ಫ್ಲ್ಯಾಟ್‌ನಲ್ಲಿ ವೃದ್ಧೆಯ ಬರ್ಬರ ಹತ್ಯೆ

7

ಫ್ಲ್ಯಾಟ್‌ನಲ್ಲಿ ವೃದ್ಧೆಯ ಬರ್ಬರ ಹತ್ಯೆ

Published:
Updated:

ಬೆಂಗಳೂರು: ಸಂಪಂಗಿರಾಮ ನಗರ ಮುಖ್ಯರಸ್ತೆಯಲ್ಲಿರುವ ‘ಲಿಸಾ’ ಅಪಾರ್ಟ್‌ಮೆಂಟ್ ಸಮುಚ್ಚಯದ ಫ್ಲ್ಯಾಟ್‌ನಲ್ಲಿ ಮಂಗಳವಾರ ಸಂಜೆ ವೃದ್ಧೆಯನ್ನು ಬರ್ಬರವಾಗಿ ಕೊಲೆ ಮಾಡಿರುವ ದುಷ್ಕರ್ಮಿಯೊಬ್ಬ, ಅವರ ಮೈಮೇಲಿದ್ದ ಚಿನ್ನಾಭರಣ ಬಿಚ್ಚಿಕೊಂಡು ಹೋಗಿದ್ದಾನೆ.

ರಾಜಸ್ಥಾನದ ಸಂತೋಷಿ ಸುಲ್ತಾನ್ಯ (71) ಕೊಲೆಯಾದವರು. ಅವರ ಕುಟುಂಬ 4 ದಶಕಗಳಿಂದ ನಗರದಲ್ಲಿ ನೆಲೆಸಿದೆ. ಸಂತೋಷಿ ಪತಿ ನವರಂಗ್ ಸುಲ್ತಾನ್ಯ ಅವರು ಜೆ.ಸಿ.ರಸ್ತೆಯಲ್ಲಿ ಕಂಪ್ಯೂಟರ್ ಬಿಡಿಭಾಗಗಳ ಮಾರಾಟ ಮಳಿಗೆ ಹೊಂದಿದ್ದಾರೆ. ಮಧ್ಯಾಹ್ನ ಮನೆಗೆ ಬಂದಿದ್ದ ಅವರು, ಊಟ ಮುಗಿಸಿಕೊಂಡು ಸಂಜೆ 4 ಗಂಟೆ ಸುಮಾರಿಗೆ ಮಳಿಗೆಗೆ ತೆರಳಿದ್ದರು. ಆ ನಂತರ ಸುಮಾರು 30 ವರ್ಷದ ವ್ಯಕ್ತಿಯೊಬ್ಬ ಮನೆಗೆ ನುಗ್ಗಿ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಮೊದಲು ಸೀರೆ ಸೆರಗಿನಿಂದಲೇ ಉಸಿರುಗಟ್ಟಿಸಿರುವ ಆರೋಪಿ, ನಂತರ ಸಲಾಕೆಯಿಂದ ತಲೆಗೆ ಹೊಡೆದಿದ್ದಾನೆ. ಬಳಿಕ ‌ಚಿನ್ನದ ಸರ ಹಾಗೂ ಬಳೆಗಳನ್ನು ಬಿಚ್ಚಿಕೊಂಡು ಹೊರನಡೆದಿದ್ದಾನೆ. ಈ ವೇಳೆ ಆತ ಜೋರಾಗಿ ಬಾಗಿಲು ಎಳೆದುಕೊಂಡಿದ್ದರಿಂದ ಬಾಗಿಲು ಸ್ವಯಂಚಾಲಿತವಾಗಿ ಲಾಕ್ ಆಗಿದೆ.

ಚೆನ್ನೈನಲ್ಲಿರುವ ಸಂತೋಷಿ ಅವರ ಮಗಳು ಕುಸುಮ, ಎಂದಿನಂತೆ ಸಂಜೆ 5.30ರ ಸುಮಾರಿಗೆ ತಾಯಿಗೆ ಕರೆ ಮಾಡಿದ್ದಾರೆ. ಪ್ರತಿಕ್ರಿಯೆ ಸಿಗದಿದ್ದಾಗ ಪಕ್ಕದ ಫ್ಲ್ಯಾಟ್‌ನವರನ್ನು ಸಂಪರ್ಕಿಸಿದ್ದಾರೆ. ಅವರು ಮನೆ ಹತ್ತಿರ ಹೋಗಿ ಬಂದರೂ ಲಾಕ್ ಆಗಿದ್ದರಿಂದ ಕೊಲೆ ನಡೆದಿರುವ ವಿಚಾರ ಗೊತ್ತಾಗಿಲ್ಲ. ಎಷ್ಟೇ ಪ್ರಯತ್ನಿಸಿದರೂ ತಾಯಿ ಸಿಗದಿದ್ದಾಗ ಗಾಬರಿಗೆ ಬಿದ್ದ ಕುಸುಮ, ತಂದೆ ಹಾಗೂ ಅಣ್ಣ ಅನಿಲ್‌ಗೆ ಕರೆ ಮಾಡಿದ್ದಾರೆ. ತಕ್ಷಣ ಮನೆ ಹತ್ತಿರ ಬಂದ ಅವರು, ಇನ್ನೊಂದು ಕೀ ಬಳಸಿ ಒಳ ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ.

ಆತ್ಮಹತ್ಯೆ ಶಂಕೆ ಇತ್ತು
‘ಬಾಗಿಲು ಒಳಗಿನಿಂದ ಲಾಕ್ ಆಗಿದ್ದರಿಂದ ಹಾಗೂ ಕುತ್ತಿಗೆಗೆ ಸೀರೆ ಬಿಗಿದಿದ್ದರಿಂದ ಆರಂಭದಲ್ಲಿ ಆತ್ಮಹತ್ಯೆ ಎಂದೇ ಭಾವಿಸಿದ್ದೆವು. ಸಂತೋಷಿ ಅವರ ದೇಹ ಫ್ಯಾನಿನ ಕೆಳಗೇ ಬಿದ್ದಿತ್ತು. ನೇಣು ಹಾಕಿಕೊಂಡಾಗ ಸೀರೆಯ ಗಂಟು ಬಿಚ್ಚಿಕೊಂಡು ಕೆಳಗೆ ಬಿದ್ದಿರಬಹುದು ಎಂದುಕೊಂಡಿದ್ದೆವು. ಆದರೆ, ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು, ‘ತಲೆಗೆ ಬಲವಾದ ಆಯುಧದಿಂದ ಹೊಡೆತ ಬಿದ್ದಿದೆ’ ಎಂದರು. ಆನಂತರ ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಯುವಕನೊಬ್ಬ ಒಳಗೆ ಹೋಗಿರುವ ಅಪಾರ್ಟ್‌ಮೆಂಟ್ ಆವರಣ ಪ್ರವೇಶಿಸಿರುವುದು ಗೊತ್ತಾಯಿತು’ ಎಂದು ಸಂಪಂಗಿರಾಮನಗರ ಪೊಲೀಸರು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 4

  Sad
 • 0

  Frustrated
 • 2

  Angry

Comments:

0 comments

Write the first review for this !