ಭಾನುವಾರ, ಆಗಸ್ಟ್ 25, 2019
28 °C

ವೋಟರ್‌ ಐಡಿ ಪತ್ತೆ ಪ್ರಕರಣ: ಅನರ್ಹ ಶಾಸಕ ಮುನಿರತ್ನ ವಿರುದ್ಧದ ಅರ್ಜಿ ವಾಪಸು

Published:
Updated:
Prajavani

ಬೆಂಗಳೂರು: ‘ರಾಜರಾಜೇಶ್ವರಿ ನಗರದ ಫ್ಲ್ಯಾಟ್‌ನಲ್ಲಿನ ಮತದಾರರ ಗುರುತಿನ ಚೀಟಿ ಪತ್ತೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ನಿರ್ದೇಶಿಸಬೇಕು’ ಎಂದು ಕೋರಿ ಹೈಕೋರ್ಟ್‌ನಲ್ಲಿ ಸಲ್ಲಿಸಲಾಗಿದ್ದ ರಿಟ್‌ ಅರ್ಜಿಯನ್ನು ಅರ್ಜಿದಾರರು ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಹಿಂಪಡೆದಿದ್ದಾರೆ.

ಈ ಕುರಿತಂತೆ ಅರ್ಜಿದಾರ ಎನ್‌.ರಾಕೇಶ್ ಪರ ವಕೀಲ ವೆಂಕಟೇಶ್ ಪಿ.ದಳವಾಯಿ ಅವರು ಬುಧವಾರ ನ್ಯಾಯಮೂರ್ತಿ ಮೈಕೆಲ್‌ ಕುನ್ಹ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಮೆಮೊ (ಜ್ಞಾಪನಾ ಪತ್ರ) ಸಲ್ಲಿಸಿದರು. ಮೆಮೊ ದಾಖಲಿಸಿಕೊಂಡ ನ್ಯಾಯಪೀಠ ಅರ್ಜಿ ವಾಪಸು ಪಡೆಯಲು ಸಮ್ಮತಿಸಿತು.

ಜಾಲಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯ ಎಸ್‌ಎಲ್‌ವಿ ಪಾರ್ಕ್‌ ವ್ಯೂವ್‌ ಅಪಾರ್ಟ್‌ಮೆಂಟ್‌ನಲ್ಲಿ2018ರ ವಿಧಾನಸಭಾ ಚುನಾವಣೆ ವೇಳೆ ಮೇ 12ರಂದು ದೊರೆತಿದ್ದ 10 ಸಾವಿರಕ್ಕೂ ನಕಲಿ ಗುರುತಿನ ಚೀಟಿ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಕಾರ್ಯಕರ್ತ ಎನ್‌.ರಾಕೇಶ್ ಈ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಪೊಲೀಸರು ಈಗಾಗಲೇ ತನಿಖೆ ನಡೆಸಿ ಮುನಿರತ್ನ ಸೇರಿದಂತೆ 34 ಜನರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

ಮುನಿರತ್ನ ಅವರು ಇತ್ತೀಚೆಗಷ್ಟೇ ಕಾಂಗ್ರೆಸ್‌ ಪಕ್ಷ ತೊರೆದಿದ್ದು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಂತೆಯೇ ವಿಧಾನಸಭಾಧ್ಯಕ್ಷರು ಇವರು ಶಾಸಕ ಸ್ಥಾನ ಅನರ್ಹಗೊಳಿಸಿರುವುದನ್ನೂ ಇಲ್ಲಿ ಸ್ಮರಿಸಬಹುದು. ‘ಈ ರಿಟ್‌ ಅರ್ಜಿಯನ್ನು ಮುಂದುವರಿಸಲು ನಮಗೆ ಅನುವು ಮಾಡಿಕೊಡಿ’ ಎಂದು ಕೋರಿ ಮುನಿರಾಜು ಗೌಡ ಮತ್ತು ಮಂಜುನಾಥ ರೆಡ್ಡಿ ಇದೇ 13ರಂದು ಸೇರ್ಪಡೆ ಅರ್ಜಿ ಸಲ್ಲಿಸಿದ್ದರು.

Post Comments (+)