ಯೋಗ ಶಿಕ್ಷಕನ ವಿರುದ್ಧ ಮೀ–ಟೂ ಆರೋಪ

7
ಅನುಭವಿಸಿದ ಲೈಂಗಿಕ ಕಿರುಕುಳವನ್ನು ಕಾಮಿಕ್‌ಗಳ ಮೂಲಕ ಬಿಡಿಸಿಟ್ಟ ಮಹಿಳೆಯರು

ಯೋಗ ಶಿಕ್ಷಕನ ವಿರುದ್ಧ ಮೀ–ಟೂ ಆರೋಪ

Published:
Updated:

ಬೆಂಗಳೂರು: ನಗರದ ‘ದಿ ಪ್ರಾಕ್ಟೀಸ್‌ ರೂಮ್‌’ನ ಯೋಗ ತರಬೇತುದಾರರೊಬ್ಬರ ವಿರುದ್ಧ ಈಗ ಮೀ–ಟೂ ದೂರು ಕೇಳಿ ಬಂದಿದೆ. ಈ ಕೇಂದ್ರಕ್ಕೆ ಯೋಗ ಕಲಿಯಲು ಬರುತ್ತಿದ್ದ ಮಹಿಳೆಯರು ತರಬೇತುದಾರ ಮೋಹನ್‌ ಪೊಲಮಾರ್‌ ಅವರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದು, ಅಲ್ಲಿನ ಘಟನಾವಳಿಗಳನ್ನು ಕಾಮಿಕ್‌ಗಳ ಮೂಲಕ ಅಭಿವ್ಯಕ್ತಿಸಿದ್ದಾರೆ. ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಕಹಿ ಅನುಭವಗಳನ್ನು ದಾಖಲಿಸಿದ್ದಾರೆ.

‘ಯೋಗ ಮ್ಯಾಟ್‌ ಮೇಲೆ ನಾನು ಶವಾಸನದಲ್ಲಿದ್ದೆ ಮತ್ತು ಹಗ್ಗದ ಸಹಾಯದಿಂದ ಕಾಲುಗಳನ್ನು ಮೇಲೆತ್ತುವ ಆಸನವನ್ನು ಹಾಕುತ್ತಿದ್ದೆ. ಯೋಗವನ್ನು ಹೇಳಿಕೊಡುತ್ತಿದ್ದ ಆತ, ಆಸನವನ್ನು ವಿವರಿಸಲು ನನ್ನ ಎದುರು ಬಂದು ನಿಂತುಕೊಂಡ. ನನ್ನ ಪಾದಗಳನ್ನು ಹಿಡಿದುಕೊಂಡು ತನ್ನ ತೊಡೆಯ ಸಂದಿಗೆ ಒತ್ತಿಕೊಂಡ’ ಎಂದು ಮಹಿಳೆಯೊಬ್ಬರು ಕಾಮಿಕ್‌ ಮೂಲಕವೇ ಘಟನೆಯ ಮಾಹಿತಿ ನೀಡಿದ್ದಾರೆ.

‘ಮೊದಮೊದಲು ಯೋಗ ತರಗತಿ ನೆಮ್ಮದಿಯಿಂದ ಕೂಡಿದೆ ಮತ್ತು ಸುರಕ್ಷಿತವಾಗಿದೆ ಎಂದು ಎನಿಸಿತ್ತು. ನಂತರ ಯೋಗ ಶಿಕ್ಷಕ ಆಸನವನ್ನು ಹೇಳಿಕೊಡುವ ನೆಪದಲ್ಲಿ ಎಲ್ಲೆಂದರಲ್ಲಿ ಮುಟ್ಟಲು ಪ್ರಾರಂಭಿಸಿದರು’ ಎಂದು ತಮ್ಮ ಅನುಭವವನ್ನು ಅವರು ಚಿತ್ರಗಳಲ್ಲಿ ವ್ಯಕ್ತಪಡಿಸಿ ತೋರಿಸಿದ್ದಾರೆ.

‘ಶುರುವಿನಲ್ಲಿ ಆತ ನನಗೆ ಹೆಚ್ಚು ಗಮನ ಕೊಡುತ್ತಿದ್ದಾನೆ ಎಂದೆನಿಸುತ್ತಿತ್ತು. ಆಸನಗಳನ್ನು ಹೇಳಿಕೊಡಲು ಓಡಾಡುತ್ತಿದ್ದಾಗ ನನ್ನನ್ನು ಮುಟ್ಟುತ್ತಿದ್ದ, ಕೈಗಳನ್ನು ಹಿಡಿದುಕೊಳ್ಳುತ್ತಿದ್ದ, ಎಲ್ಲೋ ನೋಡುತ್ತಾ ನನ್ನ ಮೇಲೆ ಒರಗುತ್ತಿದ್ದ. ಉದಾಹರಣೆಗೆ, ಒಮ್ಮೆ ಉಪವಿಷ್ಠ ಕೋನಾಸನ ಮಾಡುವಾಗ ಭಂಗಿಯನ್ನು ಸರಿಪಡಿಸಲು ನನ್ನ ತೊಡೆಗಳನ್ನು ಅಗತ್ಯಕ್ಕಿಂತ ಹೆಚ್ಚಾಗಿಯೇ ಹಿಡಿದುಕೊಂಡಿದ್ದ’ ಎಂದು ಯೋಗ ತರಗತಿಗೆ ಹೋಗುತ್ತಿದ್ದ ಮತ್ತೊಬ್ಬ ಮಹಿಳೆ ಹೇಳಿಕೊಂಡಿದ್ದಾರೆ.

‘ಪ್ರತಿಯೊಂದು ಆಸನ ಮಾಡುವಾಗಲೂ ಲೈಂಗಿಕವಾಗಿ ಬಳಸಿಕೊಳ್ಳಲು ಯೋಚಿಸುತ್ತಿದ್ದ. ಮಲಗಿಕೊಂಡು ಮಂಡಿಯನ್ನು ಮಡಿಸುವ ಆಸನ ಮಾಡುತ್ತಿದ್ದಾಗ, ಆತನ ನನ್ನಮೇಲೆ ಮಲಗಿಯೇ ಬಿಟ್ಟ. ನನ್ನ ಮುಖಕ್ಕೆ ಸಮೀ‍ಪವಾಗಿ ಅವನ ಮುಖವಿತ್ತು’ ಎಂದು ಮಹಿಳೆಯೊಬ್ಬರು ಚಿತ್ರಗಳಲ್ಲಿ ವಿವರಿಸಿದ್ದಾರೆ. ಇಷ್ಟೇ ಅಲ್ಲದೆ, ತರಗತಿಯ ನಂತರವೂ ತನಗೆ ಸಂದೇಶ ಕಳುಹಿಸುತ್ತಿದ್ದ
ಎಂದಿದ್ದಾರೆ.

‘ಕೆಟ್ಟ ವಾತಾವರಣ ಅಲ್ಲಿತ್ತು’: ಮೋಹನ್‌ ಮತ್ತು ಆತನ ಪತ್ನಿ ಜಯಾ ಚಕ್ರವರ್ತಿ ಯೋಗ ತರಗತಿ ನಡೆಸುತ್ತಿದ್ದರು. ಇಬ್ಬರು ಬೇರೆ–ಬೇರೆ ತರಗತಿಗಳ ಮೇಲ್ವಿಚಾರಣೆ ಮಾಡುತ್ತಿದ್ದರು. ಅವರಿಬ್ಬರ ನಡವಳಿಕೆ ಪರಸ್ಪರ ವೈರುಧ್ಯದಿಂದ ಕೂಡಿತ್ತು’ ಎಂದು ನೆನಪಿಸಿಕೊಂಡಿದ್ದಾರೆ.

‘ಜಯಾ ಸ್ವಲ್ಪ ಆಕ್ರಮಣಶೀಲ ವ್ಯಕ್ತಿಯಾಗಿದ್ದರು. ಅವಮಾನಿಸುತ್ತಿದ್ದರು ಮತ್ತು ಆಗಾಗ್ಗೆ ಅಶ್ಲೀಲ ಮಾತುಗಳನ್ನು ಆಡುತ್ತಿದ್ದರು ಹಾಗೂ ಆ ಮಾತುಗಳನ್ನು ಹೊರಗೆ ಹೇಳದಂತೆ ಬೆದರಿಸುತ್ತಿದ್ದರು. ಆದರೆ, ಮೋಹನ್‌ ಶಾಂತ ಹಾಗೂ ಸ್ನೇಹ ಸ್ವಭಾವದವನಾಗಿದ್ದ. ಜಯಾ ಅವರಿಗಿಂತ ಮೋಹನ್‌ ಉತ್ತಮ ಎಂದು ಅನೇಕರು ಭಾವಿಸಿದ್ದರು’ ಎಂದು 2016ರಿಂದ 2018ರವರೆಗೆ ಯೋಗ ತರಗತಿಗೆ ಹೋಗಿದ್ದ ಇನ್ನೊಬ್ಬ ಮಹಿಳೆ ವಿವರಿಸಿದ್ದಾರೆ.

ಮೋಹನ್‌ ಅವರ ಅನುಚಿತ ವರ್ತನೆಯಿಂದ ಮಹಿಳೆಯರು ಯೋಗಕ್ಕೆ ಬರುವುದನ್ನು ನಿಲ್ಲಿಸಿದ್ದರು. ಯಾವಾಗ ದೂರುಗಳು ಬರಲು ಶುರುವಾದವೋ ಆಗ ತರಬೇತಿ ಕೇಂದ್ರದಲ್ಲಿ ತನಿಖಾ ಸಮಿತಿಯೊಂದನ್ನು ರಚಿಸಲಾಯಿತು. ಈ ಸಮಿತಿಯಲ್ಲಿ ಜಯಾ ಸಹ ಒಬ್ಬ ಸದಸ್ಯರಾಗಿದ್ದರು. 

‘ಮೋಹನ್ ಕೆಲಕಾಲ ತರಬೇತಿಯಿಂದ ದೂರ ಉಳಿದ. ತನಿಖೆ ನಡೆಯಿತು. ನಮಗೆ ಏನನ್ನೂ ತಿಳಿಸಲಿಲ್ಲ, ನಮಗೆ ಅವರು ಕ್ಷಮೆಯನ್ನೂ ಕೇಳಲಿಲ್ಲ. ಮತ್ತೆ ಕೆಲವು ತಿಂಗಳುಗಳ ಬಳಿಕ ಮೋಹನ್‌ ತರಬೇತಿ ನೀಡಲು ಬಂದ’ ಎಂದು ನೊಂದ ಮಹಿಳೆಯರು ಹೇಳಿಕೊಂಡಿದ್ದಾರೆ.

‘ಜಯಾ ಅವರು ಪತಿ ಮೋಹನ್‌ ವಿರುದ್ಧ ಬಂದ ಎಲ್ಲಾ ಆರೋಪಗಳನ್ನು ತಳ್ಳಿ ಹಾಕುತ್ತಿದ್ದರು. ಅವರೊಂದಿಗೆ ಮಾತನಾಡಿದಾಗಲೆಲ್ಲ, ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದರು. ಏನಾದರೂ ಹೇಳಲು ಹೋದರೆ ತರಗತಿಯಿಂದ ಹೊರಗೆ ಹೋಗಿ ಮತ್ತೆ ಬರಬೇಡಿ ಎಂದು ಅರಚುತ್ತಿದ್ದರು. ಅಲ್ಲಿ ಕೆಟ್ಟ ವಾತಾವರಣವಾಗಿತ್ತು’ ಎಂದು ವಿವರಿಸಿದ್ದಾರೆ. ಈ ಸಂಬಂಧ ಸುದ್ದಿತಾಣ ‘ದಿ ನ್ಯೂಸ್‌ ಮಿನಟ್’ ವರದಿಯೊಂದನ್ನು ಪ್ರಕಟಿಸಿದೆ.

**

‘ಹೆಚ್ಚಿನ ವಿವರ ನೀಡಲಾರೆ’

‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಜಯಾ ಚಕ್ರವರ್ತಿ, ‘ಈ ಆರೋಪಗಳ ಕುರಿತು ಎನ್‌ಫೋಲ್ಡ್‌ ಇಂಡಿಯಾ ಸಾಮಾಜಿಕ ಸಂಸ್ಥೆಯ ಸಹಯೋಗದಲ್ಲಿ ಅಕ್ಟೋಬರ್‌ 21ರಿಂದಲೇ ತನಿಖೆ ಆರಂಭಿಸಲಾಗಿದೆ. ತನಿಖಾ ತಂಡದಲ್ಲಿ ಯೋಗ ತರಬೇತಿ ಪಡೆದವರು ಹಾಗೂ ಎನ್‌ಫೋಲ್ಡ್‌ನ ಪ್ರತಿನಿಧಿಗಳು ಇದ್ದಾರೆ. ತಂಡದ ವರದಿ ಹೊರಬರುವವರೆಗೂ ನಾನು ಹೆಚ್ಚಿನ ವಿವರ ನೀಡಲಾರೆ’ ಎಂದು ಹೇಳಿದರು.

**

ಘಟನೆ ಬೆಳಕಿಗೆ ಬಂದಿದ್ದು ಹೀಗೆ

ಕಿರುಕುಳ ಅನುಭವಿಸಿದ ಮಹಿಳೆಯರು ರಚಿಸಿದ್ದ ಕಾಮಿಕ್‌ಗಳನ್ನು ಟ್ವಿಟರ್‌ ಮೂಲಕ ಹಂಚಿಕೊಂಡ ಪತ್ರಕರ್ತೆ ಸಂಧ್ಯಾ ಮೆನನ್‌ ಘಟನೆಯನ್ನು ಬಯಲಿಗೆ ಎಳೆದಿದ್ದರು. ಮಹಿಳೆಯರು ಅನುಭವಿಸಿದ್ದ ಯಾತನೆಯನ್ನು ಅವರು ಎಳೆ–ಎಳೆಯಾಗಿ ಬಿಡಿಸಿಟ್ಟಿದ್ದರು.

ಇದಕ್ಕೆ ಪ್ರತಿಕ್ರಿಯಸಿದ್ದ ಸ್ನೇಹಾ ವಖಾರಿಯಾ ಎಂಬುವವರು ‘ಕೇವಲ 500 ಮೀಟರ್‌ ಅಂತರದಲ್ಲಿರುವ ಚರ್ಚ್‌ನಲ್ಲಿ ಇನ್ನೊಂದು ಯೋಗ ತರಬೇತಿ ಕೇಂದ್ರವಿದೆ. ಅಲ್ಲಿನ ಪ್ರವೇಶಕ್ಕೆ ಆರು ತಿಂಗಳವರೆಗೆ ಕಾಯಬೇಕಿಲ್ಲ. 
ಪ್ರ್ಯಾಕ್ಟೀಸ್‌ ರೂಮ್‌ ಕೇಂದ್ರಕ್ಕೆ ಕೊಡಬೇಕಾಗಿರುವಷ್ಟು ಪ್ರವೇಶ ಧನವನ್ನೂ ನೀಡಬೇಕಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಅಲ್ಲಿ ಯಾರೂ ಮೈ ಮುಟ್ಟುವುದಿಲ್ಲ’ ಎಂದು ಹೇಳಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !