ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಳ್ಳಗಾಗಿ ಬದಲಾಗಲಿವೆ ಮೊಬೈಲ್‌, ಟಿ.ವಿ, ಕಂಪ್ಯೂಟರ್‌!

ತಂತ್ರಜ್ಞಾನದ ಚಿತ್ರಣವನ್ನೇ ಬದಲಿಸಲಿದೆ ಗ್ರಫೀನ್‌ l ‘ಅರಿಮೆ’ ಮಾತುಕತೆಯಲ್ಲಿ ವಿಜ್ಞಾನಿ ಹೇಳಿಕೆ
Last Updated 31 ಮಾರ್ಚ್ 2019, 19:55 IST
ಅಕ್ಷರ ಗಾತ್ರ

ಬೆಂಗಳೂರು: ಕೈಗಡಿಯಾರವನ್ನು ಕಟ್ಟಿಕೊಳ್ಳದೆಯೇ ಕೈ ಮೇಲೆ ಅದರ ಪಡಿಯಚ್ಚು ಮೂಡಿಸಿ, ಅದನ್ನೇ ಮಾಹಿತಿ ಪಡೆಯಲು ಬಳಸಲು ಸಾಧ್ಯವಾದರೆ ಹೇಗೆ? ಮೊಬೈಲ್, ಟಿ.ವಿ, ಕಂಪ್ಯೂಟರ್ ತೆಳ್ಳನೆಯ ಹಾಳೆಯ ರೂಪದಲ್ಲಿದ್ದರೆ ಅದರ ಮಜಾ ಹೇಗಿರುತ್ತದೆ?

ನಿತ್ಯ ಬಳಕೆಯ ಬಹುತೇಕ ವಸ್ತುಗಳು ಉದ್ದ, ಅಗಲ ಮತ್ತು ಎತ್ತರದಿಂದ ಕೂಡಿರುವ 3 ಆಯಾಮಗಳಿಂದ (3ಡಿ) ಕೂಡಿರುತ್ತವೆ. ಅವುಗಳೆಲ್ಲ ಕೇವಲ ಎರಡು ಆಯಾಮಗಳ ರೂಪ ಪಡೆದರೆ ಏನೆಲ್ಲ ಅನುಕೂಲಗಳಾಗುತ್ತವೆ. ಈ ನಿಟ್ಟಿನಲ್ಲಿ ನಡೆಯುತ್ತಿರುವ ಸಂಶೋಧನೆಗಳೇನು?

ಮುನ್ನೋಟ ಪ್ರಕಾಶನದ ವತಿಯಿಂದ ಭಾನುವಾರ ಇಲ್ಲಿ ಏರ್ಪಡಿಸಿದ್ದ ‘ಅರಿಮೆ’ ಮಾತುಕತೆಯಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯ ಪ್ರಾಜೆಕ್ಟ್‌ ವಿಜ್ಞಾನಿ ಎಂ.ರೇಖಾ ಅವರು 2ಡಿ ಪ್ರಪಂಚದಲ್ಲಿ ಆಗುತ್ತಿರುವ ಈ ಬದಲಾವಣೆಗಳ ಕುರಿತು ಬೆಳಕು ಚೆಲ್ಲಿದರು.

‘ಗ್ರಫೀನ್‌ ಎಂಬ ಕಾರ್ಬನ್‌ನ ಪ್ರತಿರೂಪ ಈ ಎಲ್ಲ ಬದಲಾವಣೆಗಳ ಹಿಂದಿನ ವಸ್ತು. ಆರು ಬದಿಯ ರಚನೆಯನ್ನು ಹೊಂದಿರುವ ಇದರ ಅಣುಗಳು ಒಂದೊಂದು ಮೂಲೆಯಲ್ಲೂ ಮೂರು ಇತರ ಅಣುಗಳ ಜೊತೆ ಬೆಸೆದು ಕೊಂಡಿರುತ್ತದೆ. ಇದರ ವಿಶಿಷ್ಟ ವಿನ್ಯಾಸದಿಂದಾಗಿ ಎಲೆಕ್ಟ್ರಾನ್‌ಗಳ ಚಲನೆ ಸಾಧ್ಯವಾಗುತ್ತದೆ. 2 ಡಿ ಆಯಾಮದ ವಸ್ತುಗಳನ್ನು ರೂಪಿಸುವಲ್ಲಿ ಇದರ ಕೊಡುಗೆ ಪ್ರಮುಖವಾದುದು. ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗೆ ಇದು ನಾಂದಿ ಹಾಡಿದೆ’ ಎಂದು ಅವರು ತಿಳಿಸಿದರು.

‘ಗ್ರಫೀನ್‌ ಒಂದು ಏಕ ಪದರದ ಗ್ರಾಫೈಟ್‌. ಇದು ಕೇವಲ ಒಂದು ಅಣುವಿನ ಪದರದಷ್ಟು ಮಾತ್ರ ದಪ್ಪವಿರುತ್ತದೆ. ಪಾರದರ್ಶಕವಾಗಿರುವ ಗ್ರಫೀನ್‌ ಬಾಗುವಿಕೆಯ ಗುಣ ಲಕ್ಷಣವನ್ನೂ ಹೊಂದಿದೆ. ಮೈನಸ್‌ 149 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶದಲ್ಲಿ ಸೂಪರ್‌ ಕಂಡಕ್ಟಿವಿಟಿ ಗುಣವನ್ನು ಪಡೆಯುತ್ತದೆ. ಈ ಗುಣವೇ ತಂತ್ರಜ್ಞಾನ ಕ್ಷೇತ್ರದಲ್ಲಿ ಇದಕ್ಕೆ ಮಹತ್ವ ತಂದುಕೊಟ್ಟಿದೆ’ ಎಂದರು.

‘ಜೇಬಿನಲ್ಲಿ ಅಂಗೈಯಗಲದ ಮೊಬೈಲ್‌ ಸಾಧನ ಇಟ್ಟುಕೊಳ್ಳುವ ಬದಲು ಮಡಚಿ, ಬಾಗಿಸಿ ಇಟ್ಟುಕೊಳ್ಳುವ ಪರಿಕರಗಳನ್ನೂ ಇದರಿಂದ ರೂಪಿಸಬಹುದು.

ಗ್ರಫೀನ್ ಹಾಳೆಯನ್ನು ವಸ್ತ್ರದಲ್ಲೇ ಜೋಡಿಸಿ ಅದನ್ನು ಮೊಬೈಲ್‌ನಂತೆ ಬಳಸಬಹುದು. ಇದು ಬ್ಯಾಟರಿಯಂತೆಯೂ ಕಾರ್ಯ ನಿರ್ವಹಿಸಬಲ್ಲುದು. ಇದರ ತಯಾರಿ ವೆಚ್ಚವೂ ದುಬಾರಿಯಲ್ಲ. ಹಾರ್ಡ್‌ಡಿಸ್ಕ್‌ಗಳ ಸ್ಥಾನವನ್ನೂ ಇದು ಕಸಿದುಕೊಳ್ಳಲಿದೆ’ ಎಂದು ಅವರು ಭವಿಷ್ಯ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT