ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ರೊ 2ನೇ ಹಂತ: ಕೇಂದ್ರದ ಅನುದಾನಕ್ಕೆ ಮೊರೆ

ಮೆಟ್ರೊ 2ನೇ ಹಂತ
Last Updated 21 ನವೆಂಬರ್ 2018, 20:45 IST
ಅಕ್ಷರ ಗಾತ್ರ

ಬೆಂಗಳೂರು: ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸುವ ಮೆಟ್ರೊ ಮಾರ್ಗ ನಿರ್ಮಾಣಕ್ಕೆ ಕೇಂದ್ರದ ನೆರವು ಕೇಳಲು ನಿಗಮ ಮುಂದಾಗಿದೆ.

‘ಡಿಸೆಂಬರ್‌ 2ನೇ ವಾರದಲ್ಲಿ ಈ ಪ್ರಸ್ತಾವ ಕಳುಹಿಸುವ ಚಿಂತನೆಯಲ್ಲಿದ್ದೇವೆ’ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಜಯ್‌ ಸೇಠ್‌ ತಿಳಿಸಿದರು.

‘ಈ ಮಾರ್ಗ ನಿರ್ಮಾಣಕ್ಕೆ ₹ 5,950 ಕೋಟಿ ಬೇಕು. ಇದಕ್ಕಾಗಿ ₹ 3,200 ಕೋಟಿಯನ್ನು ಯುರೋಪಿಯನ್‌ ಇನ್ವೆಸ್ಟ್‌ಮೆಂಟ್‌ ಬ್ಯಾಂಕ್‌ನಿಂದ ಪಡೆಯಲು ನಿರ್ಧರಿಸಿದ್ದೇವೆ. ಈ ಬಗ್ಗೆ ನಾವು ವಿಸ್ತೃತವಾದ ಪ್ರಸ್ತಾವವನ್ನು ಬ್ಯಾಂಕ್‌ಗೆ ಸಲ್ಲಿಸಬೇಕು. ಅಲ್ಲಿಂದ ಹಣಕಾಸು ನೆರವು ಮಂಜೂರಾದ ಬಳಿಕ ಟೆಂಡರುದಾರರಿಗೆ ಕಾಮಗಾರಿ ವಹಿಸಲು ಸಾಧ್ಯ’ ಎಂದು ಸೇಠ್‌ ವಿವರಿಸಿದರು.

‘ಮೆಟ್ರೊ 2ನೇ ಹಂತದ ಯೋಜನೆ ಸಿದ್ಧವಾದಾಗ ಮೆಟ್ರೊ ನೀತಿ ಇರಲಿಲ್ಲ. 2015ರಲ್ಲಿ ಕೇಂದ್ರ ಸರ್ಕಾರವು ಮೆಟ್ರೊ ನೀತಿ ಜಾರಿಗೆ ತಂದಿತು. ಅದರ ಪ್ರಕಾರ ಅನುದಾನ ಪಡೆಯುವ ಬಗ್ಗೆ ಸ್ಪಷ್ಟತೆ ಇದೆ. ಈ ಯೋಜನೆಗೆ ಸಂಬಂಧಿಸಿದಂತೆ ಒಟ್ಟು ಯೋಜನಾ ವೆಚ್ಚದ ಶೇ 20ರಷ್ಟು ಅನುದಾನ ಕೇಳುವ ಅವಕಾಶವಿದೆ. ಅದರ ಪ್ರಕಾರ ಕೇಳುತ್ತೇವೆ. ಯೋಜನಾ ವೆಚ್ಚದಲ್ಲಿ ಹೆಚ್ಚಳವಾಗುವ ಸಾಧ್ಯತೆಯೂ ಇದೆ. ಅದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಬೇಕು. ಹೀಗಾಗಿ ನಿಖರ ಇಂತಿಷ್ಟೇ ಮೊತ್ತ ಎಂದು ಹೇಳಲಾಗದು’ ಎಂದು ಅವರು ಹೇಳಿದರು.

‘ಬಂಡವಾಳ ಕ್ರೋಡೀಕರಣಕ್ಕೆ ವಿಮಾನ ನಿಲ್ದಾಣ ಪ್ರಾಧಿಕಾರದಿಂದ ₹ 1 ಸಾವಿರ ಕೋಟಿ ನೆರವು ಪಡೆಯುವ ನಿರೀಕ್ಷೆಯಲ್ಲಿ ನಿಗಮ ಇತ್ತು. ಈ ಹಣವನ್ನು ಪ್ರಯಾಣಿಕರಿಂದ ಬಳಕೆದಾರರ ಶುಲ್ಕವಾಗಿ ಪಡೆದು ಸಂಗ್ರಹಿಸುವ ಚಿಂತನೆ ಇತ್ತು. ಆದರೆ, ಈ ಪ್ರಸ್ತಾವವನ್ನು ನಿಲ್ದಾಣ ಪ್ರಾಧಿಕಾರ ತಿರಸ್ಕರಿಸಿದೆ. ಮೆಟ್ರೊ ಕಾಮಗಾರಿ ಪೂರ್ಣಗೊಂಡು ಸಂಪರ್ಕ ಸಾಧ್ಯವಾದ ಬಳಿಕ ಬಳಕೆದಾರರ ಶುಲ್ಕ ಸಂಗ್ರಹಿಸಬಹುದು’ ಎಂದು ಪ್ರಾಧಿಕಾರ ಹೇಳಿತ್ತು.

ಭೂಗತ ಮಾರ್ಗ ಮುಂದಿನ ವರ್ಷ: ‘ಸ್ವಾಗತ್‌ ರೋಡ್‌ ಕ್ರಾಸ್‌ನಿಂದ ನಾಗವಾರದವರೆಗಿನ ಭೂಗತ ಮಾರ್ಗಕ್ಕೆ ಕೆಲವು ಕಂಪನಿಗಳು ಬಿಡ್‌ ಸಲ್ಲಿಸಿವೆ. ಅವುಗಳ ಪರಿಶೀಲನೆ, ಹಣಕಾಸು ಹೊಂದಿಕೆ ಆದ ಬಳಿಕ ಕಾಮಗಾರಿಯನ್ನು ವಹಿಸಲಾಗುತ್ತದೆ. ಈ ಎಲ್ಲ ಪ್ರಕ್ರಿಯೆಗಳು ಡಿಸೆಂಬರ್‌ ವೇಳೆಗೆ ಮುಗಿಯಲಿವೆ. ಮುಂದಿನ ವರ್ಷದಿಂದ ಕಾಮಗಾರಿ ಆರಂಭವಾಗಲಿದೆ’ ಎಂದು ಸೇಠ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT