ಕೈಕೊಟ್ಟ ಮೆಟ್ರೊ: ಪ್ರಯಾಣಿಕರು ಗಲಿಬಿಲಿ

ಸೋಮವಾರ, ಮಾರ್ಚ್ 25, 2019
26 °C
ಹಸಿರು ಮಾರ್ಗದಲ್ಲಿ ಮತ್ತೆ ತಾಂತ್ರಿಕ ದೋಷ: ಮಧ್ಯಾಹ್ನದ ಮೂರು ಟ್ರಿಪ್‌ಗಳು ರದ್ದು

ಕೈಕೊಟ್ಟ ಮೆಟ್ರೊ: ಪ್ರಯಾಣಿಕರು ಗಲಿಬಿಲಿ

Published:
Updated:

ಬೆಂಗಳೂರು: ಚಿಕ್ಕಪೇಟೆ ಮೆಟ್ರೊ ನಿಲ್ದಾಣದಲ್ಲಿ ತಾಂತ್ರಿಕ ದೋಷ ಕಂಡುಬಂದ ಕಾರಣ ‘ನಮ್ಮ ಮೆಟ್ರೊ’ ರೈಲು ಸೇವೆಯಲ್ಲಿ ಶುಕ್ರವಾರ ಒಂದು ಗಂಟೆ ವ್ಯತ್ಯಯ ಉಂಟಾಯಿತು. ಇದರಿಂದ ಪ್ರಯಾಣಿಕರು ತೊಂದರೆ ಅನುಭವಿಸಬೇಕಾಯಿತು.

ಮಧ್ಯಾಹ್ನ 2.25 ರಿಂದ 3.25ರ ನಡುವೆ ಹಸಿರು ಮಾರ್ಗದದಲ್ಲಿ ಮೂರು ಟ್ರಿಪ್‌ಗಳನ್ನು ಮೆಟ್ರೊ ರೈಲುಗಳ ಸಂಚಾರವನ್ನು ರದ್ದುಪಡಿಸಲಾಯಿತು. ಹೀಗಾಗಿ ಪ್ರಯಾಣಿಕರು ತೊಂದರೆ ಅನುಭವಿಸಿದರು. 20ರಿಂದ 30 ನಿಮಿಷಗಳ ಕಾಲ ನಾಗಸಂದ್ರದಿಂದ ಯಲಚೇನಹಳ್ಳಿ ಹಸಿರು ಮಾರ್ಗದ ರೈಲುಗಳ ಸಂಚಾರ ನಿಯಂತ್ರಿಸಲಾಯಿತು.

ಸಂಚಾರ ವ್ಯತ್ಯಯವಾಗಿದ್ದರಿಂದ ಅತ್ತ ರಾಜಾಜಿನಗರ, ಶ್ರೀರಾಂಪುರ, ಮಂತ್ರಿಸ್ಕ್ವೇರ್ (ಸಂಪಿಗೆ ರಸ್ತೆ), ಇತ್ತ ನ್ಯಾಷನಲ್‌ ಕಾಲೇಜು, ಕೆ.ಆರ್‌. ಮಾರುಕಟ್ಟೆ ನಿಲ್ದಾಣಗಳಲ್ಲಿ ರೈಲುಗಳು ಸುಮಾರು 20 ನಿಮಿಷಗಳವರೆಗೆ ನಿಂತು ಮತ್ತೆ ಮುಂದಕ್ಕೆ ಸಾಗಿದವು. ರೈಲುಗಳು ಅಲ್ಲಲ್ಲಿ ನಿಂತು ನಿಂತು ಹೋಗುತ್ತಿದ್ದುದರಿಂದ ಪ್ರಯಾಣಿಕರು ಗಲಿಬಿಲಿಗೊಳಗಾದರು.

ತಾಂತ್ರಿಕ ದೋಷ ಕಂಡು ಬಂದದ್ದರಿಂದ ನಾಡಪ್ರಭು ಕೆಂಪೇಗೌಡ ಮೆಟ್ರೊ ನಿಲ್ದಾಣ (ಮೆಜಸ್ಟಿಕ್‌), ಮಂತ್ರಿಸ್ಕ್ವೇರ್ (ಸಂಪಿಗೆ ರಸ್ತೆ) ಮತ್ತು ಚಿಕ್ಕಪೇಟೆ ಮೆಟ್ರೊ ನಿಲ್ದಾಣಗಳಲ್ಲಿ ಪ್ರಯಾಣಿಕರನ್ನು ಮೆಟ್ರೊ ರೈಲುಗಳಿಂದ ಇಳಿಸಲಾಯಿತು. ದೋಷವನ್ನು ಸರಿಪಡಿಸಿದ ಬಳಿಕ 3.25ರಿಂದ ಎಂದಿನಂತೆ ರೈಲುಗಳು ಸಂಚರಿಸಿದವು.

ಹಸಿರು ಮಾರ್ಗದಿಂದ ಬಂದಿಳಿದು ನೇರಳೆ ಮಾರ್ಗದಲ್ಲಿ ಪ್ರಯಾಣ ಮುಂದುವರಿಸಬೇಕಾದ ಪ್ರಯಾಣಿಕರು ಮೆಜೆಸ್ಟಿಕ್‌ನ ನಾಡಪ್ರಭು ಕೆಂಪೇಗೌಡ ಮೆಟ್ರೊ ನಿಲ್ದಾಣದ ಪ್ಲ್ಯಾಟ್‌ಫಾರ್ಮ್‌ ಪ್ರವೇಶಿಸುವುದಕ್ಕೂ ಹರಸಾಹಸ ಪಡಬೇಕಾಯಿತು. ಇಲ್ಲಿನ 1ನೇ ಪ್ಲ್ಯಾಟ್‌ಫಾರ್ಮ್‌ ಮಧ್ಯಾಹ್ನ 3.30ರ ಸುಮಾರಿಗೆ ಪ್ರಯಾಣಿಕರಿಂದ ಕಿಕ್ಕಿರಿದು ತುಂಬಿತ್ತು.

15 ನಿಮಿಷದ ಬದಲು 1 ಗಂಟೆ: ‘ಮಂತ್ರಿಸ್ಕ್ವೇರ್‌ನಿಂದ  ಎಂ.ಜಿ. ರಸ್ತೆಗೆ ಬರಲು ಸಾಮಾನ್ಯವಾಗಿ 15 ನಿಮಿಷ ಸಾಕು. ಆದರೆ, ಇಂದು ರೈಲು ನಿಂತು ನಿಂತು ಸಾಗಿದ್ದರಿಂದ 1 ಗಂಟೆ ಬೇಕಾಯಿತು. ಇದೇ ಕಾರಣದಿಂದ ನಾನು ಕಚೇರಿ ತಲುಪುವಾಗಲೂ ತಡವಾಯಿತು’ ಎಂದು ಮೆಟ್ರೊ ಪ್ರಯಾಣಿಕರಾದ ಡಿ.ಮನಸ್ವಿನಿ ಹೇಳಿದರು. 

ಮತ್ತೊಂದು 6 ಬೋಗಿ ರೈಲು ಸಂಚಾರ

ಪ್ರಯಾಣಿಕರಿಗೆ ‍ಸೌಲಭ್ಯ ಕಲ್ಪಿಸುವ ಸಲುವಾಗಿ ನೇರಳೆ ಮಾರ್ಗದಲ್ಲಿ (ಪೂರ್ವ–ಪಶ್ಚಿಮ ಕಾರಿಡಾರ್‌) ಆರು ಬೋಗಿಗಳ ಮತ್ತೊಂದು ಮೆಟ್ರೊ ರೈಲು ಸಂಚಾರ ಆರಂಭಿಸಿತು.

ಮತ್ತೆ ಈ ತಿಂಗಳಿನಲ್ಲಿಯೇ ನೇರಳೆ ಮಾರ್ಗದಲ್ಲಿ 6 ಬೋಗಿಗಳ ಎರಡು ರೈಲನ್ನು ಮತ್ತು ಏಪ್ರಿಲ್‌ ಬಳಿಕ 6 ಬೋಗಿಗಳ 3 ರಿಂದ 4 ರೈಲುಗಳನ್ನು ಓಡಿಸಲಾಗುತ್ತದೆ. ನೇರಳೆ ಮಾರ್ಗದಲ್ಲಿ ಆರು ಬೋಗಿ ರೈಲು ಪರಿಚಯಿಸಿದ ನಂತರ ಹಸಿರು ಮಾರ್ಗದಲ್ಲಿ (ಉತ್ತರ–ದಕ್ಷಿಣ ಕಾರಿಡಾರ್‌) ಕಾರ್ಯಾಚರಣೆಗೆ ತರಲಾಗುತ್ತದೆ. ನೇರಳೆ ಮಾರ್ಗದಲ್ಲಿ ಆರು ಬೋಗಿಗಳ 5 ರೈಲುಗಳನ್ನು ಮತ್ತು ಹಸಿರು ಮಾರ್ಗದಲ್ಲಿ ಆರು ಬೋಗಿಗಳ ಒಂದು ರೈಲನ್ನು ಈಗಾಗಲೇ ಪರಿಚಯಿಸಲಾಗಿದೆ.

Tags: 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !