ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ರೊ 2ನೇ ಹಂತ: ಮರು ಟೆಂಡರ್‌ ಕರೆದಿಲ್ಲ–ಕಾಮಗಾರಿ ಸಾಗಿಲ್ಲ

ಕೆ.ಆರ್. ಪುರ–ಸಿಲ್ಕ್‌ ಬೋರ್ಡ್‌ ಜಂಕ್ಷನ್‌ ನಡುವೆ ಆರು ತಿಂಗಳಾದರೂ ಶುರುವಾಗದ ಕೆಲಸ
Last Updated 3 ಅಕ್ಟೋಬರ್ 2019, 20:10 IST
ಅಕ್ಷರ ಗಾತ್ರ

ಬೆಂಗಳೂರು: ಮಿತಿಮೀರಿದ ಸಂಚಾರ ದಟ್ಟಣೆ ಸಮಸ್ಯೆಯಿಂದಾಗಿಯೇ ಸುದ್ದಿಯಲ್ಲಿರುವ ಸಿಲ್ಕ್‌ ಬೋರ್ಡ್‌ ಜಂಕ್ಷನ್‌ನಲ್ಲಿ ಮೆಟ್ರೊ ರೈಲು ಮಾರ್ಗ ನಿರ್ಮಿಸುವ ಮೂಲಕ ಪರಿಹಾರ ಕಲ್ಪಿಸಲು ಸರ್ಕಾರ ಮುಂದಾಗಿತ್ತು. ಆದರೆ, ಮೆಟ್ರೊ ಮಾರ್ಗ ನಿರ್ಮಾಣ ಕಾಮಗಾರಿಯೇ ಸ್ಥಗಿತಗೊಂಡಿದ್ದು, ವಾಹನ ಸವಾರರ ಸಂಕಟವನ್ನು ಮತ್ತಷ್ಟು ಹೆಚ್ಚಿಸಿದೆ.

ನಗರದ ಹೊರವರ್ತುಲ ರಸ್ತೆಯಲ್ಲಿರುವ ಕೆ.ಆರ್. ಪುರ–ಸಿಲ್ಕ್‌ ಬೋರ್ಡ್‌ ಜಂಕ್ಷನ್‌ ನಡುವೆ ಆದ್ಯತೆ ಮೇರೆಗೆ ಮೆಟ್ರೊ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವುದಾಗಿ ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ಹೇಳಿತ್ತು. ಆದರೆ, ಟೆಂಡರ್‌ ರದ್ದುಗೊಂಡಿರುವ ಕಾರಣ ಮೆಟ್ರೊ ಮಾರ್ಗ ನಿರ್ಮಾಣ ಕಾರ್ಯ ಸ್ಥಗಿತಗೊಂಡಿದ್ದರೆ, ಉಳಿದ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ.

ಈ ಮಾರ್ಗ ನಿರ್ಮಾಣಕ್ಕಾಗಿ ಕಡಿಮೆ ಬಿಡ್‌ ಸಲ್ಲಿಸಿದ್ದ ಐಎಲ್‌ ಆ್ಯಂಡ್‌ ಎಫ್‌ಎಸ್‌ಗೆ ಗುತ್ತಿಗೆ ನೀಡಲಾಗಿತ್ತು. ಆದರೆ, ಈ ಕಂಪನಿ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದರಿಂದ ಗುತ್ತಿಗೆಯನ್ನು ನಿಗಮವು ರದ್ದುಗೊಳಿಸಿತ್ತು. ಈ ಟೆಂಡರ್‌ ರದ್ದುಗೊಂಡು ಎಂಟು ತಿಂಗಳುಗಳೇ ಕಳೆದರೂ ನಿಗಮವು ಮರು ಟೆಂಡರ್‌ ಕರೆದಿಲ್ಲ.

ಲೂಪ್‌ ನಿರ್ಮಾಣ:ಸಿಲ್ಕ್‌ಬೋರ್ಡ್‌ ಜಂಕ್ಷನ್‌ನಲ್ಲಿ 2.8 ಕಿ.ಮೀ. ಉದ್ದದ ಮೇಲ್ಸೇತುವೆಗೆ ಲೂಪ್‌ ಮತ್ತು ರ‍್ಯಾಂಪ್‌ಗಳ ನಿರ್ಮಾಣ ಗುತ್ತಿಗೆಯನ್ನು ರಿನಾಟ್ಸ್‌ ಪ್ರಾಜೆಕ್ಟ್ಸ್‌ ಕಂಪನಿ ಪಡೆದುಕೊಂಡಿದೆ. ₹134 ಕೋಟಿ ವೆಚ್ಚದಲ್ಲಿ ಈ ಲೂಪ್‌ ಮತ್ತು ರ‍್ಯಾಂಪ್‌ಗಳನ್ನು ಕಂಪನಿ ನಿರ್ಮಿಸಲಿದೆ.

ಇದರ ಜೊತೆಗೆ, ಕಟ್ಟಡಗಳನ್ನು ನೆಲಸಮಗೊಳಿಸುವುದು, ಅಗತ್ಯ ಮೂಲಸೌಲಭ್ಯ ಕಲ್ಪಿಸುವ (ಒಳಚರಂಡಿ, ವಿದ್ಯುತ್‌ ಕಂಬ ಇತ್ಯಾದಿ) ಸ್ಥಳಾಂತರಿಸುವ ಕಾರ್ಯ ಮಾತ್ರ ಈ ಮಾರ್ಗದಲ್ಲಿ ನಡೆಯುತ್ತಿದೆ.

ಸಂಚಾರ ದಟ್ಟಣೆ ಸಂಕಟ: ‘ದೇಶ ದಲ್ಲಿಯೇ ಅತಿ ಹೆಚ್ಚು ಸಂಚಾರ ದಟ್ಟಣೆ ಹೊಂದರುವ ಏಳನೇ ಜಂಕ್ಷನ್‌ ಎಂಬ ಅಪಖ್ಯಾತಿ ಈ ಸಿಲ್ಕ್‌ಬೋರ್ಡ್‌ ಜಂಕ್ಷನ್‌ನದ್ದು. ಇಂಥದ್ದರಲ್ಲಿ ಎಂಟು ತಿಂಗಳುಗಳಿಂದ ಮೆಟ್ರೊ ಮಾರ್ಗ ನಿರ್ಮಾಣ ಕಾರ್ಯ ನಡೆಯುತ್ತಿಲ್ಲ. ಬೆಳಿಗ್ಗೆ ಮತ್ತು ಸಂಜೆ ಅವಧಿಯಲ್ಲಿ ಈ ಮಾರ್ಗದಲ್ಲಿ ವಾಹನದಲ್ಲಿ ಸಾಗಬೇಕೆಂದರೆ ದೊಡ್ಡ ಯುದ್ಧವನ್ನೇ ಮಾಡಿ ದಂತಾಗು ತ್ತದೆ’ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ವಾಹನ ಸವಾರ ಸಂಗಮೇಶ ಪಾಟೀಲ.

‘ಹೊಸೂರು ರಸ್ತೆ, ಜಯದೇವ ಜಂಕ್ಷನ್‌ ಎಲ್ಲೆಡೆ ಕಾಮಗಾರಿ ನಡೆ ಯುತ್ತಿದೆ. ಸಂಚಾರ ದಟ್ಟಣೆ ಜೊತೆಗೆ ವಿಪರೀತ ದೂಳನ್ನೂ ಸಹಿಸಿಕೊಳ್ಳಬೇಕಾಗಿದೆ’ ಎಂದು ಕೇಶವ್‌ ಹೇಳಿದರು.

‘ಆರ್‌.ವಿ. ರಸ್ತೆ – ಬೊಮ್ಮಸಂದ್ರ ಮತ್ತು ಗೊಟ್ಟಿಗೆರೆ–ಡೈರಿ ವೃತ್ತದಲ್ಲಿ ಮೆಟ್ರೊ ಕಾಮಗಾರಿ ನಡೆಯುತ್ತಿದೆ. ಇದರಿಂದ ಸಿಲ್ಕ್‌ಬೋರ್ಡ್‌ ಮತ್ತು ಜಯದೇವ ಜಂಕ್ಷನ್‌ನಲ್ಲಿ ದಟ್ಟಣೆ ಹೆಚ್ಚಾಗಿದೆ. ಈ ಸಂದರ್ಭದಲ್ಲಿ ಸಿಲ್ಕ್‌ಬೋರ್ಡ್‌ ಜಂಕ್ಷನ್‌ನಲ್ಲಿಯೂ ಮಾರ್ಗ ನಿರ್ಮಾಣ ಕಾಮಗಾರಿ ಕೈಗೆತ್ತಿ ಕೊಂಡರೆ ಸಂಚಾರ ದಟ್ಟಣೆ ಇನ್ನೂ ಹೆಚ್ಚಾಗಬಹುದು. ಉಳಿದ ಕಾಮಗಾರಿ ಮುಗಿದ ನಂತರವೇ ಟೆಂಡರ್‌ ಕರೆಯುವುದು ಸೂಕ್ತ’ ಎಂದು ಅಧಿಕಾರಿಯೊಬ್ಬರು ಹೇಳಿದರು.

13 ನಿಲ್ದಾಣಗಳು ಯಾವುವು?

ಸಿಲ್ಕ್‌ ಬೋರ್ಡ್, ಎಚ್‌ಎಸ್‌ಆರ್ ಲೇಔಟ್, ಅಗರ ಕೆರೆ, ಇಬ್ಬಲೂರು, ಬೆಳ್ಳಂದೂರು, ಕಾಡುಬೀಸನಹಳ್ಳಿ, ಕೋಡಿಬಸವನಹಳ್ಳಿ, ಮಾರತಹಳ್ಳಿ, ಇಸ್ರೊ, ದೊಡ್ಡನೆಕ್ಕುಂದಿ, ಡಿಆರ್‌ಡಿಒ ಕ್ರೀಡಾ ಸಂಕೀರ್ಣ, ಮಹದೇವಪುರ, ಕೆ.ಆರ್.ಪುರ.

17 ಕಿ.ಮೀ.

ಸಿಲ್ಕ್‌ಬೋರ್ಡ್‌ ಜಂಕ್ಷನ್‌–ಕೆ.ಆರ್.ಪುರ ಮಾರ್ಗದ ಉದ್ದ

₹4,202 ಕೋಟಿ

ಯೋಜನಾ ವೆಚ್ಚ

15,179 ಚ.ಮೀ.

ಭೂಸ್ವಾಧೀನ ಮಾಡಿಕೊಳ್ಳಲಾಗುತ್ತಿರುವ ಜಾಗ

5,911 ಚ.ಮೀ.

ಸರ್ಕಾರಿ ಭೂಮಿ ಸ್ವಾಧೀನ

18,800

ಗಂಟೆಗೆ ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳ ಸರಾಸರಿ ಸಂಖ್ಯೆ

* ಕೆ.ಆರ್.ಪುರ–ಸಿಲ್ಕ್‌ಬೋರ್ಡ್‌ ಜಂಕ್ಷನ್‌ ನಡುವೆ ಮೆಟ್ರೊ ಮಾರ್ಗ ನಿರ್ಮಾಣಕ್ಕಾಗಿ ಮುಂದಿನ ತಿಂಗಳಿನೊಳಗೆ ಮರು ಟೆಂಡರ್‌ ಕರೆಯಲಾಗುವುದು

- ಅಜಯ್‌ ಸೇಠ್‌, ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT