ಬುಧವಾರ, ನವೆಂಬರ್ 20, 2019
25 °C
ರಕ್ತ ಚೆಲ್ಲಿ ಶೋಕ ವ್ಯಕ್ತಪಡಿಸಿದ ಶಿಯಾಗಳು

ಶ್ರದ್ಧಾ ಭಕ್ತಿಯ ಮೊಹರಂ ಆಚರಣೆ

Published:
Updated:
Prajavani

ಬೀದರ್: ಹಿಂದೂ-ಮುಸ್ಲಿಮರ ಭಾವೈಕ್ಯದ ಸಂಕೇತವಾದ ಮೋಹರಂ ಅನ್ನು ಜಿಲ್ಲೆಯಾದ್ಯಂತ ಮಂಗಳವಾರ ವಿಭಿನ್ನ ರೀತಿಯಲ್ಲಿ ಆಚರಿಸಲಾಯಿತು. ಶಿಯಾ ಸಮುದಾಯದವರು ಚಿಕ್ಕ ಶಸ್ತ್ರಗಳನ್ನು ಕಟ್ಟಿದ ಸರಪಳಿಯಿಂದ ಮೈಗೆ ಹೊಡೆದುಕೊಂಡು ಭಕ್ತಿ ಸೇವೆ ಸಲ್ಲಿಸಿದರೆ, ಸುನ್ನಿ ಸಮುದಾಯದವರು ಪಂಜಾ ಹಾಗೂ ಅಲ್ಲಂ ಪ್ರತಿಕೃತಿ ಸ್ಥಾಪಿಸಿ ಮೆರವಣಿಗೆ ನಡೆಸಿದರು.

ನಗರದ ಓಲ್ಡ್‌ಸಿಟಿ, ತಾಲ್ಲೂಕಿನ ಅಮಲಾಪುರ, ಸೋಲಪುರ, ತಾಜಲಾಪುರ, ಫತೇಪುರ, ಸಿರ್ಸಿ (ಎ), ಭಾಲ್ಕಿ ತಾಲ್ಲೂಕಿನ ಬ್ಯಾಲಹಳ್ಳಿ ಗ್ರಾಮಗಳಲ್ಲಿ ಪ್ರತಿಷ್ಠಾಪಿಸಿದ್ದ ಪೀರ್‌ಗಳಿಗೆ ಹಿಂದೂ-ಮುಸ್ಲಿಮರು ಸಾಮೂಹಿಕವಾಗಿ ಪೂಜೆ ಮಾಡಿ ಸಕ್ಕರೆ, ಪುಟಾಣಿ ವಿತರಿಸಿದರು.

ಭಕ್ತರು ಕುಟುಂಬದ ಸದಸ್ಯರೊಂದಿಗೆ ಸಾರ್ವಜನಿಕ ಸ್ಥಳದಲ್ಲಿ ಸ್ಥಾಪಿಸಿದ ಪೀರ್‌ಗಳಿಗೆ ಹೂವು ಹಾಗೂ ವಿಳ್ಯೆದೆಲೆಯ ಮಾಲೆ ಹಾಕಿದರು. ಕೆಲವರು ಮನೆಯಲ್ಲಿ ಸಿದ್ಧಪಡಿಸಿ ತಂದಿದ್ದ ಮಾಲಿದ್ದಿಯನ್ನು ನೈವೇದ್ಯ ರೂಪದಲ್ಲಿ ಸಮರ್ಪಿಸಿದರು. ಬೆಳಿಗ್ಗೆಯಿಂದ ಸಂಜೆ ವರೆಗೂ ಧೂಪ ಬೆಳಗಿಸಿದರು. ಮೌಲ್ವಿಗಳು ನವಿಲುಗರಿಯಿಂದ ಭಕ್ತರ ತಲೆಯ ಮೇಲೆ ಸವರಿ ಆಶೀರ್ವಾದ ಮಾಡಿದರು.

ಗ್ರಾಮಗಳಲ್ಲಿ ಪಂಜಾ ಹಾಗೂ ಅಲ್ಲಂ ಪ್ರತಿಕೃತಿಯ ಮೆರವಣಿಗೆ ನಡೆಯಿತು. ಜಾನಪದ ಕಲಾವಿದರು ಮೊಹರಂ ಪದಗಳನ್ನು ಹಾಡಿ ನೆರೆದ ಭಕ್ತರನ್ನು ರಂಜಿಸಿದರು. ಹೆಜ್ಜೆ ಮೇಳದವರು ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಪ್ರೇಕ್ಷಕರ ಗಮನ ಸೆಳೆದರು.

ಬೀದರ್‌ ನಗರದ ಪನ್ಸಾಲ್‌ ತಾಲೀಂ, ನೂರಖಾನ್‌ ತಾಲೀಂ, ಸಿದ್ಧಿ ತಾಲೀಂನಲ್ಲಿಯ ಸಿದ್ಧಿ ಪೀರ್‌ಗಳಿಗೆ ಹಿಂದೂ–ಮುಸ್ಲಿಮರು ಪೂಜೆ ಸಲ್ಲಿಸಿದರು. ಸಂಜೆ ವೇಳೆಗೆ ಚೌಬಾರಾದಿಂದ ಫತೇದರ್ವಾಜಾ ವರೆಗೆ ಧಾರ್ಮಿಕ ಘೋಷಣೆಯೊಂದಿಗೆ ಪೀರ್‌ಗಳ ಮೆರವಣಿಗೆ ನಡೆಯಿತು.

ನಗರದ ಇರಾನಿ ಕಾಲೊನಿಯ ಶಿಯಾ ಮುಸ್ಲಿಮರು ಇಮಾಮ ಹುಸೇನರ ಸ್ಮರಣೆಯಲ್ಲಿ ಉಪವಾಸ ವೃತ ಕೈಗೊಂಡು ಶೋಕ ಆಚರಿಸಿದರು. ಬೆಳಿಗ್ಗೆ ಇರಾನಿ ಕಾಲೊನಿಯಿಂದ ಮೆರವಣಿಗೆ ಹೊರಟು ‘ಯಾ ಹುಸೇನ್..., ಯಾ ಹುಸೇನ್...’ ಎಂದು ನಾಮಸ್ಮರಣೆ ಮಾಡುತ್ತ ಕೈಗಳಿಂದ ಬಲವಾಗಿ ಎದೆ ಬಡಿದುಕೊಳ್ಳುತ್ತ ರೈಲ್ವೆ ನಿಲ್ದಾಣ ಮಾರ್ಗವಾಗಿ ಹರಳಯ್ಯ ವೃತ್ತಕ್ಕೆ ಬಂದರು.

ಚಿಕ್ಕ ಚಿಕ್ಕ ಹರಿತವಾದ ಚಾಕುಗಳನ್ನು ಸಿಕ್ಕಿಸಿದ್ದ ಸರಪಳಿಯಿಂದ ದೇಹದ ಮೇಲೆ ರಕ್ತ ಹೊರ ಬರುವ ವರೆಗೂ ಹೊಡೆದುಕೊಂಡು ಇಮಾಮ್ ಹುಸೇನರಿಗೆ ಭಕ್ತಿ ನಮನ ಸಲ್ಲಿಸಿದರು. ನಂತರ ಬದ್ರೊದ್ದೀನ್ ಕಾಲೊನಿಗೆ ತೆರಳಿ ಅಲ್ಲಿಯ ಬಾವಿಯಿಂದ ನೀರು ಎತ್ತಿ ಸಿಂಪರಣೆ ಮಾಡಿಕೊಂಡು ಶೋಕಾಚರಣೆ ಮುಕ್ತಾಯಗೊಳಿಸಿದರು.

ಮಹಿಳೆಯರು, ಯುವಕರು ಹಾಗೂ ಪುರುಷರು ಕಪ್ಪು ಬಟ್ಟೆ ಧರಿಸಿದ್ದರು.

ಪ್ರತಿಕ್ರಿಯಿಸಿ (+)