19ನೇ ಸಾಲಿನಲ್ಲಿ ಒಟ್ಟು 75 ಸಾವಿರ ಗಿಡಗಳನ್ನು ನೆಟ್ಟು ಬೆಳೆಸಲು ಪಾಲಿಕೆ ತೀರ್ಮಾನಿಸಿತ್ತು. ಬಜೆಟ್‌ಗೆ ಮಂಜೂರಾತಿ ಸಿಗುವಾಗ ವಿಳಂಬವಾಗಿದ್ದರಿಂದ ಈ ಮಳೆಗಾಲದಲ್ಲಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುತ್ತಿದೆ.

‘ಮರ ಗಣತಿಗೆ ಮರುಜೀವ’

‘ನಗರದಲ್ಲಿ ಈಗಿರುವ ಮರಗಳನ್ನು ಉಳಿಸಿಕೊಳ್ಳಬೇಕಾದರೆ, ಅವುಗಳ ಗಣತಿ ನಡೆಸುವುದು ತೀರಾ ಮುಖ್ಯ. ಮರ ಗಣತಿ ನಡೆಸಲು ಪಾಲಿಕೆ ನಿರ್ಣಯ ಕೈಗೊಂಡು ಮೂರು ವರ್ಷಗಳೇ ಕಳೆದಿವೆ. ಇನ್ನೂ ಅದು ಅನುಷ್ಠಾನಗೊಂಡಿಲ್ಲ.ಈ ಮಹತ್ತ
ರವಾದ ಕಾರ್ಯವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಉದ್ದೇಶದಿಂದ ಪರಿಸರ ತಜ್ಞರ ಸಲಹೆ ಪಡೆದಿದ್ದೇನೆ’ ಎಂದು ಮೇಯರ್‌ ಗಂಗಾಂಬಿಕೆ ‘ಪ್ರಜಾವಾಣಿ’ಗೆ ತಿಳಿಸಿದರು.

**

ನಗರದ ಹಸಿರು ಸಂರಕ್ಷಣೆಗೆ ಸಂಬಂಧಿಸಿ ಪರಿಸರ ತಜ್ಞರು ಉತ್ತಮ ಸಲಹೆಗಳನ್ನು ನೀಡಿದ್ದಾರೆ. ಅವುಗಳನ್ನು ಚಾಚೂತಪ್ಪದೇ ಅನುಷ್ಠಾನಗೊಳಿಸುತ್ತೇವೆ
- ಗಂಗಾಂಬಿಕೆ, ಮೇಯರ್‌

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !