ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿರು ಮಾರ್ಗದಲ್ಲೂ 6 ಬೋಗಿ

ಡಿಸೆಂಬರ್‌ನಲ್ಲಿ ಉತ್ತರ–ದಕ್ಷಿಣ ಕಾರಿಡಾರ್‌ನಲ್ಲಿ ಓಡಲಿದೆ ಉದ್ದನೆಯ ಮೆಟ್ರೊ ರೈಲು
Last Updated 22 ನವೆಂಬರ್ 2018, 19:43 IST
ಅಕ್ಷರ ಗಾತ್ರ

ಬೆಂಗಳೂರು:‌ ಆರು ಬೋಗಿಗಳ ಎರಡು ಮೆಟ್ರೊ ರೈಲುಗಳು ಡಿಸೆಂಬರ್‌ ತಿಂಗಳಿನಿಂದ ಸಂಚಾರ ಆರಂಭಿಸಲಿವೆ. ಇದರಲ್ಲಿ ಒಂದು ರೈಲನ್ನು ಉತ್ತರ–ದಕ್ಷಿಣ ಕಾರಿಡಾರ್‌ನಲ್ಲಿ (ಹಸಿರು ಮಾರ್ಗ) ಓಡಿಸಲು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ಚಿಂತನೆ ನಡೆಸಿದೆ.

ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಜಯ್‌ ಸೇಠ್‌, ‘ಹಸಿರು ಮಾರ್ಗಕ್ಕೆ ಹೋಲಿಸಿದರೆ ನೇರಳೆ ಮಾರ್ಗದಲ್ಲಿ (ಪೂರ್ವ–ಪಶ್ಚಿಮ ಕಾರಿಡಾರ್‌) ಪ್ರಯಾಣಿಕರ ಸಂಖ್ಯೆ ಜಾಸ್ತಿ. ಹಸಿರು ಮಾರ್ಗದಲ್ಲಿ ದಟ್ಟಣೆ ಅವಧಿಯಲ್ಲಿ ಒಂದು ಗಂಟೆಗೆ ಸರಾಸರಿ 10 ಸಾವಿರ ಮಂದಿ ಸಂಚರಿಸುತ್ತಾರೆ. ಆದರೆ, ನೇರಳೆ ಮಾರ್ಗದಲ್ಲಿ 19 ಸಾವಿರಕ್ಕೂ ಹೆಚ್ಚು ಮಂದಿ ಸಂಚರಿಸುತ್ತಾರೆ. ಹಾಗಾಗಿ ಈ ಮಾರ್ಗದಲ್ಲಿ ದಟ್ಟಣೆ ಕಡಿಮೆ ಮಾಡುವುದು ನಮ್ಮ ಆದ್ಯತೆ’ ಎಂದು ಹೇಳಿದರು.

‘ಅಕ್ಟೋಬರ್‌ನಲ್ಲಿ ಬಿಇಎಂಎಲ್‌ನವರು ಒಟ್ಟು 6 ಬೋಗಿಗಳನ್ನು ಹಸ್ತಾಂತರಿಸಿದ್ದರು. ಅದರಲ್ಲಿ ಮೂರು ಬೋಗಿಗಳನ್ನು ಒಂದು ರೈಲಿಗೆ ಜೋಡಿಸಿದ್ದು, ಅದು ಸಂಚಾರ ಆರಂಭಿಸಿದೆ. ಇನ್ನು ಮೂರು ಬೋಗಿಗಳನ್ನು ಇನ್ನೊಂದು ರೈಲಿಗೆ ಅಳವಡಿಸುವ ಕಾರ್ಯ ಪೂರ್ಣಗೊಂಡಿದೆ. ಆ ರೈಲು ಪರೀಕ್ಷಾರ್ಥ ಸಂಚಾರ ನಡೆಸುತ್ತಿದೆ. ಇನ್ನು 15 ದಿನಗಳಲ್ಲೇ ಅದು ಪ್ರಯಾಣಿಕರ ಸೇವೆಗೆ ಲಭ್ಯವಾಗಲಿದೆ’ ಎಂದು ತಿಳಿಸಿದರು.

‘ದಟ್ಟಣೆ ಅವಧಿಯಲ್ಲಿ ಮೂರು ಬೋಗಿಗಳ ರೈಲಿನಲ್ಲಿ ಏಕಕಾಲಕ್ಕೆ 1000ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಾರೆ. ಬೋಗಿಗಳಲ್ಲಿ ಪ್ರಯಾಣಿ
ಕರುಒತ್ತೊತ್ತಾಗಿ ತುಂಬಿರುವುದರಿಂದ ಈ ಸಮಯದಲ್ಲಿ ಪ್ರಯಾಣ ತ್ರಾಸದಾಯಕವಾಗಿರುತ್ತದೆ. ಮೆಟ್ರೊ ಪ್ರಯಾಣ ಆರಾಮವಾಗಿರಬೇಕಾದರೆ ಪ್ರಯಾಣಿಕರ ಸಂಖ್ಯೆ 750 ಮೀರಬಾರದು’ ಎಂದು ವಿವರಿಸಿದರು.

‘ಆರು ಬೋಗಿಯ ರೈಲಿನಲ್ಲಿ ಗರಿಷ್ಠ 2000 ಮಂದಿ ಪ್ರಯಾಣಿಸಬಹುದು. ಆದರೆ, ಪ್ರಯಾಣ ಸುಖಕರವಾಗಿರಬೇಕಾದರೆ ಪ್ರಯಾಣಿಕರ ಸಂಖ್ಯೆ 1,574ರ ಒಳಗಿರಬೇಕು’ ಎಂದರು.

ಆರು ಬೋಗಿಗಳ ರೈಲಿನಲ್ಲಿ ಮೊದಲ ಕೋಚ್‌ ಅನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ಮೀಸಲು ಬೋಗಿಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಎಂಬ ಬೇಡಿಕೆ ಇದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸೇಠ್‌, ‘ಇನ್ನು ಐದು ತಿಂಗಳಲ್ಲಿ ಇನ್ನಷ್ಟು ಆರು ಬೋಗಿಗಳ ರೈಲು ಸಂಚಾರ ಆರಂಭಿಸಲಿವೆ. ಆ ಬಳಿಕ ಪರಿಸ್ಥಿತಿ ನೋಡಿಕೊಂಡು ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ’ ಎಂದರು.

ಮೆಟ್ರೊ ಸಂಚಾರ: ಅವಧಿ ವಿಸ್ತರಣೆ?

‘ಸದ್ಯ ಎರಡೂ ಮಾರ್ಗಗಳಲ್ಲಿ ರಾತ್ರಿಯ ಕೊನೆಯ ರೈಲುಗಳು ಮೆಜೆಸ್ಟಿಕ್‌ ನಿಲ್ದಾಣದಿಂದ ರಾತ್ರಿ 11.35 ನಿಮಿಷಕ್ಕೆ ಹೊರಡುತ್ತವೆ. ಈ ಅವಧಿಯನ್ನು ರಾತ್ರಿ 12ರವರೆಗೆ ವಿಸ್ತರಿಸಿ, ಅರ್ಧ ಗಂಟೆಗೊಂದು ರೈಲು ಓಡಿಸುವ ಚಿಂತನೆ ಇದೆ’ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ತಿಳಿಸಿದರು.

ಪ್ರತಿ ಭಾನುವಾರ ಬೆಳಿಗ್ಗೆ 8 ಗಂಟೆಯ ಬಳಿಕ ಮೆಟ್ರೊ ರೈಲುಗಳ ಸಂಚಾರ ಆರಂಭವಾಗುತ್ತಿದೆ. ಆ ದಿನವೂ ಬೆಳಿಗ್ಗೆ 6ಕ್ಕೆ ಮುನ್ನ ಸಂಚಾರ ಆರಂಭಿಸಬೇಕೆಂಬ ಬೇಡಿಕೆ ಇದೆ. ಈ ಕುರಿತು ಪ್ರತಿಕ್ರಿಯಿಸಿದ ಸೇಠ್‌, ‘ರೈಲುಗಳ ಹಾಗೂ ಹಳಿಗಳ ನಿರ್ವಹಣೆಗೆ ಸಮಯಾವಕಾಶ ಬೇಕು ಎಂಬ ಕಾರಣಕ್ಕೆ ಭಾನುವಾರ ತಡವಾಗಿ ರೈಲು ಸಂಚಾರ ಆರಂಭಿಸುತ್ತಿದ್ದೇವೆ. ಬೇರೆ ಊರುಗಳಿಂದ ನಗರಕ್ಕೆ ಬರುವ ರೈಲುಗಳ ವೇಳಾಪಟ್ಟಿಯನ್ನು ನೋಡಿಕೊಂಡು ಭಾನುವಾರ ಬೆಳಿಗ್ಗೆ ಮೆಟ್ರೊ ವೇಳಾಪಟ್ಟಿಯಲ್ಲಿ ಮಾರ್ಪಾಡು ಮಾಡುತ್ತೇವೆ’ ಎಂದರು.

‘ಸೆಪ್ಟೆಂಬರ್‌ಗೆ ಎಲ್ಲ ರೈಲಿನಲ್ಲಿ 6 ಬೋಗಿ’

‘ಹೊಸ ಬೋಗಿಗಳನ್ನು ಒದಗಿಸುವ ಗುತ್ತಿಗೆ ಪಡೆದ ಬಿಇಎಂಎಲ್‌ ಸಂಸ್ಥೆ ಅಕ್ಟೋಬರ್‌ವರೆಗೆ ತಿಂಗಳಿಗೆ ಆರು ಬೋಗಿಗಳನ್ನು (ಮೂರು ಬೋಗಿಗಳ ಎರಡು ಸೆಟ್‌) ಹಸ್ತಾಂತರಿಸುತ್ತಿತ್ತು. ಡಿಸೆಂಬರ್‌ನಿಂದ 9 ಬೋಗಿಗಳನ್ನು (ಮೂರು ಬೋಗಿಗಳ ಮೂರು ಸೆಟ್‌) ಹಸ್ತಾಂತರಿಸಲಿದೆ. ಒಪ್ಪಂದ ಪ್ರಕಾರ ಪೂರೈಸಬೇಕಾಗಿರುವ ಎಲ್ಲ ಬೋಗಿಗಳನ್ನು ಇನ್ನು 9 ತಿಂಗಳಲ್ಲಿ ಪೂರೈಸಲಿದೆ. 2019ರ ಸೆಪ್ಟೆಂಬರ್‌ ಒಳಗೆ ನಿಗಮದ ಎಲ್ಲ ರೈಲುಗಳನ್ನು ಆರು ಬೋಗಿಗಳ ರೈಲುಗಳನ್ನಾಗಿ ಪರಿವರ್ತಿಸಲಾಗುವುದು’ ಎಂದು ಸೇಠ್‌ ತಿಳಿಸಿದರು.

‘ಸಮಯದ ಅಂತರ ಮತ್ತಷ್ಟು ಕಡಿತ’

ಎರಡು ರೈಲುಗಳ ಸಂಚಾರದ ನಡುವಿನ ಸಮಯದ ಅಂತರವನ್ನು ಮತ್ತಷ್ಟು ಕಡಿಮೆಗೊಳಿಸಲು ನಿಗಮವು ಚಿಂತನೆ ನಡೆಸಿದೆ. ಪ್ರಸ್ತುತ ದಟ್ಟಣೆ ಅವಧಿಯಲ್ಲಿ ಸರಾಸರಿ 3 ನಿಮಿಷ 30 ಸೆಕೆಂಡ್‌ಗೆ ಒಂದರಂತೆ ರೈಲುಗಳು ಸಂಚರಿಸುತ್ತಿವೆ. ಪ್ರಯಾಣಿಕರ ಸಂಖ್ಯೆ ತೀರಾ ಹೆಚ್ಚು ಇದ್ದರೆ ಪ್ರತಿ 2 ನಿಮಿಷಕ್ಕೊಂದು ರೈಲು ಸಂಚರಿಸುತ್ತಿದೆ.

‘ಪ್ರತಿ 2 ನಿಮಿಷಕ್ಕೊಂದು ರೈಲು ಓಡಿಸುವಷ್ಟು ಸಾಮರ್ಥ್ಯವನ್ನು ಹೊಂದಿದ್ದೇವೆ. ಎರಡು ರೈಲುಗಳ ನಡುವಿನ ಸಮಯದ ಅಂತರವನ್ನು ಮತ್ತಷ್ಟು ಕಡಿಮೆ ಮಾಡುವಂತೆ ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಅವರು ಸೂಚನೆ ನೀಡಿದ್ದಾರೆ. ಈ ಬಗ್ಗೆ ಪರಿಶೀಲಿಸುತ್ತೇವೆ’ ಎಂದು ಸೇಠ್‌ ತಿಳಿಸಿದರು.

‘ಪ್ರತಿ 2 ನಿಮಿಷಕ್ಕೊಂದರಂತೆ ರೈಲು ಓಡಿಸಿದ ಬಳಿಕವೂ ಪ್ರಯಾಣಿಕರ ದಟ್ಟಣೆ ಕಡಿಮೆ ಆಗದಿದ್ದರೆ ಮೆಟ್ರೊ ಜಾಲವನ್ನು ಮತ್ತಷ್ಟು ವಿಸ್ತರಿಸಬೇಕಾಗುತ್ತದೆ’ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT