ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಯೂಟ, ಇಂದಿರಾ ಕ್ಯಾಂಟೀನ್‌ನಲ್ಲಿ ಸಿರಿಧಾನ್ಯ ಆಹಾರ

ಅಂತರ ರಾಷ್ಟ್ರೀಯ ಸಿರಿಧಾನ್ಯ ವಾಣಿಜ್ಯಮೇಳ ಉದ್ಘಾಟನೆ
Last Updated 18 ಜನವರಿ 2019, 19:39 IST
ಅಕ್ಷರ ಗಾತ್ರ

ಬೆಂಗಳೂರು: ಶಾಲಾ ಮಕ್ಕಳ ಮಧ್ಯಾಹ್ನದ ಬಿಸಿಯೂಟ ಮತ್ತು ಇಂದಿರಾ ಕ್ಯಾಂಟೀನ್‌ಗಳಲ್ಲಿ ಸಿರಿಧಾನ್ಯಗಳಿಂದ ತಯಾರಿಸಿದ ಆಹಾರವನ್ನು ಪೂರೈಸುವ ಬಗ್ಗೆ ಚಿಂತನೆ ನಡೆದಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ನಗರದ ಅರಮನೆ ಮೈದಾನದಲ್ಲಿ ಅಂತರ ರಾಷ್ಟ್ರೀಯ ಸಾವಯವ ಮತ್ತು ಸಿರಿಧಾನ್ಯ ವಾಣಿಜ್ಯ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪೌಷ್ಟಿಕತೆಯಿಂದ ಕೂಡಿದ ಸಿರಿಧಾನ್ಯಗಳನ್ನು ಬಿಸಿಯೂಟದಲ್ಲಿ ಸೇರಿಸಬೇಕು ಎಂಬ ಒತ್ತಾಯ ಬಹಳ ದಿನಗಳಿಂದಲೂ ಕೇಳಿ ಬರುತ್ತಿದೆ ಎಂದರು.

ಕಳೆದ ಎರಡು– ಮೂರು ವರ್ಷಗಳಿಂದ ಸಿರಿಧಾನ್ಯಕ್ಕೆ ಪ್ರೋತ್ಸಾಹ ನೀಡುವ ಕೆಲಸ ನಡೆಯುತ್ತಿದೆ. ಕಡಿಮೆ ವೆಚ್ಚದಲ್ಲಿ ಸಿರಿಧಾನ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆದು ಎಲ್ಲರಿಗೂ ಸಿಗುವಂತೆ ಮಾಡಬೇಕು. ಇದರಿಂದ ಜನರ ಆರೋಗ್ಯವೂ ವೃದ್ಧಿಯಾಗುತ್ತದೆ ಎಂದರು.

ರೈತರ ಸಮಸ್ಯೆಗಳಿಗೆ ಸಾಲ ಮನ್ನಾವೊಂದೇ ಪರಿಹಾರ ಅಲ್ಲ. ರೈತರ ಬದುಕಿಗೆ ಆರ್ಥಿಕ ಶಕ್ತಿ ತುಂಬಿದಾಗಲೇ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂದು ಕುಮಾರಸ್ವಾಮಿ ಹೇಳಿದರು.

ರೈತರಲ್ಲಿ ಆದಾಯ ಕ್ರಾಂತಿ ಬರಬೇಕು: ‘ಈಗ ದೇಶಕ್ಕೆ ಹಸಿರು ಕ್ರಾಂತಿಯ ಅಗತ್ಯವಿಲ್ಲ. ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ರೈತರ ಆದಾಯವನ್ನು ದುಪ್ಪಟ್ಟುಗೊಳಿಸುವ ಆದಾಯ ಕ್ರಾಂತಿ ಆಗಬೇಕಿದೆ. ಈ ಉದ್ದೇಶದಿಂದ 2022 ಕ್ಕೆ ರೈತರ ಆದಾಯ ದ್ವಿಗುಣ ಮಾಡಬೇಕು ಎಂಬ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರ ಹಮ್ಮಿಕೊಂಡಿದೆ’ ಎಂದು ಕೇಂದ್ರ ಸರ್ಕಾರದ ಮಳೆಯಾಶ್ರಿತ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶೋಕ್‌ ದಳವಾಯಿ ಹೇಳಿದರು.

ರೈತರು ಬೆಳೆದ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ, ಆದಾಯ ಹೆಚ್ಚಳ ಮತ್ತು ರೈತನ ಕಲ್ಯಾಣವೇ ಮುಖ್ಯ ಗುರಿಯಾಗಬೇಕಾಗಿದೆ. 50 ವರ್ಷಗಳಿಂದ ಗೋಧಿ ಮತ್ತು ಭತ್ತದ ಬೆಳೆಗೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು. ಇನ್ನು ಮುಂದೆ ಸಿರಿಧಾನ್ಯಗಳ ಬಗ್ಗೆ ಹೆಚ್ಚಿನ ಸಂಶೋಧನೆಗಳು ಆಗಬೇಕಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ತೋಟಗಾರಿಕೆ ಸಚಿವ ಎಂ.ಸಿ.ಮನಗೂಳಿ, ಪಶುಸಂಗೋಪನೆ ಮತ್ತು ಮೀನುಗಾರಿಕಾ ಸಚಿವ ವೆಂಕಟರಾವ್‌ ನಾಡಗೌಡ ಇದ್ದರು.

ಸಿರಿಧಾನ್ಯಕ್ಕೆ ವಿಶ್ವ ಮಾನ್ಯತೆ

ಕರ್ನಾಟಕದಿಂದ ಆರಂಭಗೊಂಡ ಸಿರಿಧಾನ್ಯದ ಆಂದೋಲನ ಈಗ ಇಡಿ ರಾಷ್ಟ್ರ ಮಾತ್ರವಲ್ಲ ವಿಶ್ವವನ್ನೇ ವ್ಯಾಪಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಸಿರಿಧಾನ್ಯಕ್ಕೆ ಮಾನ್ಯತೆ ನೀಡುವಂತೆ ವಿಶ್ವ ಸಂಸ್ಥೆಯ ಎಫ್‌ಎಒಗೆ ಕೇಂದ್ರ ಸರ್ಕಾರ ಮನವಿ ಸಲ್ಲಿಸಿತ್ತು. ಇದೇ ವರ್ಷದ ಸೆಪ್ಟಂಬರ್‌ನಲ್ಲಿ ಮಾನ್ಯತೆ ಸಿಗುವ ವಿಶ್ವಾಸವಿದೆ. 2023 ರಲ್ಲಿ ಅಂತರ ರಾಷ್ಟ್ರೀಯ ಸಿರಿಧಾನ್ಯ ವರ್ಷವನ್ನು ಆಚರಿಸಲು ವಿಶ್ವ ಸಂಸ್ಥೆ ಒಪ್ಪಿಗೆ ನೀಡಿದೆ. ಇದರ ಸಾಧನೆಯ ಕೀರ್ತಿ ಕರ್ನಾಟಕಕ್ಕೆ ಸಲ್ಲುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT