ಭಾನುವಾರ, ಆಗಸ್ಟ್ 25, 2019
28 °C
ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ನಾಗಮೋಹನ ದಾಸ್‌ ಹೇಳಿಕೆ

‘ನ್ಯಾಯಾಲಯದ ತೀರ್ಪು ವಿಮರ್ಶೆಗೊಳಪಡಲಿ’

Published:
Updated:
Prajavani

ಬೆಂಗಳೂರು: ‘ಕೆಲವು ಪ್ರಕರಣಗಳಲ್ಲಿ ನ್ಯಾಯಾಲಯಗಳು ಸಂವಿಧಾನ ವಿರೋಧಿ ತೀರ್ಪು ನೀಡುತ್ತಿವೆ. ಒಂದು ಚೌಕಟ್ಟಿನಡಿಯಲ್ಲಿಯೇ ನ್ಯಾಯಾಲಯದ ತೀರ್ಪುಗಳು ವಿಮರ್ಶೆಗೆ ಒಳಪಟ್ಟರೆ ನ್ಯಾಯೋಚಿತ ತೀರ್ಪುಗಳು ಬರಲು ಸಾಧ್ಯ’ ಎಂದು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ ದಾಸ್‌ ಅಭಿಪ್ರಾಯಪಟ್ಟರು. 

ದೀನಬಂಧು ಶಿಕ್ಷಕ ಸಂಪನ್ಮೂಲ ಕೇಂದ್ರ ಹಾಗೂ ಸ್ವಾಮಿ ವಿವೇಕಾನಂದ ಶೈಕ್ಷಣಿಕ ಅನುಸಂಧಾನ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ‘ಪ್ರತಿಯೊಬ್ಬರಿಗೂ ನ್ಯಾಯಾಲಯದ ತೀರ್ಪು ವಿಮರ್ಶಿಸಲು ಹಕ್ಕಿದೆ. ಆದರೆ, ನ್ಯಾಯಾಂಗ ನಿಂದನೆ ಬಗ್ಗೆ ಭಯ ಇರುವುದರಿಂದ ಯಾರೂ ಪ್ರಶ್ನಿಸಲು ಮುಂದಾಗುವುದಿಲ್ಲ’ ಎಂದರು. 

‘ಕಾವೇರಿ ನದಿ ನೀರು ವಿವಾದ, ರಾಮ ಮಂದಿರ, ಶಿಕ್ಷಣದ ನೀತಿ ಹಾಗೂ ಮೀಸಲಾತಿ ಸಂಬಂಧ ವಿಚಾರದಲ್ಲಿ ನ್ಯಾಯಾ
ಲಯದಲ್ಲಿ ತಜ್ಞರು ಇದ್ದಾರೆಯೇ’ ಎಂದು ಪ್ರಶ್ನಿಸಿದ ಅವರು, ‘ಆಯಾ ಕ್ಷೇತ್ರದ ವಿಚಾರಗಳನ್ನು ವಿಮರ್ಶಿಸಿ ಮತ್ತು ಕುಳಿತು ಚರ್ಚಿಸಿ ಪರಿಹಾರ ಹುಡುಕಿಕೊಳ್ಳಬೇಕು’ ಎಂದು ಅಭಿಪ್ರಾಯಪಟ್ಟರು. 

‘ದೇಶದ ಎಲ್ಲ ಸಮಸ್ಯೆಗಳನ್ನು ಪರಿಹರಿಸುವಂತೆ ನ್ಯಾಯಾಂಗದ ಮೊರೆ ಹೋಗುವುದು ಪ್ರಜಾಪ್ರಭುತ್ವಕ್ಕೆ ಮಾರಕವಾಗಲಿದೆ. ಶಾಸಕಾಂಗ ಮತ್ತು ಕಾರ್ಯಾಂಗವು ನಂಬಿಕೆ ಕಳೆದುಕೊಳ್ಳುತ್ತಿರುವ ಈ ಸಂದರ್ಭದಲ್ಲಿ ನ್ಯಾಯಾಂಗಕ್ಕೆ ಹೆಚ್ಚಿನ ಜವಾಬ್ದಾರಿ ಇದೆ’ ಎಂದರು.

ಶಿಕ್ಷಣ ತಜ್ಞ ಡಾ. ವಿ.ಪಿ. ನಿರಂಜನಾರಾಧ್ಯ, ‘ಮಾತೃಭಾಷೆ ಶಿಕ್ಷಣದ ವಿಚಾರದಲ್ಲಿ ದೊಡ್ಡ ಆಂದೋಲನ ನಡೆಯಬೇಕಿದೆ’ ಎಂದರು.

ಜಿ.ಎಸ್.ಜಯದೇವ ಮತ್ತು ಎಚ್.ಎನ್.ಮುರಳೀಧರ ರಚಿಸಿದ ‘ನೆಲದ ನುಡಿಯ ನಂಟು’ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.

‘ರಾಜ್ಯಭಾಷೆಯಲ್ಲಿ ಶಿಕ್ಷಣಕ್ಕೆ ಒತ್ತಾಯ’

‘ಮಾತೃಭಾಷೆ ಬದಲು ರಾಜ್ಯಭಾಷೆ ಎಂಬ ಪದವನ್ನು ಸೇರಿಸಿ ಪ್ರಾಥಮಿಕ ಹಂತದಿಂದ ಪ್ರೌಢಶಾಲೆಯವರೆಗೆ ರಾಜ್ಯಭಾಷೆಯಲ್ಲಿ ಶಿಕ್ಷಣ ನೀಡಬೇಕು ಎಂಬ ನಿಯಮ ಜಾರಿಗಾಗಿ ಮತ್ತೊಮ್ಮೆ ಹೋರಾಟ ಮಾಡಲಾಗುವುದು. ಸಂಸತ್ತಿನಲ್ಲಿಯೂ ಈ ಕುರಿತು ವಿಚಾರ ಮಂಡನೆಯಾಗಬೇಕು’ ಎಂದು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಚಂದ್ರಶೇಖರ ಕಂಬಾರ ಹೇಳಿದರು. 

‘ಸಾಹಿತಿಗಳು ಸೇರಿದಂತೆ ಸಾರ್ವಜನಿಕರಿಂದ ಐದು ಲಕ್ಷ ಸಹಿ ಸಂಗ್ರಹಿಸಿ ಕೇಂದ್ರ ಸರ್ಕಾರಕ್ಕೆ ಈ ಕುರಿತು ಮನವಿ ಸಲ್ಲಿಸಲಾಗಿತ್ತು. ರಾಜ್ಯಭಾಷೆಯಲ್ಲಿಯೇ ಶಿಕ್ಷಣ ಕೊಡುವ ವ್ಯವಸ್ಥೆ ಆಗಬೇಕು ಎಂದು ಅಕಾಡೆಮಿಯಲ್ಲಿ ಒತ್ತಾಯಿಸಲಾಗಿತ್ತು. ಆಗಿನ ಬಿಜೆಪಿ ಸರ್ಕಾರ ಕೂಡ ಇದಕ್ಕೆ ಒಪ್ಪಿತ್ತು. ಆದರೆ, ವಿರೋಧ ಪಕ್ಷಗಳ ಬೆಂಬಲ ಸಿಗದಿದ್ದರಿಂದ ಸಂಸತ್ತಿನಲ್ಲಿ ಮಂಡನೆಯಾಗಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

 

Post Comments (+)