ಮೆಟ್ರೊ ನಿಲ್ದಾಣದಲ್ಲಿ ₹ 200 ನಕಲಿ ನೋಟು ಪತ್ತೆ

7

ಮೆಟ್ರೊ ನಿಲ್ದಾಣದಲ್ಲಿ ₹ 200 ನಕಲಿ ನೋಟು ಪತ್ತೆ

Published:
Updated:
Deccan Herald

ಬೆಂಗಳೂರು: ನಗರದ ‘ನಮ್ಮ ಮೆಟ್ರೊ’ ನಿಲ್ದಾಣವೊಂದದಲ್ಲಿ ₹ 200 ಮುಖಬೆಲೆಯ ನಕಲಿ ನೋಟು ಪತ್ತೆಯಾಗಿದೆ. ಇದರ ಛಾಯಾಚಿತ್ರವನ್ನು ಮೆಟ್ರೊ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ ಕಳುಹಿಸಿಕೊಟ್ಟಿದ್ದಾರೆ.

‘ಗ್ರಾಹಕರೊಬ್ಬರು ಟಿಕೆಟ್‌ ಖರೀದಿಸುವ ವೇಳೆ ಈ ನೋಟನ್ನು ನೀಡಿದ್ದರು. ಅಸಲಿ ನೋಟಿಗೂ ಅದಕ್ಕೂ ಮೇಲ್ನೋಟಕ್ಕೆ ಸ್ವಲ್ಪವೂ ವ್ಯತ್ಯಾಸ ಕಾಣಿಸುತ್ತಿರಲಿಲ್ಲ. ಆದರೆ, ಇಂಗ್ಲಿಷ್‌ನಲ್ಲಿ ‘ಆರ್‌ಬಿಐ’, ‘ಇಂಡಿಯಾ’ ಎಂದು ಬರೆದ ಹಾಗೂ ದೇವನಾಗರಿ ಲಿಪಿಯಲ್ಲಿ ‘ಭಾರತ್‌‘ ಎಂದು ಬರೆದ ಭದ್ರತಾ ಎಳೆ (ಸೆಕ್ಯುರಿಟಿ ಥ್ರೆಡ್‌) ಇರಲಿಲ್ಲ. ಆ ಜಾಗದಲ್ಲಿ ಹಸಿರು ಬಣ್ಣದ ಶಾಯಿಯಲ್ಲಿ ಗುರುತು ಮಾಡಲಾಗಿತ್ತು’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಸಿಬ್ಬಂದಿ ‘ಪ್ರಜಾವಾಣಿ’ಗೆ ತಿಳಿಸಿದರು.

‘₹ 200 ಮುಖಬೆಲೆಯ ಕೇಸರಿ ಬಣ್ಣದ ನೋಟು ಇತ್ತೀಚೆಗಷ್ಟೇ ಚಲಾವಣೆಗೆ ಬಂದಿದೆ. ಈ ನೋಟಿನ ಅಸಲಿಯತ್ತಿನ ಬಗ್ಗೆ ಸಾಮಾನ್ಯ ಜನರಿಗೆ ಹೆಚ್ಚಾಗಿ ತಿಳಿದಿರುವುದಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡು ದುಷ್ಕರ್ಮಿಗಳು ಇಂತಹ ನೋಟುಗಳನ್ನು ಚಲಾವಣೆಗೆ ಬಿಟ್ಟಿದ್ದಾರೆ. ಸಾರ್ವಜನಿಕರು ಹೊಸ ನೋಟುಗಳನ್ನು ಪಡೆಯುವಾಗ ಎಚ್ಚರ ವಹಿಸಬೇಕು’ ಎಂದು ಅವರು ತಿಳಿಸಿದರು.

ಮಾಜಿ ಶಾಸಕ ರವೀಂದ್ರ ಅಸ್ವಸ್ಥ

ಹರಪನಹಳ್ಳಿ ಮಾಜಿ ಶಾಸಕ ಎಂ.ಪಿ. ರವೀಂದ್ರ ತೀವ್ರ ಅಸ್ವಸ್ಥರಾಗಿದ್ದಾರೆ.

ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿರುವ ರವೀಂದ್ರ ಅವರನ್ನು ಬುಧವಾರ ಸಂಜೆ ನಗರದ ವಿಕ್ರಮ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಶ್ರೀಗಂಧ ಮರ ಕಳವು

ರಾಜಭವನ ರಸ್ತೆಯಲ್ಲಿರುವ ಪ್ರಸಾರಭಾರತಿ ಆವರಣದಲ್ಲಿ ಬೆಳೆದಿದ್ದ ಶ್ರೀಗಂಧದ ಮರವನ್ನು ದುಷ್ಕರ್ಮಿಗಳು ಕದ್ದೊಯ್ದಿದ್ದಾರೆ.

ಆ ಸಂಬಂಧ ಪ್ರಸಾರಭಾರತಿ ಸಹಾಯಕ ನಿರ್ದೇಶಕ ಎಂ.ಆರ್.ಸಹದೇವನ್, ವಿಧಾನಸೌಧ ಠಾಣೆಗೆ ದೂರು ನೀಡಿದ್ದಾರೆ.

‘ಅಕ್ಟೋಬರ್ 29ರಂದು ತಡರಾತ್ರಿ ಆವರಣಕ್ಕೆ ನುಗ್ಗಿರುವ ಕಳ್ಳರು, ಶ್ರೀಗಂಧದ ಮರವನ್ನು ಕಡಿದುಕೊಂಡು ಹೋಗಿದ್ದಾರೆ. ಮರುದಿನ ನಸುಕಿನಲ್ಲಿ ಕಚೇರಿಗೆ ಬಂದಾಗಲೇ ವಿಷಯ ಗೊತ್ತಾಗಿದೆ’ ಎಂದು ಸಹದೇವನ್ ದೂರಿನಲ್ಲಿ ತಿಳಿಸಿದ್ದಾರೆ.

ವಿಧಾನಸೌಧ ಪೊಲೀಸರು, ‘ರಾಜಭವನ ಬಳಿ ದಿನದ 24 ಗಂಟೆಯೂ ಪೊಲೀಸರು ಇರುತ್ತಾರೆ. ಅದರ ಸಮೀಪದಲ್ಲೇ ಪ್ರಸಾರಭಾರತಿ ಕಟ್ಟಡವಿದೆ. ಅಲ್ಲಿ ಶ್ರೀಗಂಧ ಮರ ಬೆಳೆದಿರುವುದನ್ನು ತಿಳಿದುಕೊಂಡೇ ದುಷ್ಕರ್ಮಿಗಳು ಕೃತ್ಯ ಎಸಗಿದ್ದಾರೆ. ಸ್ಥಳದಲ್ಲಿರುವ ಸಿ.ಸಿ.ಟಿ.ವಿ ಕ್ಯಾಮೆರಾ ಪರಿಶೀಲನೆ ನಡೆಸುತ್ತಿದ್ದೇವೆ’ ಎಂದು ಹೇಳಿದರು.

ಸುಳ್ಳು ಸುದ್ದಿ; ಕೇಂದ್ರ ಸಚಿವರಿಂದ ದೂರು

‘ಯಾರೋ ಕಿಡಿಗೇಡಿಗಳು ನನ್ನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಿಬಿಟ್ಟು, ಚಾರಿತ್ರ್ಯವಧೆಗೆ ಯತ್ನಿಸುತ್ತಿದ್ದಾರೆ’ ಎಂದು ಆರೋಪಿಸಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ನಗರದ ಸಿಸಿಬಿ ಡಿಸಿಪಿ ಎಸ್‌.ಗಿರೀಶ್‌ ಅವರಿಗೆ ಗುರುವಾರ ದೂರು ನೀಡಿದ್ದಾರೆ.

ಅದನ್ನು ಸ್ವೀಕರಿಸಿರುವ ಗಿರೀಶ್, ಪರಿಶೀಲನೆಗಾಗಿ ಸೈಬರ್‌ ಕ್ರೈಂ ಪೊಲೀಸರಿಗೆ ನೀಡಿದ್ದಾರೆ. 

‘ದಿನಪತ್ರಿಕೆಯೊಂದರಲ್ಲಿ ಪ್ರಕಟವಾದ ಸುದ್ದಿಯ ರೀತಿಯಲ್ಲೇ ಅಶ್ಲೀಲ ಪದಗಳನ್ನು ಬಳಸಿ ನನ್ನ ಬಗ್ಗೆ ಬರೆಯಲಾಗಿದೆ. ಪತ್ರಿಕೆ ಸಂಪಾದಕರನ್ನು ವಿಚಾರಿಸಿದಾಗ, ಆ ರೀತಿ ಯಾವುದೇ ಸುದ್ದಿ ಪ್ರಕಟವಾಗಿಲ್ಲವೆಂದು ಅವರು ಹೇಳಿದ್ದಾರೆ. ಯಾರೋ ಕಿಡಿಗೇಡಿಗಳೇ ನನ್ನನ್ನು ರಾಜಕೀಯವಾಗಿ ಮುಗಿಸಲು ಈ ರೀತಿ ಸುಳ್ಳು ಸುದ್ದಿ ಹರಿಬಿಟ್ಟಿದ್ದಾರೆ. ಅವರನ್ನು ಪತ್ತೆ ಹಚ್ಚಿ’ ಎಂದು ದೂರಿನಲ್ಲಿ ಸದಾನಂದಗೌಡ ಒತ್ತಾಯಿಸಿದ್ದಾರೆ.

ಸೈಬರ್ ಪೊಲೀಸರು, ‘ಸದಾನಂದಗೌಡ ಅವರು ರಾಸಲೀಲೆಯಲ್ಲಿ ತೊಡಗಿದ್ದರು’ ಎಂಬ ಸುಳ್ಳು ಸುದ್ದಿ ಫೇಸ್‌ಬುಕ್‌ನಲ್ಲಿ ಎರಡು ದಿನಗಳಿಂದ ಹರಿದಾಡುತ್ತಿದೆ. ಅದನ್ನು ಹರಿಬಿಟ್ಟವರು ಯಾರು ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 1

  Sad
 • 0

  Frustrated
 • 3

  Angry

Comments:

0 comments

Write the first review for this !