ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ರೊ ಮಾರ್ಗ ದುರಸ್ತಿ ಅಪೂರ್ಣ; ಎಂ.ಜಿ. ರಸ್ತೆ– ಇಂದಿರಾನಗರ ರೈಲು ಸಂಚಾರ ಇಲ್ಲ

ಎಂ.ಜಿ. ರಸ್ತೆ– ಇಂದಿರಾನಗರ ನಡುವೆ ಸಂಚಾರ ಸ್ಥಗಿತ ಮತ್ತೊಂದು ದಿನ ವಿಸ್ತರಣೆ
Last Updated 30 ಡಿಸೆಂಬರ್ 2018, 19:54 IST
ಅಕ್ಷರ ಗಾತ್ರ

ಬೆಂಗಳೂರು: ಟ್ರಿನಿಟಿ ನಿಲ್ದಾಣದ ಬಳಿ ಮೆಟ್ರೊ ಮಾರ್ಗದ ದುರಸ್ತಿ ಪೂರ್ಣಗೊಂಡು ಹೊಸ ವರ್ಷಾಚರಣೆ ಸಂದರ್ಭದಲ್ಲಿ ಎಂ.ಜಿ.ರಸ್ತೆ– ಇಂದಿರಾನಗರ ನಿಲ್ದಾಣದ ನಡುವೆ ಮೆಟ್ರೊ ಸೇವೆ ಪುನಾರಂಭಗೊಳ್ಳಲಿದೆ ಎಂಬ ನಿರೀಕ್ಷೆ ಹುಸಿಯಾಗಿದೆ.

ಎಂ.ಜಿ.ರಸ್ತೆಯಿಂದ ಇಂದಿರಾನಗರದ ನಡುವೆ ಡಿ.28ರಿಂದ ಸ್ಥಗಿತಗೊಂಡಿದ್ದ ಸಂಚಾರ ಸೇವೆ ಡಿ.31ರಂದು ಆರಂಭವಾಗಲಿದೆ ಎಂದು ಈ ಹಿಂದೆ ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ಹೇಳಿತ್ತು. ನಿಗಮವು ಭಾನುವಾರ ನೀಡಿರುವ ಪತ್ರಿಕಾ ಹೇಳಿಕೆ ಪ್ರಕಾರ, ನೇರಳೆ ಮಾರ್ಗದಲ್ಲಿ ಪೂರ್ಣ ಪ್ರಮಾಣದ ಸಂಚಾರಕ್ಕೆ ಜ.1ರವರೆಗೆ ಕಾಯಬೇಕಾಗುತ್ತದೆ.

ಈ ಮಾರ್ಗದಲ್ಲಿ ಮೆಟ್ರೊ ಸೇವೆ ಸ್ಥಗಿತವಾಗಿರುವ ಕಾರಣ ಹೊಸ ವರ್ಷಾಚರಣೆಗೆ ಬೈಯಪ್ಪನಹಳ್ಳಿ ಕಡೆಯಿಂದ ಎಂ.ಜಿ.ರಸ್ತೆಗೆ ಬರುವ ಸಾವಿರಾರು ಮಂದಿಗೆ ಅನನುಕೂಲವಾಗಲಿದೆ. ಅವರು ಬಸ್‌ ಅಥವಾ ಪರ್ಯಾಯ ಸಾರಿಗೆ ವ್ಯವಸ್ಥೆ ಮಾಡಿಕೊಳ್ಳಬೇಕಾಗಿದೆ. ಸಂಚಾರ ದಟ್ಟಣೆ ಹೆಚ್ಚುವ ಸಾಧ್ಯತೆ ಇದೆ.

ಪ್ರತಿ ವರ್ಷ ಬೈಯಪ್ಪನಹಳ್ಳಿ, ವಿವೇಕಾನಂದ ನಗರ ಪ್ರದೇಶದಿಂದ ಸಾವಿರಾರು ಯುವಕರು ನಗರದ ಹೃದಯ ಭಾಗಗಳಿಗೆ ಹೊಸ ವರ್ಷಾಚರಣೆಗಾಗಿ ತೆರಳುತ್ತಾರೆ. ಎಂ.ಜಿ. ರಸ್ತೆ, ಬ್ರಿಗೇಡ್‌ ರಸ್ತೆ ಹೊಸ ವರ್ಷಾಚರಣೆಯ ಪ್ರಧಾನ ಕೇಂದ್ರ. ಎಲ್ಲ ಸಂಭ್ರಮಗಳಿಗೆ ಸೇತುವಾಗಿದ್ದ ಮೆಟ್ರೊ ಈ ಬಾರಿ ಇದೇ ಭಾಗದಲ್ಲಿ ಕೈಕೊಟ್ಟಿರುವುದು ಜನರಿಗೆ ಬೇಸರ ಮೂಡಿಸಿದೆ.

‘ಟ್ರಿನಿಟಿ ನಿಲ್ದಾಣದ ಬಳಿಯ ಪಿಲ್ಲರ್‌ ಸಂಖ್ಯೆ 155ರ ವಯಡಕ್ಟ್‌ ಬಳಿ ಕಾಣಿಸಿಕೊಂಡ ದೋಷವನ್ನು ಸರಿಪಡಿಸುವ ಕಾಮಗಾರಿ ನಡೆಯುತ್ತಿದೆ. ಅದು ಇನ್ನೂ ಪೂರ್ಣಗೊಳ್ಳದ ಕಾರಣ ಡಿ.31ರಿಂದ ಎಂ.ಜಿ.ರಸ್ತೆ– ಇಂದಿರಾನಗರ ನಡುವೆ ಸಂಚಾರ ಆರಂಭಿಸುವುದು ಕಷ್ಟಸಾಧ್ಯ. ಹಳಿಗಳ ಮರುಸ್ಥಾಪನೆ, ಸಿಗ್ನಲ್‌ ವ್ಯವಸ್ಥೆ ಪರೀಕ್ಷೆಗೆ ಒಂದು ದಿನ ಬೇಕಾಗುತ್ತದೆ. ಹಾಗಾಗಿ ಜ. 1ರಿಂದಲೇ ಮೆಟ್ರೊ ಸಂಚಾರ ಮೊದಲಿನ ಸ್ಥಿತಿಗೆ ಬರಲಿದೆ’ ಎಂದು ನಿಗಮ ಹೇಳಿದೆ.

ಎಂ.ಜಿ.ರಸ್ತೆಯಿಂದ ಮೈಸೂರು ರಸ್ತೆ ಹಾಗೂ ಇಂದಿರಾನಗರದಿಂದ ಬೈಯಪ್ಪನಹಳ್ಳಿ ನಿಲ್ದಾಣದವರೆಗೆ ರೈಲುಗಳು ಎಂದಿನಂತೆ ಸಂಚರಿಸಲಿವೆ.

1.30ರವರೆಗೆ ಮೆಟ್ರೊ ಸಂಚಾರ

ಹೊಸ ವರ್ಷಾಚರಣೆಯ ಸಂಭ್ರಮ ಆಚರಿಸುವವರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಸೋಮವಾರ ರಾತ್ರಿ (ಡಿ.31) ಮೆಟ್ರೊ ಸಂಚಾರದ ಅವಧಿ ವಿಸ್ತರಿಸಲಾಗಿದೆ. ಸೋಮವಾರ ತಡರಾತ್ರಿ 1.30ರವರೆಗೆ ರೈಲುಗಳು ಸಂಚರಿಸಲಿವೆ. ರಾತ್ರಿ 2 ಗಂಟೆಗೆ ಮೆಜೆಸ್ಟಿಕ್‌ ನಿಲ್ದಾಣದಿಂದ ಕೊನೆಯ ರೈಲುಗಳು (ನಾಲ್ಕೂ ದಿಕ್ಕುಗಳಿಗೂ) ಹೊರಡಲಿವೆ. ವಿಸ್ತರಿಸಿದ ಅವಧಿಯಲ್ಲಿ ಪ್ರತಿ 15 ನಿಮಿಷಕ್ಕೊಂದು ರೈಲು ಸಂಚರಿಸಲಿದೆ.

ವಿಸ್ತರಿಸಿದ ಅವಧಿಯಲ್ಲಿ ಪ್ರಯಾಣಿಕರು ಎಂ.ಜಿ.ರಸ್ತೆ ಅಥವಾ ಕಬ್ಬನ್‌ ಪಾರ್ಕ್‌ ನಿಲ್ದಾಣದಿಂದ ಬೇರೆ ನಿಲ್ದಾಣಗಳಿಗೆ ಪ್ರಯಾಣಿಸುವವರು ₹ 50 ಪಾವತಿಸಿ ಕಾಗದದ ಟಿಕೆಟ್‌ ಖರೀದಿಸಬೇಕಾಗುತ್ತದೆ. ಈ ಟಿಕೆಟ್‌ ಡಿ. 31ರ ರಾತ್ರಿ 8ರಿಂದ ಎಲ್ಲ ನಿಲ್ದಾಣಗಳಲ್ಲೂ ಲಭ್ಯ. ವಿಸ್ತರಿಸಿದ ಅವಧಿಯಲ್ಲಿ ಟೋಕನ್‌ ವಿತರಿಸಲಾಗುವುದಿಲ್ಲ. ಸ್ಮಾರ್ಟ್‌ ಕಾರ್ಡ್‌ ಹೊಂದಿರುವ ಪ್ರಯಾಣಿಕರು ಎಂದಿನಂತೆ ಕಾರ್ಡ್‌ ಬಳಸಿ ರೈಲುಗಳಲ್ಲಿ ಪ್ರಯಾಣಿಸಬಹುದು ಎಂದು ನಿಗಮ ಹೇಳಿದೆ.

ಉಚಿತ ಬಸ್‌ ಮುಂದುವರಿಕೆ

ಸಂಚಾರ ವ್ಯತ್ಯಯದ ಅವಧಿಯಲ್ಲಿ ಕಬ್ಬನ್‌ ಪಾರ್ಕ್‌–ಬೈಯಪ್ಪನಹಳ್ಳಿ ನಿಲ್ದಾಣಗಳ ನಡುವೆ ಉಚಿತ ಬಸ್‌ ಸಂಚಾರವನ್ನು ನಿಗಮ ವ್ಯವಸ್ಥೆ ಮಾಡಿದೆ.

ಬಸ್‌ಗಳ ವಿವರ: ‘ಬಿ’ ಎಂದು ಬರೆಯಲಾದ ಬಸ್‌ಗಳು ಬೈಯಪ್ಪನಹಳ್ಳಿ– ಕಬ್ಬನ್‌ ಪಾರ್ಕ್‌ ನಡುವೆ ನೇರ ಸಂಚರಿಸಲಿವೆ. ನಡುವೆ ನಿಲುಗಡೆ ಇರುವುದಿಲ್ಲ. ‘ಐ’ ಎಂದು ಬರೆಯಲಾದ ಬಸ್‌ಗಳು ಇಂದಿರಾನಗರದಿಂದ ಕಬ್ಬನ್‌ ಪಾರ್ಕ್‌ ನಡುವೆ ತಡೆರಹಿತವಾಗಿ ಸಂಚರಿಸಲಿವೆ. ‘ಎ’ ಎಂದು ಬರೆಯಲಾದ ಬಸ್‌ಗಳು ಕಬ್ಬನ್‌ ಪಾರ್ಕ್‌ನಿಂದ ಬೈಯಪ್ಪನಹಳ್ಳಿ ನಿಲ್ದಾಣದವರೆಗೆ ಸಿಗುವ ಎಲ್ಲ ಮೆಟ್ರೊ ನಿಲ್ದಾಣಗಳಲ್ಲಿ ನಿಂತು ಸಂಚರಿಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT