ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ರೊ ಸೇತುವೆ ಬಿರುಕು; ಕಾಮಗಾರಿ ಚುರುಕು

ವಯಾಡಕ್ಟ್‌ ದುರಸ್ತಿಯ ಸಿದ್ಧತೆಗೆ ಬೇಕು 6 ದಿನ: ರಾತ್ರಿ ವೇಳೆ ನಡೆಯಲಿದೆ ಕೆಲಸ: ವ್ಯವಸ್ಥಾಪಕ ಅಜಯ್‌ ಸೇಠ್‌
Last Updated 13 ಡಿಸೆಂಬರ್ 2018, 19:32 IST
ಅಕ್ಷರ ಗಾತ್ರ

ಬೆಂಗಳೂರು:ನಗರದ ಟ್ರಿನಿಟಿ ವೃತ್ತದ ಸಮೀಪ ಮೆಟ್ರೊ ಸೇತುವೆಯ ವಯಾಡಕ್ಟ್‌ನ ದುರ್ಬಲಗೊಂಡ ಕಾಂಕ್ರಿಟ್‌ ಪ್ರದೇಶ ಸರಿಪಡಿಸುವ ಕಾಮಗಾರಿಯ ಸಿದ್ಧತೆಗೆ 5ರಿಂದ 6 ದಿನ ಬೇಕಾಗುತ್ತದೆ.

‘ದುರಸ್ತಿ ಕಾಮಗಾರಿಗೆ 2 ದಿನ ಸಾಕು. ಆದರೆ, ಸಿದ್ಧತೆಗೆ 5ರಿಂದ 6 ದಿನ ಬೇಕು. ಈಗಾಗಲೇ ಬೀಮ್‌ಗಳಿಗೆ ಕಬ್ಬಿಣದ ಕಂಬಿಗಳ ಆಧಾರ ಕೊಡುವ ಕೆಲಸ ಆರಂಭವಾಗಿದೆ. ಮುಂದೆ ಹೇಗೆ ಕೆಲಸ ನಿರ್ವಹಿಸಬೇಕು ಎಂಬುದನ್ನು ತಂತ್ರಜ್ಞರು ನಿರ್ಧರಿಸಲಿದ್ದಾರೆ’ ಎಂದು ಮೆಟ್ರೊ ನಿಗಮದ ವ್ಯವಸ್ಥಾಪಕ ನಿರ್ದೆಶಕ ಅಜಯ್‌ ಸೇಠ್‌ ವಿವರಿಸಿದರು.

ಏನಾಗಿದೆ?

ಪಿಲ್ಲರ್‌ ಮೇಲೆ ಕೂರಿಸಲಾದ ವಯಾಡಕ್ಟ್‌ನ ಒಂದು ಪಾರ್ಶ್ವದಲ್ಲಿ ಕಾಂಕ್ರಿಟ್‌ ದುರ್ಬಲಗೊಂಡಿದೆ. ಪರಿಣಾಮವಾಗಿ ವಯಾಡಕ್ಟ್‌ ಸ್ವಲ್ಪ ಕೆಳಭಾಗಕ್ಕೆ ಜರುಗಿ ಕ್ರಾಸ್‌ಬೇರಿಂಗ್‌ ಮೇಲೆ ಸೇರಿದೆ. ಒಟ್ಟಾರೆ ಕಾಮಗಾರಿ ಪೂರ್ಣಗೊಳ್ಳಲು 10 ದಿನ ಬೇಕಾಗಬಹುದು ಎಂದು ನಿಗಮದ ಅಧಿಕಾರಿಗಳು ತಿಳಿಸಿದರು.

‘ಸಿಮೆಂಟ್‌ ದುರ್ಬಲಗೊಂಡ ಪ್ರದೇಶ ಎಷ್ಟು ಎಂಬುದನ್ನು ಅಲ್ಟ್ರಾಸೋನಿಕ್‌ (ಶಬ್ದಾತೀತ ಕಿರಣಗಳನ್ನು ಹಾಯಿಸಿ) ಪರೀಕ್ಷೆ ನಡೆಸಲಾಗುತ್ತದೆ. ಇದರ ಮೂಲಕ ಎಷ್ಟು ಪ್ರದೇಶದಲ್ಲಿ ಸಮಸ್ಯೆ ಇದೆ ಎಂದು ತಿಳಿದುಕೊಳ್ಳಬಹುದು. ಬಳಿಕವಷ್ಟೇ ಕಾಮಗಾರಿ ನಡೆಸಬಹುದು’ ಎಂದು ಸೇಠ್‌ ಹೇಳಿದರು.

ವಯಾಡಕ್ಟ್‌ಗಳನ್ನು ಸಿದ್ಧಪಡಿಸುವ ಅಚ್ಚು ಪ್ರದೇಶಗಳಲ್ಲೇ (ಕಾಸ್ಟಿಂಗ್‌ ಯಾರ್ಡ್‌) ಅಲ್ಟ್ರಾಸೋನಿಕ್‌ ಪರೀಕ್ಷೆ ನಡೆಸುವುದಿಲ್ಲವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸೇಠ್‌, ‘ಈ ಡಕ್ಟ್‌ಗಳನ್ನು ಅಂದು ಕಾಮಗಾರಿ ಸ್ಥಳದಲ್ಲೇ ಸಿದ್ಧಪಡಿಸಲಾಗಿದೆ. ಈಗ ಕಾಸ್ಟಿಂಗ್‌ ಯಾರ್ಡ್‌ಗಳಲ್ಲೇ ಸಿದ್ಧಪಡಿಸಲಾಗುತ್ತಿದೆ. ಅಲ್ಲಿ ಪ್ರತಿ ಡಕ್ಟನ್ನು ಅಲ್ಟ್ರಾಸೋನಿಕ್‌ ಪರೀಕ್ಷೆಗೊಳಪಡಿಸಿಯೇ ತರಲಾಗುತ್ತದೆ’ ಎಂದು ಸ್ಪಷ್ಟಪಡಿಸಿದರು.

‘ವಯಾಡಕ್ಟ್‌ಗಳನ್ನು ಮೇಲೆತ್ತಲು 125 ಟನ್‌ ಭಾರ ನಿಭಾಯಿಸುವ ಹೈಡ್ರಾಲಿಕ್‌ ಜಾಕ್‌ಗಳನ್ನು ಅಳವಡಿಸಲಾಗುತ್ತಿದೆ. ವಯಾಡಕ್ಟ್‌ನ ಭಾರ ಈ ಜಾಕ್‌ಗಳಿಗೆ ವರ್ಗಾವಣೆಯಾಗುತ್ತದೆ. ಇಲ್ಲಿ ಕಾಮಗಾರಿಗೆ ಬೇಕಾದಷ್ಟು ಅವಕಾಶ ಕಲ್ಪಿಸಲಾಗುತ್ತದೆ. ಬಳಿಕ ಅಲ್ಟ್ರಾಸೋನಿಕ್‌ ಪರೀಕ್ಷೆ ನಡೆಸಿ ದುರ್ಬಲಗೊಂಡ ಪ್ರಮಾಣವನ್ನು ತಿಳಿದು ದುರಸ್ತಿ ಕಾರ್ಯ ಮುಂದುವರಿಯಲಿದೆ’ ನಿಗಮದ ಮೂಲಗಳು ಹೇಳಿವೆ.

ಕಾಮಗಾರಿ ಹೇಗೆ?

‘ದುರ್ಬಲಗೊಂಡ ಪ್ರದೇಶಕ್ಕೆ ವೇಗವಾಗಿ ಕ್ಯೂರಿಂಗ್‌ ಆಗುವ ಸಿಮೆಂಟ್‌ ಬಳಸಲಾಗುತ್ತದೆ. ಸಿಮೆಂಟ್‌ ಪೂರ್ಣ ಪ್ರಮಾಣದಲ್ಲಿ ಒಣಗಿ ಗಟ್ಟಿಯಾದ ಬಳಿಕ ಮತ್ತೊಮ್ಮೆ ಪರೀಕ್ಷಿಸಲಾಗುತ್ತದೆ. ಗುಣಮಟ್ಟ, ಸುರಕ್ಷತೆ ಖಾತ್ರಿಯಾದ ಬಳಿಕ ಆಧಾರದ ಕಂಬಿಗಳನ್ನು ತೆರವು ಮಾಡಲಾಗುತ್ತದೆ. ಈ ಎಲ್ಲ ಕಾಮಗಾರಿಗಳನ್ನು ಬಹುತೇಕ ರಾತ್ರಿ ವೇಳೆ ನಡೆಸಲಾಗುತ್ತದೆ’ ಎಂದು ನಿಗಮದ ತಜ್ಞರು ಹೇಳಿದರು.

ರೈಲು ಸಂಚಾರ ಯಥಾಸ್ಥಿತಿಗೆ

ಶುಕ್ರವಾರದಿಂದ ರೈಲುಗಳು ಯಥಾಪ್ರಕಾರ ಸಂಚರಿಸಲಿವೆ. ಕಾಮಗಾರಿ ಪ್ರದೇಶದಲ್ಲಿ ಮಾತ್ರ ರೈಲುಗಳ ವೇಗ ತಗ್ಗಿಸಲಾಗುತ್ತದೆ ಎಂದು ಸೇಠ್‌ ಹೇಳಿದರು.

‘ಗುರುವಾರ ಬೆಳಿಗ್ಗೆ 5ರಿಂದ 7ರ ವರೆಗೆ ರೈಲುಗಳು ಮೈಸೂರು ರಸ್ತೆಯಿಂದ ಮಹಾತ್ಮ ಗಾಂಧಿ ರಸ್ತೆವರೆಗೆ ಮಾತ್ರ ಸಂಚರಿಸಿದ್ದವು. ಬೆಳಿಗ್ಗೆ 7 ಗಂಟೆಯ ಬಳಿಕ ಮೈಸೂರು ರಸ್ತೆಯಿಂದ ಬೈಯಪ್ಪನಹಳ್ಳಿಯವರೆಗೆ ರೈಲು ಸಂಚಾರ ಆರಂಭವಾಗಿದೆ’ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮ ತಿಳಿಸಿದೆ.

ಪ್ರಯಾಣಿಕರ ಸಂಖ್ಯೆಯಲ್ಲಿ ವ್ಯತ್ಯಯವಿಲ್ಲ

ಪ್ರತಿದಿನ ಸರಾಸರಿ 3.90 ಲಕ್ಷ ಜನ ಸಂಚರಿಸುತ್ತಾರೆ. ಬುಧವಾರ 3.88 ಲಕ್ಷ ಜನ ಮೆಟ್ರೊ ಮೂಲಕ ಪ್ರಯಾಣಿಸಿದ್ದಾರೆ. ಪ್ರಯಾಣಿಕರ ಸಂಖ್ಯೆಯಲ್ಲಿ ಕುಸಿತ ಆಗಿಲ್ಲ ಎಂದು ಸೇಠ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT