ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲಿದ್ದಾರೋ ಕಾಣೆಯಾದ 1,589 ಮಕ್ಕಳು!

ಕಣ್ಮರೆಯಾದವರ ಪತ್ತೆಗೆ ಇನ್ನೂ 3 ತಿಂಗಳು ವಿಶೇಷ ಕಾರ್ಯಾಚರಣೆ * ಯುವತಿ–ಮಹಿಳೆಯರೂ ಕಣ್ಮರೆ
Last Updated 20 ನವೆಂಬರ್ 2018, 20:34 IST
ಅಕ್ಷರ ಗಾತ್ರ

ಬೆಂಗಳೂರು: ಹೈಕೋರ್ಟ್ ತಪರಾಕಿ ಬೆನ್ನಲ್ಲೇ, ನಾಪತ್ತೆ ಪ್ರಕರಣಗಳನ್ನು ರಾಜ್ಯ ಪೊಲೀಸ್‌ ಇಲಾಖೆಯು ಗಂಭೀರವಾಗಿ ಪರಿಗಣಿಸಿದೆ.13,302 ಮಂದಿ ಪತ್ತೆಯಾಗಬೇಕಿರುವ ಕಾರಣ ವಿಶೇಷ ಕಾರ್ಯಾಚರಣೆಯನ್ನು ಡಿ.31ರವರೆಗೆ ವಿಸ್ತರಿಸಿದೆ.

ಡಿಜಿಪಿ ನೀಲಮಣಿ ರಾಜು ಅವರ ಸೂಚನೆ ಮೇರೆಗೆ, ಎಲ್ಲ ಜಿಲ್ಲೆಗಳ ಪೊಲೀಸರು ನಾಲ್ಕು ವರ್ಷಗಳಲ್ಲಿ ತಮ್ಮ ವ್ಯಾಪ್ತಿಯಿಂದ ಕಣ್ಮರೆಯಾಗಿರುವವರ ಹುಡುಕಾಟಕ್ಕೆ ಅ.1ರಿಂದ 15 ದಿನಗಳ ಕಾರ್ಯಾಚರಣೆ ನಡೆಸಿದ್ದರು. ನಿರೀಕ್ಷಿತ ಅಂದಾಜಿನಲ್ಲಿ ಪತ್ತೇದಾರಿ ಕೆಲಸ ನಡೆದಿರದ ಕಾರಣ, ಇನ್ನೂ ಮೂರು ತಿಂಗಳು ಕಾರ್ಯಾಚರಣೆ ಮುಂದುವರಿಸುವಂತೆ ಸೂಚಿಸಿದ್ದಾರೆ.

1,589 ಮಕ್ಕಳ ಸುಳಿವಿಲ್ಲ: ನಾಲ್ಕು ವರ್ಷಗಳ ಅವಧಿಯಲ್ಲಿ ಕಣ್ಮರೆಯಾಗಿದ್ದ 7,446 (4,023 ಗಂಡು/3,423 ಹೆಣ್ಣು) ಮಕ್ಕಳ ಪೈಕಿ, 5,858 ಮಕ್ಕಳನ್ನು ಹುಡುಕುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆದರೆ, ಇನ್ನೂ 1,589 (819 ಗಂಡು/770 ಹೆಣ್ಣು) ಮಕ್ಕಳ ಬಗ್ಗೆ ಸಣ್ಣ ಸುಳಿವೂ ಸಿಕ್ಕಿಲ್ಲ ಎಂದು ಇಲಾಖೆಯ ಅಂಕಿ ಅಂಶ ಹೇಳುತ್ತದೆ.

ಈ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿದ ಅಪರಾಧ ವಿಭಾಗದ ಎಡಿಜಿಪಿ ಎಂ.ಎ.ಸಲೀಂ, ‘ವಯಸ್ಕರು ಕಣ್ಮರೆಯಾದರೆ ಸಾಮಾಜಿಕ ಅಥವಾ ಆರ್ಥಿಕ ಸಮಸ್ಯೆಗಳನ್ನು ಪ್ರಮುಖವಾಗಿ ಪರಿಗಣಿಸಬಹುದು. ಆದರೆ, ಮಕ್ಕಳ ನಾಪತ್ತೆಯನ್ನು ಆ ದೃಷ್ಟಿಯಿಂದ ನೋಡಕೂಡದು. ಇದರಲ್ಲಿ ಮಾನವ ಸಾಗಾಣಿಕೆ ಹಾಗೂ ಸಮಾಜಘಾತುಕ ಶಕ್ತಿಗಳು ಭಾಗಿಯಾಗಿರುವ ಸಾಧ್ಯತೆ ಇರುತ್ತದೆ. ಹೀಗಾಗಿ, ಮಕ್ಕಳು ನಾಲ್ಕು ತಿಂಗಳಲ್ಲಿ ಸಿಗದಿದ್ದರೆ ಪ್ರಕರಣವನ್ನು ಹೊಸದಾಗಿ ಪ್ರಾರಂಭಿಸಲಾಗಿರುವ ಸೈಬರ್, ಆರ್ಥಿಕ ಹಾಗೂ ಮಾನವ ಕಳ್ಳ ಸಾಗಾಣಿಕೆ ನಿಗ್ರಹ (ಸಿಇಎನ್) ಠಾಣೆಗಳಿಗೆ ವರ್ಗಾಯಿಸುತ್ತೇವೆ. ಅವರು ಗಂಭೀರವಾಗಿ ತನಿಖೆ ನಡೆಸುತ್ತಾರೆ’ ಎಂದು ಹೇಳಿದರು.

‘ಗಲ್ಫ್ ರಾಷ್ಟ್ರಗಳಲ್ಲಿ ಒಂಟೆಗಳ ಜಾಕಿಗಳಾಗಿ ಬಳಕೆಯಾಗುತ್ತಿರುವ ಮಕ್ಕಳು, ಅಂಗಾಂಗ ಮಾರಾಟ ಪ್ರಕರಣಗಳಲ್ಲೂ ಸಂತ್ರಸ್ತರಾಗುತ್ತಿದ್ದಾರೆ. ಯಾವುದೇ ಕಾರಣಕ್ಕೂ ರಾಜ್ಯದ ಮಕ್ಕಳು ಇಂಥ ಸ್ಥಿತಿ ಎದುರಿಸಬಾರದು.ಹೀಗಾಗಿ, ಎಲ್ಲ ಆಯಾಮಗಳಿಂದಲೂ ಶೋಧದಲ್ಲಿ ತೊಡಗಿದ್ದೇವೆ’ ಎಂದು ವಿವರಿಸಿದರು.

ಯುವತಿ/ಮಹಿಳೆಯರೂ ನಿಗೂಢ: ರಾಜ್ಯದಿಂದ ನಾಪತ್ತೆಯಾಗಿದ್ದ 28,924 ಮಹಿಳೆಯರ ಪೈಕಿ, 22,591 ಮಂದಿ ಸಿಕ್ಕಿದ್ದಾರೆ. 6,333 ಮಹಿಳೆಯರ ಹುಡುಕಾಟ ಮುಂದುವರಿದಿದೆ. ‘ವಿದೇಶದಲ್ಲಿರುವ ಸೇಠುಗಳು ದೇಶದ ಯುವತಿಯರನ್ನು ವಿವಾಹವಾಗಿ ಕರೆದುಕೊಂಡು ಹೋಗುತ್ತಾರೆ. ಬಳಿಕ ಅವರನ್ನು ಜೀತಕ್ಕೋ, ವೇಶ್ಯಾವಾಟಿಕೆಗೋ ಬಳಸಿಕೊಳ್ಳುತ್ತಾರೆ. ಈ ದಂಧೆ ನಡೆಸಲು ಸೇಠುಗಳಿಗೆ ಹೈದರಾಬಾದ್ ಕೇಂದ್ರಸ್ಥಾನವಾಗಿದೆ. ರಾಜ್ಯದ ಕೆಲ ಹುಡುಗಿಯರೂ ಅವರ ಬಲೆಯಲ್ಲಿ ಸಿಲುಕಿರುವ ಸಾಧ್ಯತೆ ಇದೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.

ಗುಪ್ತಚರದಿಂದಲೂ ಮಾಹಿತಿ

‘ರಾಜ್ಯದಿಂದ ಹೋದ ಯುವಕರು ಯಾವುದಾದರೂ ಭಯೋತ್ಪಾದನಾ ಸಂಘಟನೆಯನ್ನು ಸೇರಿರಬಹುದು ಎಂಬ ಶಂಕೆ ಮೇಲೆ ಆಂತರಿಕ ಭದ್ರತಾ ವಿಭಾಗ (ಐಎಸ್‌ಡಿ) ಹಾಗೂ ಗುಪ್ತಚರದ ಸಿಬ್ಬಂದಿಯನ್ನೂ ಬಳಸಿಕೊಂಡು ಪರಿಶೀಲನೆ ನಡೆಸಿದ್ದೇವೆ. ಅಂಥ ಯಾವುದೇ ಪ್ರಕರಣ ನಡೆದಿರುವುದು ಕಂಡುಬಂದಿಲ್ಲ’ ಎಂದು ಸಲೀಂ ಹೇಳಿದರು.

ರಾಜಧಾನಿಯಲ್ಲೇ ಹೆಚ್ಚು

ನಾಲ್ಕು ವರ್ಷಗಳಲ್ಲಿ ಹೆಚ್ಚು ನಾಪತ್ತೆ ಪ್ರಕರಣಗಳು ದಾಖಲಾಗಿರುವ ಜಿಲ್ಲೆಗಳ ಪಟ್ಟಿಯಲ್ಲಿ ಬೆಂಗಳೂರು (2,713) ಮೊದಲ ಸ್ಥಾನದಲ್ಲಿದ್ದರೆ, ಮೈಸೂರು (2,078), ಮಂಡ್ಯ (2,016), ಶಿವಮೊಗ್ಗ (2,008), ರಾಮನಗರ (1,772) ಹಾಗೂ ತುಮಕೂರು ಜಿಲ್ಲೆಗಳು ನಂತರದ ಸಾಲಿನಲ್ಲಿವೆ. ಯಾದಗಿರಿಯಲ್ಲಿ 177 ಮಂದಿ ನಾಪತ್ತೆಯಾಗಿದ್ದು, ಕಡೆಯ ಸ್ಥಾನದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT