ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವಾರರ ಮೇಲೆ ರೈಲಿನ ಮಲಿನ ನೀರಿನ ಸಿಂಚನ

ಕೆಳ ಸೇತುವೆಗಳಲ್ಲಿ ಸೋರಿಕೆ ತಡೆಯಲು ಕ್ರಮ: ಡಿಆರ್‌ಎಂ ಭರವಸೆ
Last Updated 18 ಜೂನ್ 2019, 20:05 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಬಹುತೇಕ ರೈಲ್ವೆ ಕೆಳಸೇತುವೆಗಳ ಮೇಲೆ ರೈಲುಗಳು ಹಾದು ಹೋಗುವಾಗ ಅದರ ಶೌಚಾಲಯಗಳ ಮಲಿನ ನೀರು ಹಳಿಯ ಮೇಲೆ ಬೀಳುತ್ತಿದೆ. ಕೆಳಸೇತುವೆಯಲ್ಲಿ ಹಾದು ಹೋಗುವ ದ್ವಿಚಕ್ರ ವಾಹನ ಸವಾರರು ಹಾಗೂ ಪಾದಚಾರಿಗಳ ಮೇಲೂ ಇದರ ಸಿಂಚನವಾಗುತ್ತಿದೆ.

ಮೇಯರ್‌ ಗಂಗಾಂಬಿಕೆ ಅವರು ಮಂಗಳವಾರ ಕಾಮಗಾರಿ ತಪಾಸಣೆಗೆ ದತ್ತಾತ್ರೇಯ ವಾರ್ಡ್‌ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸ್ಥಳೀಯರು ಈ ಸಮಸ್ಯೆ ಬಗ್ಗೆ ಹೇಳಿಕೊಂಡರು. ಮೆಜೆಸ್ಟಿಕ್‌ ಸಮೀಪದ ರೈಲ್ವೆ ಸಮಾನಾಂತರ ರಸ್ತೆಯ ಬಳಿಯ ರೈಲ್ವೆ ಕೆಳಸೇತುವೆ ಮೇಲೆ ರೈಲು ಹಾದು ಹೋಗುವಾಗ ಮಲಿನ ನೀರು ಕೆಳಗೆ ಬೀಳುವುದನ್ನು ಮೇಯರ್‌ ಖುದ್ದಾಗಿ ಗಮನಿಸಿದರು.

ತಕ್ಷಣವೇ ವಿಭಾಗೀಯ ರೈಲ್ವೆ ವ್ಯವಸ್ಥಾಪಕ (ಡಿಆರ್‌ಎಂ) ಡಿ.ಜಿ.ಮಲ್ಯ ಅವರ ಕಚೇರಿಗೆ ತೆರಳಿದ ಮೇಯರ್‌, ಈ ಸಮಸ್ಯೆ ಬಗ್ಗೆ ವಿವರಿಸಿದರು.

‘ನಗರದ ಬಹುತೇಕ ರೈಲ್ವೆ ಕೆಳಸೇತುವೆಗಳ ಬಳಿ ಈ ಸಮಸ್ಯೆ ಇದೆ. ಇದನ್ನು ನಿವಾರಿಸಲು ಕ್ರಮ ಕೈಗೊಳ್ಳಬೇಕು’ ಎಂದರು.

‘ರೈಲು ಬೋಗಿಗಳಲ್ಲಿ ಈಗಾಗಲೇ ಜೈವಿಕ ಶೌಚಾಲಯಗಳನ್ನು ಅಳವಡಿಸಲು ಕ್ರಮವಹಿಸಲಾಗಿದೆ. ಇದರಿಂದಾಗಿ ಶೌಚನೀರು ಹಳಿಯ ಮೇಳೆ ಬೀಳುವ ಸಮಸ್ಯೆ ಸಾಕಷ್ಟು ನಿವಾರಣೆಯಾಗಲಿದೆ. ಆದರೂ, ನಗರದಲ್ಲಿರುವ ರೈಲ್ವೆ ಕೆಳಸೇತುವೆಗಳ ಬಳಿ ಹಳಿಯಿಂದ ಕೆಳಗೆ ಮಲಿನ ನೀರು ಸೋರಿಕೆ ಆಗದಂತೆ ತಡೆಯಲು ಕ್ರಮಕೈಗೊಳ್ಳುತ್ತೇವೆ’ ಎಂದುಡಿ.ಜಿ ಮಲ್ಯ ಭರವಸೆ ನಿಡಿದರು.

ಕಾಮಗಾರಿ ಪರಿಶೀಲನೆ: ದತ್ತಾತ್ರೇಯ ವಾಡ್೯ನ ರಾಜಕಾಲುವೆ ದುರಸ್ತಿ ಕಾಮಗಾರಿಯನ್ನು ಮೇಯರ್‌ ಪರಿಶೀಲಿಸಿದರು. ಕೆಲವು ಕಡೆ ತಡೆಗೋಡೆ ನಿರ್ಮಿಸಿಲ್ಲ. ಮಳೆಗಾಲದಲ್ಲಿ ಇಂತಹ ಕಡೆ ರಾಜಕಾಲುವೆ ನೀರು ಹೊರಗೆ ನುಗ್ಗಿ ಮನೆಗಳು ಜಲಾವೃತವಾಗುತ್ತವೆ ಎಂದು ಸ್ಥಳೀಯರು ದೂರಿದರು.

‘ಕೊಳವೆ ಅಳವಡಿಕೆ ಬೇಗ ಪೂರ್ಣಗೊಳಿಸಿ’

ಲಿಂಕ್ ರಸ್ತೆಯ ಬಳಿ ಜಲಮಂಡಳಿಯವರು ಭಾರಿ ಗಾತ್ರದ ಕೊಳವೆಗಳನ್ನು ಅಳವಡಿಸುತ್ತಿದ್ದಾರೆ. ‘ಈ ಕಾಮಗಾರಿಯಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಇಲ್ಲಿ ಯಾವಾಗಲೂ ಸಂಚಾರ ದಟ್ಟಣೆ ಇರುತ್ತದೆ’ ಎಂದು ಸ್ಥಳೀಯರು ದೂರಿದರು.

ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಮೇಯರ್‌ ಸೂಚಿಸಿದರು.

ಅಂಕಿ ಅಂಶ

₹10 ಕೋಟಿ ದತ್ತಾತ್ರೇಯ ವಾರ್ಡ್‌ನ ರಾಜಕಾಲುವೆ ದುರಸ್ತಿ ಕಾಮಗಾರಿಯ ಅಂದಾಜು ವೆಚ್ಚ

2 ಕಿ.ಮೀ ರಾಜಕಾಲುವೆ ದುರಸ್ತಿ ನಡೆಯುವ ಪ್ರದೇಶದ ಒಟ್ಟು ಉದ್ದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT