ಮಂಗಳವಾರ, ನವೆಂಬರ್ 12, 2019
20 °C
ಜೆಡಿಎಸ್‌ ಕಾರ್ಯರ್ಕತರ ಸಭೆ; ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅಭಿಮತ

ಸುಪ್ರೀ ಕೋರ್ಟ್ ತೀರ್ಪು ಪಕ್ಷಾಂತರಿಗಳಿಗೆ ಪಾಠವಾಗಲಿ

Published:
Updated:

ಕೆ.ಆರ್‌.ಪೇಟೆ: ‘ಹಣ ಹಾಗೂ ಅಧಿಕಾರದ ವ್ಯಾಮೋಹದಿಂದ ಪಕ್ಷಾಂತರ ಮಾಡುವ ಶಾಸಕರಿಗೆ ಸುಪ್ರೀಂ ಕೋರ್ಟ್‌ ಪಾಠ ಕಲಿಸುವಂತಹ ತೀರ್ಪು ನೀಡಬೇಕು’ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅಭಿಪ್ರಾಯಪಟ್ಟರು.

ಪಟ್ಟಣದ ಜಯಮ್ಮ ಶಿವಲಿಂಗೇಗೌಡ ಕಲ್ಯಾಣ ಮಂಟಪದಲ್ಲಿ ನಡೆದ ಜೆಡಿಎಸ್  ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಪಕ್ಷಾಂತರ ಸಮಸ್ಯೆಯನ್ನು ಬಹಳ ಗಂಭೀರವಾಗಿ ಪರಿಗಣಿಸಬೇಕಾಗಿದೆ. ಈ ಸಮಸ್ಯೆಗೆ ಸೂಕ್ತ ಪರಿಹಾರ ಸಿಗದಿದ್ದರೆ ದೇವರೇ ಬಂದು ಮುಖ್ಯಮಂತ್ರಿ, ಪ್ರಧಾನಮಂತ್ರಿಯಾದರೂ ಯಶಸ್ವಿ ಆಡಳಿತ ನೀಡುವುದು ಕಷ್ಟಸಾಧ್ಯ’ ಎಂದರು.

‘ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಪಕ್ಷಗಳನ್ನು ಸಮಾದಿ ಮಾಡಲು ಹೊರಟಿರುವುದು ದೇಶದ ಪ್ರಜಾಪ್ರಭುತ್ವ ತತ್ವಗಳಿಗೆ ಮಾರಕವಾಗಿದೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳಾಗಿವೆ. ಜನರನ್ನು ಮರುಳು ಮಾಡುವ ಕಲೆ ಅವುಗಳ ನಾಯಕರಿಗೆ ಚೆನ್ನಾಗಿ ಗೊತ್ತಿದೆ. ಅವರು ಬೀಸಿದ ಮಾಯಾಜಾಲಕ್ಕೆ ಜನ ಮರುಳಾಗಿ ಪ್ರಾದೇಶಿಕ ಪಕ್ಷಗಳನ್ನು ಮರೆತರೆ ನಾಳೆ ಜನರ ನೋವು ಕೇಳುವವರು ಯಾರೂ ಇಲ್ಲವಾಗುತ್ತಾರೆ’ ಎಂದರು.

ಶಾಸಕ ಎಚ್‌.ಡಿ.ರೇವಣ್ಣ ಮಾತನಾಡಿ ‘ಅನರ್ಹ ಶಾಸಕ ನಾರಾಯಣಗೌಡ ವಿಶ್ವಾಸ ದ್ರೋಹದ ಕೆಲಸ ಮಾಡಿದ್ದಾರೆ. ತಾಲ್ಲೂಕಿಗೆ ಕುಮಾರಸ್ವಾಮಿ ಸರ್ಕಾರ ₹ 700 ಕೋಟಿ ಅನುದಾನ ನೀಡಿದ್ದರೂ ಏನೂ ನೀಡಿಲ್ಲ, ದೇವೇಗೌಡರ ಕುಟುಂಬದವರು ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಅಪಪ್ರಚಾರ ಮಾಡಿದ್ದಾರೆ’ ಎಂದು ಆರೋಪಿಸಿದರು.

‘ನಾರಾಯಣಗೌಡ ಸುಳ್ಳು ಹೇಳಲು ಆಗುವುದಿಲ್ಲ. ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಕಾಂಗ್ರೆಸ್‌ ಪಕ್ಷದೊಂದಿಗೆ ಮೈತ್ರಿಮಾಡಿಕೊಂಡು ಸರ್ಕಾರವನ್ನು ರಚನೆ ಮಾಡಿದ್ದೆವು. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸಕಾರ ಕೂಡ ಹೆಚ್ಚು ದಿನ ಉಳಿಯುವುದಿಲ್ಲ, ಉಪಚುನಾವಣೆಯೇ ಬರುತ್ತದೋ, ಇಲ್ಲ ಮಧ್ಯಂತರ ಚುನಾವಣೆಯೇ ಬರುತ್ತದೋ ತಿಳಿಯದು. ಆದ್ದರಿಂದ ಎಲ್ಲದಕ್ಕೂ ಸಿದ್ಧರಾಗಿರಬೇಕು’ ಎಂದು ಹೇಳಿದರು.

‘ನಾನು ಮಂಜೂರಾತಿ ನೀಡಿರುವ ಯೋಜನೆಗಳನ್ನು ಯಡಿಯೂರಪ್ಪ ರದ್ದುಗೊಳಿಸಲು ಆಗುವದಿಲ್. ಸಂತೇಬಾಚಹಳ್ಲಿ ಹೋಬಳಿಗೆ ನೆರವಾಗುವ ಗುಡ್ಡೇನಹಳ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ₹ 212 ಕೋಟಿ , ತಾಲ್ಲೂಕಿನಲ್ಲಿ ಹಾದು ಹೋಗುವ ಬೆಂಗಳೂರು- ಜಲಸೂರು ರಸ್ತೆಗೆ ₹ 1,300 ಕೋಟಿ ಅನುದಾನ ನೀಡಲಾಗಿದೆ’ ಎಂದರು.

ಶಾಸಕ ಸಿ.ಎಸ್‌.ಪುಟ್ಟರಾಜು ಮಾತನಾಡಿ ‘ತಾಲ್ಲೂಕಿನಲ್ಲಿ ಪ್ರಚಾರಕ್ಕಾಗಿ ಭಾಷಣ ಮಾಡುವ ಅವಶ್ಯಕತೆ ಇಲ್ಲ. ಇದು ಜೆಡಿಎಸ್‌ ಭದ್ರಕೋಟೆಯಾಗಿದ್ದು ಮುಖಂಡರು ಬರುತ್ತಾರೆ, ಹೋಗುತ್ತಾರೆ. ಅಂತಿಮವಾಗಿ ಕಾರ್ಯಕರ್ತರು ಮಾತ್ರ ಪಕ್ಷದ ಜೊತೆ ಸದಾ ಇರುತ್ತಾರೆ’ ಎಂದರು.

ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ, ಶಾಸಕರಾದ ಸಿಎಸ್.ಪುಟ್ಟರಾಜು, ಡಿ.ಸಿ.ತಮ್ಮಣ್ಣ, ಡಾ.ಅನ್ನದಾನಿ, ಸಿ.ಎನ್.ಬಾಲಕೃಷ್ಣ, , ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಎಲ್.ದೇವರಾಜು, ಜಿಲ್ಲಾ ಘಟಕದ  ಅಧ್ಯಕ್ಷ ಡಿ.ರಮೇಶ್, ಮುಖಂಡರಾದ ಬಸ್ ಕೃಷ್ಣೇಗೌಡ, ಜೆ.ಪ್ರೇಮಕುಮಾರಿ, ಎಚ್‌.ಟಿ.ಮಂಜು, ರಾಮದಾಸ್‌,  ಎಸ್.ಎಲ್.ರಮೇಶ್, ಜಾನಕೀರಾಮು ಇದ್ದರು.

*****

ಎಚ್‌ಡಿಕೆ ಕೆಲಸಗಳ ಪುಸ್ತಕ ಹಂಚಿಕೆ

ಎಚ್‌.ಡಿ.ಕುಮಾರಸ್ವಾಮಿ ಸರ್ಕಾರವಿದ್ದಾಗ ಕೆ.ಆರ್‌.ಪೇಟೆ ತಾಲ್ಲೂಕಿಗೆ ಕೊಟ್ಟಿರುವ ಯೋಜನೆಗಳ ಕುರಿತು ಮಾಹಿತಿ ನೀಡುವ ಪುಸ್ತಕ ಮುದ್ರಿಸಿ ಹಂಚಿಕೆ ಮಾಡಲಾಯಿತು. ಯಾವ ಇಲಾಖೆಗಳಿಂದ ಎಷ್ಟು ಅನುದಾನ ನೀಡಲಾಗಿದೆ ಎಂಬ ವಿವರಗಳನ್ನು ಪುಸ್ತಕದಲ್ಲಿ ನೀಡಲಾಗಿದೆ.

ಎಚ್‌.ಡಿ.ರೇವಣ್ಣ ಮಾತನಾಡಿ ‘ನಾರಾಯಣಗೌಡನ ಬಂಡವಾಳವನ್ನು ಪುಸ್ತಕದಲ್ಲಿ ಜಾಹೀರು ಮಾಡಲಾಗಿದೆ. ಕಮೀಷನ್ ಆಸೆಗಾಗಿ , ಹಣಕ್ಕಾಗಿ ಪಕ್ಷಕ್ಕೆ ದ್ರೋಹ ಮಾಡಿರುವ ನಾರಾಯಣಗೌಡರಿಗೆ ನೀವೇ ಬುದ್ಧಿ ಕಲಿಸಬೇಕು. ಈ ತಾಲ್ಲೂಕಿಗೆ ಎಚ್.ಡಿ.ದೇವೇಗೌಡರ ಕೊಡುಗೆ ಅಪಾರ’ ಎಂದರು.

ಪ್ರತಿಕ್ರಿಯಿಸಿ (+)