ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಜೆಸ್ಟಿಕ್‌ ಕಾಡುತ್ತಿರುವ ಆಟೊ ಮಾಫಿಯಾ!

ಕಳ್ಳರು, ಪುಡಾರಿಗಳನ್ನು ಸಾಕುತ್ತಿರುವ ಕೆಲವು ಚಾಲಕರು: ವೇಶ್ಯಾವಾಟಿಕೆಯಲ್ಲೂ ಭಾಗಿ: ದುಪ್ಪಟ್ಟು ದರ ವಸೂಲಿ
Last Updated 1 ನವೆಂಬರ್ 2018, 20:10 IST
ಅಕ್ಷರ ಗಾತ್ರ

ಬೆಂಗಳೂರು: ಹೊರ ಜಿಲ್ಲೆ ಹಾಗೂ ರಾಜ್ಯಗಳಿಗೆ ಸಂಚರಿಸುವ ಬಸ್‌ಗಳ ಕೇಂದ್ರ ಸ್ಥಳವಾದ ಮೆಜೆಸ್ಟಿಕ್‌, ನಿತ್ಯ ಸಾವಿರಾರು ಮಂದಿ ಬಂದು ಹೋಗುವ ಈ ಜಾಗ. ಅಲ್ಲೀಗ ‘ಪುಂಡ– ಪೋಕರಿಗಳ, ಕಳ್ಳ–ಕಾಕರ, ವೇಶ್ಯಾವಾಟಿಕೆಯ ಹಾವಳಿ ಹೆಚ್ಚಿದ್ದು, ಅಲ್ಲಿನ ಅಕ್ರಮ ಚಟುವಟಿಕೆಗಳಿಗೆ ಕೆಲವು ಆಟೊ ಚಾಲಕರ ಕುಮ್ಮಕ್ಕಿದೆ’ ಎನ್ನುತ್ತವೆ ಉಪ್ಪಾರಪೇಟೆ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಗಳು.

ನಿಲ್ದಾಣದಲ್ಲಿ ಅಲ್ಪ ಹಣ ಕಳೆದುಕೊಂಡವರು, ಪೊಲೀಸರಿಗೆ ದೂರು ನೀಡುವ ಗೋಜಿಗೆ ಹೋಗುತ್ತಿಲ್ಲ. ಅದು ಜೇಬುಗಳ್ಳರಿಗೆ ಅನುಕೂಲ ಮಾಡಿಕೊಟ್ಟಿದೆ. ಹೀಗಾಗಿ, ಅವರೆಲ್ಲ ರಾಜಾರೋಷವಾಗಿ ಕೃತ್ಯ ಎಸಗುತ್ತಿದ್ದಾರೆ. ಅದರಲ್ಲೇ ಆಟೊ ಚಾಲಕರಿಗೂ ಕಮಿಷನ್‌ ಕೊಡುತ್ತಿದ್ದಾರೆ ಎಂಬುದು ಹಲವು ಪ್ರಕರಣಗಳಿಂದ ಬೆಳಕಿಗೆ ಬಂದಿದೆ.

‘ಮೆಜೆಸ್ಟಿಕ್‌ನಲ್ಲಿ ಆಟೊ ಮಾಫಿಯಾ ಜೋರಾಗಿ ಇದೆ’ ಎನ್ನುವ ಪಶ್ಚಿಮ ವಿಭಾಗದ ಡಿಸಿಪಿ ರವಿ ಚನ್ನಣ್ಣನವರ, ‘ಪುರಾವೆ ಸಿಕ್ಕಾಗಲೆಲ್ಲ ಆಟೊ ಚಾಲಕರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸುತ್ತಿದ್ದೇವೆ. ಅಷ್ಟಾದರೂ ಅವರು ಬಗ್ಗುತ್ತಿಲ್ಲ’ ಎಂದು ಹೇಳುತ್ತಾರೆ.

ನಿಲ್ದಾಣದಲ್ಲಿ ಇತ್ತೀಚೆಗೆ ಸಾರ್ವಜನಿಕರನ್ನು ಬೆದರಿಸಿ ಹಣ ಸುಲಿಗೆ ಮಾಡುತ್ತಿದ್ದ ಅನಿತಾ, ಮೀನಾ ಹಾಗೂ ಅವರ ಸಹಚರರನ್ನು ಪೊಲೀಸರು ಬಂಧಿಸಿದ್ದರು. ‘ಆಟೊ ಚಾಲಕರೇ ನಮ್ಮಿಂದ ಕೃತ್ಯ ಮಾಡಿಸುತ್ತಿದ್ದರು’ ಎಂಬುದನ್ನು ಅವರೆಲ್ಲ ಬಾಯ್ಬಿಟ್ಟಿದ್ದಾರೆ. ಅದಾದ ನಂತರ ಉಪ್ಪಾರಪೇಟೆ ಪೊಲೀಸರು, ನಿರಂತರವಾಗಿ ನಿಲ್ದಾಣದಲ್ಲಿ ಗಸ್ತು ತಿರುಗುತ್ತಿದ್ದಾರೆ. ಕೆಲವು ಜೇಬುಗಳ್ಳರನ್ನು ಅನುಮಾನದ ಮೇರೆಗೆ ಬಂಧಿಸಿ ವಿಚಾರಣೆ ನಡೆಸಿದಾಗಲೂ ಆಟೊ ಚಾಲಕರ ಹೆಸರುಗಳೇ ಹೊರಬಂದಿವೆ.

ನಿಲ್ದಾಣದಲ್ಲಿ ಘಟಿಸುತ್ತಿರುವ ಬಹುತೇಕ ಪ್ರಕರಣಗಳಲ್ಲಿ ಆಟೊ ಚಾಲಕರನ್ನು ವಶಕ್ಕೆ ಪಡೆಯುತ್ತಿರುವ ಪೊಲೀಸರು, ಕರ್ನಾಟಕ ಪೊಲೀಸ್ ಕಾಯ್ದೆ ಅಡಿ ದೂರು ದಾಖಲಿಸಿಕೊಳ್ಳುತ್ತಿದ್ದಾರೆ. ಮುಚ್ಚಳಿಕೆ ಬರೆಸಿಕೊಂಡು ಎಚ್ಚರಿಕೆ ನೀಡಿ ಕಳುಹಿಸುತ್ತಿದ್ದಾರೆ.

‘ಕೆಲವು ಚಾಲಕರು ನಿಲ್ದಾಣ ಬಿಟ್ಟು ಹೋಗುತ್ತಿದ್ದು, ಅವರ ಕೃತ್ಯವನ್ನು ಹೊಸದಾಗಿ ಬರುತ್ತಿರುವ ಚಾಲಕರು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಕೆಲವು ರೌಡಿಗಳು, ಚಾಲಕರಾಗಿ ನಿಲ್ದಾಣಕ್ಕೆ ಹೊಕ್ಕು ಆಗಾಗ ಬಾಲ ಬಿಚ್ಚುತ್ತಿದ್ದಾರೆ’ ಎಂದು ಪೊಲೀಸರು ಹೇಳುತ್ತಾರೆ.

ಗಿರಾಕಿಗಳ ಪೂರೈಕೆ: ನಿಲ್ದಾಣದಲ್ಲೇ ನಿಂತುಕೊಂಡು ವೇಶ್ಯಾವಾಟಿಕೆ ನಡೆಸುವ ಮಹಿಳೆಯರು ಹೆಚ್ಚಿದ್ದಾರೆ. ಅವರೆಲ್ಲರಿಗೂ ಗಿರಾಕಿಗಳನ್ನು ಪೂರೈಸುವ ಮಧ್ಯವರ್ತಿಗಳಾಗಿ ಆಟೊ ಚಾಲಕರು ಕೆಲಸ ಮಾಡುತ್ತಿದ್ದಾರೆ.

‘ನಿಲ್ದಾಣಕ್ಕೆ ಬರುವ ಗಿರಾಕಿಗಳನ್ನು ವಿಚಾರಿಸುವ ಆಟೊದವರು, ದರ ನಿಗದಿಪಡಿಸಿಕೊಂಡು ವಸತಿಗೃಹಗಳಿಗೆ ಕರೆದೊಯ್ಯುತ್ತಾರೆ. ಇದರಿಂದಲೇ ಕೆಲವು ಚಾಲಕರು, ತಿಂಗಳಿಗೆ ₹10 ಸಾವಿರದಿಂದ ₹20 ಸಾವಿರ ದುಡಿಯುತ್ತಿದ್ದಾರೆ. ವೇಶ್ಯಾವಾಟಿಕೆ ಹೆಸರಿನಲ್ಲಿ ಕೆಲವರು, ಗಿರಾಕಿಗಳ ಸುಲಿಗೆಯನ್ನೂ ಮಾಡುತ್ತಿದ್ದಾರೆ. ಮರ್ಯಾದೆಗೆ ಅಂಜಿ ಗಿರಾಕಿಗಳು ದೂರು ಸಹ ನೀಡುತ್ತಿಲ್ಲ’ ಎಂದು ಪೊಲೀಸ್‌ ಅಧಿಕಾರಿ ಹೇಳುತ್ತಾರೆ.

‘ಕೆಲವು ಚಾಲಕರು, ಒತ್ತಾಯಪೂರ್ವಕವಾಗಿ ಮಹಿಳೆಯರನ್ನು ವೇಶ್ಯಾವಾಟಿಕೆಗೆ ತಳ್ಳಿದ್ದಾರೆ. ಆ ಬಗ್ಗೆ ಕೆಲವರು ಲಿಖಿತವಾಗಿ ಠಾಣೆಗೆ ತಿಳಿಸಿದ್ದಾರೆ. ಆ ಮಹಿಳೆಯರನ್ನು ರಕ್ಷಿಸಿ, ಚಾಲಕರನ್ನು ಬಂಧಿಸಲಾಗಿದೆ’ ಎಂದು ಮಾಹಿತಿ ನೀಡುತ್ತಾರೆ.

ಮೆಜೆಸ್ಟಿಕ್‌ ಗಸ್ತಿಗೆ ವಿಶೇಷ ತಂಡ: ‘ನಿಲ್ದಾಣದಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ಇತ್ತೀಚೆಗೆ ಹೆಚ್ಚು ದೂರುಗಳು ಬರುತ್ತಿವೆ. ಅದೇ ಕಾರಣಕ್ಕೆ, ಪಿಎಸ್‌ಐ ನೇತೃತ್ವದ ಐವರ ತಂಡವನ್ನೇ ನಿಲ್ದಾಣದಲ್ಲಿ ಗಸ್ತಿಗೆ ನಿಯೋಜಿಸಲಾಗಿದೆ. ಅವರು ಚಾಲಕರ ಮೇಲೆ ಹೆಚ್ಚು ಕಣ್ಣಿಟ್ಟಿದ್ದಾರೆ. ಅನುಮಾನ ಬಂದರೆ ಮುಲಾಜಿಲ್ಲದೇ ವಶಕ್ಕೆ ಪಡೆದು ವಿಚಾರಣೆ ನಡೆಸುವಂತೆ ಸೂಚನೆ ನೀಡಿದ್ದೇನೆ’ ಎಂದು ಚನ್ನಣ್ಣನವರ ಹೇಳುತ್ತಾರೆ.

‘ವೇಶ್ಯಾವಾಟಿಕೆ ಪ್ರಕರಣದಲ್ಲಿ ಗಿರಾಕಿಗಳ ವಿರುದ್ಧವೇ ಕ್ರಮ ಕೈಗೊಳ್ಳುತ್ತಿದ್ದೇವೆ. ನಿತ್ಯ ಹಾಗೂ ತಿಂಗಳಿಗೊಮ್ಮೆ ಮೆಜೆಸ್ಟಿಕ್‌ಗೆ ಬಂದು ಹೋಗುವ ಗಿರಾಕಿಗಳಿದ್ದಾರೆ. ಅವರೆಲ್ಲರ ಬಗ್ಗೆ ಮಾಹಿತಿ ಸಂಗ್ರಹಿಸಿ, ವಶಕ್ಕೆ ಪಡೆದು ಎಚ್ಚರಿಕೆ ನೀಡಿ ಕಳುಹಿಸುತ್ತಿದ್ದೇವೆ. ಅದರಿಂದಾಗಿ ವೇಶ್ಯಾವಾಟಿಕೆ ಕ್ರಮೇಣ ಕಡಿಮೆಯಾಗುತ್ತಿದೆ’ ಎಂದು ವಿವರಿಸುತ್ತಾರೆ.

ಆಟೊ ಚಾಲಕ ವರ್ಗಕ್ಕೆ ಕಳಂಕ

‘ಎಲ್ಲ ಕಡೆ ಇರುವಂತೆ ಚಾಲಕರಲ್ಲೂ ಕೆಲವರು ಕೆಟ್ಟವರಿದ್ದಾರೆ. ಅವರಿಂದ ಇಡೀ ಚಾಲಕರ ವರ್ಗಕ್ಕೆ ಕಳಂಕ ಬರುತ್ತಿದೆ’ ಎಂದು ಬೆಂಗಳೂರು ಆಟೊ ಚಾಲಕರ ಸೌಹಾರ್ದ ಕೋ–ಆಪರೇಟಿವ್‌ ಸೊಸೈಟಿಯ ಅಧ್ಯಕ್ಷ ಸೋಮಶೇಖರ್‌ ಹೇಳುತ್ತಾರೆ.

‘ಸರ್ಕಾರದ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಆದರೆ, ಸರ್ಕಾರದಿಂದ ಒಂದು ರೂಪಾಯಿಯೂ ಸಿಗುತ್ತಿಲ್ಲ. ಶೇ 14ರಷ್ಟು ಬಡ್ಡಿಯಲ್ಲಿ ಸಾಲ ಕೊಡಬೇಕೆಂಬ ನಿಯಮವಿದೆ. ಆದರೆ, ಚಾಲಕರಿಂದ ಶೇ 30ರಷ್ಟು ಬಡ್ಡಿ ಪಡೆದು ಸಾಲ ನೀಡಲಾಗುತ್ತಿದೆ. ಪ್ರತಿ ತಿಂಗಳು ಸಾಲದ ಕಂತು ಕಟ್ಟಲೇ ಬೇಕು. ಅದರ ಜೊತೆಗೆ ಕುಟುಂಬವನ್ನು ಸಾಕಬೇಕು. ಇಂಥ ಒತ್ತಡಗಳಿಗೆ ಚಾಲಕರು ಸಿಲುಕುತ್ತಿದ್ದಾರೆ. ಸರ್ಕಾರವೇ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು’ ಎಂದು ಮನವಿ ಮಾಡುತ್ತಾರೆ.

ಓಬವ್ವ ಪಡೆಗೆ 100ಕ್ಕೂ ಹೆಚ್ಚು ಕರೆ

‘ಮಹಿಳೆಯರು ಹಾಗೂ ಮಕ್ಕಳ ಮೇಲೆ ನಡೆಯುವ ದೌರ್ಜನ್ಯ ತಡೆಗೆ ತ್ವರಿತವಾಗಿ ಸ್ಪಂದಿಸುವ ಉದ್ದೇಶದಿಂದ ಕಟ್ಟಿರುವ ‘ಓಬವ್ವ ಪಡೆ’ಗೆ ಇದುವರೆಗೂ 100ಕ್ಕೂ ಹೆಚ್ಚು ಕರೆಗಳು ಬಂದಿವೆ’ ಎಂದು ಡಿಸಿಪಿ ಚನ್ನಣ್ಣನವರ ಮಾಹಿತಿ ನೀಡುತ್ತಾರೆ.

‘ಮಹಿಳಾ ಪಿಎಸ್‌ಐ ನೇತೃತ್ವದಲ್ಲಿ ಈ ಪಡೆ ಕಾರ್ಯನಿರ್ವಹಿಸುತ್ತಿದೆ. ಕರೆಗಳ ಆಧರಿಸಿ ಸ್ಥಳಕ್ಕೆ ಹೋಗುವ ಸಿಬ್ಬಂದಿ, ಆರೋಪಿಗಳನ್ನು ವಶಕ್ಕೆ ಪಡೆದು ಠಾಣೆಗೆ ಕರೆತರುತ್ತಿದೆ. ನೊಂದ ಮಹಿಳೆಯವರು ದೂರು ನೀಡಿದಾಗ, ಕಾನೂನು ಕ್ರಮ ಜರುಗಿಸುತ್ತಿದೆ’ ಎಂದು ಹೇಳುತ್ತಾರೆ.

ಅನಧಿಕೃತ ನಿಲುಗಡೆ

ಕೆಎಸ್‌ಆರ್‌ಟಿಸಿ – ಬಿಎಂಟಿಸಿ ಬಸ್‌ ಸಂಚಾರ ಹಾಗೂ ನಿಲುಗಡೆಗೆ ನಿಲ್ದಾಣದಲ್ಲಿ ಅವಕಾಶವಿದೆ. ಅಷ್ಟಾದರೂ ಕೆಲವು ಚಾಲಕರು, ತಮ್ಮ ಆಟೊಗಳನ್ನು ಅನಧಿಕೃತವಾಗಿ ಎಲ್ಲೆಂದರಲ್ಲಿ ನಿಲುಗಡೆ ಮಾಡುತ್ತಿದ್ದಾರೆ. ಅದನ್ನು ಪ್ರಶ್ನಿಸುವವರ ವಿರುದ್ಧವೇ ಹರಿಹಾಯುತ್ತಿದ್ದಾರೆ.

ದುಬಾರಿ ಪ್ರಯಾಣ ದರಕ್ಕೆ ಬೇಡಿಕೆ ಇಡುವ ಚಾಲಕರು, ತಮ್ಮ ಆಟೊಗಳಿಗೆ ಹತ್ತದ ಹಾಗೂ ಆ ದರ ನೀಡದ ಪ್ರಯಾಣಿಕರ ಜೊತೆಯಲ್ಲಿ ರೌಡಿಗಳಂತೆ ನಡೆದುಕೊಳ್ಳುತ್ತಿದ್ದಾರೆ. ಕೆಲವರ ಮೇಲೆ ಹಲ್ಲೆಯನ್ನೂ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT