‘ಸಂಬಂಧ’ಕ್ಕೆ ಪೀಡಿಸಿ, ಮಹಿಳೆಯಿಂದಲೇ ಕೊಲೆಯಾದ!

ಶುಕ್ರವಾರ, ಏಪ್ರಿಲ್ 19, 2019
22 °C
ಸಲಾಕೆಯಿಂದ ಹೊಡೆದು ಹತ್ಯೆ * ಲಗ್ಗೆರೆ ಬಸ್ ನಿಲ್ದಾಣದಲ್ಲಿ ದಂಪತಿ ಸೆರೆ

‘ಸಂಬಂಧ’ಕ್ಕೆ ಪೀಡಿಸಿ, ಮಹಿಳೆಯಿಂದಲೇ ಕೊಲೆಯಾದ!

Published:
Updated:
Prajavani

ಬೆಂಗಳೂರು: ತನ್ನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಳ್ಳುವಂತೆ ಮಹಿಳೆಗೆ ಪೀಡಿಸುತ್ತಿದ್ದ ಕ್ಯಾಬ್ ಚಾಲಕ ಮಧು (30) ಎಂಬುವರನ್ನು, ಆ ಮಹಿಳೆಯೇ ಕಬ್ಬಿಣದ ಸಲಾಕೆಯಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾರೆ.

ರಾಜಗೋಪಾಲನಗರ ಸಮೀಪದ ಲವಕುಶನಗರದಲ್ಲಿ ಶನಿವಾರ ರಾತ್ರಿ 8.30ರ ಸುಮಾರಿಗೆ ಈ ಘಟನೆ ನಡೆದಿದೆ.

ಹಾಸನ ಜಿಲ್ಲೆ ಗೋಪನಹಳ್ಳಿ ಗ್ರಾಮದ ರಮ್ಯಾ (25) ಹಾಗೂ ಪತಿ ಮೋಹನ್ (30) ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಅಕ್ಕನಿಗೂ ಕಿರುಕುಳ: ಗೋಪನಹಳ್ಳಿ ಗ್ರಾಮದವರೇ ಆದ ಮಧು, ಮೋಹನ್‌ಗೆ ದೂರದ ಸಂಬಂಧಿ. ಇಬ್ಬರೂ ಒಟ್ಟಿಗೇ ನಗರಕ್ಕೆ ಬಂದು ಹುಳಿಮಾವು ಸಮೀಪದ ಬಾಡಿಗೆ ಮನೆಯಲ್ಲಿ ವಾಸವಿದ್ದರು. 4 ವರ್ಷಗಳ ಹಿಂದೆ ರಮ್ಯಾ ಅವರನ್ನು ವಿವಾಹವಾದ ಮೋಹನ್, ವಾಸ್ತವ್ಯವನ್ನು ಲವಕುಶ ನಗರಕ್ಕೆ ಬದಲಾಯಿಸಿದ್ದರು.

‘ಮಧು ಆಗಾಗ್ಗೆ ಪತಿ ಜತೆ ಮನೆಗೆ ಬಂದು ಹೋಗುತ್ತಿದ್ದ. ಅವರ ಸಂಬಂಧಿ ಎಂಬ ಕಾರಣಕ್ಕೆ ನಾನೂ ಸಲುಗೆಯಿಂದಲೇ ಮಾತನಾಡಿಸುತ್ತಿದ್ದೆ. ಆದರೆ, ಈ ನಡುವೆ ಆತನ ವರ್ತನೆಯಲ್ಲಿ ಬದಲಾವಣೆ ಆಗಿತ್ತು. ‘ನಿನ್ನನ್ನು ಕಂಡರೆ ನನಗೆ ಇಷ್ಟ. ನೀನು ನನ್ನ ಜತೆ ಸಂಬಂಧ ಇಟ್ಟುಕೊಳ್ಳಬೇಕು. ಕರೆದ ಕಡೆ ಎಲ್ಲ ಬರಬೇಕು. ಇಲ್ಲದಿದ್ದರೆ ನಿನ್ನ ನಡತೆ ಸರಿಯಿಲ್ಲವೆಂದು ಮೋಹನ್‌ಗೆ ಹೇಳಿ ಸಂಸಾರ ಹಾಳು ಮಾಡುತ್ತೇನೆ’ ಎಂದು ಬೆದರಿಸುತ್ತಿದ್ದ. ‍ಈ ವಿಷಯವನ್ನು ಪತಿಗೆ ಹೇಳಿದರೆ ತಪ್ಪು ತಿಳಿದುಕೊಳ್ಳುತ್ತಾರೆ ಎಂದು ನಾನೂ ಸುಮ್ಮನೇ ಇದ್ದೆ. ಆದರೆ, ದಿನೇ ದಿನೇ ಕಿರುಕುಳ ಹೆಚ್ಚುತ್ತಲೇ ಹೋಯಿತು’ ಎಂದು ರಮ್ಯಾ ಹೇಳಿಕೆ ಕೊಟ್ಟಿದ್ದಾಗಿ ಪೊಲೀಸರು ಹೇಳಿದರು. 

‘ಹೇಗೋ ನನ್ನ ಅಕ್ಕನ ಮೊಬೈಲ್ ಸಂಖ್ಯೆಯನ್ನೂ ಸಂಗ್ರಹಿಸಿಕೊಂಡಿದ್ದ ಮಧು, ಪ್ರತಿದಿನ ಆಕೆಗೂ ದೂರವಾಣಿ ಕರೆ ಮಾಡಿ ಪೀಡಿಸಲು ಶುರು ಮಾಡಿದ್ದ. ಪರಿಸ್ಥಿತಿ ಕೈ ಮೀರಿದ್ದರಿಂದ ಶುಕ್ರವಾರ ಪತಿಗೆ ವಿಷಯ ತಿಳಿಸಿದ್ದೆ. ಅವರು ಆತನನ್ನು ಮನೆಗೆ ಕರೆಸಿ ಬುದ್ಧಿ ಹೇಳಿ ಕಳುಹಿಸಿದ್ದರು. ಇಷ್ಟಾದರೂ, ಶನಿವಾರ ರಾತ್ರಿ ಮತ್ತೆ ಮನೆಗೆ ಬಂದು ಗಲಾಟೆ ಮಾಡುತ್ತಿದ್ದ.’

‘ನನ್ನ ಸೋದರಿಯ ಕೆನ್ನೆಗೆ ಹೊಡೆದ ಆತ, ನಂತರ ಗಂಡನ ಕೊರಳ ಪಟ್ಟಿಗೆ ಕೈ ಹಾಕಿದ್ದ. ಆಗ ಕೋಪದ ಭರದಲ್ಲಿ ಸಲಾಕೆಯಿಂದ ಹೊಡೆದುಬಿಟ್ಟೆ. ಮಧು ರಕ್ತದ ಮಡುವಿನಲ್ಲಿ ಕುಸಿದು ಬೀಳುತ್ತಿದ್ದಂತೆಯೇ ಹೆದರಿಕೆಯಾಗಿ ಮನೆಯಿಂದ ಹೊರ ನಡೆದಿದ್ದೆವು. ಲಗ್ಗೆರೆ ಬಸ್ ನಿಲ್ದಾಣದ ಬಳಿ ಹೋಗುತ್ತಿದ್ದಾಗ ಹೊಯ್ಸಳ ವಾಹನದಲ್ಲಿ ಬಂದ ಪೊಲೀಸರು, ನಮ್ಮನ್ನು ಠಾಣೆಗೆ ಕರೆದೊಯ್ದರು’ ಎಂದು ರಮ್ಯಾ ಹೇಳಿಕೆ ನೀಡಿದ್ದಾರೆ.

ನಾನೂ ಹೊಡೆದೆ: ಮೋಹನ್
‘ಪತ್ನಿ ಸಲಾಕೆಯಿಂದ ಹೊಡೆದಾಗ ಮಧು ನೆಲದ ಮೇಲೆ ಬಿದ್ದು ಒದ್ದಾಡುತ್ತಿದ್ದ. ಆಗ ಸಿಟ್ಟಿನಲ್ಲಿ ನಾನೂ ಒಮ್ಮೆ ಹೊಡೆದುಬಿಟ್ಟೆ. ಆ ಏಟಿನಿಂದಲೇ ಆತ ಸತ್ತುಹೋದ’ ಎಂದು ಮೋಹನ್ ಹೇಳಿಕೆ ಕೊಟ್ಟಿದ್ದಾರೆ. ಹೀಗಾಗಿ, ಅವರನ್ನೂ ಬಂಧಿಸಲಾಗಿದೆ ಎಂದು ರಾಜಗೋಪಾಲನಗರ ಪೊಲೀಸರು ಹೇಳಿದರು.

ಬರಹ ಇಷ್ಟವಾಯಿತೆ?

 • 12

  Happy
 • 2

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !