ಸೋಮವಾರ, ಅಕ್ಟೋಬರ್ 14, 2019
29 °C
ನೆರೆ ಪರಿಹಾರ: ಕೇಂದ್ರಕ್ಕೆ ಪುಷ್ಪಾ ಅಮರನಾಥ್ ಎಚ್ಚರಿಕೆ

‘ತೆರಿಗೆ ಪಾವತಿಸದಂತೆ ಹೋರಾಟ’

Published:
Updated:
Prajavani

ಬೆಂಗಳೂರು: ‘ಉತ್ತರ ಕರ್ನಾಟಕದ ನೆರೆಪೀಡಿತ ಪ್ರದೇಶಗಳ ಸಂತ್ರಸ್ತರ ನೆರವಿಗೆ ಇನ್ನೆರಡು ದಿನ ಕಾದು ನೋಡಿ ಎಂದು ಕೇಂದ್ರ ಸರ್ಕಾರ ಭರವಸೆ ನೀಡಿದೆ. ಅಲ್ಲೀವರೆಗೂ ತಾಳ್ಮೆಯಿಂದ ಕಾಯುತ್ತೇವೆ. ಒಂದು ವೇಳೆ ಈ ಭರವಸೆ ಈಡೇರದೇ ಹೋದರೆ ಜನರು ತೆರಿಗೆ ಪಾವತಿಸದಂತೆ ಹೋರಾಟ ಆರಂಭಿಸುತ್ತೇವೆ’ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಧಾನಿ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಭಾಗಿಯಾಗ್ತಾರೆ, ಬಿಹಾರ ಸಂತ್ರಸ್ತರ ಬಗ್ಗೆ ಸಾಂತ್ವನ ಹೇಳ್ತಾರೆ. ಆದರೆ, ರಾಜ್ಯದ ಸಂತ್ರಸ್ತರ ಬಗ್ಗೆ ಅವರಿಗೆ ಗೌರವವೇ ಇಲ್ಲದಂತಾಗಿದೆ’ ಎಂದು ಕಿಡಿ ಕಾರಿದರು.

‘ಭಾರತ ಬಯಲು ಶೌಚಮುಕ್ತ ಎಂದು ಹೇಳುತ್ತಿರುವ ಪ್ರಧಾನಿ ಮೋದಿಯವರೇ, ಉತ್ತರ ಕರ್ನಾಟಕದ ನೆರೆ ಪೀಡಿತ ಪ್ರದೇಶಗಳಲ್ಲಿ ಶೌಚಾಲಯಕ್ಕೆ ಹೆಣ್ಣುಮಕ್ಕಳು ಏನೆಲ್ಲಾ ಕಷ್ಟ ಪಡ್ತಿದ್ದಾರೆ ಎನ್ನುವುದು ನಿಮಗೆ ಗೊತ್ತಿದೆಯೇ’ ಎಂದು ಪುಷ್ಪಾ ತರಾಟೆಗೆ ತೆಗೆದುಕೊಂಡರು.

‘ಸರ್ಕಾರ ಕಣ್ಣು, ಕಿವಿ ಮುಚ್ಚಿ ಕುಳಿತಿದೆ. ನೆರೆ ಸಂತ್ರಸ್ತರ ನೋವನ್ನು ಆಲಿಸುತ್ತಿಲ್ಲ. ನಮ್ಮ ತಾಳ್ಮೆಗೂ‌ ಒಂದು ಮಿತಿ ಇದೆ. ನಿಮ್ಮ ಮಲತಾಯಿ ಧೋರಣೆ ಬಿಡದಿದ್ದಲ್ಲಿ ಮುಂದಿನ ಎರಡು ಮೂರು ದಿನಗಳಲ್ಲಿ ಹೋರಾಟ ಮಾಡುತ್ತೇವೆ’ ಎಂದರು.

‘ರಾಜ್ಯದಲ್ಲಿ ಬಿಜೆಪಿಯ 25 ಸಂಸದರಿದ್ದರೂ ಕೇಂದ್ರದಿಂದ ಪರಿಹಾರ ಸಿಕ್ಕಿಲ್ಲ. ನಾವೆಲ್ಲಾ ಬೊಬ್ಬೆ ಹೊಡೆಯುವ ಪರಿಸ್ಥಿತಿ ಬಂದಿದೆ. ಸಂಸದರು, ಸಚಿವರು ಬಾಯಿಗೆ ಬಂದಂತೆ ಮಾತಾನಾಡುವುದನ್ನು ಬಿಟ್ಟು ಪರಿಹಾರ ತರುವ ಕೆಲಸ ಮಾಡಬೇಕು’ ಎಂದು ಆಗ್ರಹಿಸಿದರು.

Post Comments (+)