ಎಲಿವೇಟೆಡ್‌ ಕಾರಿಡಾರ್‌ನಲ್ಲಿ ಆಧುನಿಕ ಸೌಕರ್ಯ?

ಸೋಮವಾರ, ಮಾರ್ಚ್ 25, 2019
21 °C
ಪ್ರಖರ ಬೆಳಕು, ಸದ್ದು ನಿಯಂತ್ರಣಕ್ಕೆ ವ್ಯವಸ್ಥೆ, ನಂಬರ್‌ ಪ್ಲೇಟ್‌ ಪತ್ತೆಗೆ ಕ್ಯಾಮೆರಾ

ಎಲಿವೇಟೆಡ್‌ ಕಾರಿಡಾರ್‌ನಲ್ಲಿ ಆಧುನಿಕ ಸೌಕರ್ಯ?

Published:
Updated:

ಬೆಂಗಳೂರು: ಎಲಿವೇಟೆಡ್‌ ಕಾರಿಡಾರ್‌ನಲ್ಲಿ ಆಧುನಿಕ ವ್ಯವಸ್ಥೆಗಳನ್ನು ಅಳವಡಿಸಲು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮವು (ಕೆಆರ್‌ಡಿಸಿಎಲ್‌) ಮುಂದಾಗಿದೆ. ವಾಹನ ಚಾಲಕರಿಗೆ ಸಂದೇಶ ನೀಡುವ ಸ್ವಯಂಚಾಲಿತ ವ್ಯವಸ್ಥೆ (ಡಿಎಫ್‌ಎಸ್‌), ಪ್ರಖರ ಬೆಳಕು ನಿಯಂತ್ರಣ ಪರದೆ (ಆ್ಯಂಟಿ ಗ್ಲೇರ್‌ ಸ್ಕ್ರೀನ್‌) ಹಾಗೂ ಸದ್ದು ತಡೆ (ನೊಯ್ಸ್‌ ಬ್ಯಾರಿಯರ್‌) ವ್ಯವಸ್ಥೆಗಳು ಕಾರಿಡಾರ್‌ನಲ್ಲಿ ಇರಲಿವೆ.

ಎಲಿವೇಟೆಡ್‌ ಕಾರಿಡಾರ್‌ ಯೋಜನೆಯ ಮೊದಲ ಹಂತದ ಅನುಷ್ಠಾನಕ್ಕಾಗಿ ಕೆಆರ್‌ಡಿಸಿಎಲ್‌ ಆಹ್ವಾನಿಸಿರುವ ಟೆಂಡರ್‌ ಷರತ್ತುಗಳಲ್ಲಿ ಈ ಅಂಶಗಳಿವೆ. ಒಟ್ಟು 26 ಬಗೆಯ ಸೌಕರ್ಯಗಳನ್ನು ಗುತ್ತಿಗೆದಾರರು ಕಲ್ಪಿಸಬೇಕು ಎಂದು ಷರತ್ತು ವಿಧಿಸಲಾಗಿದೆ.

ಏನಿದು ಡಿಎಫ್‌ಎಸ್‌: ಈ ವ್ಯವಸ್ಥೆಯಲ್ಲಿ ಮುಖ್ಯ ರಸ್ತೆಯಲ್ಲಿ ಪ್ರತಿ 2 ಕಿ.ಮೀ ದೂರದಲ್ಲಿ ವಾಹನಗಳ ನಂಬರ್ ಪ್ಲೇಟ್‌ ಪತ್ತೆ ಹಚ್ಚುವ ಎರಡು ಕ್ಲೋಸ್ಡ್‌ ಸರ್ಕ್ಯೂಟ್ ಕ್ಯಾಮೆರಾಗಳನ್ನು (ಎಎನ್‌ಪಿಆರ್‌) ಅಳವಡಿಸಲಾಗುತ್ತದೆ. ವಾಹನದ ವೇಗವನ್ನು ಡಿಎಫ್‌ಎಸ್‌ ತೋರಿಸುತ್ತದೆ. ನಿಗದಿತ ಮಿತಿಗಿಂತ ಹೆಚ್ಚಿನ ವೇಗದಲ್ಲಿ ವಾಹನ ಸಾಗಿದರೆ ಈ ಬಗ್ಗೆ ಚಾಲಕನಿಗೆ ಸಂದೇಶ ನೀಡುತ್ತದೆ.

ಎತ್ತರಿಸಿದ ರಸ್ತೆಯಲ್ಲಿ ಬೆಳಕಿನ ತೀವ್ರತೆ ಹೆಚ್ಚು ಇರುತ್ತದೆ. ಇದರಿಂದ ಚಾಲಕರಿಗೆ ಸಮಸ್ಯೆ ಆಗಬಾರದು ಎಂಬ ಉದ್ದೇಶದಿಂದ ಪ್ರಖರ ಬೆಳಕು ನಿಯಂತ್ರಣ ಪರದೆಗಳನ್ನು ಅಳವಡಿಸಲಾಗುತ್ತಿದೆ. ಎತ್ತರಿಸಿದ ರಸ್ತೆಯ ಹಾಗೂ ಅವುಗಳ ರ‍್ಯಾಂಪ್‌ಗಳ ವಿಭಜಕಗಳಲ್ಲಿ ಇವುಗಳನ್ನು ಅಳವಡಿಸಲಾಗುತ್ತದೆ.

ಸದ್ದು ತಡೆ ವ್ಯವಸ್ಥೆಯನ್ನು ಎತ್ತರಿಸಿದ ರಸ್ತೆಯ ಹಾಗೂ ರ‍್ಯಾಂಪ್‌ಗಳ ಇಕ್ಕೆಲಗಳಲ್ಲಿ  ಜೋಡಿಸಲಾಗುತ್ತದೆ. 8 ಮಿ.ಮೀ. ದಪ್ಪದ ಪಾಲಿಕಾರ್ಬೋನೇಟ್‌ ಶೀಟ್‌, ಜಿಐ ಪೈಪ್‌ ಹಾಗೂ ಅಲ್ಯುಮಿನಿಯಂ ಪ್ಯಾಡ್‌, ರಬ್ಬರ್‌ ಗ್ಯಾಸ್ಕೆಟ್‌ನಂತಹ ಪರಿಕರಗಳನ್ನು ಇದು ಒಳಗೊಂಡಿರುತ್ತದೆ.

ಸಿಸಿಟಿವಿ ಕ್ಯಾಮೆರಾ: ಕಾರಿಡಾರ್‌ನ ಇಕ್ಕೆಲಗಳಲ್ಲೂ ಪ್ರತಿ 500 ಮೀಟರ್‌ದಲ್ಲಿ ಹೈ–ರೆಸಲ್ಯೂಷನ್‌ನ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು ಎಂಬ ಷರತ್ತನ್ನು ಸಹ ವಿಧಿಸಲಾಗಿದೆ.

ಆಧುನಿಕ ಮಂತ್ರ–ಕಣ್ಣೊರೆಸುವ ತಂತ್ರ

‘ಎಲಿವೇಟೆಡ್‌ ಕಾರಿಡಾರ್‌ನಲ್ಲಿ ಆಧುನಿಕ ಸೌಕರ್ಯ ಕಲ್ಪಿಸುವ ಕುರಿತು ಟೆಂಡರ್‌ ಷರತ್ತಿನಲ್ಲಿ ಉಲ್ಲೇಖಿಸಿರುವುದು ಕಣ್ಣೊರೆಸುವ ತಂತ್ರ’ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಸಿವಿಲ್‌ ಎಂಜಿನಿಯರಿಂಗ್‌ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ.ಆಶಿಶ್ ವರ್ಮಾ ಅಭಿಪ್ರಾಯಪಟ್ಟರು.

‘ಎಲಿವೇಟೆಡ್‌ ಕಾರಿಡಾರ್‌ನಲ್ಲಿ ಏನೆಲ್ಲ ಸೌಕರ್ಯ ಕಲ್ಪಿಸುತ್ತಾರೆ ಎಂಬುದಕ್ಕಿಂತ, ಈ ಯೋಜನೆಯ ಔಚಿತ್ಯವೇ ಪ್ರಶ್ನಾರ್ಹ. ಇದೊಂದು ಸುಸ್ಥಿರ ಯೋಜನೆಯೇ ಅಲ್ಲ. ಇದರಿಂದ ನಗರಕ್ಕೆ ಪ್ರಯೋಜನಗಳಿಗಿಂತ ಅನನುಕೂಲಗಳೇ ಹೆಚ್ಚು ಎಂಬುದನ್ನು ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಅವರಿಗೆ ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದೆ. ಆದರೆ, ನಮ್ಮ ಸಲಹೆಗಳಿಗೆ ಸರ್ಕಾರ ಕಿವಿಗೊಡದಿರುವುದು ದುರದೃಷ್ಟಕರ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ಕಾರುಗಳ ಸಂಖ್ಯೆ ಮತ್ತಷ್ಟು ಹೆಚ್ಚಲಿದೆ’

‘ಎಲಿವೇಟೆಡ್‌ ಕಾರಿಡಾರ್‌ ನಿರ್ಮಾಣದಿಂದ ನಗರದಲ್ಲಿ ಕಾರುಗಳ ಸಂಖ್ಯೆ ಮತ್ತಷ್ಟು ಹೆಚ್ಚಲಿದೆ. ಇದರಿಂದ ಸಂಚಾರ ದಟ್ಟಣೆ ಸಮಸ್ಯೆ ಇನ್ನಷ್ಟು ಬಿಗಡಾಯಿಸಲಿದೆ’ ಎಂದು ವರ್ಮಾ ಭವಿಷ್ಯ ನುಡಿದರು.

‘ಅಮೆರಿಕದಂತಹ ರಾಷ್ಟ್ರದಲ್ಲಿ ಪ್ರತಿ ಸಾವಿರ ಜನಸಂಖ್ಯೆಗೆ 800 ಕಾರುಗಳಿದ್ದರೆ, ನಮ್ಮಲ್ಲಿ 150 ಕಾರುಗಳಿವೆ. ಕಾರುಗಳ ವಿಚಾರದಲ್ಲಿ ನಮ್ಮಲ್ಲಿನ ಪರಿಸ್ಥಿತಿ ಇನ್ನೂ ಕೈಮೀರುವ ಹಂತ ತಲುಪಿಲ್ಲ. ಈಗಲೇ ಎಚ್ಚೆತ್ತುಕೊಂಡು ಖಾಸಗಿ ಕಾರು ಬಳಕೆಗೆ ಕಡಿವಾಣ ಹಾಕಿ ಸಾರ್ವಜನಿಕ ಸಾರಿಗೆ ಬಳಕೆಗೆ ಉತ್ತೇಜನ ನೀಡಬೇಕಿದೆ’ ಎಂದರು.

‘ಎಲೆಕ್ಟ್ರಿಕ್ ಕಾರು ಬಳಕೆಗೆ ಉತ್ತೇಜನಕರವಾದ ವಾತಾವರಣ ನಮ್ಮಲ್ಲಿ ಇನ್ನೂ ಸೃಷ್ಟಿಯಾಗಿಲ್ಲ. ಹಾಗಾಗಿ ಕಾರುಗಳ ಜೊತೆಗೆ ಪೆಟ್ರೋಲಿಯಂ ಇಂಧನದ ಮೇಲಿನ ಅವಲಂಬನೆ ಹೆಚ್ಚಲಿದೆ. ಇದರಿಂದ ನಗರದಲ್ಲಿ ವಾಯುಮಾಲಿನ್ಯ ಮತ್ತಷ್ಟು ಉಲ್ಬಣಗೊಳ್ಳಲಿದೆ’ ಎಂದರು.

ಶೇ 20ರಷ್ಟು ಮರಗಳ ಸ್ಥಳಾಂತರ?

ಈ ಯೋಜನೆಯ ಕಾಮಗಾರಿ ಸಲುವಾಗಿ ಕಡಿಯಬೇಕಾಗಿ ಬರುವ ಒಟ್ಟು ಮರಗಳಲ್ಲಿ ಶೇ 20ರಷ್ಟು ಮರಗಳನ್ನು ಬೇರೆ ಕಡೆ ಮರು ನಾಟಿ ಮಾಡಬೇಕು. ಒಂದು ಮರ ಕಡಿದರೆ ಅದಕ್ಕೆ ಪ್ರತಿಯಾಗಿ 10 ಸಸಿಗಳನ್ನು ನೆಟ್ಟು ಬೆಳಸಬೇಕು ಎಂಬ ಷರತ್ತನ್ನು ವಿಧಿಸಲಾಗಿದೆ.

ನೆಲ ಮಟ್ಟದ ರಸ್ತೆಯಲ್ಲಿ ವಿಭಜಕಗಳಲ್ಲಿ  ಎರಡೂ ಬದಿ 2 ಸಾಲುಗಳಲ್ಲಿ ಸಸಿಗಳನ್ನು ಬೆಳೆಸಬೇಕು. ಎತ್ತರಿಸಿದ ರಸ್ತೆಯ ವಿಭಜಕದಲ್ಲಿ ಕುಂಡಗಳಲ್ಲಿ ಹೂಗಿಡ ಬೆಳೆಸಬೇಕು.

ವರ್ಟಿಕಲ್‌ ಗಾರ್ಡನ್‌: ಕಾರಿಡಾರ್‌ನ ನೆಲಮಟ್ಟದ ರಸ್ತೆಗಳಲ್ಲಿ ಪಿಲ್ಲರ್‌ಗಳಲ್ಲಿ 2 ಮೀ ಎತ್ತರದವರೆಗೆ ವರ್ಟಿಕಲ್‌ ಗಾರ್ಡನ್‌ ಬೆಳೆಸಬೇಕು ಎಂದೂ ಷರತ್ತು ವಿಧಿಸಲಾಗಿದೆ.

ಪ್ರಖರ ಬೆಳಕು ತಡೆ ಪರದೆ ಹೇಗಿರಬೇಕು?

* ಈ ಪರದೆಯು ರಸ್ತೆ ಮಟ್ಟದಿಂದ ಕನಿಷ್ಠ 1.8 ಮೀ ಎತ್ತರ ಇರಬೇಕು.

* 0 ಡಿಗ್ರಿಯಿಂದ 20 ಡಿಗ್ರಿ ಕೋನದಲ್ಲಿ ಬೆಳಕನ್ನು ತಡೆಯಬೇಕು.

* ನೀರು ಹಾಗೂ ನೇರಳಾತೀತ ಕಿರಣಗಳಿಗೆ ಪ್ರತಿರೋಧಕ ಗುಣ ಹೊಂದಿರಬೇಕು. ‌

* ಸವೆತಕ್ಕೊಳಗಾಗಬಾರದು.

* –10 ಡಿಗ್ರಿಯಿಂದ 60 ಡಿಗ್ರಿ ಸೆಂಟಿಗ್ರೇಡ್‌ ಉಷ್ಣಾಂಶ ತಡೆದುಕೊಳ್ಳಬೇಕು. 

* ಗಂಟೆಗೆ 150 ಕಿ.ಮೀ ವೇಗದಲ್ಲಿ ಗಾಳಿ ಬೀಸಿದರೂ ತಾಳಿಕೊಳ್ಳಬೇಕು

ಕಾರಿಡಾರ್‌ನಲ್ಲಿ ಏನೆಲ್ಲ ಸೌಲಭ್ಯ ಕಲ್ಪಿಸಬೇಕು?

* ರಸ್ತೆ ಬದಿ ಸೈನೇಜ್‌ಗಳು

* ಪಾದಚಾರಿಗಳಿಗೆ ಸೌಕರ್ಯ

* ಮರ ಬೆಳೆಸುವಿಕೆ

* ಟ್ರಕ್‌ ನಿಲುಗಡೆ ಪಥ

* ಬಸ್‌ ಬೇ ಹಾಗೂ ಪ್ರಯಾಣಿಕರ ತಂಗುದಾಣ

* ವಿಶ್ರಾಂತಿಗೃಹ

* ಬೀದಿ ದೀಪ

* ತುರ್ತು ಕರೆ ಪೆಟ್ಟಿಗೆ (ಇಸಿಬಿ) ಹಾಗೂ ಸಂದೇಶ ಫಲಕ (ವಿಎಂಎಸ್‌)

* ಸಂಪರ್ಕ ಕೊಳವೆಗಳು ಹಾದುಹೋಗಲು ಪ್ರತ್ಯೇಕ ವ್ಯವಸ್ಥೆ

* ಟೆಲಿಕಾಂ ಸೌಕರ್ಯ

* ಸಂಚಾರ ಗಸ್ತು ಘಟಕ

* ಸಂಚಾರ ನೆರವು ಘಟಕ

* ಎಟಿಎಂಗಳು

* ವೈದ್ಯಕೀಯ ನೆರವು ಘಟಕ ಮತ್ತು ಆಂಬುಲೆನ್ಸ್‌

* ವಾಹನ ರಕ್ಷಣಾ ಘಟಕ ಮತ್ತು ಕ್ರೇನ್‌ ಸೌಕರ್ಯ

* ಸಿಸಿಟಿವಿ ಕ್ಯಾಮೆರಾಗಳು

* ಭೂದೃಶ್ಯ ವರ್ಧನೆ ಸುರಕ್ಷತಾ ಕಾರ್ಯ

* ವಿಭಜಕಗಳಲ್ಲಿ ಬ್ಲಿಂಕರ್‌ಗಳು

* ರಸ್ತೆ ಸುರಕ್ಷತಾ ಕ್ರಮಗಳು

* ಉಕ್ಕಿನ ರಚನೆಗಳ ಹೊರಭಾಗದಲ್ಲಿ ಪೇಂಟಿಂಗ್

* ಹೈಮಾಸ್ಟ್‌ ದೀಪದ ವ್ಯವಸ್ಥೆ

* ಟೋಲ್‌ ಪ್ಲಾಜಾ

 

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 3

  Sad
 • 0

  Frustrated
 • 0

  Angry

Comments:

0 comments

Write the first review for this !