ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವಕರಲ್ಲೇ ಮಾನಸಿಕ ಕಾಯಿಲೆ ಅಧಿಕ

ವಿಶ್ವ ಮಾನಸಿಕ ಆರೋಗ್ಯ ದಿನ ಇಂದು * ನಿರುದ್ಯೋಗ ಸಮಸ್ಯೆ, ಕೆಲಸದ ಸ್ಥಳದಲ್ಲಿ ಒತ್ತಡ ಪ್ರಮುಖ ಕಾರಣ
Last Updated 9 ಅಕ್ಟೋಬರ್ 2019, 19:57 IST
ಅಕ್ಷರ ಗಾತ್ರ

ಬೆಂಗಳೂರು: ನಿರುದ್ಯೋಗ ಸಮಸ್ಯೆ, ಪ್ರೇಮ ವೈಫಲ್ಯ ಹಾಗೂ ಕೆಲಸದ ಅತಿಯಾದ ಒತ್ತಡದಿಂದಾಗಿ 20 ವರ್ಷದಿಂದ 30 ವರ್ಷದೊಳಗಿನ ನಗರದ ಯುವಕರು ಮಾನಸಿಕ ಕಾಯಿಲೆಗಳಿಗೆ ಒಳಗಾಗುತ್ತಿರುವ ಆತಂಕಕಾರಿ ಅಂಶರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿನ (ನಿಮ್ಹಾನ್ಸ್‌) ರೋಗಿಗಳ ದಾಖಲಾತಿಯಿಂದ ಬೆಳಕಿಗೆ ಬಂದಿದೆ.

ರಾಷ್ಟ್ರೀಯ ಮಾನಸಿಕ ಆರೋಗ್ಯ ಸಮೀಕ್ಷೆ ಪ್ರಕಾರ ಪ್ರತಿ 10 ಜನರಲ್ಲಿ ಒಬ್ಬನಿಗೆ ಮಾನಸಿಕ ಒತ್ತಡವಿದೆ. 2030ರ ವೇಳೆಗೆ ಈ ಪ್ರಮಾಣ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಸಮೀಕ್ಷೆಯಲ್ಲಿ ಅಂದಾಜಿಸಲಾಗಿದೆ. ಇದಕ್ಕೆ ಪೂರಕ ಎಂಬಂತೆ ನಿಮ್ಹಾನ್ಸ್‌ಗೆ ದಾಖಲಾಗುವ ರೋಗಿಗಳ ಸಂಖ್ಯೆಯಲ್ಲೂ ಶೇ 10 ರಷ್ಟು ಏರಿಕೆಯಾಗಿದೆ. ಅಷ್ಟೇ ಅಲ್ಲ, ಹಿರಿಯರಿಗೆ ಹೋಲಿಸಿದರೆ, ಮಾನಸಿಕ ಅನಾರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಪಡೆದುಕೊಳ್ಳುತ್ತಿರುವವರಲ್ಲಿ ಯುವಜನರೇ ಹೆಚ್ಚು.

‘ಬದಲಾದ ಸನ್ನಿವೇಶದಲ್ಲಿ ಯುವಜನತೆ ಸವಾಲುಗಳನ್ನು ಎದುರಿಸಲು ಸಾಧ್ಯವಾಗದೇ ಆತ್ಮಹತ್ಯೆ ಪ್ರಯತ್ನ ಮಾಡುತ್ತಿದ್ದಾರೆ. ಗ್ರಾಮೀಣ ಪ್ರದೇಶಕ್ಕಿಂತ ನಗರ ಪ್ರದೇಶದಲ್ಲಿಯೇ ಅಧಿಕ ಮಂದಿ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆತ್ಮಹತ್ಯೆ ಪ್ರಯತ್ನಗಳಲ್ಲಿ ಮಹಿಳೆಯರ ಪ್ರಮಾಣವೇ ಹೆಚ್ಚು ಇದ್ದರೂ ಆತ್ಮಹತ್ಯೆಯಿಂದ ಮೃತಪಡುವವರಲ್ಲಿ ಪುರುಷರೇ ಅಧಿಕ’ ಎನ್ನುವುದು ನಿಮ್ಹಾನ್ಸ್ ವೈದ್ಯರ ಅಭಿಪ್ರಾಯ.

‘ಮಾನಸಿಕ ಅನಾರೋಗ್ಯ ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ.‌ವೃತ್ತಿ ಸ್ಥಳದಲ್ಲಿ ಮಾನಸಿಕ ಒತ್ತಡದಿಂದ ಉದ್ಯೋಗಸ್ಥ ಯುವಜನತೆ ಆತ್ಮಹತ್ಯೆಯ ಹಾದಿ ಹಿಡಿಯುತ್ತಿದ್ದಾರೆ. ಇನ್ನೊಂದೆಡೆ ಪದವೀಧರರು ಉದ್ಯೋಗ ಸಿಗದ ಪರಿಣಾಮ ಮಾನಸಿಕವಾಗಿ ಕುಗ್ಗುತ್ತಿದ್ದಾರೆ. ಅದೇ ರೀತಿ, ಮಾದಕವಸ್ತುಗಳ ವ್ಯಸನವೂ ಮಾನಸಿಕ ಅನಾರೋಗ್ಯಕ್ಕೆ ಕಾರಣವಾಗಿದೆ’ ಎಂದು ನಿಮ್ಹಾನ್ಸ್‌ನ ಮನೋರೋಗ ತಜ್ಞ ಡಾ. ಶಶಿಧರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರೇಮ ವೈಫಲ್ಯದ ಪ್ರಕರಣಗಳು ಕೂಡಾ ಆತ್ಮಹತ್ಯೆಗೆ ದಾರಿ ಮಾಡಿಕೊಡುತ್ತಿವೆ. ಮಹಿಳೆಯರು ಮಾನಸಿಕ ಕಾಯಿಲೆಗೆ ಒಳಗಾಗಲು ಕೌಟುಂಬಿಕ ಒತ್ತಡ ಪ್ರಮುಖ ಕಾರಣವಾಗಿದೆ. ವಿವಾಹದ ಬಳಿಕ ಪತಿಯ ಮನೆಗೆ ಹೊಂದಿಕೊಳ್ಳಲು ಸಾಧ್ಯವಾಗದಿದ್ದಾಗ ಬಹುತೇಕರು ಮಾನಸಿಕ ಸಮಸ್ಯೆಗೆ ಒಳಗಾಗುತ್ತಾರೆ. ಗರ್ಭಿಣಿ ಆಗಿದ್ದಾಗ ದೈಹಿಕ ಮಾನಸಿಕ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆಗಳಿರುತ್ತವೆ’ ಎಂದು ವಿವರಿಸಿದರು.

ಮನೋನಿಗ್ರಹ ಅಗತ್ಯ: ‘ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಮೂರನೇ ಒಂದರಷ್ಟು ಮಂದಿ ಮಾತ್ರ ಮಾನಸಿಕ ಕಾಯಿಲೆಗಳಿಂದ ಬಳಲುತ್ತಿರುತ್ತಾರೆ. ಉಳಿದ ಎರಡು ಭಾಗದಷ್ಟು ಮಂದಿ ಆರ್ಥಿಕ ಸಮಸ್ಯೆ ಹಾಗೂ ಕುಟುಂಬದಬಾಂಧವ್ಯ ಕಡಿದುಕೊಳ್ಳುವಿಕೆಯಿಂದ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇದನ್ನು ತಪ್ಪಿಸುವುದಕ್ಕೆ, ಆರೋಗ್ಯಕರ ಜೀವನ ಶೈಲಿಯನ್ನು ರೂಢಿಸಿಕೊಳ್ಳುವುದು ಒಂದೇ ಪರಿಹಾರ’ ಎಂದು ನಿಮ್ಹಾನ್ಸ್ ನಿರ್ದೇಶಕ ಡಾ.ಬಿ.ಎನ್‌.ಗಂಗಾಧರ್ ತಿಳಿಸಿದರು.

‘ಪರಿಸರ ಮಾಲಿನ್ಯ, ಶಬ್ದ ಮಾಲಿನ್ಯ ಕೂಡಾ ಮಾನಸಿಕ ಸಮಸ್ಯೆ ಕಾರಣವಾಗುತ್ತಿದೆ. ಬಹುತೇಕ ಎಲ್ಲ ಮಾನಸಿಕ ಕಾಯಿಲೆಗಳನ್ನು ಗುಣಪಡಿಸಬಹುದಾಗಿದೆ. ಮನಸ್ಸಿನ ನಿಗ್ರಹವಿಟ್ಟುಕೊಂಡಲ್ಲಿ ಮಾನಸಿಕ ಅನಾರೋಗ್ಯ ಸಮಸ್ಯೆಗಳಿಂದ ಅಂತರ ಕಾಯ್ದುಕೊಳ್ಳಬಹುದು’ ಎಂದು ಮಾಹಿತಿ ನೀಡಿದರು.

‘ಕೋಪ, ಹಟ ಕೂಡಾ ಮಾನಸಿಕ ಕಾಯಿಲೆ’

‘ಪರೀಕ್ಷೆಗಳಲ್ಲಿ ಅಧಿಕ ಅಂಕ ಪಡೆಯುವಂತೆ ಪಾಲಕರು ಒತ್ತಡ ಹೇರುತ್ತಿರುವುದರಿಂದ ಮಕ್ಕಳಲ್ಲಿ ಸಹ ಮಾನಸಿಕ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ಆಗಾಗ ಸಿಟ್ಟು ಮಾಡಿಕೊಂಡು ಕಿರುಚಾಟ ನಡೆಸುವುದು, ನಿರಂತರ ಹಟ ಮಾಡುವುದು ಕೂಡ ಮಾನಸಿಕ ಕಾಯಿಲೆಯ ಸ್ವರೂಪವಾಗಿದೆ’ ಎಂದುಡಾ.ಶಶಿಧರ್ ತಿಳಿಸಿದರು.

‘ಪೋಷಕರು ಮಕ್ಕಳಲ್ಲಿನ ಬದಲಾವಣೆಯನ್ನು ಗುರುತಿಸಿ, ಅವರ ಬೇಕು– ಬೇಡಗಳನ್ನು ಅರಿತುಕೊಳ್ಳಬೇಕು. ಈ ಮೂಲಕ ಮುಂದಾಗುವ ಅನಾಹುತ ತಡೆಯಲು ಸಾಧ್ಯ ಎಂದು’ ಸಲಹೆ ನೀಡಿದರು.

ಮಾನಸಿಕ ಒತ್ತಡ ನಿಗ್ರಹ ಹೇಗೆ?

* ಪ್ರತಿನಿತ್ಯ ನಿಯಮಿತ ವ್ಯಾಯಾಮ

* ಮದ್ಯಪಾನ, ಮಾದಕ ವಸ್ತುಗಳಿಂದ ಅಂತರ ಕಾಯ್ದುಕೊಳ್ಳುವಿಕೆ

* ಸ್ನೇಹಿತರೊಂದಿಗೆ ಮನಸ್ಸಿನ ಉದ್ವೇಗ ಹಂಚಿಕೊಳ್ಳುವಿಕೆ

* ಕುಟುಂಬದ ಸದ್ಯರೊಂದಿಗೆ ಹೆಚ್ಚು ಸಮಯ ಕಳೆಯುವುದು

ಅಂಕಿ– ಅಂಶ

5.65 ಲಕ್ಷ :ಈ ವರ್ಷ ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ ಪಡೆದುಕೊಂಡವರು

225 :ನಿಮ್ಹಾನ್ಸ್‌ನಲ್ಲಿರುವ ತಜ್ಞ ವೈದ್ಯರು

850 :ನಿಮ್ಹಾನ್ಸ್‌ನಲ್ಲಿರುವ ಶುಶ್ರೂಷಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT