ಭಾನುವಾರ, ನವೆಂಬರ್ 17, 2019
28 °C

ಬದಲಾಯಿತು ಮೆಜೆಸ್ಟಿಕ್‌ ಸುರಂಗ ಮಾರ್ಗಗಳ ಚಿತ್ರಣ

Published:
Updated:
Prajavani

ಬೆಂಗಳೂರು: ಮೆಜೆಸ್ಟಿಕ್‌ನ ಕೆಂಪೇಗೌಡ  ಬಸ್‌ ನಿಲ್ದಾಣದಿಂದ ಸುಬೇದಾರ್ ಛತ್ರ ರಸ್ತೆ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಪಾದಚಾರಿ ಸುರಂಗ ಮಾರ್ಗಗಳೆಂದರೆ ವ್ಯಾಪಾರಿಗಳ ಅರಚಾಟ, ಕಿರುಚಾಟವೇ ನೆನಪಿಗೆ ಬರುತ್ತದೆ. ಆದರೆ, ಅಲ್ಲೀಗ ಕಿಷ್ಕಿಂದೆಯಂತಹ ಪರಿಸ್ಥಿತಿ ಇಲ್ಲ. ಯಾವುದೇ ವ್ಯಾಪಾರಿಗಳ ಕಿರಿಕಿರಿ ಇಲ್ಲದೇ ಸಾರ್ವಜನಿಕರು ಮುಕ್ತವಾಗಿ ಸಂಚರಿಸಬಹುದು.

ನಿತ್ಯ ಲಕ್ಷಾಂತರ ಮಂದಿ ಬಳಸುವ ಈ ಸುರಂಗ ಮಾರ್ಗಗಳ ಚಿತ್ರಣವೇ ಈಗ ಚಿತ್ರಣವೇ ಬದಲಾಗಿದೆ.

ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣಗಳು ಹಾಗೂ ಮೆಟ್ರೊ ನಿಲ್ದಾಣಗಳಲ್ಲಿ ಇಳಿಯುವ ಬಹುತೇಕ ಪ್ರಯಾಣಿ
ಕರು ಹಾಗೂ ಇಲ್ಲಿಗೆ ಬರುವ ಜನರು ಈ ಎರಡು ಸುರಂಗ ಮಾರ್ಗಗಳನ್ನು ಬಳಸುತ್ತಿದ್ದರು. ಇಲ್ಲಿ ಬೀದಿ ಬದಿ ವ್ಯಾಪಾರಿಗಳು ವಸ್ತುಗಳನ್ನು ರಾಶಿ ಹಾಕುತ್ತಿದ್ದರಿಂದ ಜನರ ಮುಕ್ತ ಸಂಚಾರಕ್ಕೆ ಅಡ್ಡಿ ಉಂಟಾಗುತ್ತಿತ್ತು. ಇದು ಜನಜಂಗುಳಿ ಹೆಚ್ಚುವುದಕ್ಕೂ ಕಾರಣವಾಗುತ್ತಿತ್ತು. ಹಾಗಾಗಿ ಇಲ್ಲಿ ಜೇಬುಗಳ್ಳತನ, ಒಡವೆ, ಕಳವು ಪ್ರಕರಣಗಳೂ ನಡೆಯುತ್ತಿದ್ದವು.

ಇನ್ನೊಂದೆಡೆ ತೃತೀಯ ಲಿಂಗಿಗಳು ಹಾಗೂ ಲೈಂಗಿಕ ಕಾರ್ಯಕರ್ತೆಯರ ಕಾಟ ಇಲ್ಲಿ ಮಿತಿ ಮೀರಿತ್ತು. ಇವೆಲ್ಲದ
ರಿಂದ ಜನ ಈ ಸುರಂಗ ಮಾರ್ಗದಲ್ಲಿ ಓಡಾಡಲು ಮುಜುಗರಪಡುವ ಪರಿಸ್ಥಿತಿ ಇತ್ತು. ಈಗ ಸುರಂಗದೊಳಗೆ ವ್ಯಾಪಾರವನ್ನು ನಿರ್ಬಂಧಿಸಲಾಗಿದ್ದು, ಪಾದಚಾರಿಗಳು ನಿಟ್ಟುಸಿರು ಬಿಡುವಂತೆ ಮಾಡಿದೆ.

ಇಲ್ಲಿ ವ್ಯಾಪಾರ ನಡೆಸುತ್ತಿದ್ದವರು ತಮ್ಮ ಸರಕು ಸರಂಜಾಮುಗಳನ್ನು ಗಂಟುಮೂಟೆ ಕಟ್ಟಿ ಪ್ರವೇಶದ ಬಳಿ ಇಟ್ಟುದ್ದು ಭಾನುವಾರ ಕಂಡು ಬಂತು. ವ್ಯಾಪಾರಿಗಳಿಲ್ಲದಿದ್ದರೂ ಅವರು ಸರಕು ಜೋಡಿಸಲು ಬಳಸುತ್ತಿದ್ದ ಕಲ್ಲು ಮತ್ತಿತರ ಪರಿಕರಗಳು ಇನ್ನೂ ಅಲ್ಲೇ ಇವೆ. ಜೀವನೋಪಾಯಕ್ಕೆ ಕತ್ತರಿ ಬಿದ್ದಿದ್ದರಿಂದ ವ್ಯಾಪಾರಿಗಳು ಕಂಗಾಲಾಗಿದ್ದಾರೆ. ಮತ್ತೆ ವ್ಯಾಪಾರಕ್ಕೆ ಅವಕಾಶ ಸಿಗಬಹುದೇ ಎಂದು ಕೆಲವರು ಸುರಂಗದ ಪ್ರವೇಶ ದ್ವಾರದ ಬಳಿ ಕಾಯುತ್ತ ನಿಂತಿದ್ದರು.

ಸ್ವಚ್ಛತೆಯ ಕೊರತೆ: ಸುಬೇದಾರ ಛತ್ರ ಕಡೆಯ ಪಾದಚಾರಿ ಸುರಂಗ ತಕ್ಕಮಟ್ಟಿಗೆ ಸ್ವಚ್ಛವಾಗಿದೆ. ಆದರೆ,  ರೈಲು ನಿಲ್ದಾಣದ ಬಳಿಯ ಸುರಂಗದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಇದರ ಗೋಡೆಗಳ ಮೇಲೆ ಸಾರ್ವಜನಿಕರು ವೀಳ್ಯದೆಲೆ, ಗುಟ್ಕಾ ತಿಂದು ಉಗಿದಿರುವ ಕಲೆಗಳು ಹಾಗೇ ಇವೆ. ವಿದ್ಯುದ್ದೀಪಗಳು ಹಾಳಾಗಿದ್ದು, ಬೆಳಕಿನ ವ್ಯವಸ್ಥೆ ಹದಗೆಟ್ಟಿದೆ.

ಸುರಂಗದಲ್ಲಿ ಮೆಟ್ರೊ ಕಡೆಗೆ ಸಾಗುವ ಮಾರ್ಗದಲ್ಲಿ ಭಾನುವಾರ ಹತ್ತಕ್ಕೂ ಹೆಚ್ಚು ಲೈಂಗಿಕ
ಕಾರ್ಯಕರ್ತೆಯರು ಗ್ರಾಹಕರಿಗಾಗಿ ಕಾಯುತ್ತಿದ್ದು ಕಂಡುಬಂತು. 

‘ಜನಜಂಗುಳಿ ಇದ್ದರೂ ಈ ಮಾರ್ಗದಲ್ಲಿ ಒಬ್ಬಂಟಿಯಾಗಿ ಓಡಾಡಲು ಮೊದಲು ಭಯ ಆಗುತ್ತಿತ್ತು. ಇಲ್ಲೇ ನಿಂತಿರುತ್ತಿದ್ದ ಕೆಲವರು ಯುವತಿಯರನ್ನು ಚುಡಾಯಿಸುತ್ತಿದ್ದರು. ಕಣ್ಣ ಮುಂದೆಯೇ ಅಹಿತಕರ ಸಂಗತಿಗಳು ನಡೆದರೂ ಕಂಡೂ ಕಾಣದಂತೆ ಹೋಗಬೇಕಿತ್ತು. ವ್ಯಾಪಾರ ನಿರ್ಬಂಧದಿಂದ ಇನ್ನು ಇಲ್ಲಿ ಧೈರ್ಯವಾಗಿ ಸಂಚರಿಸಬಹುದು’ ಎಂದು ನಿತ್ಯ ಈ ಸುರಂಗವನ್ನು ಬಳಸುವ ಜೆ.ಪಿ.ನಗರದ ನೇತ್ರಾ ಸಂತಸ
ವ್ಯಕ್ತಪಡಿಸಿದರು. 

‘ಸುರಂಗಮಾರ್ಗದ ಒಳಗೆ ಸ್ವಚ್ಛತೆ ವಾತಾವರಣ ಇಲ್ಲ. ಗೋಡೆಗಳ ಮೇಲೆ ಭಿತ್ತಿಪತ್ರಗಳನ್ನು ಅಂಟಿಸಿ ಅಂದ ಕೆಡಿಸಿದ್ದಾರೆ. ಅವುಗಳನ್ನು ತೆರವು ಮಾಡಿ ಹೊಸದಾಗಿ ಬಣ್ಣ ಹಚ್ಚಿದರೆ ಸ್ವಚ್ಛವಾಗಿ ಕಾಣಲಿದೆ. ಪ್ರಯಾಣಿಕರು ಬಳಕೆಯೂ ಹೆಚ್ಚಾಗಲಿದೆ’ ಎಂದರು.

ಸುರಂಗಮಾರ್ಗಕ್ಕೆ ಬೇಕಿರುವ ಅಗತ್ಯಗಳೇನು?

ಸಿಸಿಟಿವಿ ಕ್ಯಾಮೆರಾ

ಭದ್ರತಾ ಸಿಬ್ಬಂದಿ

ಕಸದ ಬುಟ್ಟಿಗಳು

ವಿದ್ಯುದ್ದೀಪಗಳ ದುರಸ್ತಿ

ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಜಾದೂ

ಸುರಂಗಮಾರ್ಗದೊಳಗೆ ಅನಧಿಕೃತ ವ್ಯಾಪಾರಕ್ಕೆ ನಿರ್ಬಂಧಿಸುವಂತೆ ಕೋರಿ ಸಾಮಾಜಿಕ ಕಾರ್ಯಕರ್ತ, ಕನಕಪುರದ ಕಂಚನಹಳ್ಳಿ ರವಿಕುಮಾರ್ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಅರ್ಜಿಯನ್ನು ವಿಚಾರಣೆ ಮಾಡಿದ್ದ ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್.ಓಕಾ ಹಾಗೂ ನ್ಯಾಯಮೂರ್ತಿ ಪಿ.ಎಂ.ನವಾಜ್ ಅವರಿದ್ದ ವಿಭಾಗೀಯ ನ್ಯಾಯಪೀಠ ಅನಧಿಕೃತ ಅಂಗಡಿಗಳನ್ನು ತೆರವು ಮಾಡಲು ಸೂಚನೆ ನೀಡಿತ್ತು.

‌ಹೈಕೋರ್ಟ್ ನಿರ್ದೇಶನದಂತೆ ಬಿಬಿಎಂಪಿ ಅಧಿಕಾರಿಗಳು ಉಪ್ಪಾರಪೇಟೆ ಹಾಗೂ ಕಾಟನ್‌ಪೇಟೆ ಠಾಣೆ ಪೊಲೀಸರ ಸಹಾಯದೊಂದಿಗೆ 50ಕ್ಕೂ ಹೆಚ್ಚು ವ್ಯಾಪಾರಿಗಳ ಸರಕು ಸರಂಜಾಮುಗಳನ್ನು ತೆರವುಗೊಳಿಸಿದ್ದರು.

***

ಬಿಬಿಎಂಪಿ ಅಧಿಕಾರಿಗಳು ಸುರಂಗಮಾರ್ಗ ಒಳಗಿನ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಇಲ್ಲಿ ಮತ್ತೆ ವ್ಯಾಪಾರಕ್ಕೆ ಅನುಮತಿ ಬೇಡ

– ಯೋಗೇಶ್‌, ಬೆಂಗಳೂರು ನಿವಾಸಿ

ಪ್ರತಿಕ್ರಿಯಿಸಿ (+)