ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಚಾರ ದಟ್ಟಣೆ ನಿವಾರಣೆಗೆ ರೋಡ್‌ ಕಂ ರೈಲು ಫ್ಲೈಓವರ್‌

ಹೊಸ ಯೋಜನೆಯತ್ತ ಮೆಟ್ರೊ ಚಿತ್ತ
Last Updated 20 ಡಿಸೆಂಬರ್ 2018, 20:43 IST
ಅಕ್ಷರ ಗಾತ್ರ

ಬೆಂಗಳೂರು: ರೋಡ್‌ ಕಂ ರೈಲು ಫ್ಲೈಓವರ್‌ ಯೋಜನೆಯನ್ನು ಮೆಟ್ರೊ ನಿಗಮ ಅಂತಿಮಗೊಳಿಸಿದರೆ ಕೆ.ಆರ್‌.ಪುರ ಜಂಕ್ಷನ್‌ ಮತ್ತು ಸ್ವಾಮಿ ವಿವೇಕಾನಂದ ರಸ್ತೆ ಪ್ರದೇಶದಲ್ಲಿ ಉಂಟಾಗುವ ಸಂಚಾರ ದಟ್ಟಣೆಗೆ ಪರಿಹಾರ ಸಿಗುವ ಸಾಧ್ಯತೆಯಿದೆ.

ಮೆಟ್ರೊ ನಿಗಮವು ಹೊರವರ್ತುಲ ರಸ್ತೆಯಕೃಷ್ಣರಾಜಪುರದ ಬಳಿ ಮೆಟ್ರೊ ಮಾರ್ಗದ (ಹಂತ 2ಎ) ವಿನ್ಯಾಸವನ್ನು ಬದಲಿಸುತ್ತಿದೆ. ಮೆಟ್ರೊ ಮೂಲಸೌಲಭ್ಯಗಳು ಸಹಜ ಸಂಚಾರ ವ್ಯವಸ್ಥೆಗೆ ತಡೆಯಾಗಬಾರದು ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಈ ಬದಲಾವಣೆಗೆ ಮುಂದಾಗಿದೆ.

‘ವಿನ್ಯಾಸದಲ್ಲಿ ಬದಲಾವಣೆ ಮಾಡಬೇಕಾದ ಅಗತ್ಯ ಕಂಡುಬಂದಿದೆ. ಹೊರವರ್ತುಲ ರಸ್ತೆ ಪ್ರದೇಶದಲ್ಲಿ ಮೆಟ್ರೊ ಮಾರ್ಗ ನಿರ್ಮಾಣದ ಟೆಂಡರು ರದ್ದಾಗಲು ಇದೂ ಒಂದು ಕಾರಣ. ಈ ಮೊದಲಿನ ವಿನ್ಯಾಸ ಮೆಟ್ರೊ ಮಾರ್ಗಕ್ಕೆ ಸಂಬಂಧಿಸಿ ಉತ್ತಮವಾಗಿಯೇ ಇತ್ತು. ಆದರೆ, ಸಂಚಾರ ಸ್ಥಿತಿಗತಿ ಸುಧಾರಣೆ ಸಂಬಂಧಿಸಿ ಬಳಿಕ ಹೊಸ ಯೋಜನೆ ರೂಪಿಸಲಾಯಿತು. ಹಾಗಾಗಿ ಯೋಜನೆಯ ಮೂರನೇ ಪ್ಯಾಕೇಜ್‌ (ದೊಡ್ಡನೆಕ್ಕುಂಟಿ –ಕೆ.ಆರ್‌.ಪುರ) ಬದಲಾಯಿಸಬೇಕಾಗಿದೆ’ ಎಂದು ಸೇಠ್ ಹೇಳಿದರು.

ಕೆ.ಆರ್‌.ಪುರ ಪ್ರದೇಶದಲ್ಲಿ ಈಗಾಗಲೇ ಮೆಟ್ರೊ ಪಿಲ್ಲರ್‌ಗಳು ಎರಡೂವರೆ ಮೀಟರ್‌ಗಳಷ್ಟು ರಸ್ತೆ ಜಾಗ ಕಬಳಿಸಿವೆ. ಇಲ್ಲಿ ಸಂಚರಿಸುವುದೆಂದರೆ ವಾಹನ ಸವಾರರಿಗೆ ದುಃಸ್ವಪ್ನವಾಗಿ ಕಾಡುತ್ತಿದೆ.

‘ಮೆಟ್ರೊ ಪಿಲ್ಲರ್‌ಗಳ ನಿರ್ಮಾಣ ಪೂರ್ಣಗೊಂಡ ಬಳಿಕ ಅಲ್ಲಿಯೇ ಇನ್ನೊಂದು ಫ್ಲೈಓವರ್‌ ನಿರ್ಮಿಸಲು ಅವಕಾಶವಿರಲಿದೆ’ ಎಂದು ಸೇಠ್‌ ಹೇಳಿದರು.

’ಈ ಸಮಸ್ಯೆ ನಿವಾರಣೆಗೆ ಸಮಗ್ರ ಎಂಜಿನಿಯರಿಂಗ್‌ ಮೂಲಕ ಪರಿಹಾರ ಕಂಡುಕೊಳ್ಳಬೇಕು. ಅದಕ್ಕಾಗಿ ನಾವು ಬಹುಹಂತದ ರೋಡ್‌ ಕಂ ರೈಲು ಫ್ಲೈಓವರ್‌ ವಿನ್ಯಾಸಮಾಡುವ ಸಾಧ್ಯತೆ ಕುರಿತು ಗಮನಹರಿಸುತ್ತಿದ್ದೇವೆ’ ಎಂದರು.

ಎರಡು ಹೊರವರ್ತುಲ ಮಾರ್ಗಗಳನ್ನು ಪ್ರತ್ಯೇಕಿಸಲು ಕೆ.ಆರ್‌.ಪುರ ಸೇತುವೆಯನ್ನು ಬಳಸುವುದು ಅಥವಾ ಬೈಪಾಸ್‌ ಮಾದರಿಯ ವ್ಯವಸ್ಥೆ ರೂಪಿಸುವ ಬಗೆಗೂ ಮೆಟ್ರೊ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.

‘ಮೆಟ್ರೊ ಮಾರ್ಗಕ್ಕಿಂತಲೂಎತ್ತರಿಸಲ್ಪಟ್ಟ ಮಾರ್ಗ ರೂ‍ಪಿಸುವುದು ಅಥವಾ ಮೆಟ್ರೊ ವಯಾಡಕ್ಟ್‌ಗಳಿಗೆ ಸಮಾನಾಂತರವಾಗಿಎತ್ತರಿಸಲ್ಪಟ್ಟ ಮಾರ್ಗ ನಿರ್ಮಿಸುವ ಬಗೆಗೂ ಆಲೋಚಿಸಿದ್ದೇವೆ’ ಎಂದು ಅಧಿಕಾರಿಗಳು ತಿಳಿಸಿದರು.

ಹೊರವರ್ತುಲ ಮಾರ್ಗಬೈಯಪ್ಪನಹಳ್ಳಿ ನಿಲ್ದಾಣದ ಬಳಿ ಕೊನೆಗೊಳ್ಳುತ್ತದೆ. ಇದೇ ಮಾರ್ಗವನ್ನು ಬೈಯಪ್ಪನಹಳ್ಳಿಯಿಂದ ಹೆಬ್ಬಾಳದವರೆಗೆ ಈಶಾನ್ಯ ದಿಕ್ಕಿನತ್ತ (ಹೊರವರ್ತುಲ ರಸ್ತೆಯವರೆಗೆ) ಹಿಗ್ಗಿಸುವ ಬಗೆಗೂ ನಿರಂತರ ಪ್ರಯತ್ನಗಳು ನಡೆದಿವೆ. ವಿಮಾನ ನಿಲ್ದಾಣದ ಮೆಟ್ರೊ ಮಾರ್ಗದ (ಹಂತ –2 ಬಿ) ಜೋಡಣೆ ವಿನ್ಯಾಸ ಬದಲಿಸಿದ ನಂತರ ಈ ಪ್ರಯತ್ನ ಅಗತ್ಯವೂ ಹೌದು. ಹೊರವರ್ತುಲ ಮಾರ್ಗವು ಇನ್ನು ನಾಗವಾರ– ಹೆಬ್ಬಾಳದ ಮಧ್ಯೆ ನಿರ್ಮಾಣಗೊಳ್ಳಲಿದೆ.

‘ಹೊರವರ್ತುಲ ರಸ್ತೆ ಮತ್ತು ವಿಮಾನ ನಿಲ್ದಾಣ ಮಾರ್ಗ ಪರಿಗಣಿಸುವುದಾದರೆ ವಿನ್ಯಾಸ ಮತ್ತು ಜೋಡಣೆಗಳ ಬದಲಾವಣೆ ನಿರ್ಣಾಯಕವಾಗಲಿದೆ. ವಿಮಾನ ನಿಲ್ದಾಣದ ಪ್ರಯಾಣಿಕರು ಆ ಮಾರ್ಗದ ರೈಲು ಹತ್ತಲು ಅನುಕೂಲವಾಗುವಂತೆ ಸೌಲಭ್ಯ ರೂಪಿಸಬೇಕಿದೆ’ ಎಂದು ಮೆಟ್ರೊ ಮೂಲಗಳು ಹೇಳಿವೆ.

**

ಹನಿಕಾಂಬಿಂಗ್‌ ದುರಸ್ತಿ ಮುಂದಕ್ಕೆ?

ಟ್ರಿನಿಟಿ ನಿಲ್ದಾಣದ ಬಳಿಯ ಪಿಲ್ಲರ್‌ ಸಂಖ್ಯೆ 155ರಲ್ಲಿ ಉಂಟಾದ ಹನಿ ಕಾಂಬಿಂಗ್‌ ಸಮಸ್ಯೆ ದುರಸ್ತಿ ಇನ್ನೂ ಒಂದು ವಾರ ಕಾಲ ಮುಂದೆ ಹೋಗುವ ಸಾಧ್ಯತೆ ಇದೆ. ಈ ಹಿಂದೆ ಯೋಜನೆ ರೂಪಿಸಿದಂತೆ ಡಿ. 22 ಮತ್ತು 23ರಂದು ಎರಡು ದಿನಗಳ ಕಾಲ ಇಂದಿರಾನಗರದಿಂದ ಎಂ.ಜಿ. ರಸ್ತೆವರೆಗೆ ಮೆಟ್ರೊ ಸ್ಥಗಿತಗೊಳಿಸಿ ಕಾಮಗಾರಿ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಕಾಮಗಾರಿ ನಡೆಸಲು ಬೇಕಾದ ಸಿದ್ಧತೆ ಇನ್ನೂ ನಡೆಯುತ್ತಿದೆ ಎಂದು ಮೆಟ್ರೊ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ. ಒಂದು ವೇಳೆ ಕಾಮಗಾರಿ ಮುಂದೂಡಿದರೆ ಡಿ. 29 ಮತ್ತು 30ರಂದು ನಡೆಯಬಹುದು ಎಂದು ನಿಗಮದ ಮೂಲಗಳು ಹೇಳಿವೆ.

ಭಾರತೀಯ ವಿಜ್ಞಾನ ಸಂಸ್ಥೆ ಮತ್ತು ದೆಹಲಿ ಮೆಟ್ರೊದ ತಜ್ಞರು ಗುರುವಾರ ಕಾಮಗಾರಿಯ ರೂಪುರೇಷೆ ಮಾಡಿದ್ದಾರೆ. ಅಗತ್ಯ ಸಾಮಗ್ರಿಗಳ ಸಂಗ್ರಹವೂ ನಡೆದಿದೆ.

ಕಾಮಗಾರಿ ನಡೆಸುವ ಹಾಗೂ ಮೆಟ್ರೊ ಸ್ಥಗಿತಗೊಳಿಸುವ ದಿನಾಂಕವನ್ನು ಡಿ. 21ರಂದು ತಿಳಿಸುವುದಾಗಿ ನಿಗಮದ ವ್ಯವಸ್ಥಾಪಕ ಅಜಯ್‌ ಸೇಠ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT