‘ಸಂಬಳ ಬೇಕಾ? ಪ್ಯಾಂಟ್‌ ಜೇಬಿಗೆ ಕೈಹಾಕು’

7
ಬಿಬಿಎಂಪಿ ಗುತ್ತಿಗೆದಾರನಿಂದಾದ ಲೈಂಗಿಕ ಕಿರುಕುಳ ಬಿಚ್ಚಿಟ್ಟ ಮಹಿಳಾ ಪೌರಕಾರ್ಮಿಕರು

‘ಸಂಬಳ ಬೇಕಾ? ಪ್ಯಾಂಟ್‌ ಜೇಬಿಗೆ ಕೈಹಾಕು’

Published:
Updated:

ಬೆಂಗಳೂರು: ‘ನಿನಗೆ ಕೊಡಬೇಕಾದ ಸಂಬಳ ನನ್ನ ಪ್ಯಾಂಟ್ ಜೇಬಿನಲ್ಲಿದೆ. ಬೇಕಾದರೆ ನೀನೇ ಕೈ ಹಾಕಿ ತೆಗೆದುಕೋ. ಅನುಮಾನ ಇದ್ರೆ ಪ್ಯಾಂಟ್‌ ಬಿಚ್ಚಲಾ? ಸಾಲಾಗಿ ನಿಂತು ನೀವೆಲ್ಲಾ ನನ್ನ ಕೈಯಲ್ಲಿ ತಾಳಿ ಕಟ್ಟಿಸಿಕೊಂಡರಷ್ಟೇ ಸಂಬಳ...’

–ಬಿಬಿಎಂಪಿ ಗುತ್ತಿಗೆ ಪೌರಕಾರ್ಮಿಕರಾದ ರತ್ನಾ ಕಣ್ಣಂಚಿನಲ್ಲಿ ನೀರು ತಂದುಕೊಂಡು ‘ಈ ರೀತಿಯ ಮಾತುಗಳಿಗೆ ದಿನನಿತ್ಯ ಬೇಯುತ್ತಿದ್ದೇವೆ. ಇದನ್ನು ಸಹಿಸಲು ಆಗುತ್ತಿಲ್ಲ’ ಎಂದು ಗೋಳಿಟ್ಟರು.

ಗಾರ್ಮೆಂಟ್ಸ್‌ ಮತ್ತು ಟೆಕ್ಸ್‌ಟೈಲ್‌ ಕೆಲಸಗಾರರ ಸಂಘ ಹಾಗೂ ಬಿಬಿಎಂಪಿ ಗುತ್ತಿಗೆ ಪೌರಕಾರ್ಮಿಕರ ಸಂಘ ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ಮೀ–ಟೂ’ ಕಾರ್ಯಕ್ರಮದಲ್ಲಿ ಹಲವರು ತಮ್ಮ ನೋವಿನ ಕಥೆಗಳನ್ನು ಬಿಚ್ಚಿಟ್ಟರು.

‘ವಾರ್ಡ್‌ ನಂ. 55ರಲ್ಲಿ ಕೆಲಸ ಮಾಡುವ ಗುತ್ತಿಗೆದಾರ ನಾಗೇಶ್‌, ಪ್ಯಾಂಟ್‌ ಜೇಬಿಗೆ ಕೈಹಾಕಿ ಸಂಬಳ ತೆಗೆದುಕೊಳ್ಳುವಂತೆ ನನಗೆ ಹೇಳಿದ್ದು. ಅವರ ವಿರುದ್ಧ ಕೆ.ಆರ್‌.ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದೇನೆ. ಸಫಾಯಿ ಕರ್ಮಚಾರಿ ಆಯೋಗಕ್ಕೂ ದೂರು ನೀಡಿದ್ದೇನೆ’ ಎಂದು ಅವರು ಹೇಳಿದರು.

‘ಗೊಜ್ಜಲಗೆರೆಯ ಸಾಯಿ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತೇನೆ. ಅಲ್ಲಿರುವ ಮ್ಯಾನೇಜರ್‌ ಧರ್ಮೇಂದ್ರ, ನನ್ನನ್ನು ಕೀಳಾಗಿ ನೋಡಿದರು. ರಸ್ತೆ ಬದಿಯಲ್ಲಿ ನಿಂತು ಸಂಪಾದನೆ ಮಾಡು ಅಂತೆಲ್ಲಾ ಹೇಳಿದರು’ ಎಂದು ರಾಜೇಶ್ವರಿ ಅಳಲು ಆರಂಭಿಸಿದರು.

‘ಮನೆಗೆಲಸದ ವೇಳೆ ಕಣ್ಣು’

‘ನಾನು ಹತ್ತು ವರ್ಷದಿಂದ ಮನೆ ಕೆಲಸ ಮಾಡಿಕೊಂಡಿದ್ದೇನೆ. ಮಾಲೀಕನ ಮಗನೊಬ್ಬ ನನ್ನನ್ನು ಕೆಟ್ಟ ದೃಷ್ಟಿಯಿಂದ ನೋಡುತ್ತಿದ್ದ. ಅವರಮ್ಮನಿಗೆ ಹೇಳಿದ್ರೆ ನಂಬಲಿಲ್ಲ. ಮನೆವರೆಗೂ ಹಿಂಬಾಲಿಸಿಕೊಂಡು ಬಂದು ನನ್ನ ಮೇಲೆ ದೌರ್ಜನ್ಯ ಎಸಗಲು ಪ್ರಯತ್ನಿಸಿದ. ₹12 ಕೊಟ್ಟು ಕೆಲಸ ಬಿಡಿಸಿದರು. ನಮ್ಮಂಥವರಿಗೆ ಬದುಕುವ ಹಕ್ಕು ಇಲ್ಲವೇ’ ಎಂದು ಮನೆಕೆಲಸ ಮಾಡುವ ತಾಹೀರಾ ಪ್ರಶ್ನೆ ಹಾಕಿದರು.

ಕಂಡಕ್ಟರ್‌ ಸ್ಥಿತಿ ಶೋಚನೀಯ

‘ಮಹಿಳಾ ಕಂಡಕ್ಟರ್‌ಗಳಿಗೆ ಬಿಎಂಟಿಸಿಯಲ್ಲಿ ಯಾವುದೇ ಸೌಲಭ್ಯ ಇಲ್ಲ. ಭದ್ರತೆಯಂತೂ ಇಲ್ಲವೇ ಇಲ್ಲ. ಬಸ್‌ನಲ್ಲಿ ಯಾರು ಬೇಕಾದರೂ ಅವರ ಮೇಲೆ ಕೈ ಹಾಕಬಹುದು. ಹೇಗೆ ಬೇಕಾದರೂ ನಡೆಸಿಕೊಳ್ಳಬಹುದು. ಕೈಯಲ್ಲಿರುವ ದುಡ್ಡು, ಟಿಕೆಟ್ ಕಸಿದುಕೊಂಡು ಹೋದ ಮೇಲೆ ದಂಡ ಕಟ್ಟಬೇಕಾಗುತ್ತದೆ ಅನ್ನುವ ಭಯಕ್ಕೆ ಅವರು ಎಲ್ಲವನ್ನೂ ಸಹಿಸಿಕೊಂಡು ಬದುಕುತ್ತಿದ್ದಾರೆ. ದಾರಿಯಲ್ಲಿ ಶೌಚಕ್ಕೆ ಹೋಗಬೇಕಾಗಿ ಬಂದರೆ ಅವರ ಗತಿ ದೇವರಿಗೇ ಪ್ರೀತಿ’ ಎಂದು ಬಿಎಂಟಿಸಿ ಕಾರ್ಮಿಕರ ಒಕ್ಕೂಟದ ಪರ್ವೀನ್‌ ಅಳುತ್ತಲೇ ತಮ್ಮ ಸಮಸ್ಯೆ ಹೇಳಿಕೊಂಡರು.

ನಾವಿರೋದು ರೇಪ್‌ ಮಾಡಿಸಿಕೊಳ್ಳೋಕಂತೆ

‘ಜನ ನಮ್ಮನ್ನು ತುಂಬಾ ಕೀಳಾಗಿ ನೋಡ್ತಾರೆ, ನಾವಿರೋದೇ ಅತ್ಯಾಚಾರ ಮಾಡಿಸಿಕೊಳ್ಳಲು ಅಂತಾರೆ. ಪೊಲೀಸರ ಬಳಿ ದೂರು ತೆಗೆದುಕೊಂಡುಹೋದಾಗಲೂ ಇದೇ ಅನುಭವವಾದರೆ ನಮಗೆ ನ್ಯಾಯ ಎಲ್ಲಿಂದ ಸಿಗಬೇಕು’ ಎಂದು ಪ್ರಶ್ನಿಸಿದರು ತೃತೀಯ ಲಿಂಗಿ ಸನಾ.

‘ನಾನು ಒಂದು ವಿದ್ಯುನ್ಮಾನ ಮಾಧ್ಯಮದಲ್ಲಿ ಕೆಲಸ ಮಾಡುತ್ತಿದ್ದೆ. ಅಲ್ಲಿಯ ವ್ಯಕ್ತಿಯೊಬ್ಬರು ನೆಪ ಮಾಡಿಕೊಂಡು ಮನೆಗೆ ಬಂದು ನನ್ನ ಮೇಲೆ ಅತ್ಯಾಚಾರ ಎಸಗಿದರು. ಪೊಲೀಸರು ದೂರು ತೆಗೆದುಕೊಳ್ಳಲಿಲ್ಲ. ಸಂಸ್ಥೆಯವರು ಕೆಲಸದಿಂದಲೇ ಹೊರಗಟ್ಟಿದರು’ ಎಂದು ದೂರಿದರು.

ನೂರಕ್ಕೂ ಹೆಚ್ಚು ಉದ್ಯೋಗಸ್ಥ ಮಹಿಳೆಯರು ಒಂದೆಡೆ ಸೇರಿ ‘ಮೀ–ಟೂ’ ಅಭಿಯಾನಕ್ಕೆ ಬೆಂಬಲ ಸೂಚಿಸಿದರು. ‘ನಾವೆಲ್ಲಾ ಫೇಸ್‌ಬುಕ್‌, ಟ್ವಿಟರ್‌ ಬಳಸಲ್ಲ, ಏನಿದ್ರೂ ನಮಗೆ ಮಾತಾಡೋದೆ ಮಾರ್ಗ’ ಎಂದರು.

‘ಸಿನಿಮಾದವರು, ರಾಜಕೀಯದವರು ಮಾಡಿದ್ರಷ್ಟೇ ಮೀ–ಟೂ ಅಭಿಯಾನ ಆಗಿದೆ. ನಮ್ಮವು ಬರೀ ಗೋಳು ಅಲ್ಲೇನು’ ಎಂದು ಮಹಿಳೆಯರು ಪ್ರಶ್ನೆ ಹಾಕಿದರು.

 

ಬರಹ ಇಷ್ಟವಾಯಿತೆ?

 • 45

  Happy
 • 1

  Amused
 • 8

  Sad
 • 1

  Frustrated
 • 2

  Angry

Comments:

0 comments

Write the first review for this !