ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮಗಾರಿ ವಿಳಂಬ: ಗುತ್ತಿಗೆದಾರರ ವಿರುದ್ಧ ಹರಿಹಾಯ್ದ ಸಿ.ಎಂ ಯಡಿಯೂರಪ್ಪ

ಬಿಎಂಟಿಸಿ ಬಸ್‌ನಲ್ಲಿ ಮೂರೂವರೆ ತಾಸು ನಗರ ಪ್ರದಕ್ಷಿಣೆ
Last Updated 8 ಸೆಪ್ಟೆಂಬರ್ 2019, 20:02 IST
ಅಕ್ಷರ ಗಾತ್ರ

ಬೆಂಗಳೂರು: ‘ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸಿ, ವಿಳಂಬ ಮಾಡಿದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ...’

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ನೀಡಿದ ಖಡಕ್ ಎಚ್ಚರಿಕೆ ಇದು.

ಭಾನುವಾರ ನಗರ ಪ್ರದಕ್ಷಿಣೆ ನಡೆಸಿದ ಅವರು, ಕೆಳಸೇತುವೆ, ‘ನಮ್ಮ ಮೆಟ್ರೊ’ ಮಾರ್ಗ ಮತ್ತು ಸಾರಿಗೆ ಹಬ್‌ ಕಾಮಗಾರಿಗಳ ಪರಿಶೀಲನೆ ನಡೆಸಿದರು. ಗೃಹ ಕಚೇರಿ ಕೃಷ್ಣಾ ಬಳಿಯಿಂದ ಬೆಳಿಗ್ಗೆ 9.30ಕ್ಕೆ ಬಿಎಂಟಿಸಿ ವೋಲ್ವೊ ಬಸ್ ಏರಿದ ಮುಖ್ಯಮಂತ್ರಿ ಮೂರೂವರೆ ತಾಸು ನಗರದಲ್ಲಿ ಸುತ್ತಾಡಿದರು.

‘ರಸ್ತೆ ವಿಸ್ತರಣೆಗೆ ಭೂಮಿ ನೀಡಿದವರಿಗೆ ಟಿಡಿಆರ್ ವಿತರಣೆ ವಿಳಂಬವಾಗಿದೆ. ಶೀಘ್ರವೇ ಪರಿಹಾರ ಕೊಡಿಸಿ’ ಎಂದು ಸ್ಥಳೀಯರು ಮನವಿ ಮಾಡಿದರು. ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಯಡಿಯೂರಪ್ಪ, ‘ಆದಷ್ಟು ಬೇಗ ಸಮಸ್ಯೆ ಇತ್ಯರ್ಥಪಡಿಸಿ’ ಎಂದು ಸೂಚನೆ ನೀಡಿದರು.

ಅಲ್ಲಿಂದ ಜೇಡಿಮರ ಜಂಕ್ಷನ್ ಮೂಲಕ ಹೊರ ವರ್ತುಲ ರಸ್ತೆ ಮಾರ್ಗವಾಗಿ ದಾಲ್ಮಿಯಾ ಜಂಕ್ಷನ್ ತಲುಪಿದರು. ಮಾರೇನಹಳ್ಳಿ ರಸ್ತೆ ಮೂಲಕ ಜಯದೇವ ಆಸ್ಪತ್ರೆ, ಸಿಲ್ಕ್ ಬೋರ್ಡ್ ಜಂಕ್ಷನ್‌ ತಲುಪಿದರು. ಅಲ್ಲಿ ನಿರ್ಮಾಣ ಆಗಲಿರುವ ಸಾರಿಗೆ ಹಬ್‌ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಅಲ್ಲಿಂದ ಕಾಡುಬೀಸನಹಳ್ಳಿ ಬಳಿಯ ಮಾಹಿತಿ ತಂತ್ರಜ್ಞಾನ ಕಂಪನಿಯೊಂದಕ್ಕೆ ಭೇಟಿ ನೀಡಿ, ಸಾಫ್ಟ್‌ವೇರ್ ಉದ್ಯಮಿಗಳ ಜತೆ ಸಭೆ ನಡೆಸಿದರು.

ಕೆ.ಆರ್.ಪುರದ ಕುಂದಲಹಳ್ಳಿ ಗೇಟ್ ಬಳಿ ಬಿಬಿಎಂಪಿ ಕೈಗೆತ್ತಿಕೊಂಡಿರುವ ಕೆಳಸೇತುವೆ ಕಾಮಗಾರಿ ಸ್ಥಗಿತಗೊಳಿಸಿರುವುದಕ್ಕೆ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡರು. ‘‌ಭೂಸ್ವಾಧೀನ ಬಾಕಿ ಇರುವ ಕಾರಣ ವಿಳಂಬವಾಗಿದೆ’ ಎಂದು ಗುತ್ತಿಗೆದಾರರು ಉತ್ತರಿಸಿದರು. ಕಂದಾಯ ಸಚಿವ ಆರ್. ಅಶೋಕ ಮತ್ತು ಶಾಸಕ ಅರವಿಂದ ಲಿಂಬಾವಳಿ ಗುತ್ತಿಗೆದಾರನ ವಿರುದ್ಧ ಹರಿಹಾಯ್ದರು. ‘ಕಾಮಗಾರಿ ನಿಲ್ಲಿಸಿರುವುದಕ್ಕೂ ಭೂಸ್ವಾಧೀನಕ್ಕೂ ಸಂಬಂಧವೇ ಇಲ್ಲ. ಉಪಗುತ್ತಿಗೆ ನೀಡಲು ನಿಮಗೆ ಹೇಳಿದ್ದು ಯಾರು’ ಎಂದು ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ಕೆಂಡಾ ಮಂಡಲವಾದ ಯಡಿಯೂರಪ್ಪ, ‘ಭೂ ಸ್ವಾಧೀನಕ್ಕೂ, ಕಾಮಗಾರಿ ನಿಲ್ಲಿಸಿರುವುದಕ್ಕೂ ಸಂಬಂಧವಿದೆಯೇ? ನಿನಗೇನು ತಲೆ ಕೆಟ್ಟಿದೆಯಾ, ನಿನಗೆ ಕಾಮಗಾರಿ ಗುತ್ತಿಗೆ ಕೊಟ್ಟಿದ್ದು ಯಾರು? ಸರ್ಕಾರದ ಗಮನಕ್ಕೂ ತರದೆ ಉಪಗುತ್ತಿಗೆ ನೀಡಲು ಎಷ್ಟು ಧೈರ್ಯ ನಿನಗೆ? ಸಮಸ್ಯೆ ಏನಿದೆ ಎಂಬುದು ನನಗೆ ಬೇಕಿಲ್ಲ. ನಾಲ್ಕು ದಿನಗಳಲ್ಲಿ ಕಾಮಗಾರಿ ಆರಂಭಿಸಿ ಆರು ತಿಂಗಳಲ್ಲಿ ಮುಗಿಸಬೇಕು. ಇಲ್ಲದಿದ್ದರೆ ಗ್ರಹಚಾರ ಬಿಡಿಸುತ್ತೇನೆ’ ಎಂದು ಕಿಡಿಕಾರಿದರು. ರಸ್ತೆ ಗುಂಡಿಮಯವಾಗಿರುವ ಬಗ್ಗೆ ದೂರು ಹೇಳಿದ ಸ್ಥಳೀಯರು ಇಲ್ಲಿ ವರ್ತುಲ ರಸ್ತೆ ನಿರ್ಮಿಸುವಂತೆ ಕೋರಿದರು. ‘ಅಧಿಕಾರಿಗಳ ಜತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಯಡಿಯೂರಪ್ಪ ಭರವಸೆ ನೀಡಿದರು. ಬಳಿಕ ಟಿನ್ ಫ್ಯಾಕ್ಟರಿ, ಹೆಬ್ಬಾಳ ಜಂಕ್ಷನ್‌ಗಳಲ್ಲಿನ ಸಾರಿಗೆ ಹಬ್ ಕಾಮಗಾರಿಗಳ ಪರಿಶೀಲನೆ ನಡೆಸಿದರು. ನಕ್ಷೆಗಳನ್ನು ವೀಕ್ಷಿಸಿ ಕಾಮಗಾರಿಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಉಪಮುಖ್ಯಮಂತ್ರಿ ಸಿ.ಎನ್.ಅಶ್ವತ್ಥನಾರಾಯಣ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಮೇಯರ್ ಗಂಗಾಂಬಿಕೆ, ಸಂಸದ ಪಿ.ಸಿ. ಮೋಹನ್, ಶಾಸಕರಾದ ರವಿ ಸುಬ್ರಹ್ಮಣ್ಯ, ಸತೀಶ್ ರೆಡ್ಡಿ, ಎಸ್‌.ರಘು ಜತೆಗಿದ್ದರು. ಮುಖ್ಯಮಂತ್ರಿ ಸಂಚಾರಕ್ಕೆ ಪೊಲೀಸರು ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಿದ್ದರು. ಹಾಗಾಗಿ ವಾಹನ ಸವಾರರು ತೊಂದರೆ ಅನುಭವಿಸಿದರು.

ದಟ್ಟಣೆ: ₹33 ಸಾವಿರ ಕೋಟಿ ನಷ್ಟ

‘ಹೆಬ್ಬಾಳ, ಸಿಲ್ಕ್ ಬೋರ್ಡ್‌, ಟಿನ್ ಫ್ಯಾಕ್ಟರಿ ಜಂಕ್ಷನ್‌ಗಳಲ್ಲಿ ಸಂಚಾರ ದಟ್ಟಣೆ ಇರುವ ಕಾರಣ ಸಾಫ್ಟ್‌ವೇರ್ ಕಂಪನಿಗಳ ಆದಾಯದಲ್ಲಿ ₹33 ಸಾವಿರ ಕೋಟಿ ನಷ್ಟವಾಗುತ್ತಿದೆ’ ಎಂದು ಹೊರ ವರ್ತುಲ ರಸ್ತೆ ಆಸುಪಾಸಿನ ಕಂಪನಿಗಳ ಸಂಘ ಅಂದಾಜಿಸಿದೆ.

‘ಜಗತ್ತಿನಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ವರಮಾನದಲ್ಲಿ ಶೇ 40ರಷ್ಟು ಪಾಲು ಭಾರತದ್ದು. ಅದರಲ್ಲಿ ಶೇ 32ರಷ್ಟು ಪಾಲು ಬೆಂಗಳೂರಿನ ಐ.ಟಿ ಕಂಪನಿಗಳದ್ದು. ದಟ್ಟಣೆ ಕಾರಣದಿಂದಾಗಿ ಮಾನವ ಸಂಪನ್ಮೂಲದ ಪರಿಣಾ ಮಕಾರಿ ಬಳಕೆ ಸಾಧ್ಯವಾಗುತ್ತಿಲ್ಲ’ ಎಂದು ಆರ್‌.ಕೆ. ಮಿಶ್ರಾ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ‘ಈ ಸಮಸ್ಯೆ ಪರಿಹರಿಸಲು ಸಿದ್ಧನಿದ್ದೇನೆ. ಅದಕ್ಕೆ ಪ್ರತಿಯಾಗಿ ಸಾಮಾಜಿಕ ಹೊಣೆಗಾರಿಕೆ ನಿಧಿಯಲ್ಲಿ ನೆರೆ ಸಂತ್ರಸ್ತರ ಪರಿಹಾರ ನಿಧಿಗೆ ದೇಣಿಗೆ ನೀಡಿ’ ಎಂದು ಮನವಿ ಮಾಡಿದರು.

'ಭ್ರಷ್ಟಾಚಾರ ತಾಂಡವ'

‘ಕಾಮಗಾರಿಗೆ ನಿಗದಿಯಾದ ಹಣದಲ್ಲಿ ಶೇ 50ರಷ್ಟು ಮಾತ್ರ ಖರ್ಚಾಗುತ್ತಿದ್ದು, ಭ್ರಷ್ಟಾಚಾರ ತಾಂಡವವಾಡುತ್ತಿದೆ’ ಎಂದು ಮುಖ್ಯಮಂತ್ರಿ ಹೇಳಿದರು.

‘ಭ್ರಷ್ಟಾಚಾರದ ಬಗ್ಗೆ ಸಾರ್ವಜನಿಕರು ನನ್ನ ಗಮನಕ್ಕೆ ತಂದರೆ ಬದಲಾವಣೆ ತರಲು ಅನುಕೂಲವಾಗಲಿದೆ’ ಎಂದರು.

‘ಒಂದು ಕಿಲೋ ಮೀಟರ್ ವೈಟ್ ಟಾಪಿಂಗ್ ಕಾಮಗಾರಿಯನ್ನು ₹4 ಕೋಟಿಯಲ್ಲಿ ಮುಗಿಸಬಹುದು. ಆದರೆ, ₹12 ಕೋಟಿವರೆಗೆ ಖರ್ಚು ಮಾಡಲಾಗಿದೆ. ಹೀಗಾಗಿ ತನಿಖೆಗೆ ಆದೇಶಿಸಿದ್ದೇನೆ' ಎಂದು ಹೇಳಿದರು.

15 ದಿನಗಳಿಗೊಮ್ಮೆ ನಗರ ಪ್ರದಕ್ಷಿಣೆ

‘ಪ್ರತಿ 15 ದಿನಗಳಿಗೊಮ್ಮೆ ನಗರ ಪ್ರದಕ್ಷಿಣೆ ನಡೆಸಲಾಗುವುದು’ ಎಂದು ಮುಖ್ಯಮಂತ್ರಿ ಪ್ರಕಟಿಸಿದರು.

‘ಸಾರ್ವಜನಿಕರಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಭಾನುವಾರ ನಗರ ಸಂಚಾರ ನಡೆಸಲು ತೀರ್ಮಾನಿಸಿದ್ದೇನೆ. ಈ ಬಗ್ಗೆ ಟೀಕಿಸುವ ಎಚ್.ಡಿ.ಕುಮಾರಸ್ವಾಮಿ 14 ತಿಂಗಳು ಆಡಳಿತ ಹೇಗೆ ನಡೆಸಿದ್ದಾರೆ ಎಂಬುದು ಗೊತ್ತಿದೆ. ಯಾರ ಹೇಳಿಕೆಗೂ ಪ್ರತಿಕ್ರಿಯಿಸುವುದಿಲ್ಲ. ಸಲಹೆ ಪಡೆಯುವ ಅಗತ್ಯವೂ ಇಲ್ಲ’ ಎಂದು ನಗರ ಪ್ರದಕ್ಷಿಣೆ ಬಳಿಕ ಅವರು ತಿಳಿಸಿದರು.

‘ಎಲೆಕ್ಟ್ರಾನಿಕ್ ಸಿಟಿ ಮತ್ತು ವೈಟ್‌ಫೀಲ್ಡ್ ಮೆಟ್ರೊ ರೈಲು ಸಂಚಾರ 2021ರ ಒಳಗೆ ಆರಂಭವಾಗಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ. ಹೆಬ್ಬಾಳ ಮೇಲ್ಸೇತುವೆಗೆ ಐದನೇ ಲೂಪ್‌ ಸೇರ್ಪಡೆ ಮತ್ತು ಅಲ್ಲಿ ಕೆಳಸೇತುವೆ ನಿರ್ಮಿಸುವ ಕುರಿತು ರೈಟ್ಸ್ ಸಂಸ್ಥೆ ಅಧ್ಯಯನ ನಡೆಸುತ್ತಿದೆ. ಶೀಘ್ರವೇ ವರದಿ ಸಲ್ಲಿಸುವಂತೆ ತಿಳಿಸಿದ್ದೇನೆ’ ಎಂದರು.

‘ಪೆರಿಫೆರಲ್ ವರ್ತುಲ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳುವ ಬಗ್ಗೆ ಇನ್ನೂ ಪರಿಶೀಲನೆ ನಡೆಯುತ್ತಿದ್ದು, ತೀರ್ಮಾನ ಆಗಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಬೆಳ್ಳಂದೂರು ಕೆರೆ ಅಭಿವೃದ್ಧಿಗೆ ₹200 ಕೋಟಿ ಒದಗಿಸಲಾಗಿದ್ದು, ಕೆರೆ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರವೇ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ’ ಎಂದರು.

15 ದಿನಗಳಿಗೊಮ್ಮೆ ನಗರ ಪ್ರದಕ್ಷಿಣೆ

‘ಪ್ರತಿ 15 ದಿನಗಳಿಗೊಮ್ಮೆ ನಗರ ಪ್ರದಕ್ಷಿಣೆ ನಡೆಸಲಾಗುವುದು’ ಎಂದು ಮುಖ್ಯಮಂತ್ರಿ ಪ್ರಕಟಿಸಿದರು.

‘ಸಾರ್ಜನಿಕರಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಭಾನುವಾರ ನಗರ ಸಂಚಾರ ನಡೆಸಲು ತೀರ್ಮಾನಿಸಿದ್ದೇನೆ. ಈ ಬಗ್ಗೆ ಟೀಕಿಸುವ ಎಚ್.ಡಿ.ಕುಮಾರಸ್ವಾಮಿ 14 ತಿಂಗಳು ಆಡಳಿತ ಹೇಗೆ ನಡೆಸಿದ್ದಾರೆ ಎಂಬುದು ಗೊತ್ತಿದೆ. ಯಾರ ಹೇಳಿಕೆಗೂ ಪ್ರತಿಕ್ರಿಯಿಸುವುದಿಲ್ಲ. ಸಲಹೆ ಪಡೆಯುವ ಅಗತ್ಯವೂ ಇಲ್ಲ’ ಎಂದು ನಗರ ಪ್ರದಕ್ಷಿಣೆ ಬಳಿಕ ಅವರು ಸುದ್ದಿಗಾರರಿಗೆ ತಿಳಿಸಿದರು.

‘ಇನ್ನು ನಾಲ್ಕು ತಿಂಗಳಲ್ಲಿ ಬೆಂಗಳೂರಿನ ಅಭಿವೃದ್ಧಿಯಲ್ಲಿನ ಬದಲಾವಣೆಯನ್ನು ನೋಡಿ ನೀವೇ ಮೆಚ್ಚುತ್ತೀರಿ’ ಎಂದರು.

‘ಎಲೆಕ್ಟ್ರಾನಿಕ್ ಸಿಟಿ ಮತ್ತು ವೈಟ್‌ಫೀಲ್ಡ್ ಮೆಟ್ರೊ ರೈಲು ಸಂಚಾರ 2021ರ ಒಳಗೆ ಆರಂಭವಾಗಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ. ಹೆಬ್ಬಾಳ ಮೇಲ್ಸೇತುವೆಗೆ ಐದನೇ ಲೂಪ್‌ ಸೇರ್ಪಡೆ ಮತ್ತು ಅಲ್ಲಿ ಕೆಳಸೇತುವೆ ನಿರ್ಮಿಸುವ ಕುರಿತು ರೈಟ್ಸ್ ಸಂಸ್ಥೆ ಅಧ್ಯಯನ ನಡೆಸುತ್ತಿದೆ. ಶೀಘ್ರವೇ ವರದಿ ಸಲ್ಲಿಸುವಂತೆ ತಿಳಿಸಿದ್ದೇನೆ’ ಎಂದರು.

‘ಪೆರಿಫೆರಲ್ ವರ್ತುಲ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳುವ ಬಗ್ಗೆ ಇನ್ನೂ ಪರಿಶೀಲನೆ ನಡೆಯುತ್ತಿದ್ದು, ತೀರ್ಮಾನ ಆಗಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಬೆಳ್ಳಂದೂರು ಕೆರೆ ಅಭಿವೃದ್ಧಿಗೆ ₹200 ಕೋಟಿ ಒದಗಿಸಲಾಗಿದ್ದು, ಕೆರೆ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರವೇ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ’ ಎಂದರು.

ಸಿಟ್ಟಿಗೆದ್ದು ಹೊರನಡೆದ ಉಪಮೇಯರ್

ಐಐಎಂಬಿ ಬಳಿ ಮುಖ್ಯಮಂತ್ರಿ ಅವರು ಸಾರ್ವಜನಿಕರ ಸಮಸ್ಯೆ ಆಲಿಸುತ್ತಿದ್ದಾಗ ಉಪಮೇಯರ್ ಬಿ. ಭದ್ರೇಗೌಡ ಹಾಗೂ ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್‌ ಕುಮಾರ್ ನಡುವೆ ಮಾತಿನ ಚಕಮಕಿ ನಡೆಯಿತು. ಆಯುಕ್ತರ ವರ್ತನೆಯಿಂದ ಬೇಸರಗೊಂಡ ಭದ್ರೇಗೌಡ ಅವರು ಅರ್ಧದಾರಿಯಿಂದಲೇ ವಾಪಸ್ ಹೋದರು.

‘ಮುಖ್ಯಮಂತ್ರಿ ಹಿಂದೆ ಪೊಲೀಸರಿದ್ದರು. ಅವರ ಹಿಂದೆ ನಾನು ನಿಂತಿದ್ದೆ. ಬಸ್ ಇಳಿದು ಬಂದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ‘ಪಕ್ಕಕ್ಕೆ ಸರಿಯಿರಿ’ ಎಂದರು. ನಾನು ಉಪಮೇಯರ್ ಎಂಬುದು ಅವರಿಗೆ ತಿಳಿದಿದೆಯೋ ಇಲ್ಲವೋ ಗೊತ್ತಿಲ್ಲ. ಈ ಸಂದರ್ಭದಲ್ಲಿ ಅವರ ಹಿಂದೆ ಇದ್ದ ಅನಿಲ್‌ಕುಮಾರ್ ಅವರು ನನ್ನ ಎರಡು ಕೈಗಳನ್ನು ಹಿಡಿದು ತಳ್ಳಲು ಮುಂದಾದರು’ ಎಂದು ಭದ್ರೇಗೌಡ ತಿಳಿಸಿದರು. 'ನಾನು ಉಪಮೇಯರ್‌ ಎಂಬುದು ಗೊತ್ತಿದ್ದೂ ಆಯುಕ್ತರು ನನ್ನ ಕೈ ಹಿಡಿದು ತಳ್ಳಿದ್ದರಿಂದ ಅವಮಾನವಾಯಿತು’ ಎಂದು ಬೇಸರ ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT