ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಮ್ಮ ಮೆಟ್ರೊ’ ಎರಡನೇ ಹಂತ: ಮೇಲೇರುತ್ತಿದೆ ಪಿಲ್ಲರ್‌, ನಿಲ್ದಾಣಕ್ಕೂ ವೇಗ

ಆರ್‌.ವಿ.ರಸ್ತೆ– ಬೊಮ್ಮಸಂದ್ರ ಎತ್ತರಿಸಿದ ಮಾರ್ಗದ ಕಾಮಗಾರಿ
Last Updated 11 ನವೆಂಬರ್ 2018, 19:35 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದಲ್ಲಿ ಆರ್‌.ವಿ.ರಸ್ತೆ– ಬೊಮ್ಮಸಂದ್ರ ಎತ್ತರಿಸಿದ ಮಾರ್ಗದ (ರೀಚ್‌–5) ಕಾಮಗಾರಿ ಚುರುಕು ಪಡೆದಿದೆ. ಬೊಮ್ಮಸಂದ್ರ ಬಳಿ ಪಿಲ್ಲರ್‌ಗಳ ಮೇಲೆ ವಯಡಕ್ಟ್‌ಗಳನ್ನು ಅಳವಡಿಸುವ ಕಾಮಗಾರಿ ಭರದಿಂದ ಸಾಗುತ್ತಿದೆ.

ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ರೀಚ್‌–5 ಕಾಮಗಾರಿಯನ್ನು ಮೂರು ಪ್ಯಾಕೇಜ್‌ಗಳಾಗಿ ವಿಂಗಡಿಸಿ ಟೆಂಡರ್‌ ನೀಡಿತ್ತು. ಬೊಮ್ಮಸಂದ್ರ– ಹೊಸರೋಡ್‌ ನಡುವಿನ 6.4 ಕಿ.ಮೀ ಉದ್ದದ ಮಾರ್ಗದ ಕಾಮಗಾರಿಯನ್ನು ಪ್ಯಾಕೇಜ್‌–1, ಹೊಸರೋಡ್‌ನಿಂದ ಎಚ್‌ಎಸ್‌ಆರ್ ಬಡಾವಣೆವರೆಗಿನ 6.38 ಕಿ.ಮೀ ಉದ್ದದ ಮಾರ್ಗದ ಕಾಮಗಾರಿಯನ್ನು ಪ್ಯಾಕೇಜ್‌–2 ಎಂದು ಗುರುತಿಸಲಾಗಿತ್ತು.

ಆರ್‌.ವಿ.ರಸ್ತೆ ನಿಲ್ದಾಣ– ಎಚ್‌ಎಸ್‌ಆರ್‌ ಬಡಾವಣೆ ನಿಲ್ದಾಣದವರೆಗಿನ 6.34 ಕಿ.ಮೀ ಉದ್ದದ ಕಾಮಗಾರಿಯನ್ನು ಪ್ಯಾಕೇಜ್‌–3 ಎಂದು ಗುರುತಿಸಲಾಗಿದೆ. ಜಯದೇವ ಆಸ್ಪತ್ರೆ ಬಳಿ ಹಾಗೂ ಆರ್.ವಿ ರಸ್ತೆ ಬಳಿ ಇಂಟರ್‌ ಚೇಂಜ್‌ ನಿಲ್ದಾಣ ನಿರ್ಮಾಣ ಕಾಮಗಾರಿಗಳನ್ನು ಮೂರನೇ ಪ್ಯಾಕೇಜ್‌ ಒಳಗೊಂಡಿದೆ.

ಕಳೆದ ವರ್ಷದ ಏಪ್ರಿಲ್‌ನಲ್ಲಿ ಈ ಕಾಮಗಾರಿ ಆರಂಭವಾಗಿತ್ತು. ಕಳೆದ ವರ್ಷ ಸುರಿದ ಮಳೆಯ ಕಾರಣ ಆರಂಭದಲ್ಲಿ ಕಾಮಗಾರಿ ಕುಂಠಿತಗೊಂಡಿತ್ತು. ಪ್ರಸ್ತುತ ಪ್ಯಾಕೇಜ್‌–1 ಮತ್ತು 2ರ ಕಾಮಗಾರಿಗಳು ಚುರುಕಿನಿಂದ ಸಾಗುತ್ತಿವೆ. ಇಲ್ಲಿ ಪಿಲ್ಲರ್‌ಗಳ ನಿರ್ಮಾಣ ಬಹುತೇಕ ಪೂರ್ಣಗೊಂಡಿದ್ದು ವಯಡಕ್ಟ್‌ ಅಳವಡಿಕೆ ಹಾಗೂ ನಿಲ್ದಾಣಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ.

‘ಈ ಎರಡು ಪ್ಯಾಕೇಜ್‌ಗಳ ಕಾಮಗಾರಿಯಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸಿದ್ದೇವೆ. ಅನೇಕ ಅಡ್ಡಿ ಆತಂಕಗಳ ನಡುವೆಯೂ ಕಾಮಗಾರಿಯಲ್ಲಿ ಶೇ 90ರಷ್ಟು ಗುರಿ ಸಾಧನೆ ಮಾಡುವಲ್ಲಿ ಸಫಲರಾಗಿದ್ದೇವೆ’ ಎಂದು ನಿಗಮದ ಅಧಿಕಾರಿಯೊಬ್ಬರು ತಿಳಿಸಿದರು.

ಆರ್‌.ವಿ. ರಸ್ತೆ ಮೆಟ್ರೊ ನಿಲ್ದಾಣದ ಪಕ್ಕದಲ್ಲೇ ಇನ್ನೊಂದು ನಿಲ್ದಾಣ ನಿರ್ಮಾಣಗೊಳ್ಳಲಿದ್ದು, ಅದು ರೀಚ್‌– 5 ಮಾರ್ಗದ ಕೊನೆಯ ನಿಲ್ದಾಣವಾಗಲಿದೆ. ಬೊಮ್ಮಸಂದ್ರದ ಬಳಿಯ ಪ್ರಸ್ತಾವಿತ ಪೆರಿಫೆರಲ್‌ ವರ್ತುಲ ರಸ್ತೆ ಸಮೀಪ ಇನ್ನೊಂದು ಟರ್ಮಿನಲ್‌ ನಿಲ್ದಾಣ ನಿರ್ಮಾಣವಾಗಲಿದೆ. ಸಿಲ್ಕ್‌ಬೋರ್ಡ್‌ ಎಲೆಕ್ಟ್ರಾನಿಕ್‌ ಸಿಟಿ ಮೂಲಕ ಹಾದು ಹೋಗುವ ಈ ಮಾರ್ಗ ಇಲ್ಲಿನ ರಸ್ತೆಗಳಲ್ಲಿರುವ ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರ ಒದಗಿಸುವ ನಿರೀಕ್ಷೆ ಮೂಡಿಸಿದೆ.

ಹೆಬ್ಬಗೋಡಿ ನಿಲ್ದಾಣ ನಿರ್ಮಾಣಕ್ಕೆ ಬಯೋಕಾನ್‌ ಸಂಸ್ಥೆ ನೆರವು ನೀಡಲಿದೆ. ಕೋನಪ್ಪನ ಅಗ್ರಹಾರದಲ್ಲಿ ಮೆಟ್ರೊ ನಿಲ್ದಾಣ ನಿರ್ಮಾಣಕ್ಕೆ ಇನ್ಫೊಸಿಸ್‌ ಪ್ರತಿಷ್ಠಾನ ಹಣಕಾಸು ಒದಗಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT