ಆಸ್ತಿಗಾಗಿ ಮೈದುನನನ್ನೇ ಕೊಂದಳು

7
ಕಲಾಸಿಪಾಳ್ಯ ಪೊಲೀಸರಿಂದ ಕವಿತಾ ಬಂಧನ

ಆಸ್ತಿಗಾಗಿ ಮೈದುನನನ್ನೇ ಕೊಂದಳು

Published:
Updated:

ಬೆಂಗಳೂರು: ಕಲಾಸಿಪಾಳ್ಯ ಠಾಣೆ ವ್ಯಾಪ್ತಿಯ ದೊಡ್ಡಮಾವಳ್ಳಿಯ ಕೆಂಪಣ್ಣ ಕ್ರಾಸ್‌ನ ಮನೆಯೊಂದರಲ್ಲಿ ನಡೆದಿದ್ದ ಸುಬ್ರಮಣಿ (35) ಎಂಬುವರ ಕೊಲೆ ಸಂಬಂಧ, ಅವರ ಅತ್ತಿಗೆ ಕವಿತಾಳನ್ನು ಪೊಲೀಸರು ಬಂಧಿಸಿದ್ದಾರೆ.

‘ಜ. 2ರಂದು ಸುಬ್ರಮಣಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದರು. ಕೊಲೆ ಶಂಕೆ ವ್ಯಕ್ತಪಡಿಸಿದ ಅವರ ಸಹೋದರಿ ವೈ. ಇಂದ್ರಾಣಿ ದೂರು ನೀಡಿದ್ದರು’ ಎಂದು ಕಲಾಸಿಪಾಳ್ಯ ಪೊಲೀಸರು ಹೇಳಿದರು.

‘ತರಕಾರಿ ವ್ಯಾಪಾರ ಮಾಡುತ್ತಿದ್ದ ಸುಬ್ರಮಣಿ, 11 ವರ್ಷಗಳ ಹಿಂದೆ ರತ್ನಾ ಎಂಬುವರನ್ನು ಮದುವೆಯಾಗಿದ್ದರು. ಕೌಟುಂಬಿಕ ಕಲಹದಿಂದಾಗಿ ಪತ್ನಿಗೆ ವಿಚ್ಛೇದನ ನೀಡಿದ್ದ ಅವರು, ಅಣ್ಣ ಮಂಜುನಾಥ್‌ ಹಾಗೂ ಅಣ್ಣನ ಪತ್ನಿ ಕವಿತಾ ಜೊತೆಯಲ್ಲಿ ವಾಸವಿದ್ದರು. ಅವರದ್ದು ಸ್ವಂತ ಮನೆಯಾಗಿದ್ದರಿಂದ ಅದರಲ್ಲಿ ಸುಬ್ರಮಣಿಯದ್ದು ಪಾಲಿತ್ತು. ಆಸ್ತಿ ಹಂಚಿಕೆ ಸಂಬಂಧ ಹಲವು ಬಾರಿ ಜಗಳ ಸಹ ನಡೆದಿತ್ತು. ಅದೇ ಕಾರಣಕ್ಕೆ ಕವಿತಾ, ಅವರನ್ನು ಉಸಿರುಗಟ್ಟಿಸಿ ಕೊಂದಿದ್ದಳು’ ಎಂದು ಹೇಳಿದರು.

ಸಹಜ ಸಾವೆಂದು ನಾಟಕವಾಡಿದಳು: ‘ಜ. 2ರಂದು ಪತಿ ಮಂಜುನಾಥ್‌ಗೆ ಕರೆ ಮಾಡಿದ್ದ ಆರೋಪಿ ಕವಿತಾ, ‘ಬೆಳಿಗ್ಗೆ ತಿಂಡಿ ತಿಂದು ಮಲಗಿದ್ದ ಸುಬ್ರಮಣಿ, ವಾಪಸ್ ಎದ್ದಿಲ್ಲ. ಮಲಗಿದ್ದಲ್ಲೇ ಮೃತಪಟ್ಟಿದ್ದಾನೆ’ ಎಂದಿದ್ದಳು. ಅದು ನಿಜವೆಂದು ತಿಳಿದಿದ್ದ ಮಂಜುನಾಥ್, ಅಕ್ಕ ಇಂದ್ರಾಣಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ನಂತರ, ಅಂತ್ಯಕ್ರಿಯೆಗೆ ತಯಾರಿ ನಡೆಸುತ್ತಿದ್ದರು’ ಎಂದು ಪೊಲೀಸರು ಹೇಳಿದರು.

‘ಮನೆಗೆ ಬಂದಿದ್ದ ಇಂದ್ರಾಣಿ, ಸುಬ್ರಮಣಿ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಠಾಣೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಹೋದ ಸಿಬ್ಬಂದಿ, ಶವವನ್ನೇ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಿದ್ದರು. ಅದರ ವರದಿ ಬಂದಾಗಲೇ, ಕೊಲೆ ಎಂಬುದು ಗೊತ್ತಾಯಿತು’ ಎಂದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !