ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಉಪಾಹಾರ

ರಾಮಗೊಂಡನಹಳ್ಳಿ: ಮಕ್ಕಳ ಹಸಿವು ತಣಿಸುತ್ತಿರುವ ‘ವೈಟ್‌ಫೀಲ್ಡ್‌ ರೆಡಿ’
Last Updated 20 ಆಗಸ್ಟ್ 2019, 19:54 IST
ಅಕ್ಷರ ಗಾತ್ರ

ವೈಟ್‌ಫೀಲ್ಡ್ : ಕಳೆದ ವರ್ಷ 200 ವಿದ್ಯಾರ್ಥಿಗಳಷ್ಟೇ ದಾಖಲಾಗಿದ್ದ ರಾಮಗೊಂಡನಹಳ್ಳಿ ಶಾಲೆಯಲ್ಲಿ ಈ ವರ್ಷ ಮಕ್ಕಳ ಸಂಖ್ಯೆ 300ಕ್ಕೇರಿದೆ. ಈ ಬದಲಾವಣೆಗೆ ಪ್ರಮುಖ ಕಾರಣ ಈ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಬೆಳಗಿನ ಉಪಾಹಾರವನ್ನೂ ನೀಡುತ್ತಿರುವುದು.

ಅಂದ ಹಾಗೆ, ಇದು ಸರ್ಕಾರಿ ಶಾಲೆಯಾದರೂ ಇಲ್ಲಿ ಬೆಳಗಿನ ಉಪಾಹಾರ ಪೂರೈಸುತ್ತಿರುವುದು ಸರ್ಕಾರವಲ್ಲ;‘ವೈಟ್‌ಫೀಲ್ಡ್ ರೆಡಿ’ ಎಂಬ ಸರ್ಕಾರೇತರ ಸಂಸ್ಥೆಯ ಸ್ವಯಂ ಸೇವಕರು.

‘ಜಸ್ಟ್ ಫಾರ್ ಕಿಕ್ಸ್’ ಎಂಬ ಸರ್ಕಾರೇತರ ಸಂಸ್ಥೆ ರಾಮಗೊಂಡನಹಳ್ಳಿಯ ಸರ್ಕಾರಿ ಶಾಲೆಯಲ್ಲಿ 60 ವಿದ್ಯಾರ್ಥಿಗಳಿಗೆ ಫುಟ್‌ಬಾಲ್ ತರಬೇತಿ ಶಿಬಿರವನ್ನು ಹಮ್ಮಿಕೊಂಡಿತ್ತು. ಸುತ್ತಮುತ್ತಲಿನ ಮಕ್ಕಳು ತರಬೇತಿಗಾಗಿ ಬೆಳಿಗ್ಗೆ 7 ಗಂಟೆಗೇ ಶಾಲೆಗೆ ಬರುತ್ತಿದ್ದರು. ಅದಕ್ಕಾಗಿ ಅವರು ಬೆಳಿಗ್ಗೆ 6 ಗಂಟೆಗೆ ಮುನ್ನವೇ ಮನೆಯಿಂದ ಹೊರಡುತ್ತಿದ್ದರು. ಹೀಗಾಗಿ ಬೆಳಗಿನ ಉಪಾಹಾರ ಸೇವಿಸಲು ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ವಿದ್ಯಾರ್ಥಿಗಳು ಹಸಿದ ಹೊಟ್ಟೆಯಲ್ಲೇ ತರಬೇತಿಯಲ್ಲಿ ಪಾಲ್ಗೊಳ್ಳಬೇಕಾಗುತ್ತಿತ್ತು. ಈ ಕಾರಣಕ್ಕಾಗಿ ಕೆಲವು ಮಕ್ಕಳು ತರಬೇತಿಗೆ ಬರುವುದನ್ನೇ ನಿಲ್ಲಿಸಿದರು. ಇದನ್ನು ಗಮನಿಸಿದ ‘ವೈಟ್‌ಫೀಲ್ಡ್ ರೆಡಿ’ ಸಂಸ್ಥೆ ಫುಟ್‌ಬಾಲ್ ಆಡುವ ಮಕ್ಕಳಿಗೆ ಉಪಾಹಾರ ಒದಗಿಸಲು ಶುರು ಮಾಡಿತು.ಇದರಿಂದ ಮಕ್ಕಳಿಗೆ ಪೌಷ್ಟಿಕ ಆಹಾರ ದೊರೆಯುತ್ತಿತ್ತು. ಆ ಬಳಿಕ ಮಕ್ಕಳು ಕೇವಲ ಫುಟ್‌ಬಾಲ್ ಆಡಲು ಮಾತ್ರವಲ್ಲ, ಉಪಾಹಾರ ಸೇವಿಸು ವುದಕ್ಕೂ ಸಾಲುಗಟ್ಟಿ ನಿಲ್ಲತೊಡಗಿದರು.

ಈ ಬೆಳವಣಿಗೆಯನ್ನು ಗಮನಿಸಿದ ಸಂಸ್ಥೆಯ ಸ್ವಯಂ ಸೇವಕರು ಶಾಲೆಯಲ್ಲಿದ್ದ ಮಕ್ಕಳಿಗೆಲ್ಲರಿಗೂ ಬೆಳಗಿನ ಉಪಾಹಾರ ಪೂರೈಸಲು ತೀರ್ಮಾನಿಸಿದರು.

‘ವೈಟ್ ಫೀಲ್ಡ್ ರೆಡಿ ಹಾಗೂ ರೋಟರಿ ಬೆಂಗಳೂರು ಐಟಿ ಕಾರಿಡಾರ್ ಸೇರಿ ಈ ಯೋಜನೆಯನ್ನು ಆರಂಭಿಸಿವೆ. ಇದಕ್ಕೆ ಗೆಳೆಯರು ಹಾಗೂ ಹಿತಚಿಂತಕರು ದೇಣಿಗೆ ನೀಡಿದ್ದಾರೆ. ಅಲ್ಲದೇ, ಮಕ್ಕಳಿಂದ ರಂಗಪ್ರಯೋಗ ಮಾಡಿಸುವ ಮೂಲಕವೂ ನಿಧಿ ಸಂಗ್ರಹಿಸಲಾಗಿದೆ. ಈ ಶಾಲೆಯಲ್ಲಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಪ್ರತಿ ವಿದ್ಯಾರ್ಥಿಗೆ ತಿಂಗಳಿಗೆ ₹300 ಖರ್ಚು ಬೀಳುತ್ತಿದೆ’ ಎನ್ನುತ್ತಾರೆ ‘ವೈಟ್‌ಫೀಲ್ಡ್ ರೆಡಿ’ ಸಂಸ್ಥೆಯ ಸ್ವಯಂಸೇವಕಿ ಸುಮೇಧಾ ರಾವ್.

‘ಇದು ಪ್ರಾಯೋಗಿಕ ಯೋಜನೆ. ಪ್ರಮಾಣ ಹಾಗೂ ಗುಣಮಟ್ಟದ ಆಹಾರ ಪೂರೈಸುವ ಕುರಿತು ಅಧ್ಯಯನ ಮಾಡುತ್ತಿದ್ದೇವೆ. ಕ್ರಮೇಣ ಈ ಯೋಜನೆಯನ್ನು ಇತರ ಶಾಲೆಗಳಿಗೂ ವಿಸ್ತರಿಸಲು ಚಿಂತನೆ ನಡೆಸಿದ್ದೇವೆ. ಈ ಬಗ್ಗೆ ಸರ್ಕಾರದ ಮಧ್ಯಾಹ್ನದ ಬಿಸಿಯೂಟ ಯೋಜನೆಯ ಜಂಟಿ ನಿರ್ದೇಶಕರನ್ನು ಭೇಟಿ ಮಾಡಿ ಚರ್ಚಿಸಲಿದ್ದೇವೆ’ ಎಂದು ಅವರು ತಿಳಿಸಿದರು.

ಉಪಾಹಾರ ಪೂರೈಕೆಯಿಂದ ಅಚ್ಚರಿಯ ಬದಲಾವಣೆಯಾಗಿದ್ದು, ಶಾಲೆಗೆ ತಡವಾಗಿ ಆಗಮಿಸುತ್ತಿದ್ದ ಮಕ್ಕಳು ಈಗ 30ರಿಂದ 40 ನಿಮಿಷ ಮುಂಚಿತವಾಗಿಯೇ ಬರುತ್ತಿದ್ದಾರೆ.

-ಉಪಾಹಾರ ನೀಡಲಾರಂಭಿಸಿದ ಬಳಿಕ ಶಾಲೆಗೆ ಬೇಗ ಬರುತ್ತಿರುವ ವಿದ್ಯಾರ್ಥಿಗಳು

-ಪ್ರತಿ ವಿದ್ಯಾರ್ಥಿಯ ಉಪಾಹಾರಕ್ಕೆ ತಿಂಗಳಿಗೆ ₹300 ಖರ್ಚು

-ದೇಣಿಗೆ ಸಂಗ್ರಹಿಸಿ ವೆಚ್ಚ ಭರಿಸುತ್ತಿರುವ ‘ವೈಟ್‌ಫೀಲ್ಡ್‌ ರೆಡಿ’ ಸಂಸ್ಥೆ

-ಇತರ ಶಾಲೆಗಳಿಗೂ ಉಪಾಹಾರ ನೀಡಲು ಸಂಸ್ಥೆ ಚಿಂತನೆ

‘ವಿದ್ಯಾರ್ಥಿಗಳಿಗೆ ಬಲು ಇಷ್ಟ ಚಿತ್ರಾನ್ನ’

‘ಚಿತ್ರಾನ್ನ ವಿದ್ಯಾರ್ಥಿಗಳ ಪಾಲಿಗೆ ಬಲು ಇಷ್ಟವಾದ ಉಪಾಹಾರ’ ಎನ್ನುತ್ತಾರೆ ಶಾಲೆಯ ಕಂಪ್ಯೂಟರ್‌ ಶಿಕ್ಷಕಿ ವನಜಾ.

‘ವೈಟ್‌ಫೀಲ್ಡ್‌ ರೆಡಿ ಸಂಸ್ಥೆಯವರು ಬೆಳಿಗ್ಗೆ ಉಪಾಹಾರಕ್ಕೆ ಇಡ್ಲಿ, ದೋಸೆ, ರೈಸ್ ಬಾತ್, ಚಿತ್ರಾನ್ನ ನೀಡುತ್ತಾರೆ. ಚಿತ್ರಾನ್ನ ನೀಡುವ ದಿನದಂದು ಉಪಾಹಾರ ಬೇಗನೆ ಖಾಲಿಯಾಗುತ್ತದೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT