ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಕೆಟ್‌ಗಾಗಿ ಮುಸ್ಲಿಂ ನಾಯಕರ ಸ್ಪರ್ಧೆ!

ದಕ್ಷಿಣ ಕನ್ನಡ, ಬೆಂಗಳೂರು ಕೇಂದ್ರ, ಧಾರವಾಡ ಕ್ಷೇತ್ರಗಳ ಮೇಲೆ ಕಣ್ಣು
Last Updated 20 ಮಾರ್ಚ್ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ಮುಸ್ಲಿಂ ಸಮುದಾಯದ ಮತಗಳ ಕ್ರೋಡೀಕರಣದ ಮೇಲೆ ಕಣ್ಣಿಟ್ಟಿರುವ ರಾಜ್ಯ ಕಾಂಗ್ರೆಸ್‌ ನಾಯಕರು,‌ ಯಾವ ಕ್ಷೇತ್ರಕ್ಕೆ ಈ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಗೆಲ್ಲಬಹುದು ಎಂಬ ಲೆಕ್ಕಾಚಾರದಲ್ಲಿದ್ದಾರೆ.

ಬೆಂಗಳೂರು ಕೇಂದ್ರ, ದಕ್ಷಿಣ ಕನ್ನಡ ಮತ್ತು ಧಾರವಾಡ ಕ್ಷೇತ್ರಗಳ ಪೈಕಿ ಯಾವುದಾದರೂ ಒಂದು ಅಥವಾ ಎರಡು ಕ್ಷೇತ್ರಗಳಿಂದ ಗೆಲ್ಲುವ ಸಾಮರ್ಥ್ಯ ಇರುವ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಕಾಂಗ್ರೆಸ್ ಶೋಧ ನಡೆಸುತ್ತಿದೆ.

ಈ ಮಧ್ಯೆ, ದಕ್ಷಿಣ ಕನ್ನಡ ಕ್ಷೇತ್ರವನ್ನು ಬಿಟ್ಟು ಕೊಡುವಂತೆ ಮುಸ್ಲಿಂ ಸಮುದಾಯದ ಕೆಲವು ಪ್ರಮುಖ ನಾಯಕರು ಕಾಂಗ್ರೆಸ್‌ ಹೈಕಮಾಂಡ್‌ ಮೇಲೆ ಒತ್ತಡ ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಚರ್ಚಿಸಲು ಮಂಗಳೂರು ಉತ್ತರ ಕ್ಷೇತ್ರದ ಮಾಜಿ ಶಾಸಕ ಮೊಯಿದ್ದೀನ್‌ ಬಾವಾ ಅವರನ್ನು ವರಿಷ್ಠರು ಗುರುವಾರ ದೆಹಲಿಗೆ ಬರುವಂತೆ ಬುಲಾವ್ ಕಳುಹಿಸಿದ್ದಾರೆ. ಈ ಕ್ಷೇತ್ರದಿಂದ ಮೊಯಿದ್ದೀನ್‌ ಬಾವಾ ಟಿಕೆಟ್‌ ಆಕಾಂಕ್ಷಿಯಾಗಿರುವುದರಿಂದ ವರಿಷ್ಠರ ಈ ನಡೆ ಕುತೂಹಲ ಮೂಡಿಸಿದೆ.

ಇದೇ ಕ್ಷೇತ್ರದ ಮೇಲೆ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್‌ ಮತ್ತು ವಿನಯಕುಮಾರ್‌ ಸೊರಕೆ ಕೂಡಾ ಕಣ್ಣಿಟ್ಟಿದ್ದಾರೆ. ಒಂದೊಮ್ಮೆ ಮೊಯಿದ್ದೀನ್‌ ಬಾವಾ ಅವರಿಗೆ ಟಿಕೆಟ್‌ ನೀಡಿದರೆ, ಬೆಂಗಳೂರು ಕೇಂದ್ರದಿಂದ ಹರಿಪ್ರಸಾದ್‌ ಅವರನ್ನು ಕಣಕ್ಕಿಳಿಸುವ ಬಗ್ಗೆಯೂ ಪಕ್ಷದ ನಾಯಕರು ಚಿಂತನೆ ನಡೆಸಿದ್ದಾರೆ.

ಬೆಂಗಳೂರು ಕೇಂದ್ರದ ಟಿಕೆಟ್‌ಗೂ ಭಾರಿ ಪೈಪೋಟಿ ಇದೆ. ವಿಧಾನಪರಿಷತ್‌ ಸದಸ್ಯ ರಿಜ್ವಾನ್‌ ಅರ್ಷದ್‌, ಶಾಸಕ ರೋಷನ್‌ ಬೇಗ್‌ ಮತ್ತು ಸಲಿಂ ಅಹ್ಮದ್‌ ಈ ಮೂವರೂ ತಮಗೆ ಆಪ್ತರಾಗಿರುವ ರಾಜ್ಯ ನಾಯಕರ ಮೂಲಕ ವರಿಷ್ಠರ ಮೇಲೆ ಒತ್ತಡ ಹಾಕುತ್ತಿದ್ದಾರೆ. ಅದರಲ್ಲೂ ರಿಜ್ವಾನ್‌ ಮತ್ತು ಬೇಗ್‌ ನಡುವೆ ತೀವ್ರ ಸ್ಪರ್ಧೆ ಇದೆ. ಶಾಸಕರಿಗೆ ಟಿಕೆಟ್‌ ಇಲ್ಲ ಎಂಬ ಮಾನದಂಡಕ್ಕೆ ವರಿಷ್ಠರು ಬದ್ಧರಾದರೆ, ಈ ಕ್ಷೇತ್ರದ ಟಿಕೆಟ್‌ ಹರಿಪ್ರಸಾದ್‌ ಪಾಲಾದರೂ ಅಚ್ಚರಿ ಇಲ್ಲ.

ಈ ಮಧ್ಯೆ, ಧಾರವಾಡ ಕ್ಷೇತ್ರವನ್ನೂ ತಮ್ಮ ಸಮುದಾಯದವರಿಗೆ ಬಿಟ್ಟು ಕೊಡುವಂತೆ ಮುಸ್ಲಿಂ ನಾಯಕರು ಒತ್ತಾಯಿಸುತ್ತಿದ್ದಾರೆ. ಈ ಕ್ಷೇತ್ರದಿಂದ ಮಾಜಿ ಸಂಸದ ಐ.ಜಿ. ಸನದಿ ಅವರ ಪುತ್ರ ಶಾಕೀರ್‌ ಸನದಿ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಆದರೆ, ಇಲ್ಲಿ 2014ರ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದ ವಿನಯ್‌ ಕುಲಕರ್ಣಿ ಅವರನ್ನೇ ಕಣಕ್ಕಿಳಿಸಲು ಕಾಂಗ್ರೆಸ್‌ ನಾಯಕರು ಒಲವು ಹೊಂದಿದ್ದಾರೆ
ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT