ಹೋರಾಟಕ್ಕೆ ಸಂದ ಆರಂಭಿಕ ಜಯ: ನಮ್ಮ ಬೆಂಗಳೂರು ಪ್ರತಿಷ್ಠಾನ ಪ್ರತಿಪಾದನೆ

7

ಹೋರಾಟಕ್ಕೆ ಸಂದ ಆರಂಭಿಕ ಜಯ: ನಮ್ಮ ಬೆಂಗಳೂರು ಪ್ರತಿಷ್ಠಾನ ಪ್ರತಿಪಾದನೆ

Published:
Updated:

ಬೆಂಗಳೂರು: ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಆದೇಶವನ್ನು ‘ನಮ್ಮ ಬೆಂಗಳೂರು ಪ್ರತಿಷ್ಠಾನ’ ಸಂತಸದಿಂದ ಸ್ವಾಗತಿಸಿದೆ. 

‘ಬೆಂಗಳೂರಿನ ಕೆರೆಗಳ ಉಳಿವಿಗಾಗಿ ನಮ್ಮ ಪ್ರತಿಷ್ಠಾನ ಹಲವಾರು ವರ್ಷಗಳಿಂದ ಶ್ರಮಿಸುತ್ತಿದೆ. ನಮ್ಮ ಹೋರಾಟಕ್ಕೆ ಸಂದ ಮೊದಲ ಜಯ ಇದು’ ಎಂದು ಪ್ರತಿಷ್ಠಾನದ ಮುಖ್ಯಸ್ಥ ಎನ್‌.ಆರ್‌.ಸುರೇಶ್ ಸುದ್ದಿಗೋಷ್ಠಿಯಲ್ಲಿ ಗುರುವಾರ ತಿಳಿಸಿದರು.

‘ರಾಜ್ಯ ಸರ್ಕಾರ ಕೆರೆಗಳನ್ನು ಬಿಬಿಎಂಪಿ, ಬಿಡಿಎ, ಅರಣ್ಯ ಇಲಾಖೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಹಸ್ತಾಂತರ ಮಾಡುತ್ತ ಬೇಜವಾಬ್ದಾರಿತನ ತೋರಿಸುತ್ತಿದೆ. ಇದರಿಂದಾಗಿ ಅವುಗಳ ನಿರ್ವಹಣೆ ಸೂಕ್ತವಾಗಿ ಆಗುತ್ತಿಲ್ಲ. ಹಾಗಾಗಿ ಎ.ಟಿ.ರಾಮಸ್ವಾಮಿ, ಬಾಲಸುಬ್ರಹ್ಮಣಿಯನ್‌, ಕೆ.ಬಿ. ಕೋಳಿವಾಡ ವರದಿಗಳು ಮೂಲೆಗುಂಪಾಗಿವೆ’ ಎಂದು ಅಸಮಾಧಾನ ಹೊರಹಾಕಿದರು.

‘ಒಂದು ಕೆರೆಗೆ ಸೇರುತ್ತಿದ್ದ ಕೊಳಚೆ ನೀರಿಗಾಗಿ ಪ್ರತ್ಯೇಕ ಕೊಳವೆಮಾರ್ಗ ನಿರ್ಮಿಸಿ, ಅದೇ ತ್ಯಾಜ್ಯ ನೀರನ್ನು ಮತ್ತೊಂದು ಕೆರೆಗೆ ಹರಿಸುವ ಕಾಮಗಾರಿಗಳನ್ನು ಪಾಲಿಕೆ ಕೈಗೆತ್ತಿಕೊಂಡಿದೆ. ಇಂತಹ ಯೋಜನೆಗೆ ವ್ಯಯಿಸಿದ ಅನುದಾನದ ಲೆಕ್ಕವನ್ನು ಸರಿಯಾಗಿ ನೀಡುತ್ತಿಲ್ಲ. ಈ ರೀತಿಯ ಕಾರ್ಯವೈಖರಿಯಿಂದಲೇ ವೃಷಭಾವತಿ ನದಿ ಇಂದು ಕೆಂಗೇರಿ ಮೋರಿಯಾಗಿ ಮಾರ್ಪಟ್ಟಿದೆ’ ಎಂದು ವಿಷಾದಿಸಿದರು.

‘ಗ್ರಂಥಾಲಯ ಸೆಸ್‌, ಭಿಕ್ಷುಕರ ಪುನರ್ವಸತಿಗಾಗಿ ಸೆಸ್‌ನಂತೆ ಈಗ ಪಾಲಿಕೆ ಕೆರೆಗಳನ್ನು ಉಳಿಸಲು ಸಹ ಸೆಸ್‌ ಹಣ ಸಂಗ್ರಹಿಸಲು ಮುಂದಾಗಿದೆ. ಸರ್ಕಾರದಿಂದ ಪಾಲಿಕೆಗೆ ಪ್ರತಿವರ್ಷ ಸಿಗುತ್ತಿರುವ ಸಾವಿರಾರು ಕೋಟಿ ಸಾಲುತ್ತಿಲ್ಲವೇ’ ಎಂದು ಪ್ರಶ್ನಿಸಿದರು.

ಕೆರೆಗಳ ಮೀಸಲು ಪ್ರದೇಶದ ಒತ್ತುವರಿಯ ವಿರುದ್ಧ ಹೋರಾಟ ಮುಂದುವರಿಸಲು ಪ್ರತಿಷ್ಠಾನ ನಿರ್ಧರಿಸಿದೆ ಎಂದು ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !