ಗೌರವ ಧನ: ಕೇಂದ್ರ ಸರ್ಕಾರದಿಂದ ಅನ್ಯಾಯ ಆರೋಪ, ಬಿಸಿಯೂಟ ನೌಕರರ ಪ್ರತಿಭಟನೆ

7

ಗೌರವ ಧನ: ಕೇಂದ್ರ ಸರ್ಕಾರದಿಂದ ಅನ್ಯಾಯ ಆರೋಪ, ಬಿಸಿಯೂಟ ನೌಕರರ ಪ್ರತಿಭಟನೆ

Published:
Updated:
Prajavani

ಹುಬ್ಬಳ್ಳಿ: ಗೌರವ ಧನ ಹೆಚ್ಚಳ ಮಾಡದ ಕೇಂದ್ರ ಸರ್ಕಾರ ಅನ್ಯಾಯ ಮಾಡಿದೆ ಎಂದು ಆರೋಪಿಸಿ ಸಿಐಟಿಯು ನೇತೃತ್ವದಲ್ಲಿ ಬಿಸಿಯೂಟ ನೌಕರರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

ಬಜೆಟ್‌ನಲ್ಲಿ ಗೌರವ ಧನ ಹೆಚ್ಚಳದ ಘೋಷಣೆ ಆಗಬಹುದೆಂಬ ನಿರೀಕ್ಷೆ ಹುಸಿಯಾಗಿದೆ. ಅಲ್ಲದೆ ಯಾವುದೇ ಸೌಲಭ್ಯ ಘೋಷಣೆ ಮಾಡದ ಸರ್ಕಾರ ಅನ್ಯಾಯ ಮಾಡಿದೆ. ಈ ಕೂಡಲೇ ತಪ್ಪನ್ನು ಸರಿಪಡಿಸಿ ಬೇಡಿಕೆ ಈಡೇರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಶಾಲೆಗಳ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿಯಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಬಿಸಿಯೂಟ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ದಿನದಲ್ಲಿ 7 ಗಂಟೆ ಕೆಲಸ ಮಾಡುತ್ತಿದ್ದಾರೆ. ಈ ನೌಕರರಲ್ಲಿ ದಲಿತರು, ವಿಧವೆಯರು, ಅಸಹಾಯಕ ಬಡ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇಂತಹವರಿಗೆ ಕೇವಲ ₹2,600 ಗೌರವ ಧನ ನೀಡಲಾಗುತ್ತಿದೆ ಎಂದು ಸಿಐಟಿಯು ಪ್ರಧಾನ ಕಾರ್ಯದರ್ಶಿ ಮಹೇಶ ಪತ್ತಾರ ಹೇಳಿದರು.

ಪ್ರಧಾನ ಮಂತ್ರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಭಾರತ ಕಾರ್ಮಿಕ ಸಮ್ಮೇಳನದಲ್ಲಿ ಬಿಸಿಯೂಟ ನೌಕರರನ್ನು ಕಾರ್ಮಿಕರೆಂದು ಪರಿಗಣಿಸಬೇಕು ಹಾಗೂ ಕನಿಷ್ಠ ವೇತನ ಕಾಯ್ದೆಯಡಿ ತರಬೇಕು ಎಂದು ಸಹ ನಿರ್ಣಯ ಮಾಡಲಾಗಿತ್ತು. ಅದನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು. ಸಂಸದ ‍ಪ್ರಹ್ಲಾದ ಜೋಶಿ ಅವರ ಮೂಲಕ ಪ್ರಧಾನಿಗೆ ಮನವಿ ಪತ್ರ ಸಲ್ಲಿಸಿದರು.

ಮುಖಂಡರಾದ ಅಮೃತ ಹಿಜಾರಿ, ಚನ್ನಮ್ಮ ಡೊಳ್ಳಿನ, ವಿದ್ಯಾನಾಶೀಪುಡಿ, ಸುಮಂಗಲಾ ಇದ್ದರು.

 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !