ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ₹ 50 ಮೆಟ್ರೊ ನಿಗಮದ ಬಳಿ ಏಕಿರಬೇಕು?

ಸ್ಮಾರ್ಟ್‌ ಕಾರ್ಡ್‌ನಲ್ಲಿ ಕನಿಷ್ಠ ಮೊತ್ತ ನಿಗದಿಗೆ ಅಧ್ಯಾಪಕರ ಆಕ್ಷೇಪ
Last Updated 3 ಏಪ್ರಿಲ್ 2019, 19:41 IST
ಅಕ್ಷರ ಗಾತ್ರ

ಬೆಂಗಳೂರು: ‘ನಾವು ಪದವಿಪೂರ್ವ ಪರೀಕ್ಷೆ ಉತ್ತರ ಪತ್ರಿಕೆಗಳ ಮೌಲ್ಯಮಾಪನದ ಸಲುವಾಗಿ ವರ್ಷಕ್ಕೊಮ್ಮೆ ಬೆಂಗಳೂರಿಗೆ ಬರುತ್ತೇವೆ. ಮೌಲ್ಯಮಾಪನ ಕೇಂದ್ರಕ್ಕೆ ಹೋಗಿಬರಲು ಮೆಟ್ರೊ ಬಳಸುತ್ತೇವೆ. ನಮ್ಮ ₹ 50 ರೂಪಾಯಿ ವರ್ಷಪೂರ್ತಿ ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ಬಳಿ ಉಳಿಯುತ್ತದೆ. ಇದು ನ್ಯಾಯವೇ?’

ಮೌಲ್ಯಮಾಪನದ ಸಲುವಾಗಿ ರಾಜ್ಯದ ಬೇರೆ ಬೇರೆ ಪ್ರದೇಶಗಳಿಂದ ನಗರಕ್ಕೆ ಬಂದಿರುವ ಪದವಿಪೂರ್ವ ಕಾಲೇಜು ಉಪನ್ಯಾಸಕರ ಪ್ರಶ್ನೆ ಇದು.

‘ನಾನು ಅತ್ತಿಗುಪ್ಪೆಯ ಆರ್‌ಎನ್‌ಎಸ್‌ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಮೌಲ್ಯಮಾಪನ ಕಾರ್ಯಕ್ಕೆ ಹಾಜರಾಗುತ್ತಿದ್ದೇನೆ. ಮೆಜೆಸ್ಟಿಕ್‌ ಬಳಿ ವಸತಿಗೃಹವೊಂದರಲ್ಲಿ ಉಳಿದುಕೊಂಡಿರುವ ನಾನು ಅತ್ತಿಗುಪ್ಪೆವರೆಗೆ ಹೋಗಿಬರಲು ನಮ್ಮ ಮೆಟ್ರೊ ಬಳಸುತ್ತೇನೆ. ಓಡಾಟಕ್ಕೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಸ್ಮಾರ್ಟ್‌ ಕಾರ್ಡ್‌ ಖರೀದಿಸಿದ್ದೆ. ಅದಾದ ಎರಡು ದಿನಗಳ ಬಳಿಕ ಬಿಎಂಆರ್‌ಸಿಎಲ್‌ನವರು ಸ್ಮಾರ್ಟ್‌ ಕಾರ್ಡ್‌ನಲ್ಲಿ ₹ 50 ಕನಿಷ್ಠ ಮೊತ್ತ ಇಲ್ಲದಿದ್ದರೆ ಸಂಚಾರಕ್ಕೆ ಅವಕಾಶ ಕಲ್ಪಿಸುತ್ತಿಲ್ಲ’ ಎಂದು ಉಪನ್ಯಾಸಕಿಯೊಬ್ಬರು ‘ಪ್ರಜಾವಾಣಿ’ ಬಳಿ ಅಳಲು ತೋಡಿಕೊಂಡರು.

‘ಇದೇ 4ರಂದು ಮೌಲ್ಯಮಾಪನ ಕಾರ್ಯ ಮುಗಿಯುತ್ತದೆ. ಬಳಿಕ ನಾವು ಊರಿಗೆ ಮರಳಲಿದ್ದೇವೆ. ಮತ್ತೆ ನಾವು ಬೆಂಗಳೂರಿಗೆ ಬರುವುದು ಮುಂದಿನವರ್ಷ. ಅಲ್ಲಿಯವರೆಗೆ ನನ್ನ ಸ್ಮಾರ್ಟ್‌ಕಾರ್ಡ್‌ನಲ್ಲಿರುವ ₹ 50 ಬಿಎಂಆರ್‌ಸಿಎಲ್‌ ಖಾತೆಯಲ್ಲಿರುತ್ತದೆ. ನನ್ನ ಹಣ ಸುಮ್ಮನೆ ನಿಗಮದ ಖಾತೆಯಲ್ಲಿ ಏಕಿರಬೇಕು? ₹ 50 ಸಣ್ಣ ಮೊತ್ತವಾಗಿ ಕಾಣಬಹುದು. ಸಾವಿರಾರು ಉಪನ್ಯಾಸಕರು ನನ್ನಂತೆಯೇ ಮೆಟ್ರೊ ಬಳಸುತ್ತಾರೆ. ಅವರೆಲ್ಲರ ದುಡ್ಡು ಸೇರಿದರೆ ಅದೊಂದು ದೊಡ್ಡ ಮೊತ್ತವಾಗುವುದಿಲ್ಲವೇ’ ಎಂದು ಪ್ರಶ್ನಿಸಿದರು.

ಹಣ ಮರಳಿಸಿ: ನಮ್ಮ ಸ್ಮಾರ್ಟ್‌ ಕಾರ್ಡ್‌ ಹಿಂದಿರುಗಿಸುವುದಕ್ಕೆ ನಿಗಮವು ಅವಕಾಶ ಕಲ್ಪಿಸಬೇಕು. ಹಾಗೂ ಅಂತಹವರಿಗೆ ಆ ಕಾರ್ಡ್‌ನಲ್ಲಿ ಬಳಕೆಯಾಗದೆ ಉಳಿಕೆಯಾಗಿರುವ ಮೊತ್ತವನ್ನು ಮರಳಿಸೇಕು ಎಂದು ಉಪನ್ಯಾಸಕಿ ವಿನಯಾ ಒತ್ತಾಯಿಸಿದರು.

‘ಸ್ಮಾರ್ಟ್‌ಕಾರ್ಡ್‌ ಅನ್ನು ಸತತ ಒಂದು ವರ್ಷ ಬಳಸದಿದ್ದರೆ ಅದು ಅನೂರ್ಜಿತಗೊಳ್ಳುತ್ತದೆ. ಇದರಿಂದ ಪ್ರಯಾಣಿಕರ ಹಣ ವೃಥಾ ಬಿಎಂಆರ್‌ಸಿಎಲ್‌ ಪಾಲಾಗುವುದಿಲ್ಲವೇ’ ಎಂದು ಮತ್ತೊಬ್ಬರು ಉಪನ್ಯಾಸಕಿ ಪ್ರಶ್ನಿಸಿದರು.

‘ಸ್ಮಾರ್ಟ್‌ಕಾರ್ಡ್‌ನಲ್ಲಿ ಕನಿಷ್ಠ ₹ 50 ಹಣವನ್ನು ಹೊಂದಿರಲೇಬೇಕು ಎಂಬ ನಿಯಮವನ್ನು ಕೈಬಿಡಬೇಕು. ಖಂಡಿತಾ ಇದು ಪ್ರಯಾಣಿಕಸ್ನೇಹಿ ನಡೆಯಲ್ಲ. ಪ್ರಯಾಣಿಕರ ಪ್ರತಿಯೊಂದು ಪೈಸೆಯು ಅವರು ಬೆವರು ಸುರಿಸಿ ಸಂಪಾದಿಸಿದ್ದು’ ಎಂದು ಹೇಳಿದರು ಉಪನ್ಯಾಸಕಿ ಸೀತಾ.

‘ಹಣ ಮರಳಿಸಲು ಅವಕಾಶ ಇಲ್ಲ’

‘ಮೆಟ್ರೊ ಸ್ಮಾರ್ಟ್‌ಕಾರ್ಡ್‌ಗೆ ಗ್ರಾಹಕರು ಒಮ್ಮೆ ತುಂಬಿಸಿದ ಹಣವನ್ನು ಮರಳಿಸುವುದಕ್ಕೆ ಅವಕಾಶ ಇಲ್ಲ. ಹಾಗಾಗಿ ನಾವದನ್ನು ಮರಳಿಸುವುದೂ ಇಲ್ಲ’ ಎಂದು ಬಿಎಂಆರ್‌ಸಿಎಲ್‌ನ ಕಾರ್ಯಾಚರಣೆ ಮತ್ತು ನಿರ್ವಹಣೆ ವಿಭಾಗದ ಪ್ರಧಾನ ವ್ಯವಸ್ಥಾಪಕ ಶಂಕರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸ್ಮಾರ್ಟ್‌ಕಾರ್ಡ್‌ನಲ್ಲಿ ಕನಿಷ್ಠ ₹ 50 ಇಲ್ಲದಿದ್ದರೆ ಪ್ರಯಾಣಕ್ಕೆ ಅವಕಾಶ ಕಲ್ಪಿಸದ ಕ್ರಮವನ್ನು ಬೆರಳೆಣಿಕೆ ಮಂದಿಯಷ್ಟೇ ವಿರೋಧಿಸಿದ್ದಾರೆ. ಬಹುತೇಕ ಪ್ರಯಾಣಿಕರು ಇದನ್ನು ಸ್ವಾಗತಿಸಿದ್ದಾರೆ. ಹಾಗಾಗಿ ನಾವು ಇದನ್ನು ಕೈಬಿಡುವ ಪ್ರಶ್ನೆಯೇ ಇಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

‘ವರ್ಷಕ್ಕೊಮ್ಮೆ ಮೌಲ್ಯಮಾಪನ ನಡೆಸಲು ನಗರಕ್ಕೆ ಬರುವ ಉಪನ್ಯಾಸಕರು ಮುಂದಿನ ವರ್ಷವೂ ಅದೇ ಸ್ಮಾರ್ಟ್‌ಕಾರ್ಡ್‌ ಬಳಸಬಹುದು. ಸತತ ಒಂದು ವರ್ಷ ಸ್ಮಾರ್ಟ್‌ಕಾರ್ಡ್‌ ಬಳಸದಿದ್ದರೆ ಅದು ನಿರುಪಯುಕ್ತವಾಗುವುದಿಲ್ಲ. ಮತ್ತೆ ಹಣ ತುಂಬಿಸುವ ಮೂಲಕ ಅದನ್ನು ಮತ್ತೆ ಬಳಸುವುದಕ್ಕೆ ಅವಕಾಶ ಇದೆ’ ಎಂದು ಅವರು ವಿವರಿಸಿದರು.

**

ಸ್ಮಾರ್ಟ್‌ಕಾರ್ಡ್‌ನಲ್ಲಿರುವ ಮೊತ್ತಕ್ಕಿಂತ ಹೆಚ್ಚು ದೂರ ಪ್ರಯಾಣಿಸುವವರು ಗೇಟ್‌ ಬಳಿ ಕಾರ್ಡ್‌ಗೆ ಹಣ ತುಂಬಿಸಿಕೊಳ್ಳಲು ನಿಲ್ಲಬೇಕಾಗುತ್ತದೆ. ಇದರಿಂದ ಇತರ ಪ್ರಯಾಣಿಕರಿಗೆ ಅನನುಕೂಲವಾಗುತ್ತದೆ. ಹಾಗಾಗಿ ಕನಿಷ್ಠ ಮೊತ್ತವನ್ನು ನಿಗದಿಪಡಿಸಿದ ಕ್ರಮ ಸರಿಯಾಗಿಯೇ ಇದೆ
- ಶಂಕರ್‌, ಪ್ರಧಾನ ವ್ಯವಸ್ಥಾಪಕ, ಕಾರ್ಯಾಚರಣೆ ಮತ್ತು ನಿರ್ವಹಣೆ ವಿಭಾಗ, ಬಿಎಂಆರ್‌ಸಿಎಲ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT