ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರೇಮಪತ್ರ’ ಬರೆದಿದ್ದಕ್ಕೆ ಗೆಳೆಯನನ್ನೇ ಕೊಂದ!

ಟವೆಲ್‌ನಿಂದ ಕುತ್ತಿಗೆ ಬಿಗಿದು ಹತ್ಯೆ * ಕೋಲಾರದ ಸೋದರರ ಸೆರೆ
Last Updated 15 ಫೆಬ್ರುವರಿ 2019, 19:40 IST
ಅಕ್ಷರ ಗಾತ್ರ

ಬೆಂಗಳೂರು: ತಾನು ಪ್ರೀತಿಸುತ್ತಿದ್ದ ಹುಡುಗಿಗೆ ಪ್ರೇಮಪತ್ರ ಬರೆದಿದ್ದ ಎಂಬ ಕಾರಣಕ್ಕೆ ಸ್ನೇಹಿತನನ್ನು ಹೊಡೆದು ಸಾಯಿಸಿದ್ದ ಕೋಲಾರದ ದೇವರಾಜು ಎಂಬಾತ ಕಾಡುಗೋಡಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಕೋಲಾರದ ತಿರುಮನಹಳ್ಳಿ ಗ್ರಾಮದ ರಾಮಮೂರ್ತಿ ಕೊಲೆಯಾದವನು. ಕೃತ್ಯಕ್ಕೆ ಸಹಕರಿಸಿದ ಕಾರಣಕ್ಕೆ ದೇವರಾಜು ಜತೆ ಆತನ ತಮ್ಮ ಸುನೀಲ್ ಕೂಡ ಜೈಲು ಸೇರಿದ್ದಾನೆ.

ತಿಂಗಳ ಹಿಂದಿನ ದ್ವೇಷ: ಗಾರೆ ಕೆಲಸ ಮಾಡಿಕೊಂಡಿದ್ದ ದೇವರಾಜು, ಗ್ರಾಮದಲ್ಲಿ ಯುವತಿಯೊಬ್ಬಳನ್ನು ಪ್ರೀತಿ ಮಾಡುತ್ತಿದ್ದ. ಅದೇ ‌ಹುಡುಗಿಯ ಹಿಂದೆ ಬಿದ್ದಿದ್ದ ರಾಮಮೂರ್ತಿ, ತಿಂಗಳ ಹಿಂದೆ ಆಕೆಗೆ ಪ್ರೇಮಪತ್ರ ಕೊಟ್ಟಿದ್ದ. ಈ ವಿಚಾರ ತಿಳಿದು ಕುಪಿತಗೊಂಡ ಆರೋಪಿ, ಆತನ ಮೇಲೆ ಮನಸೋಇಚ್ಛೆ ಹಲ್ಲೆ ನಡೆಸಿದ್ದ.

ಎರಡು ವರ್ಷಗಳಿಂದ ರಹಸ್ಯವಾಗಿದ್ದ ಪ್ರೇಮಪುರಾಣ, ಗಲಾಟೆ ಬಳಿಕ ಇಡೀ ಗ್ರಾಮಕ್ಕೇ ಗೊತ್ತಾಗಿತ್ತು. ಇದರಿಂದ ಬೇಸರಗೊಂಡ ಯುವತಿ, ದೇವರಾಜ್‌ನಿಂದಲೂ ಅಂತರ ಕಾಯ್ದುಕೊಂಡಿದ್ದಳು. ಆಗಿನಿಂದಲೂ ದ್ವೇಷ ಕಾರುತ್ತಿದ್ದ ಆರೋಪಿ, ರಾಮಮೂರ್ತಿಯನ್ನು ಮುಗಿಸಲು ಸಂಚು ರೂಪಿಸಿದ್ದ.

ಎಲೆಕ್ಟ್ರೀಷಿಯನ್ ಕೆಲಸ ಮಾಡಿಕೊಂಡಿದ್ದ ರಾಮಮೂರ್ತಿ, ‘ಸಂಪಾದನೆ ನನ್ನ ಖರ್ಚಿಗೇ ಸಾಕಾಗುತ್ತಿಲ್ಲ. ಬೆಂಗಳೂರಿಗೆ ಹೋಗಿ ದುಡಿಮೆ ಮಾಡಲು ನಿರ್ಧರಿಸಿದ್ದೇನೆ’ ಎಂದು ಕೆಲ ಸ್ನೇಹಿತರ ಬಳಿ ಹೇಳಿಕೊಂಡಿದ್ದ. ಇದೇ ಸಮಯಕ್ಕಾಗಿ ಕಾಯುತ್ತಿದ್ದ ದೇವರಾಜ್, ‘ನನಗೆ ಬೆಂಗಳೂರಿನ ಮೇಸ್ತ್ರಿಯೊಬ್ಬರ ಪರಿಚಯವಿದೆ. ನಾವಿಬ್ಬರೂ ಹೋಗಿ ಅವರಿಬ್ಬರನ್ನು ಭೇಟಿ ಮಾಡೋಣ’ ಎಂದಿದ್ದ. ಅದಕ್ಕೆ ಆತ ಒಪ್ಪಿಕೊಂಡಿದ್ದ.

ಫೆ.11ರಂದು ನಗರಕ್ಕೆ ಬಂದ ಇಬ್ಬರೂ, ಕನ್ನಮಂಗಲದಲ್ಲಿ ಮನೆಯೊಂದನ್ನು ಬಾಡಿಗೆ ಪಡೆದುಕೊಂಡಿದ್ದರು. ಅದೇ ದಿನ ಸಂಜೆ ದೇವರಾಜ್, ಸುನೀಲ್‌ನನ್ನೂ ಮನೆಗೆ ಕರೆಸಿಕೊಂಡಿದ್ದ. ರಾತ್ರಿ ಮೂವರು ಒಟ್ಟಿಗೇ ಕುಳಿತು ಪಾನಮತ್ತರಾಗಿದ್ದರು. ನಶೆಯಲ್ಲಿ ಆ ಹುಡುಗಿಯ ವಿಚಾರ ಪ್ರಸ್ತಾಪವಾಗಿದ್ದು, ದೇವರಾಜ್ ಹಾಗೂ ರಾಮಮೂರ್ತಿ ನಡುವೆ ಗಲಾಟೆ ನಡೆದಿತ್ತು. ಈ ಹಂತದಲ್ಲಿ ಸೋದರರು ಸೇರಿಕೊಂಡು ಹಿಗ್ಗಾಮುಗ್ಗಾ ಥಳಿಸಿದ್ದರು. ಕೊನೆಗೆ ಟವೆಲ್‌ನಿಂದ ಕುತ್ತಿಗೆಯನ್ನೂ ಬಿಗಿದಿದ್ದರು.

ತಾವೇ ಆಸ್ಪತ್ರೆಗೆ ಕರೆದೊಯ್ದರು: ‘ರಾಮಮೂರ್ತಿ ಪ್ರಜ್ಞೆ ಕಳೆದುಕೊಳ್ಳುತ್ತಿದ್ದಂತೆಯೇ ಆರೋಪಿಗಳು ಕ್ಯಾಬ್‌ನಲ್ಲಿ ಆತನನ್ನು ಕೋಲಾರಕ್ಕೆ ಕರೆದುಕೊಂಡು ಹೋಗಿದ್ದರು. ಅಲ್ಲಿಗೆ ಹೋದ ಬಳಿಕ ಆತನ ತಂದೆಗೆ ಕರೆಮಾಡಿ, ‘ನಿಮ್ಮ ಮಗ ಅಸ್ವಸ್ಥನಾಗಿ ಬಿದ್ದಿದ್ದ. ಕೋಲಾರದ ಇಟಿಸಿಎಂ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದೇವೆ’ ಎಂದಿದ್ದರು.

ತಪಾಸಣೆ ನಡೆಸಿದ್ದ ಅಲ್ಲಿನ ವೈದ್ಯರು, ಹೆಚ್ಚಿನ ಚಿಕಿತ್ಸೆಗಾಗಿ ಗಾಯಾಳುವನ್ನು ಆರ್‌.ಎಲ್.ಜಾಲಪ್ಪ ಆಸ್ಪತ್ರೆಗೆ ಸ್ಥಳಾಂತರಿಸಿದ್ದರು. ಮೂರು ದಿನಗಳಿಂದ ಪ್ರಜ್ಞಾಹೀನ ಸ್ಥಿತಿಯಲ್ಲೇ ಇದ್ದ ರಾಮಮೂರ್ತಿ, ಶುಕ್ರವಾರ ಬೆಳಿಗ್ಗೆ ಕೊನೆಯುಸಿರೆಳೆದಿದ.

ಗಾಯಗಳಿಂದ ಸಂಶಯ

ಕಣ್ಣು ಹಾಗೂ ತಲೆ ಊದಿಕೊಂಡಿದ್ದರಿಂದ, ‘ಸಾವಿನ ಹಿಂದೆ ದೇವರಾಜ್‌ನ ಕೈವಾಡವಿರಬಹುದು’ ಎಂದು ಸಂಶಯ ವ್ಯಕ್ತಪಡಿಸಿ ಕಾಡುಗೋಡಿ ಠಾಣೆಗೆ ದೂರು ಕೊಟ್ಟಿದ್ದರು. ಪೊಲೀಸರು ಆತನನ್ನು ವಶಕ್ಕೆ ಪಡದು ವಿಚಾರಣೆಗೆ ಒಳ‍‍‍ಪಡಿಸಿದಾಗ ತಪ್ಪೊಪ್ಪಿಕೊಂಡಿದ್ದಾನೆ. ಬಳಿಕ ಆತನ ತಮ್ಮನನ್ನೂ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT