ಪತಿ ಗೆಲುವಿಗೆ ಜ್ಯೋತಿ ಜೋಶಿ ಕಸರತ್ತು

ಮಂಗಳವಾರ, ಏಪ್ರಿಲ್ 23, 2019
25 °C
‘ಪತಿ, ನಾನು ಮುಖ ನೋಡಿಕೊಂಡು ತಿಂಗಳೇ ಕಳೆದಿದೆ’

ಪತಿ ಗೆಲುವಿಗೆ ಜ್ಯೋತಿ ಜೋಶಿ ಕಸರತ್ತು

Published:
Updated:
Prajavani

ಹುಬ್ಬಳ್ಳಿ: ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಂತೆ ಗೆಲುವಿಗಾಗಿ ಅಭ್ಯರ್ಥಿಗಳು ಮಾತ್ರವಲ್ಲ ಅವರ ಕುಟುಂಬದವರೂ ಬೆವರು ಹರಿಸುತ್ತಿದ್ದಾರೆ. ನಾಲ್ಕನೇ ಬಾರಿಗೆ ಲೋಕಸಭೆ ಪ್ರವೇಶಿಸುವ ಉಮೇದಿನಿಂದ ಚುನಾವಣೆ ಎದುರಿಸುತ್ತಿರುವ ಹಾಲಿ ಸಂಸದ ಪ್ರಹ್ಲಾದ ಜೋಶಿ ಅವರ ವಿಜಯಕ್ಕೆ ಪತ್ನಿ ಜ್ಯೋತಿ ಜೋಶಿ ಅವಿರತ ದುಡಿಯುತ್ತಿದ್ದಾರೆ.

ಹುಬ್ಬಳ್ಳಿಯ ಜೋಳದ ಓಣಿಯ ಅಂಬಾಭವಾನಿ ದೇವಸ್ಥಾನದಲ್ಲಿ ಗುರುವಾರ ಪೂಜೆ ಸಲ್ಲಿಸಿ ಪ್ರಚಾರ ಆರಂಭಿಸಿದರು. ಕಾರ್ಯಕರ್ತರೊಂದಿಗೆ ಮನೆ, ಮನೆಗೆ ಭೇಟಿ ನೀಡಿ ಬಿಜೆಪಿಗೆ ಮತ ನೀಡುವಂತೆ ಮನವಿ ಮಾಡಿದರು. ಅಭಿವೃದ್ಧಿ ಕಾರ್ಯಗಳ ಸಂಕ್ಷಿಪ್ತ ಮಾಹಿತಿ ಇರುವ ಕರಪತ್ರ ನೀಡಿ, ಅಭ್ಯರ್ಥಿ ಸಾಧನೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಕೆಲಸಗಳನ್ನು ನೋಡಿ ಮತ್ತೊಂದು ಅವಕಾಶ ನೀಡುವಂತೆ ಕೋರಿದರು.

ಜೋಳದ ಓಣಿಯಲ್ಲಿ ಗುರುವಾರ ಪ್ರಚಾರ ನಡೆಸಿದ ಜ್ಯೋತಿ ಜೋಶಿ ಅವರಿಗೆ ಅಲ್ಲಿನ ಅಭಿಮಾನಿಗಳು ಆರತಿ ಬೆಳಗಿ ಶುಭ ಹಾರೈಸಿದರು.

ಉರಿ ಬಿಸಿಲಿನಲ್ಲಿ ಪ್ರಚಾರ ಮಾಡುತ್ತಿರುವ ಅವರಿಗೆ ಪಕ್ಷದ ಅಭಿಮಾನಿಗಳು ಮನೆಯೊಳಗೆ ಕರೆದು ತಂಪು ಪಾನೀಯ ನೀಡಿ ತೋರುವ ಪ್ರೀತಿ– ಕಾಳಜಿ ದಣಿವು ಮರೆಸುತ್ತಿದೆ. ಜನರ ಪ್ರೀತಿ ಮಾತ್ರವಲ್ಲ, ಅವರ ಕೋಪವನ್ನು ಸಹ ಸಂಸದರ ಪತ್ನಿ ಎದುರಿಸಿದ್ದಾರೆ. ‘ರಸ್ತೆ ಸರಿ ಇಲ್ಲ, ನೀರಿನ ಸಮಸ್ಯೆ ಇದೆ’ ಎಂಬ ಪ್ರಶ್ನೆಗೆ ಕಸಿವಿಸಿಗೊಂಡಿದ್ದೂ ಇದೆ.

‘ಒಂದು ತಿಂಗಳಿನಿಂದ ಪತಿಯ ಪರ ಪ್ರಚಾರ ನಡೆಸುತ್ತಿದ್ದೇನೆ. ಹುಬ್ಬಳ್ಳಿ, ಧಾರವಾಡ, ಕುಂದಗೋಳದಲ್ಲಿ ಪ್ರಚಾರ ಮಾಡಿದ್ದೇನೆ. ಜೋಶಿ ಅವರು ಒಳ್ಳೆಯ ಕೆಲಸ ಮಾಡಿದ್ದಾರೆ ನೀವು ಬರದಿದ್ದರೂ ಗೆಲ್ಲುತ್ತಾರೆ ಎಂದು ಹೆಚ್ಚಿನ ಜನರು ಹೇಳುತ್ತಾರೆ. ರಸ್ತೆ ರಿಪೇರಿ ಆಗಿಲ್ಲ, ಕುಡಿಯುವ ನೀರಿನ ಸಮಸ್ಯೆ ಇದೆ, ಬೀದಿ ದೀಪ ಇಲ್ಲ ಎಂದು ದೂರಿದವರೂ ಇದ್ದಾರೆ’ ಎಂದು ‘ಪ್ರಜಾವಾಣಿ’ಗೆ ಪ್ರಚಾರದ ಅನುಭವಗಳನ್ನು ವಿವರಿಸಿದರು.

‘ಜೋಶಿ ಅವರೂ ಪ್ರಚಾರದಲ್ಲಿ ತೊಡಗಿಸಿಕೊಂಡು ತಿಂಗಳುಗಳೇ ಕಳೆದಿವೆ. ಮನೆಯಲ್ಲಿ ಮಕ್ಕಳೊಂದಿಗೆ ಮಾತನಾಡಲು ಸಹ ಅವರಿಗೆ ಸಮಯ ಸಿಗುತ್ತಿಲ್ಲ. ನಿಜ ಹೇಳಬೇಕೆಂದರೆ, ನಾನು, ಅವರು ಪರಸ್ಪರ ಮುಖ ನೋಡಿ, ಕುಳಿತು ಮಾತನಾಡಿ ತಿಂಗಳೇ ಆಗಿದೆ. ಅವರು ಮುಂಜಾನೆ ಹೋದರೆ, ಮತ್ತೆ ಬರುವುದು ಮಧ್ಯರಾತ್ರಿ 1 ಗಂಟೆಗೆ. ನಾನೂ ಸಹ ಬೆಳಿಗ್ಗೆಯಿಂದ ಸಂಜೆ ವರೆಗೆ ಪ್ರಚಾರ ಮಾಡುತ್ತಿದ್ದೇನೆ’ ಎಂದು ತಿಳಿಸಿದರು.

ಸ್ಥಳೀಯ ಮುಖಂಡರು ಅವರಿಗೆ ಸಾಥ್ ನೀಡಿದರು. ಭಾರತ್ ಮಾತಾಕಿ ಜೈ, ದೇಶಕ್ಕೆ ಮೋದಿ ಧಾರವಾಡಕ್ಕೆ ಜೋಶಿ ಘೋಷಣೆ ಮೊಳಗುತ್ತಲೇ ಇದ್ದವು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !